2025ರಲ್ಲಿ ಬಿಜೆಪಿ ಪತನದತ್ತ

0
947

ಸನ್ಮಾರ್ಗ ವಾರ್ತೆ

✍️ಅರಫಾ ಮಂಚಿ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ರ ಕುಟುಂಬವನ್ನು ಭೇಟಿಯಾಗಲು ಹೋದಾಗ ಅಮಿತ್ ಶಾರನ್ನು ಭೇಟಿಯಾಗುವ ಕಾರ್ಯಕ್ರಮ ಇದ್ದೂ ಭೇಟಿಯಾಗದೆ ರಾಹುಲ್ ಸಹಿತ ಕಾಂಗ್ರೆಸ್ ನಾಯಕರನ್ನು ಯಾಕೆ ಭೇಟಿಯಾದರು? ರಾಜಕೀಯ ಪಡಸಾಲೆಯಲ್ಲಿ ಬಿರುಸಿನಿಂದ ಚರ್ಚೆಯಾಗುತ್ತಿರುವ ಪ್ರಚಲಿತ ಕುತೂಹಲ ಕೆರಳಿಸಿದ ವಿದ್ಯಾಮಾನಗಳಿವು.

ನಿತೀಶ್ ಮನಸ್ಸು ಬದಲಿಸಿ ಮತ್ತೊಂದು ಪಲ್ಟಿ ಹೊಡೆಯುತ್ತಾರಾ? ಎನ್‌ಡಿಎಯಿಂದ ಇಂಡಿಯ ಕೂಟಕ್ಕೆ ಹೋಗಿ ಸೇರುತ್ತಾರಾ? ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡೇ ಕೂಟ ಬದಲಿಸುತ್ತಾರಾ? ಎಂದು ಮಾಧ್ಯಮಗಳಲ್ಲಿ ಬಲವಾದ ಚರ್ಚೆಗಳು ನಡೆಯುತ್ತಿವೆ.

ಒಂದು ವೇಳೆ ನಿತೀಶ್ ಕುಮಾರ್ ಮೋದಿ ಸರಕಾರಕ್ಕೆ ಬೆಂಬಲ ಹಿಂಪಡೆದರೆ ಕೇಂದ್ರ ಸರಕಾರ ಅಲುಗಾಡಬಹುದು. ಇವೆಲ್ಲ ಗೊಂದಲಗಳಿಗೆ ಪುಷ್ಠಿ ನೀಡುವಂತೆ ನಿತೀಶ್ ಕುಮಾರ್ ವರ್ತಿಸುತ್ತಿದ್ದಾರೆ. ತನ್ನ ಇನ್ನೊಂದು ಪಲ್ಟಿಯ ವಿಚಾರದಲ್ಲಿ ಹೆಚ್ಚು ಮಾತಾಡದೆ ಸ್ಪಷ್ಟ ಸುಳಿವು ನೀಡದೆ ನಿತೀಶ್ ಕುಮಾರ್ ಅಡ್ಡಗೋಡೆಯಲ್ಲಿ ದೀಪ ಇಟ್ಟಂತೆ ಮಾತಾಡುತ್ತಿದ್ದಾರೆ. ಮಾದ್ಯಮಗಳಲ್ಲಿ ಚರ್ಚೆಯನ್ನು ಉಳಿಸಿಕೊಂಡಿದ್ದಾರೆ. ಏನಿದರ ಅರ್ಥ? ಮೋದಿ ಸರಕಾರ 2025ರಲ್ಲಿ ಕುಸಿದು ಬಿದ್ದಂತೆಯೇ? ಆದರೆ,

