ಮೈಸೂರಿನ ಶಿವಮ್ಮ, ಇಂಗ್ಲೆಂಡಿನ ಬಟ್ಲರ್ ಮತ್ತು ಸಂದೇಶ

0
175

ಸನ್ಮಾರ್ಗ ಸಂಪಾದಕೀಯ

ಕಳೆದವಾರ ಎರಡು ಘಟನೆಗಳು ನಡೆದುವು.

1. ಮೈಸೂರಿನ ಮಂಡಿ ಮೊಹಲ್ಲಾದ ಸುನ್ನಿ ಚೌಕ್‌ನಲ್ಲಿ ಶಿವಮ್ಮಾ ಎಂಬವರು ಮೃತಪಟ್ಟರು. 30 ವರ್ಷದಿಂದ ಅದೇ ಪರಿಸರದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಒಂಟಿಯಾಗಿದ್ದರು. ಇಬ್ಬರು ಮಕ್ಕಳಿದ್ದು, ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಅವರಿಗೆ ಮಾಹಿತಿ ತಿಳಿಸಿದರೂ ಮೃತದೇಹವನ್ನು ಕೊಂಡೊಯ್ಯಲೋ ಸಂಸ್ಕಾರ ನಡೆಸಲೋ ಮುಂದಾಗಲಿಲ್ಲ. ಆಗ ಅಲ್ಲಿನ ಇಸ್ಲಾಮಿಯಾ ನೌಜವಾನ್ ಸಮಿತಿ ಸದಸ್ಯರು ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ 2,500 ರೂಪಾಯಿ ಶುಲ್ಕ ಕಟ್ಟಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನೆರವೇರಿಸಲು ನೆರವಾಗಿದ್ದಾರೆ.

2. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಮೊಯಿನ್ ಅಲಿಯವರು ಒಂದು ವೀಡಿಯೋ ಹಂಚಿಕೊAಡು ತನ್ನ ತಂಡದ ಕಪ್ತಾನ ಬಟ್ಲರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. 20-20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಜಯ ಗಳಿಸಿದ ಬಳಿಕ ತಂಡ ಸಂಭ್ರಮಾಚಾರಣೆಗೆ ಸಿದ್ಧವಾಗಿದೆ. ಕಪ್ತಾನ ಬಟ್ಲರ್ ಪಕ್ಕವೇ ಇಂಗ್ಲೆಂಡ್ ತಂಡದ ಆಟಗಾರರಾದ ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಕುಳಿತಿದ್ದರು. ಶಾಂಪೇನ್ ಎರಚಿ ಸಂಭ್ರಮಾಚಾರಣೆಯನ್ನು ಮಾಡಲು ತಂಡ ಸಿದ್ಧವಾದಾಗ ಬಟ್ಲರ್ ಈ ಇಬ್ಬರು ಆಟಗಾರರಿಗೆ ಈ ಬಗ್ಗೆ ಸೂಚನೆ ಕೊಡುತ್ತಾರೆ. ಈ ಇಬ್ಬರು ಜೊತೆಗಾರರು ಆಲ್ಕೊ ಹಾಲ್ ಇಷ್ಟ ಪಡುವುದಿಲ್ಲ ಎಂದು ಬಟ್ಲರ್‌ಗೆ ಗೊತ್ತು. ತಕ್ಷಣ ಅವರಿಬ್ಬರೂ ಅಲ್ಲಿಂದ ಎದ್ದು ಹೋಗುತ್ತಾರೆ. ಅವರು ಹೋದುದನ್ನು ಖಚಿತಪಡಿಸಿಕೊಂಡ ಬಳಿಕ ಶಾಂಪೇನ್ ಎರಚಿ ತಂಡ ಸಂಭ್ರಮ ಆಚರಿ ಸುತ್ತದೆ. ಇದೇ ವೀಡಿಯೋವನ್ನು ಹಂಚಿಕೊಂಡಿರುವ ಮೊಯಿನ್ ಅಲಿ, ಕಪ್ತಾನನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಅತಿ ಉದಾತ್ತವಾದ ಮೌಲ್ಯವಿದೆ. ಇಂಗ್ಲೆಂಡ್ ತಂಡದ 11ರ ಬಳಗದಲ್ಲಿ ಆಲ್ಕೊಹಾಲ್ ಇಷ್ಟಪಡದ ಆಟಗಾರರಿರುವುದು ಇಬ್ಬರೇ. ಉಳಿದ 9 ಮಂದಿಗೆ ಈ ಆಲ್ಕೊಹಾಲ್‌ನೊಂದಿಗೆ ಯಾವ ತಕರಾರೂ ಇಲ್ಲ. ಆದ್ದರಿಂದ, ತಂಡದಲ್ಲಿರುವ ಬಹುಸಂಖ್ಯಾತರು ಆಲ್ಕೊಹಾಲನ್ನು ಇಷ್ಟಪಡುವವರಾಗಿರುವುದರಿಂದ ಈ ಇಬ್ಬರೂ ಅವರ ಜೊತೆ ಸೇರಬೇಕು ಎಂಬ ಒತ್ತಾಯವನ್ನು ಬಟ್ಲರ್‌ಗೆ ಮಾಡಬಹುದಿತ್ತು. ಧರ್ಮದ ಆಚರಣೆಯನ್ನು ಮುಂದಿಟ್ಟು ತಂಡವಾಗಿ ಸಂಭ್ರಮಿಸುವುದರಿಂದ ಹಿಂಜರಿಯುವುದು ಸಲ್ಲದು ಎಂದು ಹೇಳಬಹುದಿತ್ತು. ಇಡೀ ತಂಡ ಒಂದು ಕಡೆ ಶಾಂಪೇನ್ ಎರಚಿ ಸಂಭ್ರಮಿಸುವಾಗ ಇಬ್ಬರು ಮಾತ್ರ ಪ್ರತ್ಯೇಕವಾಗಿ ಉಳಿಯುವುದು ಕೆಟ್ಟ ಮಾದರಿಗೆ ಕಾರಣವಾಗುತ್ತದೆ ಎಂದು ಹೇಳಬಹುದಿತ್ತು ಅಥವಾ ಹೀಗೆ ಪ್ರತ್ಯೇಕವಾಗಿ ಉಳಿದರೆ ಮುಂದೆ ನಿಮಗೆ ತಂಡದ ಬಾಗಿಲನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಡಬಹುದಿತ್ತು. ಇಂಗ್ಲೆಂಡ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ತೀರಾ ತೀರಾ ಕಡಿಮೆ. ಕ್ರೈಸ್ತರೇ ಅಲ್ಲಿನ ಬಹುಸಂಖ್ಯಾತರು. ಆದ್ದರಿಂದ ಶಾಂಪೇನ್ ಸಂಭ್ರಮದಲ್ಲಿ ಇಷ್ಟವಿಲ್ಲದಿದ್ದರೂ ಭಾಗವಹಿಸಬೇಕಾದುದು ಅಲ್ಪಸಂಖ್ಯಾತರ ಹೊಣೆಗಾರಿಕೆ, ದೇಶದ ಶಾಂಪೇನ್ ಸಂಸ್ಕೃತಿಯಲ್ಲಿ ಒಳಗೊಳ್ಳದಿರುವುದು ದೇಶದ್ರೋಹಕ್ಕೆ ಸಮನಾದ ಅಪರಾಧವಾಗುತ್ತದೆ ಎಂದೆಲ್ಲ ಹೇಳಿ ಬೆದರಿಸಬಹುದಿತ್ತು. ಆದರೆ, ಹಾಗೆ ಮಾಡುವುದು ಬಿಡಿ, ಶಾಂಪೇನ್ ಎರಚುವುದ ಕ್ಕಿಂತ ಮೊದಲು ತನ್ನಿಬ್ಬರು ಜೊತೆಗಾರರಿಗೆ ಆ ಬಗ್ಗೆ ಸೂಚನೆ ಕೊಡುತ್ತಾರೆ. ಇಲ್ಲಿಂದ ಸರಿದು ನಿಲ್ಲಿ ಎಂದು ಹೇಳುತ್ತಾರೆ. ಅವರು ಸರಿದು ನಿಂತಿದ್ದಾರೆ ಎಂಬುದು ಖಚಿತವಾದ ಬಳಿಕವೇ ಶಾಂಪೇನ್ ಎರಚಿ ಉಳಿದ ಆಟಗಾರರು ಸಂಭ್ರಮ ಪಡುತ್ತಾರೆ.

