ಸನ್ಮಾರ್ಗ ವಾರ್ತೆ
✍️ ಅಮಾನ್ ಕೆ
ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂಬ ಚಿತ್ರ ಸಹಿತ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇತ್ತು. ಇದನ್ನು ಹಂಚಿಕೊಂಡದ್ದು ಧರ್ಮ ದ್ವೇಷಕ್ಕೆ ಕುಖ್ಯಾತಿಯನ್ನು ಪಡಕೊಂಡಿರುವ ಪ್ರಶಾಂತ್ ಸಂಬರ್ಗಿ.
ಇದೀಗ ಈ ಪೋಸ್ಟಿಗೆ ಟ್ವಿಸ್ಟ್ ಸಿಕ್ಕಿದೆ. ನಟ ಪ್ರಕಾಶ್ ರಾಜ್ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ತನ್ನ ಹೆಸರಲ್ಲಿ ಪ್ರಶಾಂತ್ ಸಂಬರ್ಗಿ ಸುಳ್ಳು ಸುದ್ದಿಯನ್ನು ಹರಡ್ತಾ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಸುಳ್ಳ ರಾಜನ ಹೇಡಿಗಳ ಸೈನ್ಯಕ್ಕೆ ಪವಿತ್ರ ಪೂಜೆಯಲ್ಲೂ ಸುಳ್ಳುಗಳನ್ನು ಹಬ್ಬಿಸುವುದೇ ಕೆಲಸ. ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ. ನ್ಯಾಯಾಲಯದಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಹಾಗಂತ ಇಂತಹ ಸುಳ್ಳು ಸುದ್ದಿ ಕೇವಲ ಪ್ರಕಾಶ್ ರಾಜ್ ಗೆ ಸಂಬಂಧಿಸಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದಲ್ಲ. ಇತ್ತೀಚಿಗೆ ಸಲ್ಮಾನ್ ಖಾನ್ ಶಾರುಖ್ ಖಾನ್ ಅಮೀರ್ ಖಾನ್ ಬಗ್ಗೆ ಕೂಡ ಇಂಥದ್ದೇ ಚಿತ್ರಸಹಿತ ಪೋಸ್ಟುಗಳು ಹಂಚಿಕೆಯಾಗಿತ್ತು. ಇವರೆಲ್ಲ ತ್ರಿವೇಣಿ ಸಂಗಮದಲ್ಲಿ ಮುಳುಗಿ ಎದ್ದಿದ್ದಾರೆ ಎಂಬಂತೆ ಬಿಂಬಿಸುವ ಚಿತ್ರಗಳು. ಈ ಚಿತ್ರಗಳೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಮಾತ್ರ ಅಲ್ಲ ಇವುಗಳಿಗೆ ಬರುವ ಪ್ರತಿಕ್ರಿಯೆಗಳಂತೂ ಅತ್ಯಂತ ಕೆಟ್ಟದಾಗಿತ್ತು.
ಪ್ರಕಾಶ್ ರಾಜ್ ಅವರಿಗೆ ಸಂಬಂಧಿಸಿ ಪ್ರಶಾಂತ ಸಂಬರ್ಗಿ ಹಾಕಿದ ಪೋಸ್ಟಿಗೂ ಅತ್ಯಂತ ನಿಂದನೀಯ ರೂಪದ ಕಮೆಂಟ್ಗಳು ವ್ಯಕ್ತವಾಗಿವೆ. ಪ್ರಕಾಶ್ ರಾಜ್ ಅವರನ್ನು ಹೀನಾಯವಾಗಿ ಬೈದ ಪ್ರತಿಕ್ರಿಯೆಗಳಿವೆ. ಕೆಲವೊಮ್ಮೆ ಹೀಗೆ ಬೈಯ್ಯುವುದಕ್ಕಾಗಿ ಇಂತಹ ಸುಳ್ಳು ಚಿತ್ರಗಳನ್ನು ಹಂಚಿಕೊಳ್ಳುವವರೂ ಇದ್ದಾರೆ. ಆದರೆ ಅನೇಕ ಬಾರಿ ಜನಸಾಮಾನ್ಯರು ಇಂತಹ ಸುಳ್ಳು ಸುದ್ದಿಗಳನ್ನು ನಂಬುತ್ತಾರೆ ಮತ್ತು ಅದನ್ನು ಹಂಚಿಕೊಳ್ಳುತ್ತಾರೆ. ಅಂತಹ ಸುಳ್ಳು ಸುದ್ದಿಗಳನ್ನು ಸತ್ಯ ಸುದ್ದಿ ಎಂದೆ ನಂಬಿಕೊಂಡು ಮಾತಿನಲ್ಲಿ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳುತ್ತಾರೆ. ಈ ಪ್ರಶಾಂತ್ ಸಂಬರ್ಗಿ ಮಾಡಿರುವುದು ಇದನ್ನೇ.
