ಇಸ್ಲಾಮೀ ಚಿಂತನೆಗೆ ಬೌದ್ಧಿಕ ವಲಯದಲ್ಲಿ ಅಂಗೀಕಾರ ಒದಗಿಸಿಕೊಟ್ಟ ಮೌಲಾನಾ

0
239

ಸನ್ಮಾರ್ಗ ಸಂಪಾದಕೀಯ

ಖ್ಯಾತ-ಕುಖ್ಯಾತ ಈ ಎರಡೂ ಪದಗಳ ನಡುವೆ ಒಂದೇ ಒಂದೇ ಅಕ್ಷರದ ವ್ಯತ್ಯಾಸವಷ್ಟೇ ಇದೆ. ಆದರೆ, ಅರ್ಥದ ಮಟ್ಟಿಗೆ ಹೇಳುವುದಾದರೆ, ಇವುಗಳ ನಡುವಿನ ವ್ಯತ್ಯಾಸ ಅಗಾಧವಾದುದು. ಖ್ಯಾತ ವಿದ್ವಾಂಸ, ಖ್ಯಾತ ವೈದ್ಯ, ಖ್ಯಾತ ವಿಜ್ಞಾನಿ, ಖ್ಯಾತ ಸಾಹಿತಿ- ಹೀಗೆ ಗುರುತಿಗೀಡಾದ ಹಲವರು ನಮ್ಮ ನಡುವೆ ಇದ್ದಾರೆ. ಇವರೆಲ್ಲ ರಾತ್ರಿ ಬೆಳಗಾಗುವುದರೊಳಗೆ ಖ್ಯಾತರಾದುದಲ್ಲ. ಅದರ ಹಿಂದೆ ಪರಿಶ್ರಮ, ಸಾಮಾಜಿಕ ಕೊಡುಗೆ, ಸಕಾರಾತ್ಮಕ ಚಿಂತನೆ ಮತ್ತು ಸಾಧನೆಗಳ ಬೆವರು ಇರುತ್ತದೆ. ಇಂಥ ಖ್ಯಾತರಲ್ಲಿ ಒಬ್ಬರು- ಕಳೆದವಾರ ನಿಧನರಾದ ಮೌಲಾನಾ ಜಲಾಲುದ್ದೀನ್ ಉಮರಿ. ಹಾಗಂತ, 2007ರಿಂದ 2019ರ ವರೆಗೆ ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಎಂಬುದು ಅವರ ಹೆಸರಿನ ಮೊದಲು ಖ್ಯಾತ ಎಂಬ ಪದವನ್ನು ಸೇರಿಸುವುದಕ್ಕೆ ಕಾರಣ ಅಲ್ಲ. ಸಂಘಟನೆಗಳ ಅಧ್ಯಕ್ಷತೆಯನ್ನು ಹಲವು ದಶಕಗಳ ಕಾಲ ಅಲಂಕರಿಸಿರುವ ಹಲವು ಮಂದಿ ನಮ್ಮ ನಡುವೆ ಇದ್ದಾರೆ. ಅವರೆಲ್ಲ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಯಾಕೆಂದರೆ, ಅವರೆಲ್ಲ ಮೌಲಾನಾ ಜಲಾಲುದ್ದೀನ್ ಉಮರಿ ಅಲ್ಲ.

