ಸನ್ಮಾರ್ಗ ವಾರ್ತೆ
ಪಾಟ್ನಾ: ಮಾಜಿ ಕೇಂದ್ರ ಸಚಿವ ಮತ್ತು ದೇಶದ ಅತ್ಯುನ್ನತ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಶರದ್ ಯಾದವ್ ಗುರುವಾರ(ಜ.12) ರಾತ್ರಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಗುರುಗ್ರಾಮ್ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ನಿಧನರಾದರು.
ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಶರದ್ ಯಾದವ್, ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಹಾರದ ಆಡಳಿತಾರೂಢ ಜನತಾ ದಳ ಯುನೈಟೆಡ್ನ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿದ್ದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟವನ್ನು ಕೊನೆಗೊಳಿಸಿ, ಬಿಜೆಪಿಯೊಂದಿಗೆ ಕೈಜೋಡಿಸಿದ್ದ ವೇಳೆ ಪಕ್ಷ ತ್ಯಜಿಸಿದ್ದರು.
ಆ ಬಳಿಕ 2018ರಲ್ಲಿ ಲೋಕತಾಂತ್ರಿಕ್ ಜನತಾ ದಳ ಎಂಬ ಪಕ್ಷಕ್ಕೆ ಚಾಲನೆ ನೀಡಿದ್ದರು. ಆದರೆ ಎರಡು ವರ್ಷಗಳ ನಂತರ ಅದನ್ನು ಲಾಲೂ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ವಿಲೀನಗೊಳಿಸಿದ್ದರು.
ಶರದ್ ಯಾದವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಹಿತ ದೇಶದ ಹಿರಿಯ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.