ಈ ಸಂಬರ್ಗಿ ಅಂತಿಂಥವನಲ್ಲ. ಹತ್ತು ಹಲವು ಮುಸ್ಲಿಂ ದ್ವೇಷಿ ಹೇಳಿಕೆ ಮತ್ತು ಚಟುವಟಿಕೆಯ ಮೂಲಕ ವಿವಾದಕ್ಕೆ ಒಳಗಾದವ. ಹಲಾಲ್ ಮಾಡಿದ ಹಣವು ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗಳಿಗೆ ಹೋಗುತ್ತೆ, ಹಲಾಲ್ ದೇಶಕ್ಕೆ ಮಾರಕವಾಗಿದೆ ಎಂದು ಈ ಸಂಬರ್ಗಿ ಈ ಹಿಂದೆ ಹೇಳಿದ್ದರು. ಹಾಗೆಯೇ ಹಲಾಲ್ ವಿರುದ್ಧ ಜಟ್ಕಾ ಕಟ್ ಎಂಬ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ರು. ಮಸೀದಿಯ ಲೌಡ್ ಸ್ಪೀಕರ್ ನ ವಿರುದ್ಧ ಅಭಿಯಾನದಲ್ಲೂ ಈತ ಭಾಗವಹಿಸಿದ್ದರು.
ತಮಗಾಗದವರನ್ನು ಸತಾಯಿಸಲು ಬಳಸುವ ಅತಿ ದೊಡ್ಡ ಅಸ್ತ್ರವೇ ಸುಳ್ಳು ಸುದ್ದಿ. ಇಂಥ ಸುಳ್ಳು ಸುದ್ದಿಗಳನ್ನು ತಯಾರಿಸುವ ಕಾರ್ಖಾನೆಗಳೇ ಈ ದೇಶದಲ್ಲಿ ತುಂಬಿಕೊಂಡಿವೆ. ಇಂಥವರ ಧೈರ್ಯ ಏನೆಂದರೆ ಇವರ ವಿರುದ್ಧ ಕೇಸು ದಾಖಲಾಗುವುದು ಕಡಿಮೆ. ಯಾರ್ಯಾರದೋ ಬಗ್ಗೆ ಏನೇನೋ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ವಿಕೃತ ಸುಖವನ್ನು ಅನುಭವಿಸುವುದೇ ಇವರ ಕಾಯಕ.
ಇದೀಗ ಪ್ರಕಾಶ್ ರಾಜ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಪ್ರಶಾಂತ ಸಂಬರ್ಗಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಧರ್ಮ ದ್ವೇಷವನ್ನ ಹರಡುವುದು, ಬಿಜೆಪಿ ಪರ ಬ್ಯಾಟಿಂಗ್ ಮಾಡೋದು ಮತ್ತು ತಮಗಾಗದವರ ಚಾರಿತ್ಯ ಹನನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡವರಿಗೆ ಪ್ರಕಾಶ್ ರಾಜ್ ಅವರು ದಾಖಲಿಸಿರುವ ದೂರು ಪಾಠವಾಗಬೇಕು.