87 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಆಗಸ್ಟ್ 26ರಂದು ರಾತ್ರಿ 9 ಗಂಟೆಗೆ ಇಹಲೋಕಕ್ಕೆ ವಿದಾಯ ಕೋರಿದಾಗ ಅವರಿಗಾಗಿ ಮಿಡಿದ ಹೃದಯಗಳು ಅಸಂಖ್ಯ. ದೇಶದ ಬಡವರು ಮತ್ತು ದುರ್ಬಲರ ಏಳಿಗೆಗಾಗಿ ‘ವಿಝನ್ 2016’ ಎಂಬ ಅಭೂತಪೂರ್ವ ಯೋಜನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರೂಪಿಸಿದಾಗ, ಅದರ ಭಾಗವಾಗಿದ್ದವರು ಇದೇ ಜಲಾಲುದ್ದೀನ್ ಉಮರಿ. ಒಂದು ಸರ್ಕಾರ ಮಾತ್ರ ಮಾಡಬಹುದಾದ ಬಹುಕೋಟಿ ರೂಪಾಯಿಗಳ ಬೃಹತ್ ಕಲ್ಯಾಣ ಯೋಜನೆ ಇದು. ಅತೀ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ. ಶಾಲೆ, ಆಸ್ಪತ್ರೆ, ಮನೆ ನಿರ್ಮಾಣ, ಮೂಲಭೂತ ಸೌಲಭ್ಯಗಳ ಒದಗಣೆ, ರೋಗಿಗಳಿಗೆ ನೆರವು, ಚಿಕಿತ್ಸೆ ಸಹಿತ ಒಂದು ಸರ್ಕಾರ ಮಾತ್ರ ಮಾಡಬಹುದಾದ ಯೋಜನೆಯನ್ನು ಒಂದು ಸಂಘಟನೆ ಕೂಡಾ ಮಾಡಬಹುದು ಎಂಬುದನ್ನು ರೂಪಿಸಿದವರಲ್ಲಿ ಇವರೂ ಒಬ್ಬರು. ಈ ಯೋಜನೆ ಕಾರ್ಯಗತಗೊಳ್ಳುವಾಗ ಇವರು ಜಮಾಅತ್‌ನ ಉಪಾಧ್ಯಕ್ಷರಾಗಿದ್ದರು. ಇವರು ಅಧ್ಯಕ್ಷರಾದ ಬಳಿಕ ಈ ಯೋಜನೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಮುಖ್ಯವಾಗಿ, ಉತ್ತರ ಭಾರತದ ಅತೀ ಹಿಂದುಳಿದ ಹಳ್ಳಿ ಮತ್ತು ಗ್ರಾಮಗಳು ಈ ಯೋಜನೆಯ ಪ್ರಯೋಜನವನ್ನು ಪಡಕೊಂಡವು. ಅಂದಹಾಗೆ,

ಯಾವುದೇ ವಿಷಯದ ಮೇಲೆ ಇಸ್ಲಾಮೀ ದೃಷ್ಟಿಕೋನಕ್ಕೆ ಸಂಬAಧಿಸಿ ವಿಶ್ಲೇಷಣೆ ನಡೆಸುವಲ್ಲಿ ಮೌಲಾನಾ ಉಮರಿ ನಿಪುಣರು. ಸಂದರ್ಭಾನುಸಾರ ಅವರು ಮಾಧ್ಯಮಗಳ ಮುಂದೆ ನಿಖರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಐಸಿಸ್‌ನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯವಾಹಿನಿಯ ಆಂಗ್ಲ ಮಾಧ್ಯಮಗಳು ಅವರನ್ನು ಸಂಪರ್ಕಿಸಿದ್ದುವು. ಸಾಮಾನ್ಯವಾಗಿ, ಮೌಲಾನಾರ ಬಗ್ಗೆ ಮಾಧ್ಯಮಗಳಲ್ಲಿ ಒಂದು ಬಗೆಯ ಕೀಳರಿಮೆ ಇರುತ್ತದೆ. ಭೌತಿಕ ಶಿಕ್ಷಣವನ್ನು ಪಡೆಯದ ಮತ್ತು ಬರೇ ಧಾರ್ಮಿಕ ಶಿಕ್ಷಣವನ್ನಷ್ಟೇ ಕಲಿತಿರುವವರೆಂಬ ಉಡಾಫೆ ಭಾವವೂ ಅವರ ಪ್ರಶ್ನಾವಳಿಯಲ್ಲಿ ಗೋಚರಿಸುತ್ತಿರುತ್ತದೆ. ಆದರೆ ಮೌಲಾನಾರು ಜಾಮಿಯಾ ದಾರುಸ್ಸಲಾಮ್‌ನಿಂದ ಫಾಝಿಲ್ ಪದವಿ ಪಡೆದವರು ಮಾತ್ರವಲ್ಲ, ಅಲಿಘರ್ ವಿವಿಯಿಂದ ಬಿಎ ಪದವಿಯನ್ನೂ ಪಡೆದವರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿಪುಣರಾಗಿದ್ದಾರೆ ಎಂಬುದು ಗೊತ್ತಾಗಿ ಪತ್ರಕರ್ತರ ಪ್ರಶ್ನೆಯ ವರಸೆಯೇ ಬದಲಾಗಿತ್ತು. ಮೌಲಾನಾ ಅವರು ಮದ್ರಾಸ್ ವಿವಿಯಿಂದ ಪರ್ಷಿಯನ್ ಭಾಷೆಯಲ್ಲಿ ಮುನ್ಶಿ ಫಾಝಿಲ್ ಪದವಿಯನ್ನು ಕೂಡಾ ಪಡೆದವರಾಗಿದ್ದರು. ಆದ್ದರಿಂದಲೇ,