ಮೋದಿಯನ್ನು ಪಲ್ಟಿ ಮಾಡುವುದು ಅಷ್ಟು ಸುಲಭ ಅಲ್ಲ.
ಇವೆಲ್ಲ ಚರ್ಚೆಗಳಿಗೆ ಪುಷ್ಠಿ ನೀಡುವಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ನಿತೀಶ್‌ರಿಗೆ, ಚಲೋ ಮಾಫ್ ಕರ್‌ಲಿಯ, ಇಂಡಿಯಕ್ಕೆ ಬನ್ನಿ ಎಂದು ಹೇಳಿಕೆ ನೀಡಿದ್ದಾರೆ. ಲಾಲುರ ಮಾತುಗಳಿಗೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ ಚಲೋ ಚೋಡಿಯೇನಾ (ಬಿಟ್ಟು ಬಿಡಿ) ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆಗೂ ನಿತೀಶ್ ಸಿಗಲಿಲ್ಲ. ಆದರೆ, ಅರ್‌ಜೆಡಿ ನಾಯಕ ಮೋದಿ ಸರಕಾರದ ಸಚಿವ ಲಲನ್ ಸಿಂಗ್, ನಾವೀಗಲೂ ಎನ್‌ಡಿಎಎಯಲ್ಲಿಯೇ ಇದ್ದೇವೆ ಎಂದು ಹೇಳುತ್ತಿದ್ದಾರೆ. ಆರ್‌ಜೆಡಿ ವಕ್ತಾರ ನೀರಜ್ ಕುಮಾರ್, ಹಾಗೇನಿಲ್ಲ, ನಾವೀಗಲೂ ಎನ್‌ಡಿಎಯಲ್ಲಿಯೇ ಇದ್ದೇವೆ, ತನ್ನ ಪುತ್ರ ತೇಜಸ್ವಿ ಯಾದವ್ ಗೆಲ್ಲಲು ವಿಫಲವಾಗಿದ್ದರಿಂದ ನಿತೀಶ್ ಕುರಿತು ಲಾಲೂ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಕೇಂದ್ರದಲ್ಲಿ ಮೋದಿ ಸರಕಾರ ಕೇವಲ ಬಹುಮತವೂ ಇಲ್ಲದೆ 240 ಸೀಟುಗಳೊಂದಿಗೆ ಇತರ ಪಕ್ಷಗಳ ಬೆಂಬಲದಿಂದ ಅಧಿಕಾರ ಹಿಡಿದುಕೊಂಡಿದೆ. ಇಂತಹದ್ದರಲ್ಲಿ ನಿತೀಶ್ ಮತ್ತು ಆಂಧ್ರ ಪ್ರದೇಶದ ನಾಯ್ಡು ಕೇಂದ್ರ ಸರಕಾರದಿಂದ ಬೆಂಬಲ ಹಿಂಪಡೆದರೆ ಈ ಸರಕಾರ ಖಂಡಿತ ಬೀಳುತ್ತದೆ. ಅಂದರೆ ಈ ಎಲ್ಲ ಬೆಳವಣಿಗೆಗಳು ಬಿಜೆಪಿ ಮತ್ತು ಮೋದಿಗೆ 2025 ಅಗ್ನಿ ಪರೀಕ್ಷೆಯ ವರ್ಷವಾಗಲಿದೆ ಎಂದು ವರ್ಷದ ಆರಂಭದ ರಾಜಕೀಯ ಬೆಳವಣಿಗೆಗಳು ಸೂಚನೆ ನೀಡುತ್ತಿವೆ. ಬಹುಶಃ ದೇಶದಲ್ಲಿ ಮೋದಿ ಸರಕಾರದ ವಿರುದ್ಧ ಬಲಗೊಳ್ಳುತ್ತಿರುವ ವಿರೋಧ ನೋಡಿದರೆ ಜನರ ಬಯಕೆ ಈ ಸರಕಾರ ಹೋಗಬೇಕೆಂಬುದೇ ಆಗಿದೆ ಎಂದೂ ಅನಿಸುತ್ತದೆ.

ಸಂವಿಧಾನ ಬದಲಾವಣೆಯ ಬೆದರಿಕೆ, ಜಾತಿ ಜನಗಣತಿಯ ಕುರಿತು ಹಾರಿಕೆಯ ಮಾತುಗಳು, ಕೊನೆಗೆ ಅಮಿತ್ ಶಾರ ಡಾ. ಬಾಬ ಸಾಹೇಬ್ ಅಂಬೇಡ್ಕರ್‌ರ ಅಪಮಾನದ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ಇವೆಲ್ಲವೂ ಬಿಜೆಪಿಯನ್ನು ಅಸುರಕ್ಷಿತ ಸ್ಥಿತಿಗೆ ತಂದು ನಿಲ್ಲಿಸಿದೆ. ಅಂಬೇಡ್ಕರ್ ಅವಮಾನದಿಂದಾಗಿ ದಲಿತರು ಹಿಂದುಳಿದವರ ಆಕ್ರೋಶ, ಪಂಜಾಬ್ ಹರಿಯಾಣ ಗಡಿಯಲ್ಲಿ ರೈತರ ಹೋರಾಟ ಇವೆಲ್ಲ ಈಗಲೂ ಮುಂದುವರಿಯುತ್ತಿದೆ. ಆಗಾಗ ಬಿಜೆಪಿ ಸರಕಾರ ಇರುವಲ್ಲಿ ಪರೀಕ್ಷೆಯ ಪೇಪರ್ ಲೀಕ್‌ ಔಟಾಗಿ ಉದ್ಯೋಗಾಕಾಂಕ್ಷಿಗಳು ನಿರಾಶರಾಗಿ ಈ ಸರಕಾರ ಒಮ್ಮೆ ತೊಲಗಿದರೆ ಸಾಕೆಂಬ ಸ್ಥಿತಿಗೆ ತಂದು ನಿಲ್ಲಿಸಿದೆ. ಹಿಂದೂ ಮುಸ್ಲಿಂ ರಾಜಕೀಯದ ಆಸರೆಯಲ್ಲಿ ಬಿಜೆಪಿ ಬೆಳೆದದ್ದಾಯಿತು. ಇನ್ನೇನು ಉಳಿದಿದೆ ಬೆಳೆಯಲು? ಉತ್ತರ ಪ್ರದೇಶದ ಸಂಭಾಲ್ ಮಸೀದಿಯಲ್ಲಿ ಮಂದಿರ ಹುಡುಕ ಹೊರಟ ಘಟನೆಯಲ್ಲಿ ಭಕ್ತರನ್ನು ಹೊರತಪಡಿಸಿ ಉಳಿದ ಜನರು ಬಿಜೆಪಿಗೆ ಛೀಮಾರಿ ಹಾಕುತ್ತಿದ್ದಾರೆ.

ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಎರಡರಷ್ಟು ಸ್ಥಾನಗಳಿಸುತ್ತೇವೆಂದಿತ್ತು. ಅಬ್‌ಕಿಬಾರ್ ಚಾರ್ ಸೌ ಪಾರ್ ಎಂದು ಘೋಷಣೆ ಹೊಡೆಯುತ್ತಿತ್ತು. ಆದರೆ ಜನರು ಕೇವಲ 240 ಸೀಟು ಕೊಟ್ಟರು.