ಮೈಸೂರಿನ ಘಟನೆಯಲ್ಲೂ ಇದೇ ಉದಾತ್ತ ಮಾದರಿ ವ್ಯಕ್ತವಾಗುತ್ತದೆ. ಶಿವಮ್ಮರಿಗೆ ಹೇಳಿ-ಕೇಳಿ ಯಾರೂ ಇಲ್ಲ. ಮಕ್ಕಳು ಬಹುತೇಕ ತ್ಯಜಿಸಿದ್ದಾರೆ. ಶಿವಮ್ಮ ಹಿಂದೂ ಧರ್ಮಕ್ಕೆ ಸೇರಿದವರಾದುದರಿಂದ ನಮಗೇಕೆ ತಲೆಬಿಸಿ ಎಂದು ಮುಸ್ಲಿಮರು ಸುಮ್ಮನಾಗಬಹುದಿತ್ತು. ಬೇಕಾದರೆ ಹಿಂದೂಗಳೇ ಶವಸಂಸ್ಕಾರ ಮಾಡಲಿ ಎಂದು ತಮ್ಮ ಪಾಡಿಗೆ ತಾವಿರಬಹುದಿತ್ತು. ಇನ್ನು ಶವಸಂಸ್ಕಾರ ಮಾಡುವುದಿದ್ದರೂ ಅದನ್ನು ತಮ್ಮ ಕ್ರಮದಂತೆಯೇ ಮಾಡಬಹುದಿತ್ತು. ಹಾಗೆ ಮಾಡಿದರೆ ಅದನ್ನು ಊರವರಾಗಲಿ, ಆ ಶಿವಮ್ಮರ ಮಕ್ಕಳಾಗಲಿ ಪ್ರಶ್ನಿಸುವ ಯಾವ ಸಾಧ್ಯತೆಯೂ ಇರಲಿಲ್ಲ. ಅದರಲ್ಲೂ ಸ್ಮಶಾನದಲ್ಲಿ 2500 ರೂಪಾಯಿ ಶುಲ್ಕ ಕಟ್ಟಿ ಸಂಸ್ಕಾರ ಮಾಡಿಸುವುದಕ್ಕಿಂತ ಶುಲ್ಕ ತೆರದೇ ತಮಗನುಕೂಲದ ಜಾಗದಲ್ಲಿ ಮಣ್ಣು ಮಾಡಬಹುದಿತ್ತು. ಹಿಂದೂ ಶವಕ್ಕೆ ಮುಸ್ಲಿಮರೇಕೆ ಹೆಗಲು ಕೊಡಬೇಕು ಎಂದು ಮಸೀದಿ ಧರ್ಮಗುರುಗಳು ತಗಾದೆ ತೆಗೆಯಬಹುದಿತ್ತು.. ಹೀಗೆ ಹಿಂದೂ ಶಿವಮ್ಮರ ಶವಸಂಸ್ಕಾರ ಮಾಡದೇ ಇರುವುದಕ್ಕೆ ಹಲವು ಕಾರಣಗಳನ್ನು ಮುಂದೊಡ್ಡಬಹುದಾಗಿ ದ್ದರೂ ಮೈಸೂರಿನ ಮುಸ್ಲಿಮರು ಅವಾವುದನ್ನೂ ಮಾಡದೇ ಶವಕ್ಕೆ ಹೆಗಲು ಕೊಟ್ಟರು. ಗಾಂಧಿ ನಗರದಲ್ಲಿರುವ ಶಿವಮ್ಮರ ಮಕ್ಕಳನ್ನು ಸಂಪರ್ಕಿಸಿದರು. ಮಕ್ಕಳೇ ಅಸಹಕಾರ ತೋರಿದಾಗಲೂ ಹಿಂಜರಿಯದೇ ತಮ್ಮ ಕುಟುಂಬದ ಓರ್ವ ಸದಸ್ಯೆಯಂತೆ ಶಿವಮ್ಮರೊಂದಿಗೆ ನಡೆದುಕೊಂಡರು. ಶವವನ್ನು ಮಣ್ಣು ಮಾಡುವ ಸಂಪ್ರದಾಯ ತಮ್ಮದಾಗಿದ್ದರೂ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರಕ್ಕೆ ಬೇಕಾದ ಏರ್ಪಾಟು ಮಾಡಿದರು.