‘ಇಸ್ಲಾಮೀ ರಾಷ್ಟ್ರವನ್ನು ಕಟ್ಟುವ ಮೂಲಕ ನಾವು ಸ್ವರ್ಗ ಪ್ರವೇಶಿಸಬಹುದು ಎಂದು ಐಸಿಸ್‌ನ ಮಂದಿ ಭಾವಿಸುತ್ತಾರೆ. ಆದರೆ, ಹತ್ಯೆಗೈದು, ದೌರ್ಜನ್ಯವೆಸಗಿ ಮತ್ತು ಹಿಂಸೆಗೀಡುಮಾಡಿ ಓರ್ವ ಹೇಗೆ ತಾನೇ ಸ್ವರ್ಗ ಪ್ರವೇಶಿಸಲು ಸಾಧ್ಯ? ಹಿಂಸೆಯ ವಿರುದ್ಧ ಮಕ್ಕಳನ್ನು ತರಬೇತುಗೊಳಿಸುವುದು ಎಲ್ಲ ಹೆತ್ತವರ ಕರ್ತವ್ಯವಾಗಿದೆ ಮತ್ತು ಆ ಮೂಲಕ ಇಸ್ಲಾಮ್ ತೋರಿಸಿದ ಸನ್ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ…’ ಎಂದವರು ಮಾಧ್ಯಮಗಳ ಮುಂದೆ ಅಭಿಪ್ರಾಯಪಟ್ಟಿದ್ದರು. ಐಸಿಸನ್ನು ಸಮರ್ಥಿಸುವ ಸಣ್ಣ ಎಳೆಯೇನಾದರೂ ಸಿಗುತ್ತದೆಯೇ ಎಂದು ಕಾದುಕೊಂಡವರನ್ನು ಗಾಢ ನಿರಾಶೆಗೆ ತಳ್ಳಿದ ಹೇಳಿಕೆ ಅದಾಗಿತ್ತು. ಇದೇವೇಳೆ,

ಜಮಾಅತೆ ಇಸ್ಲಾಮೀ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದ ಸಂದರ್ಭದಲ್ಲಿ ಅದರ ಕಮಾಂಡರ್ ಇನ್ ಚೀಫ್ ಎಂದು ಜಲಾಲುದ್ದೀನ್ ಉಮರಿಯವರನ್ನು ತನ್ನ ಸುದ್ದಿ ಪ್ರಸಾರದ ನಡುವೆ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿ.ವಿ. ಬಿಂಬಿಸಿತ್ತು. ಬಳಿಕ ಅದು ನಿಶ್ಶರ್ಥವಾಗಿ ಮೌಲಾನಾರ ಕ್ಷಮೆಯನ್ನೂ ಯಾಚಿಸಿತ್ತು. ಯಾಕೆಂದರೆ ಮೌಲಾನಾ ಉಮರಿ ನಾಲ್ಕು ಗೋಡೆಯೊಳಗಿನ ಅಧ್ಯಕ್ಷ ಆಗಿರಲಿಲ್ಲ. ಬಹುತ್ವದ ಭಾರತದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಒಂದಕ್ಕಿಂತ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದು ಬೌದ್ಧಿಕ ವಲಯ ತಲೆದೂಗುವಂತೆ ಮಾಡಿದವರು ಅವರು. ವೈಚಾರಿಕವಾಗಿ ಅವರು ಅತ್ಯಂತ ಬಲಿಷ್ಠರಾಗಿದ್ದರು. ಇಸ್ಲಾಮನ್ನು ಅತ್ಯಂತ ಸಮಗ್ರವಾಗಿ ಯಾವುದೇ ಅಪವಾದಗಳಿಗೆ ಎಡೆಯಾಗದಂತೆ ಪ್ರಬಲ ಪುರಾವೆಯೊಂದಿಗೆ ಬೌದ್ಧಿಕ ವಲಯದಲ್ಲಿ ಮಂಡಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯ ಕ್ಷೇತ್ರ ಅವರ ಇಷ್ಟದ ಮಗ್ಗುಲಾದುದರಿಂದ ಭಾಷಣಗಳಿಗೆ ಹೊರತಾಗಿ ತನ್ನ ಚಿಂತನೆಯನ್ನು ಬರಹಗಳ ಮೂಲಕ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಅವರು ಯಶಸ್ಸು ಕಂಡರು. ಅವರು ಬರೆದಿರುವ ಸುಮಾರು 40ಕ್ಕಿಂತಲೂ ಅಧಿಕ ಪುಸ್ತಕಗಳಲ್ಲಿ ಯಾವುದು ಕೂಡಾ ಇಸ್ಲಾಮ್ ಮತ್ತು ಮುಸ್ಲಿಮ್ ಎಂಬ ಪರಿಧಿಯನ್ನು ಬಿಟ್ಟು ಹೊರ ಹೋಗಿಯೇ ಇರಲಿಲ್ಲ. ಏನನ್ನು ಬರೆಯುವುದಿದ್ದರೂ ಅದರ ಜೊತೆ ಇಸ್ಲಾಮೀ ದೃಷ್ಟಿಕೋನವನ್ನು ದಾಖಲಿಸುವುದು ಅವರ ರೂಢಿಯಾಗಿತ್ತು. ಪಂಡಿತ ವಲಯದಲ್ಲಿ ಹೆಚ್ಚು ವಿಶ್ಲೇಷಣೆಗೆ ಒಳಪಡುವ ಸಂಶೋಧನಾತ್ಮಕ ಬರಹಗಳನ್ನು ಅವರು ಆಸಕ್ತಿಯಿಂದ ಬರೆದುದಷ್ಟೇ ಅಲ್ಲ, ಆ ಎಲ್ಲ ಬರಹಗಳೂ ಇಸ್ಲಾಮನ್ನು ಕೇಂದ್ರೀಕರಿಸಿ ಇದ್ದುವು ಎಂಬುದು ಗಮನಾರ್ಹ. ಅಂದಹಾಗೆ,