ಮುಸ್ಲಿಮರ ವಿರುದ್ಧ ಸಂಘಪರಿವಾರದವರಿಂದ ಆಕ್ರಮಣಕಾರಿಯಾಗಿ ಮುಸ್ಲಿಮರಿಗೆ ಹೊಡೆಯಿಸಿ ಮಸೀದಿಗೆ ದಾಳಿ ಮಾಡಿಸುವುದರಿಂದ ಹಿಂದುತ್ವ ವೋಟುಗಳೆಲ್ಲ ಸಿಗುತ್ತದೆ ಎಂಬ ಲೆಕ್ಕಾಚಾರ ನುಚ್ಚು ನೂರಾಗಿದ್ದು ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ. ಅಂದರೆ ವಿಶ್ವಗುರುವಾಗಿ 2025ರಲ್ಲಿ ಕಂಗೊಳಿಸುವ ಘೋರ ಕನಸಿನೊಂದಿಗೆ ಮೋದಿ ಮತ್ತು ಸಂಘಪರಿವಾರ ಲೆಕ್ಕ ಹಾಕಿ ಮುಸ್ಲಿಮ್ ವಿರೋಧಿ ರಾಜಕೀಯ ನಡೆಸಿತು. ಆದರೆ ಪ್ರಜ್ಞಾವಂತ ಮತದಾರರು ಮಾತ್ರ ಬಹುಮತ ಕೊಡದೆ ಬೆವರಿಳಿಸಿದರು.

ಮೋದಿ ಸರಕಾರಕ್ಕೆ ಪೂರ್ಣ ಅಧಿಕಾರದ ಬಲ ಇದ್ದಾಗ ಬಿಜೆಪಿ ಹಲವು ಆಪರೇಷನ್ ಕಮಲ ನಡೆಸಿತ್ತು. ಅದರಲ್ಲಿ ಮುಖ್ಯವಾದದ್ದು ಮಹಾರಾಷ್ಟ್ರದಲ್ಲಿ ನಡೆಸಿದ್ದ ಆಪರೇಷನ್ ಕಮಲ. ಅದಂತೂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಾಡಿಯ ಮಹಾರಾಷ್ಟ್ರ ಸರಕಾರವನ್ನು ದೂಡಿ ಹಾಕಿ ಏಕನಾಥ ಶಿಂಧೆ ನೇತೃತ್ವದಲ್ಲಿ ಮಹಾಯುತಿ ಸರಕಾರ ರಚನೆಗೆ ಕಾರಣವಾಗಿತ್ತು. ಬಾಳಸಾಹೇಬ ಠಾಕ್ರೆ ಕುಟುಂಬದ ಕೈಯಲ್ಲಿದ್ದ ಶಿವಸೇನೆಯನ್ನು ಹೋಳು ಮಾಡಿದ್ದಂತೂ ದೇಶವೇ ಅಚ್ಚರಿಯಿಂದ ನೋಡಿತು. ನಂತರ ಶರದ್‌ಪವಾರ್‌ರ ಎನ್‌ಸಿಪಿ ಯನ್ನು ಹೋಳು ಮಾಡಿತು. ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಲೆಕ್ಕಗಳನ್ನು ಉಲ್ಟಾ ಮಾಡಿತು. ಜನ ನಾವು ಶಿಂಧೆಗೂ, ಅಜಿತ್ ಪವಾರ್ ಪಾರ್ಟಿಗೂ ಓಟು ಹಾಕಿಲ್ಲ ಎನ್ನುತ್ತಾರೆ. ಆದರೆ ಈ ಎರಡೂ ಪಾರ್ಟಿಗಳು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಸಲಿ ಶಿವಸೇನೆ ಮತ್ತು ಅಸಲಿ ಎನ್‌ಸಿಪಿಯನ್ನು ಕೆಳಕ್ಕೆ ತಳ್ಳಿ ದೊಡ್ಡ ಪಾರ್ಟಿಯಾಗಿ ಬೆಳೆದಿವೆ. ಇಲ್ಲಿಂದ ಇವಿಎಂನಲ್ಲಿ ಬಿಜೆಪಿ ಗೋಲ್‌ಮಾಲ್ ಮಾಡಿಸುತ್ತಿದೆ ಎಂಬ ವಿವಾದ ಗಟ್ಟಿಯಾಗಿದ್ದು ಮತ್ತು ಈಗ ಅದು ಕೋರ್ಟಿನಲ್ಲಿದೆ. ಹೆಚ್ಚು ಚರ್ಚಿಸಬೇಕಾಗಿಲ್ಲ. ಚರ್ಚಿಸದಿದ್ದರೂ ಅದೀಗ ಬಿಜೆಪಿಯನ್ನಂತೂ ಜನರ ಹಿಂದೆಂದಿಗಿಂತ ಹೆಚ್ಚು ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸಿದ್ದಂತೂ ನಿಜ.