ನಿಜಕ್ಕೂ ಶ್ಲಾಘಿಸಬೇಕಾದ ಘಟನೆಗಳು ಇವು. ಹಾಗಂತ, ಮೈಸೂರಿನಲ್ಲಿ ನಡೆದ ಘಟನೆ ಅಪರೂಪದಲ್ಲಿ ಅಪರೂಪವಾದದ್ದು ಏನಲ್ಲ. ಇಂಥದ್ದು ದೇಶದ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಕೊರೋನಾ ಕಾಲದಲ್ಲಂತೂ ಇಂಥ ಮನುಷ್ಯತ್ವದ ಘಟನೆಗಳು ಅನೇಕ ನಡೆದುವು. ಪರಸ್ಪರ ಹೆಗಲು ಕೊಟ್ಟು ಹಿಂದೂ ಮುಸ್ಲಿಮರು ಬದುಕಿದರು. ಧರ್ಮ, ಜಾತಿ, ಪಕ್ಷವನ್ನು ನೋಡದೇ ಒಬ್ಬರಿಗೊಬ್ಬರು ನೆರವಾದರು. ಧರ್ಮ ಅಂದರೆ ಇದುವೇ. ಆದರೆ ನಮ್ಮ ನಡುವಿನದ್ದೇ ಒಂದು ಗುಂಪು ಇಂಥ ಸಹಕಾರ, ಸಹಬಾಳ್ವೆಯ ಬದುಕನ್ನು ಇಷ್ಟಪಡುತ್ತಿಲ್ಲ. ಹಿಂದೂ-ಮುಸ್ಲಿಮರು ಎರಡು ಧ್ರುವಗಳಾಗಿ ಶತ್ರುಗಳಂತೆ ವರ್ತಿಸುತ್ತಿರಬೇಕು ಎಂಬ ಬಯಕೆಯೊಂದು ಅವರಲ್ಲಿದೆ. ಸಂಸ್ಕೃತಿ, ಸಂಸ್ಕಾರ, ಸಂಪ್ರ ದಾಯ ಬಹುಸಂಖ್ಯಾತ ಆಚರಣೆ.. ಇತ್ಯಾದಿ ನೆಪಗಳನ್ನು ಮುಂದಿಟ್ಟು ಮುಸ್ಲಿಮರನ್ನು ಸತಾಯಿಸುವ ಪ್ರಯತ್ನವನ್ನು ಈ ಗುಂಪು ಮಾಡುತ್ತಿದೆ. ಮುಸ್ಲಿಮರ ಆಚರಣೆ, ಸಂಸ್ಕೃತಿ, ಆರಾಧನೆ, ಆಹಾರ ಕ್ರಮ ಇತ್ಯಾದಿಗಳನ್ನು ಅನುಮಾನಿಸುವ ಮತ್ತು ಬಲವಂತದಿಂದ ತಡೆಯೊಡ್ಡುವ ಪ್ರಯತ್ನಗಳನ್ನು ನಡೆಸುತ್ತಿವೆ. ಆದ್ದರಿಂದಲೇ,

ಮೈಸೂರಿನಂಥ ಘಟನೆಗಳನ್ನು ನಾವು ಮತ್ತೆ ಮತ್ತೆ ಹಂಚಿಕೊಳ್ಳಬೇಕು. ಕೊರೋನಾ ಕಾಲದಲ್ಲಿ ಮುಸ್ಲಿಮರನ್ನು ವೈರಸ್‌ಗಳಂತೆ ಬಿಂಬಿಸಿದವರು ಆ ಬಳಿಕ ಮೌನವಾದರು. ಅದಕ್ಕೆ ಕಾರಣ, ಮುಸ್ಲಿಮರ ಸೇವಾ ಗುಣ. ಸರ್ಕಾರಕ್ಕೂ ತಲುಪಲಾಗದ ಮೂಲೆಮೂಲೆಗಳಿಗೆ ತಲುಪಿದ ಮುಸ್ಲಿಮ್ ಸ್ವಯಂ ಸೇವಕರು, ಅಲ್ಲಿನ ಜನರ ಅನ್ನದ ಬಟ್ಟಲಾದರು. ಆಕ್ಸಿಜನ್ ಖರೀದಿಸಿ ಬಡವರಿಗೆ ದಾನ ಮಾಡಿದರು. ಉಚಿತ ಆ್ಯಂಬುಲೆನ್ಸ್ ಸೇವೆ ನೀಡಿದರು. ಮನೆಮನೆಗೆ ಆಹಾರದ ಕಿಟ್ ವಿತರಿಸಿದರು. ರಾಸಾಯನಿಕ ಸಿಂಪಡಣೆ ಮಾಡಿದರು. ವಲಸೆ ಕಾರ್ಮಿಕರ ಬಳಿಗೆ ತೆರಳಿ ಹಸಿವನ್ನು ಇಂಗಿಸಿದರು. ಪ್ಲಾಸ್ಮಾ ದಾನ ಮಾಡಿದರು. ಯಾರು ಕೊರೋನಾ ವೈರಸ್ ಎಂದು ಕುಹಕವಾಡುತ್ತಿದ್ದರೋ ಅವರೆಲ್ಲ ಬೆರಗಾಗುವಂತೆ ದೇಶದೆಲ್ಲೆಡೆ ಸ್ವಯಂಸೇವಕ ಮುಸ್ಲಿಮರು ಕಾಣಿಸಿಕೊಂಡರು. ಕೊರೋನಾವನ್ನೂ ಅಂಟಿಸಿಕೊಂಡರು. ಕುಟುಂಬಸ್ಥರೇ ತಮ್ಮವರ ಶವವನ್ನು ಮುಟ್ಟಲೂ ಭಯಪಡುತ್ತಿದ್ದ ವೇಳೆ, ತಾವೇ ಮುಂದೆ ನಿಂತು ಶವಸಂಸ್ಕಾರ ಮಾಡುವಷ್ಟು ಈ ಸ್ವಯಂ ಸೇವಕರು ಕಾಳಜಿ ತೋರಿದರು.