ಮೌಲಾನಾ ಉಮರಿಯವರು ವಿದ್ಯಾರ್ಥಿ ಕಾಲದಿಂದಲೇ ಜಮಾಅತ್‌ನೊಂದಿಗೆ ಸಂಬಂಧ ಇಟ್ಟುಕೊಂಡೇ ಬೆಳೆದವರು. ತನ್ನ ಪ್ರತಿಭೆ ಮತ್ತು ಆಸಕ್ತಿಯ ಕಾರಣದಿಂದಾಗಿ ಬಹಳ ಬೇಗ ಮುಂಚೂಣಿಗೂ ತಲುಪಿದರು. ಜಮಾಅತ್‌ನ ಅಲೀಘರ್ ನಗರಾಧ್ಯಕ್ಷರಾಗಿ ಅವರು ಬಹಳ ಬೇಗ ಆಯ್ಕೆಯಾದರು. ಆದರೆ, ಅವರ ಆಸಕ್ತಿ ಸಂಶೋಧನಾ ಕ್ಷೇತ್ರದ ಮೇಲಿತ್ತು. ಆದ್ದರಿಂದಲೇ, ಜಮಾಅತ್‌ನ ಸಂಶೋಧನಾ ವಿಭಾಗವಾದ ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಭಾಗವಾದರು. ‘ತಹ್ಕಿಕಾತೆ ಇಸ್ಲಾಮೀ’ ಎಂಬ ರಿಸರ್ಚ್ ತ್ರೈಮಾಸಿಕದ ಸಂಪಾದಕರೂ ಆದರು. ಆ ಬಳಿಕ ಜಮಾಅತ್‌ನ ಮುಖವಾಣಿ ಝಿಂದಗಿ-ಏ-ನೌ ಎಂಬ ಮಾಸಿಕದ ಸಂಪಾದಕರಾದರು. ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿರಂತರ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ 2007ರಿಂದ 2019ರ ವರೆಗೆ ಜಮಾಅತ್‌ನ ಅಧ್ಯಕ್ಷರಾಗಿಯೂ ಹೊಣೆಗಾರಿಕೆ ನಿಭಾಯಿಸಿದರು. ಈ ನಡುವೆ ಅವರು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಸ್ಥಾಪಕ ಸದಸ್ಯರೂ ಉಪಾಧ್ಯಕ್ಷರೂ ಆಗಿದ್ದರು.

ತ್ರಿವಳಿ ತಲಾಕ್‌ನ ಚರ್ಚೆಯ ವೇಳೆ ಅತ್ಯಂತ ತಾರ್ಕಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇದೇ ಮೌಲಾನಾ. ಕೇಂದ್ರ ಸರ್ಕಾರದ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಿ ಪ್ರಶ್ನೆಗಳನ್ನೆತ್ತಿದವರೂ ಇದೇ ಮೌಲಾನಾ. ಅವರ ಇನ್ನೊಂದು ಬಹುಮುಖ್ಯ ಸಾಧನೆ ಏನೆಂದರೆ, ಭಿನ್ನ ವಿಚಾರಧಾರೆಯ ಉಲೆಮಾಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡದ್ದು. ಜಮಾಅತ್‌ಗಿಂತ ಹೊರತಾದ ವಿವಿಧ ಧಾರ್ಮಿಕ ಸಂಘಟನೆಗಳ ಉಲೆಮಾಗಳು ಮೌಲಾನಾರೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದರು. ಬಹುತ್ವದ ಸಮಾಜದಲ್ಲಿ ಮುಸ್ಲಿಮರು ಹೇಗಿರಬೇಕು ಮತ್ತು ಇಸ್ಲಾಮಿನ ಪ್ರಚಾರದ ಸ್ವರೂಪ ಏನಿರಬೇಕು ಎಂಬ ಬಗ್ಗೆ ಅತ್ಯಂತ ನಿಖರ ಮತ್ತು ಸಂತುಲಿತ ನಿಲುವನ್ನು ಸಂದರ್ಭಾನುಸಾರ ವ್ಯಕ್ತಪಡಿಸುತ್ತಲೇ ಬಂದವರು ಮೌಲಾನಾ ಉಮರಿ. ನಿಜವಾಗಿ,