ಮಹಾರಾಷ್ಟ್ರದ ಇನ್ನೊಂದು ಬೆಳವಣಿಗೆಯಲ್ಲಿ ಅಜಿತ್ ಪವಾರ್‌ರ ತಾಯಿ ಆಶಾ ಪವಾರ್ ನಮ್ಮ ಕುಟುಂಬ ಮತ್ತೆ ಒಂದಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ ಎರಡಾದ ಎನ್ಸಿಪಿ ಒಂದಾಗುತ್ತದೆ ಎಂದಾಯಿತು. ಆದರೆ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರದಲ್ಲಿ ಸಚಿವರಾಗಬಹುದು ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ. ಅಜಿತ್ ಪವಾರ್ ಶರದ್ ಪವಾರ್‌ರನ್ನೇ ಸೇರಿಕೊಂಡರೆ, ಬಿಹಾರದಲ್ಲಿ ನಿತೀಶ್ ಕುಮಾರ್ ಕೈಕೊಟ್ಟರೆ ಕೇಂದ್ರದಲ್ಲಿ ಮೋದಿ ಸರಕಾರ ಕುಸಿದು ಬೀಳುತ್ತದೆ. ಕೇಂದ್ರದಲ್ಲಿ ಇಂಡಿಯ ಸರಕಾರ ನಿತೀಶ್‌ರ ನೇತೃತ್ವದಲ್ಲಿ ಅಧಿಕಾರ ಬಂದರೆ ಅದರಲ್ಲಿ ಅಜಿತ್ ಪವಾರ್ ಸಚಿವರಾಗಲಿದ್ದಾರೆ. ಬಿಜೆಪಿಯೂ ಈ ಸಾಧ್ಯತೆಯನ್ನು ತಿಳಿದಿರುವುದರಿಂದ ನಿತೀಶ್‌ರನ್ನು ಕೆಣಕದೆ ಬಿಹಾರದ ಬಿಜೆಪಿಯವರನ್ನು ಶಾಂತವಾಗಿರಲು ಸೂಚಿಸುತ್ತಿದೆ. ಅಜಿತ್ ಪವಾರ್ ನೇತೃತ್ವದ ಎ ನ್‌ಸಿಪಿ ಅಧ್ಯಕ್ಷ ಪ್ರಫುಲ್ಲ ಪಟೇಲ್ ಚಾಚಾ ಭತೀಜ ಒಂದಾದರೆ ಸಂತೋಷ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಒಂದಾಗಿರುವುದನ್ನೇ ಎರಡೂ ಎನ್ಸಿಪಿಯವರು ಬಯಸುತ್ತಿದ್ದಾರೆ. ಇವೆಲ್ಲ ಬಿಜೆಪಿಯನ್ನು ಹಿಂದಕ್ಕೆ ಸರಿಸುವ ಬೆಳವಣಿಗೆಗಳು.

ನಿತೀಶ್ ಎನ್‌ಡಿಎಯಿಂದ ಹೊರಬಂದರೆ ಆರ್‌ಜೆಡಿ ಬೆಂಬಲದಲ್ಲಿ ನಿತೀಶ್ ಕುಮಾರ್ ಬಿಹಾರದಲ್ಲಿಯೂ ಸರಕಾರ ಉಳಿಸಬಹುದು. ಇಂಡಿಯ ಕೂಟದಿಂದಲೂ ಪ್ರಧಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಈಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ನಿತೀಶ್ ಪ್ರಧಾನಿ ಎಂಬ ಚರ್ಚೆಗಳೂ ಆರಂಭವಾಗಿದೆ.

ಈ ಹಿಂದೆ ಇಂಡಿಯಾ ಕೂಟ ಬಿಟ್ಟು ಎನ್‌ಡಿಎಗೆ ನಿತೀಶ್ ಪಲ್ಟಿ ಹೊಡೆಯುವಲ್ಲಿ ಮಮತಾ ಬ್ಯಾನರ್ಜಿ ಮಹಾತ್ವಾಕಾಂಕ್ಷೆಯೂ ಕಾರಣ ಎಂಬ ಮಾತಿದೆ. ಅವರಿಗೂ ಪ್ರಧಾನಿಯಾಗಬೇಕಿತ್ತು. ದಿಲ್ಲಿಯ ಕೇಜ್ರಿವಾಲ್‌ರಿಗೂ ಪ್ರಧಾನಿಯಾಗುವ ಆಶೆಯಿದೆ. ಅದರೆ ಇವರೆಲ್ಲರ ನಡುವೆ ನಿತೀಶ್ ಇಂಡಿಯ ಕೂಟದ ರೂವಾರಿಯಾಗಿ ಪ್ರಧಾನಿಯ ಅಭ್ಯರ್ಥಿಯಾಗಿ ಬೆಳೆಯುತ್ತಿದ್ದರು. ಆರೆಸ್ಸೆಸ್‌ನ ಬಲಪಂಥದಲ್ಲಿ ಬಲವಾಗಿರುವ ಜನರು ನಿತೀಶ್ ಪ್ರಧಾನಿಯಾಗದಂತೆ ತಡೆಯಲು ಮಮತಾರನ್ನು ಬಳಸಿಕೊಂಡರು ಎಂಬ ಮಾತುಗಳು ಅಂದು ಕೇಳಿ ಬಂದಿತ್ತು. ಬಹುಶಃ ಪ್ರಧಾನಿಯಾಗುವುದಿಲ್ಲ ಮತ್ತೇಕೆ ಲೋಕ ಸಭಾ ಸೀಟುಗಳನ್ನು ಹೆಚ್ಚಿಸಿಕೊಳ್ಳಬಾರದು ಎಂದು ನಿತೀಶ್ ಇಂಡಿಯ ಬಿಟ್ಟು ಎನ್‌ಡಿಎಗೆ ಅಂದು ಪಲ್ಟಿ ಹೊಡೆದರು.