ಈಗ ಕೊರೋನಾ ಹೊರಟು ಹೋಗಿದೆ. ಜೊತೆಗೇ ಕೊರೋನಾ ಮಾಡಿಟ್ಟು ಹೋದ ಆವಾಂತರಗಳ ನೆನಪುಗಳೂ ಮರೆಯಾಗಿವೆ. ಅಲ್ಲದೇ, ಪುನಃ ಕೊರೋನಾ ಪೂರ್ವದ ಮನಸ್ಥಿತಿ ವಕ್ಕರಿಸತೊಡಗಿದೆ. ನಾವು-ಅವರು ಎಂಬ ವಿಭಜನೆಗೆ ಈ ಮಣ್ಣನ್ನು ಹಸನುಗೊಳಿಸುವ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಹಲಾಲ್, ಜಟ್ಕಾ ಕಟ್, ವ್ಯಾಪಾರ ಬಹಿಷ್ಕಾರ, ಹಿಜಾಬ್, ಬಾಂಗ್‌ಗೆ ಬಹಿಷ್ಕಾರ ಇತ್ಯಾದಿಗಳೆಲ್ಲ ಕಾಣಿಸಿಕೊಂಡದ್ದು ಕೊರೋನಾದ ನಂತರ. ಇಂಥ ವಿಭಜನೆಯನ್ನು ಮತ್ತೆ ಸೋಲಿಸಬೇಕಾಗಿದೆ. ಮತ್ತೊಂದು ಕೊರೋನಾ ಬರಲಿ ಎಂದು ಕಾಯುವುದಕ್ಕಿಂತ ಮನುಷ್ಯ ಪ್ರೇಮದ ಸುದ್ದಿಗಳನ್ನು ಹುಡುಕಿ ಹುಡುಕಿ ಹಂಚಿಕೊಳ್ಳಬೇಕಾಗಿದೆ. ಮುಸ್ಲಿಮರಿಗೆ ಹಿಂದೂಗಳು ಮತ್ತು ಹಿಂದೂಗಳಿಗೆ ಮುಸ್ಲಿಮರು ನೆರವಾದ ಮತ್ತು ಪರಸ್ಪರ ಆಚರಣೆ, ಆರಾಧನೆ, ಸಂಸ್ಕೃತಿಗಳಿಗೆ ಗೌರವ ನೀಡಿದ ಘಟನೆಗಳಿಗೆ ವ್ಯಾಪಕ ಪ್ರಚಾರವನ್ನು ಕೊಡಬೇಕಾಗಿದೆ. ಈ ದೇಶದಲ್ಲಿ ಹಿಂದೂ-ಮುಸ್ಲಿಮರ ಚರಿತ್ರೆ 1947ರಿಂದ ಆರಂಭವಾಗುವುದಲ್ಲ. ಸಾವಿರಕ್ಕಿಂತಲೂ ಅಧಿಕ ವರ್ಷದ ಸೌಹಾರ್ದ ಬದುಕಿನ ಇತಿಹಾಸ ಈ ದೇಶಕ್ಕಿದೆ.

ಅದನ್ನು ಹೇಳಿಕೊಳ್ಳುವ ಮತ್ತು ಸಂಭ್ರಮಿಸಿ ಆಚರಿಸುವ ಕೆಲಸ ಆಗಬೇಕಿದೆ.