ಏಕಕಾಲದಲ್ಲಿ ಉತ್ತಮ ನಾಯಕ, ಶಿಕ್ಷಣ ತಜ್ಞ, ಸಾಹಿತಿ, ಚಿಂತಕ, ಸಂಶೋಧಕ ಇತ್ಯಾದಿ ಗುಣಗಳನ್ನು ಓರ್ವರು ರೂಢಿಸಿಕೊಳ್ಳುವುದು ಸುಲಭ ಅಲ್ಲ. ಅಪಾರ ಪರಿಶ್ರಮ, ನಿರಂತರ ಅಧ್ಯಯನ, ಚಿಂತಕರೊಂದಿಗೆ ಸಂವಾದ, ಸಂಶೋಧನೆ, ಸಕಾರಾತ್ಮಕ ದೃಷ್ಟಿಕೋನ ಮತ್ತು ಅಲ್ಲಾಹನ ಅನುಗ್ರಹ- ಇವೆಲ್ಲವೂ ಜೊತೆಗೂಡಿದಾಗ ಸಿಗುವ ಫಲಿತಾಂಶವೇ ಮೌಲಾನಾ ಜಲಾಲುದ್ದೀನ್ ಉಮರಿ. ಮೃದು ಮಾತಿನ, ಗಂಭೀರ ನಡವಳಿಕೆಯ ಮೌಲಾನಾರು ಬಹುತ್ವದ ಭಾರತಕ್ಕೆ ತನ್ನ ವಿಚಾರಗಳಿಂದ ಮೆರುಗನ್ನು ನೀಡಿದ್ದಾರೆ. ‘ಮೌಲಾನಾರೆಂದರೆ, ಕರ್ಮಶಾಸ್ತ್ರ ಭಿನ್ನಾಭಿಪ್ರಾಯಗಳನ್ನು ಉಬ್ಬಿಸಿ ಜಿದ್ದಾಜಿದ್ದಿನಲ್ಲಿ ತೊಡಗಿರುವವರು…’ ಎಂಬ ಸಾಮಾನ್ಯ ನಿಲುವಿಗೆ ಅಪವಾದವಾಗಿದ್ದರು ಮೌಲಾನಾ ಉಮರಿ. ಅವರು ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿದ್ದಾಗ ಇಂಥ ಕರ್ಮಶಾಸ್ತ್ರ ಭಿನ್ನತೆಗಳನ್ನು ತಗ್ಗಿಸುವ ದೃಷ್ಟಿಯಿಂದಲೇ ರಿಸರ್ಚ್ ತಂಡವನ್ನು ರೂಪಿಸಿದ್ದರು. ಅವರು ತಮ್ಮ ಬರಹದಲ್ಲಿ ಕರ್ಮಶಾಸ್ತ್ರ ಭಿನ್ನತೆಗೆ ಮಹತ್ವ ಕಲ್ಪಿಸುತ್ತಲೇ ಇರಲಿಲ್ಲ. ಎಲ್ಲ ವಿಚಾರಧಾರೆಯ ಉಲೆಮಾಗಳನ್ನು ಜೊತೆ ಸೇರಿಸಿಕೊಂಡು ಬಹುತ್ವದ ಭಾರತದಲ್ಲಿ ಮುಸ್ಲಿಮರು ನಿರ್ಭಯದಿಂದ ಬದುಕುವುದಕ್ಕೆ ಮತ್ತು ದೇಶದ ಜನರಿಗೆ ಇಸ್ಲಾಮನ್ನು ಪರಿಚಯಿಸುವುದಕ್ಕೆ ಅವರು ಶಕ್ತಿ ಮೀರಿ ಶ್ರಮಿಸಿದರು.

ಅವರನ್ನು ಸೃಷ್ಟಿಕರ್ತನು ಪ್ರೀತಿಸಲಿ.