ಆದರೆ ಈ ಸಲ ನಿತೀಶ್ ಮತ್ತು ಚಂದ್ರಬಾಬು ನಾಯಿಡು ಬೆಂಬಲ ಹಿಂಪಡೆದರೆ ಮಮತಾ ಬ್ಯಾನರ್ಜಿಗೆ ಮೋದಿಯನ್ನು ಬೆಂಬಲಿಸುತ್ತಾರೆ ಎಂಬ ಚರ್ಚೆಗಳು ಕೂಡ ಪ್ರಚಲಿತದಲ್ಲಿದೆ. ರಾಜಕೀಯ ಏನೂ ಆಗಬಹುದು. ಪ್ರಜೆಗಳ ಹಿತ ನೋಡಿ ತತ್ವ ಮಾತಾಡುವವರ ಕಾಲ ಇದಲ್ಲ. ಹಣ ಮತ್ತು ಅಧಿಕಾರ ಇರುವಲ್ಲಿಗೆ ನೊಣಗಳು ಮುತ್ತಿಕೊಳ್ಳುವಂತೆ ಇಂದಿನ ಬಹುತೇಕ ರಾಜಕರಣಿಗಳು ಮುತ್ತಿಕೊಳ್ಳುತ್ತಾರೆ.

ಆದರೆ ಬಹುಶಃ ಈ ಸಾಧ್ಯತೆಯ ಪ್ರಮಾಣ ಬಹಳ ಕಡಿಮೆ ಮಟ್ಟದ್ದು. ಯಾಕೆಂದರೆ ಪಶ್ಚಿಮ ಬಂಗಾಳದ ರಾಜಕೀಯ ವಾಜಪೇಯಿ ಸರಕಾರ ಇದ್ದ ಕಾಲದಂತಲ್ಲ. ಮಮತಾ ಬಿಜೆಪಿ ಸಖ್ಯ ಬೆಳೆಸಿದರೆ ಮುಸ್ಲಿಂ ವೋಟುಗಳು ತಿರುಗಿ ಬೀಳಬಹುದು. ಮಮತಾರನ್ನು ಕೈಬಿಟ್ಟು ರಾಹುಲ್ ಗಾಂಧಿ ಪರ ವಾಲಬಹುದು. ಕಾಂಗ್ರೆಸ್ ಮತ್ತು ವಾಮಪಕ್ಷಗಳು ಅಲ್ಲಿ ಗಟ್ಟಿಯಾಗಬಹುದು. ಮಮತಾಗೂ ಜಮ್ಮು ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿಗಾದ ಕತೆ ಆಗಬಹುದು. ಪಾರ್ಟಿಯೇ ನಿರ್ನಾಮದ ಹಂತಕ್ಕೆ ತಲುಪಬಹುದು. ಸುವೇಂದು ಅಧಿಕಾರಿಯನ್ನು ಬಿಜೆಪಿ ಮಮತಾರಿಗೆ ಪ್ರತಿಸ್ಪರ್ಧಿಯಾಗಿ ಬೆಳೆಸಿದೆ. ಅವರ ವಿರುದ್ಧವಿರುವ ಪ್ರಕರಣಗಳಲ್ಲಿ ಸಿಬಿಐ, ಇಡಿ ಸುಮ್ಮನಾಗಿವೆ. ಆದ್ದರಿಂದ ಮಮತಾರನ್ನು ಬಳಸಿಕೊಂಡು ನಿತೀಶ್ ಪ್ರಧಾನಿಯಾಗದಂತೆ ನೋಡಿಕೊಳ್ಳುವುದು ಈ ಸಲ ಕಷ್ಟವಿದೆ ಬಿಜೆಪಿಗೆ.

ವಿಷಯ ಬದಲಿಸೋಣ:
ಪಂಜಾಬಿನಲ್ಲಿ ರೈತ ನಾಯಕ ಜಗ್‌ಜಿತ್ ಸಿಂಗ್ ದಲ್ಲೇವಾಲ್ ಕೇಂದ್ರ ಸರಕಾರದ ಕೃಷಿ ನೀತಿಯನ್ನು ವಿರೋಧಿಸಿ ಅನ್ನ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಜಾಬ್ ಹರಿಯಾಣದ ಗಡಿಯಾದ ಖನೊರಿಯಲ್ಲಿ ಅತ್ಯಂತ ಚಳಿಯಲ್ಲಿ ಎಪ್ಪತ್ತು ವರ್ಷ ದಾಟಿರುವ ಅವರು ಕಳೆದ ಹಲವಾರು ದಿವಸಗಳಿಂದ ಸತ್ಯಾಗ್ರಹದಲ್ಲಿದ್ದಾರೆ. ಕ್ಯಾನ್ಸರ್ ರೋಗಿಯಾಗಿರುವ ದಲ್ಲೇವಾಲ್‌ರ ಜೀವ ರಕ್ಷಿಸುವಂತೆ ಪಂಜಾಬ್ ಸರಕಾರಕ್ಕೆ ಸುಪ್ರೀಂ ಕೋರ್ಟು ಡಿಸೆಂಬರ್ 20ಕ್ಕೆ ಆದೇಶ ಹೊರಡಿಸಿತ್ತು.

