ಜಾರ್ಖಂಡ್: ಪಾನ್ ಅಂಗಡಿಯಿಂದ ಖರೀದಿಸಿದ ಟಾರ್ಚ್‌ ಲೈಟ್‌ನಲ್ಲಿ ಸಿಸೇರಿನ್ ಹೆರಿಗೆ ಮಾಡಿದ ವೈದ್ಯರು!

0
170
ಸಾಂದರ್ಭಿಕ ಚಿತ್ರ

ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಅಯೋಮಯ

ಸನ್ಮಾರ್ಗ ವಾರ್ತೆ

ಧನ್‌ಬಾದ್: ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಾಗಿ ರಾಜ್ಯಾದ್ಯಂತ ಜಾರ್ಖಂಡ್ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವಾಂಶಗಳು ಬೇರೆಯೇ ಕಥೆಯನ್ನು ಹೇಳುತ್ತಿವೆ. ಧನ್‌ಬಾದ್‌ನ ಸರ್ಕಾರಿ ಆಸ್ಪತ್ರೆಯು ಇದಕ್ಕೊಂದು ಉದಾಹರಣೆಯಾಗಿದೆ.

ಧನ್‌ಬಾದ್‌ನ ಸದರ್ ಆಸ್ಪತ್ರೆಯಲ್ಲಿ, ಹತ್ತಿರದ ಪಾನ್ ಅಂಗಡಿಯಿಂದ ಖರೀದಿಸಿದ ಟಾರ್ಚ್‌ಲೈಟ್‌ನಲ್ಲಿ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ‌.

ಆಪರೇಷನ್ ಥಿಯೇಟರ್ ಲೈಟ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಟಾರ್ಚ್‌ಲೈಟ್‌ನ ಬೆಳಕಿನಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ನಿಷ್ಕ್ರಿಯಗೊಂಡಿರುವ ಆಪರೇಷನ್ ಥಿಯೇಟರ್ ಲೈಟ್ ಅನ್ನು ದುರಸ್ಥಿಗೊಳಿಸಿ ಬದಲಿಸುವ ಬದಲು, ಆಸ್ಪತ್ರೆಯ ಆಡಳಿತವು ಈ ಶಸ್ತ್ರಚಿಕಿತ್ಸೆಯನ್ನೇ ದೊಡ್ಡ ಸಾಧನೆ ಎಂದು ಹೇಳುತ್ತಿದೆ. ಆಸ್ಪತ್ರೆಯ ಉಪಕರಣಗಳನ್ನು ದುರಸ್ತಿ ಮಾಡಲು ಕನಿಷ್ಠ ಆಸಕ್ತಿ ತೋರದ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ಹಲವು ದಿನಗಳಿಂದ ಓಟಿ ಲೈಟ್ ಕೆಟ್ಟು ಹೋಗಿದ್ದರೂ ಅದರ ದುರಸ್ತಿಯತ್ತ ಆಸ್ಪತ್ರೆಯ ಯಾರೂ ಕಾಳಜಿ ವಹಿಸಿಲ್ಲ ಎಂಬ ಆರೋಪವಿದೆ. ಹಲವಾರು ಸೌಲಭ್ಯಗಳಿಲ್ಲದಿದ್ದರೂ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದೃಷ್ಟವಶಾತ್ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾದ ಆಸ್ಪತ್ರೆಗಳ ಅವ್ಯವಸ್ಥೆಗಳ ಬಗ್ಗೆ ಮಾತನಾಡಲು ಈ ವೈದ್ಯರಲ್ಲಿ ಏನೂ ಇಲ್ಲ ಎಂಬುದು ಅಚ್ಚರಿದಾಯಕ. ರಾಜ್ಯ ಮುಖ್ಯ ಕಾರ್ಯದರ್ಶಿಗಳ ಆದೇಶದ ನಂತರವೂ ಓಟಿ ದೀಪವನ್ನು ದುರಸ್ತಿ ಮಾಡಿಲ್ಲ ಎಂದಷ್ಟೇ ವೈದ್ಯರು ಹೇಳುತ್ತಿದ್ದಾರೆ.

ಇದೇ ವೇಳೆ,  ಇಂತಹ ಪರಿಸ್ಥಿತಿಯಲ್ಲಿ ಸಿಸೇರಿನ್ ಆಪರೇಷನ್ ಮಾಡಿದ್ದು ದೊಡ್ಡ ಸಾಧನೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಸಿವಿಲ್ ಸರ್ಜನ್ ಹೇಳಿದ್ದು, ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಸಿದ್ದಾರೆ.