ಬಿಜೆಪಿ ಅಬ್ಬರಿಸಿದ ಅಚ್ಛೇ ದಿನ್ ಇದುವೇ ಏನು!- ಪ್ರಿಯಾಂಕಾ ಗಾಂಧಿ ಪ್ರಶ್ನೆ

0
998

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.31: ದೇಶದ ಆರ್ಥಿಕ ಬೆಳವಣಿಗೆ ಕುಸಿತ ದಾಖಲಾಗಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಬಿಜೆಪಿ ಅಬ್ಬರಿಸಿದ ಅಚ್ಛೇ ದಿನ್ ಇದುವೇ ಏನು ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರಕಾರದ ಕೆಟ್ಟ ನೀತಿಯಿಂದ ದೇಶದ ಆರ್ಥಿಕತೆ ಕುಸಿದಿದೆ. ರೂಪಾಯಿಯ ಮೌಲ್ಯ ಕುಸಿತವಾಗಿದೆ.ನಿರುದ್ಯೋಗ ಹೆಚ್ಚಿದೆ. ದೇಶದ ಅರ್ಥವ್ಯವಸ್ಥೆಯನ್ನು ನಾಶಪಡಿಸಿದ್ದಕ್ಕೆ ಯಾರು ಹೊಣೆ ಎಂದು ಈಗ ಎಲ್ಲರಿಗೂ ಅರ್ಥವಾಗಿರಬಹುದು ಎಂದು ಪ್ರಿಯಾಂಕಾ ಹೇಳಿದರು.

ದೇಶದ ಆರ್ಥಿಕ ಬೆಳವಣಿಗೆಯ ಒಟ್ಟು ಆಂತರಿಕ ಉತ್ಪಾದನೆ ಕಳೆದ ಆರು ವರ್ಷದಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಶೇ.5ರಷ್ಟು ಕುಸಿತವಾಗಿದೆ. ಚಾಲ್ತಿ ವರ್ಷದಲ್ಲಿ 2019-20ರ ಎಪ್ರಿಲ್‍ನಿಂದ ಜೂನ್‍ನವರಿಗಿನ ಮೊದಲ ಹಂತದಲ್ಲಿಯೇ ಅಧಿಕ ಪ್ರಮಾಣದ ಕುಸಿತವಾಗಿದೆ. 2012-13ರಲ್ಲಿ ಇದೇ ಹಂತದಲ್ಲಿ ಶೇ. 4.9 ಆರ್ಥಿಕ ಬೆಳವಣಿಗೆಯಿದ್ದು ಈವರೆಗಿನ ಅತೀ ಕಡಿಮೆ ಆರ್ಥಿಕ ಕುಸಿತವಾಗಿತ್ತು. 2018-19ರ ಎಪ್ರಿಲ್-ಜೂನ್‍ನಲ್ಲಿ ಶೇ.18 ಆರ್ಥಿಕ ಬೆಳವಣಿಗೆ ಎಂದು ಹೇಳಿಕೊಂಡ ದೇಶಕ್ಕೆ ಮರುವರ್ಷ ಬಾರೀ ದೊಡ್ಡ ಕುಸಿತ ದಾಖಲಾಗಿದೆ. ಕಳೆದ 27 ವರ್ಷಗಳಲ್ಲೇ ಈಗಿನದ್ದು ಅತ್ಯಂತ ಕನಿಷ್ಠ ಆರ್ಥಿಕ ದರವಾಗಿದೆ.