ಎಂ.ಎಸ್. ಸ್ವಾಮಿನಾಥನ್ ಆಯೋಗದ ಆಧಾರದಲ್ಲಿ ಕನಿಷ್ಟ ಬೆಂಬಲ ಬೆಲೆ ಕೊಡಬೇಕು, 2021ರಲ್ಲಿ ರದ್ದುಪಡಿಸಿದ ಕೃಷಿ ಕಾನೂನು ವಿರುದ್ಧ ಹೋರಾಟ ಮಾಡಿದವರ ಮೇಲೆ ಹಾಕಿದ ಕೇಸು ವಾಪಸು ಪಡೆಯಬೇಕು ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಈವರೆಗೆ ಅವರ ಬೇಡಿಕೆಯತ್ತ ಗಮನ ಹರಿಸಲಿಲ್ಲ. ಚರ್ಚೆಗೂ ಬಂದಿಲ್ಲ. ದಲ್ಲೇವಾಲ್‌ರ ಹೋರಾಟವನ್ನು ನಿರ್ಲಕ್ಷಿಸುತ್ತಾ ಹೋದರೆ ತಾನು ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ಸ್ವಯಂ ಕೋರ್ಟು ಮೋದಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಇದು ಕೂಡ ಕೇಂದ್ರ ಸರಕಾರದ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತೆ ಬೆಳೆಯುತ್ತದೆ ಎಂಬ ಸೂಚನೆಯೇ ಈಗ ಸಿಗುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಝ್ದೂರ್ ಮೋರ್ಚಾ ಕೂಡ ಈ ಹೋರಾಟದಲ್ಲಿ ಪಾಲ್ಗೊಂಡಿದೆ. ಅಂತಿಮವಾಗಿ 2021ರ ಅದೇ ರೈತ ಪ್ರತಿಭಟನೆಯಂತಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಕೂಡ ಮೋದಿ ಸರಕಾರ್ ಬ್ಯಾಕ್ ಫುಟ್‌ಗೆ ಸರಿಯಲು ನಿರ್ಬಂಧಿಸಬಹುದು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಮಾಡದೆ ಅನ್ಯ ದಾರಿಯಿಲ್ಲ ಎಂಬಂತಾಗಬಹುದು.

ಸಂಘಪರಿವಾರದ ಮಸೀದಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟು ಒಂದು ತಾತ್ಕಾಲಿಕವಾಗಿ ತಡೆಹಾಕಿದ್ದು ಮೋದಿ ಸರಕಾರ ಮಾತ್ರವಲ್ಲ ಪೂರ ಸಂಘಪರಿವಾರಕ್ಕೆ ಹಿನ್ನಡೆಯಾಗಿದೆ. ಒಂದು ವೇಳೆ ಬಿಜೆಪಿ ನಾಯಕರು ಗ್ಯಾನ್‌ವ್ಯಾಪಿ ಮತ್ತು ಮಥುರಾದ ಶಾಹಿ ಇದ್‌ಗಾಹ್‌ದ ಅರ್ಜಿಗಳಲ್ಲಿ ಅವರ ಹಿತಕ್ಕೆ ತಕ್ಕಂತೆ ತೀರ್ಪು ಬಂದರೆ ಸಂಘಪರಿವಾರಿಗಳ ಹಾರಾಟ ಹೆಚ್ಚಬಹುದು. ಆದರೆ ಆರಾಧನಾಲಯ ಯಥಾಸ್ಥಿತಿ ಕಾನೂನು ಕೋರ್ಟು ಪರಿಶೀಲನೆ ನಡೆಸುತ್ತಿದೆ. ದೇಶದಲ್ಲಿ ನೂರಾರು ಮಸೀದಿಗಳಲ್ಲಿ ಸಂಘೀ ದಾಂಧಲೆ ಮುಂದುವರಿಯಬಹುದು. ಆದರೆ ಆಸಾಧ್ಯತೆ ಬಗ್ಗೆ ನೀವು ಸಂದೇಹಿಸಬಹುದು. ಆರೆಸ್ಸೆಸ್ ಪ್ರಮುಖ್ ಮೋಹನ್ ಭಾಗವತ್‌ರು ಎಲ್ಲ ಮಸೀದಿಗಳಲ್ಲಿ ದೇವಸ್ಥಾನ ಹುಡುಕುವ ಕೆಲಸಕ್ಕಿಳಿಯಬಾರದು ಎಂದರಲ್ಲ. ಆದರೆ ಅಷ್ಟು ಸುಲಭದಲ್ಲಿ ಮುಸ್ಲಿಮರನ್ನು ಟೈಟ್ ಮಾಡುವ ಅಸ್ತ್ರವನ್ನು ಹಿಂದುತ್ವವಾದಿಗಳು ಬಿಟ್ಟು ಕೊಡಬಹುದೇ? ಮಠಾಧೀಶರು, ಮಹಂತರು ಯೋಗಿಗಳು ಭಾಗವತ್‌ರ ಮಾತನ್ನು ನಿರಾಕರಿಸುತ್ತಿದ್ದಾರೆ ಎಂಬುದು ಇಲ್ಲಿ ಹೇಳಬೇಕಾದ ಇನ್ನೊಂದು ವಿಚಾರ. ಈ ಧರ್ಮಾಚರ್ಯರುಗಳಿಗೆ ಪ್ರಚಾರವೇ ಸಿಗದಿದ್ದರೆ ಇವರು ಏನು ಹೇಳಿದರೂ ಹೊರಗೆ ಕೇಳಿಸಿಕೊಳ್ಳುವುದಿಲ್ಲ.

ಬಿಜೆಪಿ ಬ್ಯಾಕ್‌ಫುಟ್‌ಗೆ ಬಿದ್ದ ಬೇರೆ ವಿಚಾರವೂ ಇದೆ. 2024ರ ಪಾರ್ಲಿಮೆಂಟಿನಲ್ಲಿ ಒಂದು ದೇಶ ಒಂದು ಚುನಾವಣೆ ಮತ್ತು ವಕ್ಫ್ ಮಸೂದೆ ಬಿದ್ದು ಹೋದವು. ಅದೀಗ ಜಂಟಿ ಪಾರ್ಲಿಮೆಂಟು ಸಮಿತಿಯ ಪರಿಶೀಲನೆಯಲ್ಲಿದೆ. ಜನಗಣತಿ ಮೋದಿ ಸರಕಾರ ನಡೆಸುವ ಅನಿವಾರ್ಯತೆ ಇದೆ. ಯಾಕೆಂದರೆ 2011ರಲ್ಲಿ ಜನಗಣತಿ ನಡೆಯಲಿಲ್ಲ. 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿ ಕೂಡ ಕೊರೋನದ ಕಾರಣದಿಂದ ಮುಂದೂಡಲಾಗಿದೆ. ಈಗ ಪಾರ್ಲಿಮೆಂಟಿನಲ್ಲಿ ಜಾತಿ ಜನಗಣತಿಯ ಬೇಡಿಕೆ ಬಲವಾಗಿ ಕೇಳಿ ಬರುತ್ತಿದೆ. ಪ್ರಿಯಾಂಕಾ ಗಾಂಧಿಯವರಂತೂ ಜಾತಿ ಜನಗಣತಿ ನಡೆಸಬೇಕೆಂದಾಗ ಮಂಗಳ ಸೂತ್ರ ಕದಿಯಬಹುದು, ಎಮ್ಮೆಗಳನ್ನು ಕದಿಯಬಹುದೆಂದು ಬಿಜೆಪಿಯವರು ಉತ್ತರಿಸುತ್ತಿದ್ದಾರೆ ಎಂದು ಪಾ ರ್ಲಿಮೆಂಟಿನಲ್ಲಿಯೇ ತರಾಟೆಗೆ ತೆಗೆದುಕೊಂಡರು. ಆದ್ದರಿಂದ ಜನಗಣತಿ ಮಾಡುವುದಕ್ಕೆ ಹೆದರುತ್ತಿರುವ ಮೋದಿ ಸರಕಾರ ಜಾತಿ ಜನಗಣತಿ ಅನಿವಾರ್ಯವಾಗುವ ಮೊದಲು ದೇಶದ ಒಟ್ಟು ಜನರ ಸಂಖ್ಯೆಯನ್ನು ಲೆಕ್ಕ ಮಾಡಲು ಹೊರಡಬಹುದು.

ವಿಷಯಕ್ಕೆ ಬರೋಣ:
ಮಹಾರಾಷ್ಟ್ರ, ಹರಿಯಾಣಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಏನೇ ಇರಲಿ. ಅದು ವೋಟು ಫಿಕ್ಸಿಂಗಿನಿಂದಾದ ವಿಜಯವಾಗಿದೆ ಜನರು ಬಿಜೆಪಿಗೆ ಮತಗಳ ಮೂಲಕ ನೀಡಿದ ತೀರ್ಪಲ್ಲ ಎಂದು ಪ್ರಚಾರವಾಗುತ್ತಿದೆಯಷ್ಟೇ. ನಿಮಗೂ ಗೊತ್ತು, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಹಿಂದಕ್ಕೆ ಸರಿಯುವುದು ಶುರುವಾಗಿದೆ. ಮೋದಿಗೆ ಪೂರ್ಣ ಬಹುಮತ ಇದ್ದಾಗ ಪ್ರತಿಪಕ್ಷದ ನಾಯಕರನ್ನು ಇಡಿ ಸಿಬಿಐ ಐಟಿ ಬೆನ್ನತ್ತುತ್ತಿದ್ದವು. ಆದರೆ ಅ ಗಲಾಟೆ ಇಲ್ಲವೆಂದಲ್ಲ ಈಗ ಕಡಿಮೆಯಾಗಿದೆ. ಯಾಕೆ? ಚುನಾವಣೆಯ ನಂತರ ಜೈಲು ಸೇರಿದ್ದ ಕೇಜ್ರಿವಾಲ್, ಸತ್ಯೇಂದ್ರ ಜೈನ್, ಹೇಮಂತ ಸೊರೆನ್, ಸಂಜಯ್ ಸಿಂಗ್ ಮುಂತಾದವರು ಜಾಮೀನು ಪಡೆದು ಹೊರಬಂದರು.

ಯಾಕೆಂದರೆ ಮೋದಿ ಸರಕಾರ ಈಗಿಲ್ಲ. ಎನ್‌ಡಿಎ ಸರಕಾರ ಇರುವುದು. ಬಿಹಾರದ ನಿತೀಶ್ ಕುಮಾರ್, ಆಂಧ್ರದ ಚಂದ್ರಬಾಬು ನಾಯಿಡು ಸಂಸದರ ಬೆಂಬಲದಿಂದ ಈ ಸರಕಾರ ನಡೆಯುವುದು. ಬಿಜೆಪಿ ಎಷ್ಟೇ ಶ್ರೀಮಂತ ಪಾರ್ಟಿಯಾದರೂ ಹಿಂದಿನಂತೆ ಆಪರೇಷನ್ ಕಮಲ ನಡೆಸುವ, ಇಡಿಯಿಂದ ರೈಡ್ ಮಾಡಿಸುವ ಧೈರ್ಯವನ್ನು ಹೊಂದಿಲ್ಲ. ಹೀಗಾಗಿ ಪ್ರತಿಪಕ್ಷದ ರಾಜಕಾರಣಿಗಳು ಸ್ವಲ್ಪ ನಿರಾಳವಾಗಿದ್ದಾರೆ. ಇದೇ ವೇಳೆ ಎನ್‌ಡಿಎಯ ಒಳಗೆ ಕೂತ ಬಿಜೆಪಿಯೇತರ ಚಿಕ್ಕ ಪಕ್ಷಗಳಿಗೆ ಅಸ್ತಿತ್ವ, ಸ್ಥಾನಮಾನ, ಅಧಿಕಾರ, ಕೊನೆಗೆ ಪಾರ್ಟಿಯನ್ನೇ ಕಳಕೊಳ್ಳುವ ಭಯ ಕಾಡತೊಡಗಿದೆ.

ಯಾಕೆಂದರೆ ಮಹಾರಾಷ್ಟ್ರ ಮಾಡೆಲ್ ಬಿಹಾರದಲ್ಲಿ ಅಗಬಹುದು ಎಂಬ ಲೆಕ್ಕಾಚಾರಗಳೇ ಈಗ ಪ್ರಬಲವಾಗಿ ಕೇಳಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕಳೆದ ಚುನಾವಣೆಯವರೆಗೂ ಮುಖ್ಯಮಂತ್ರಿಯಾಗಿದ್ದ ಶಿಂಧೆಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ರನ್ನು ಮುಖ್ಯಮಂತ್ರಿಯಾಗಿ ಮಾಡಿತು. ಬಿಹಾರದಲ್ಲಿ ಬಿಜೆಪಿ ಹೆಚ್ಚು ಶಾಸಕರ ಸಂಖ್ಯೆ ಹೊಂದಿಯೂ ಹೈಕಮಾಂಡ್ ಅಣತಿಯಿಂದ ಸಿಕ್ಕಿಹಾಕಿ ಕೊಂಡ ಬಿಜೆಪಿಯವರಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಅಲ್ಲಿನ ಬಿಜೆಪಿಯವರು ನಿತೀಶ್‌ರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಿಂದ ಕುದಿಯುತ್ತಿದ್ದಾರೆ. ಆದರೆ ಈ ವರ್ಷ ನಡೆಯುವ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ಮುಖ್ಯಮಂತ್ರಿಸ್ಥಾನ ನಿತೀಶ್‌ಗಿಲ್ಲ ಎನ್ನಲಾಗುತ್ತಿದೆ. ದಿಲ್ಲಿಯಲ್ಲಿಯೂ ಈ ವರ್ಷ ಚುನಾವಣೆ ಇದೆ. ಬಿಜೆಪಿ ಕೇಜ್ರಿವಾಲ್‌ರನ್ನು ಮಗುಚಿ ಹಾಕಬಹುದು ಎಂಬ ವಾದಗತಿ ಪ್ರಚಲಿತವಿದೆ. ಆದರೆ ಕೇಜ್ರಿವಾಲ್‌ರಿಗೆ ಸಂಘಪರಿವಾರದ ಬೆಂಬಲ ಸಿಗದೆನ್ನುವಂತಿಲ್ಲ.

ಆದುದರಿಂದ ಒಂದುವೇಳೆ ಎನ್‌ಡಿಎ ಯಲ್ಲಿದ್ದು ನಿತೀಶ್ ಚುನಾವಣೆಗೆ ಹೋದರೆ ಚುನಾವಣೆಯಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನವನ್ನು ಗೆದ್ದರೆ ನಿತೀಶ್ ಕುಮಾರ್‌ರ ಅವಸ್ಥೆ ಮಹಾರಾಷ್ಟ್ರದಲ್ಲಿ ಶಿಂಧೆಗಾದಂತೆ ಆಗಬಹುದಾ? ಬಿಜೆಪಿಯೇ ಹೆಚ್ಚು ಸೀಟು ಗೆಲ್ಲುವುದು ಖಚಿತ. ಈ ಆಧಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯೆ ಮುಖ್ಯಮಂತ್ರಿಯನ್ನು ನಿರ್ಧರಿಸಲಿದೆ ಎಂದರೆ ಈಗಾಗಲೇ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಪೋಸ್ಟರ್ ಅಂಟಿಸಿರುವ ನಿತೀಶ್ ಕುಮಾರ್‌ಗೆ ನಿರಾಶೆ ಆಗಬಹುದಾ? ಈ ಎಲ್ಲ ಅನುಮಾನ ಸಂದೇಹಗಳ ಜೊತೆಗೆ ಬಿಜೆಪಿಯ ಇತ್ತೀಚೆಗಿನ ನಡೆ ಅಧ್ಯಯನಿಸಿದರೆ ಜೆಡಿಯು ಮಾತ್ರವಲ್ಲ ಸಾಮಾನ್ಯರು ಕೂಡ ಈ ಸಲ ನಿತೀಶ್ ಗಯಾ ಎಂದು ಸುಲಭದಲ್ಲಿ ಹೇಳಬಹುದು. ಈ ಲೆಕ್ಕಾಚಾರದಲ್ಲಿ ನಿತೀ ಶ್ ಎನ್‌ಡಿಎಯಿಂದ ಹೊರಬಂದು ಇಂಡಿಯ ಕೂಟದ ಜೊತೆ ಚುನಾವಣೆಗೆ ಹೋಗಲು ನಿರ್ಧರಿಸಬಹುದು.

ಒಂದು ವೇಳೆ ನಿತೀಶ್ ಇಂಡಿಯ ಜೊತೆ ಸೇರಿದರೆ ಬಿಹಾರದಲ್ಲಿ ಬಿಜೆಪಿಗೆ ಈಗಿಗಿಂತ ಅರ್ಧ ಸೀಟು ಕೂಡ ಸಿಗುವುದು ಕಷ್ಟ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ನಿತೀಶ್ ರನ್ನು ನಂಬುವಂತಿಲ್ಲ ಎಂಬುದಂತೂ ಸತ್ಯ. ಈ ಎಲ್ಲ ನಾಟಕಗಳು ಅಮಿತ್‌ಶಾ ನರೇಂದ್ರ ಮೋದಿಗೆ ಟಾಂಗು ನೀಡುವುದಕ್ಕೆ ಆಗಿರಲೂ ಬಹುದು. ಅಥವಾ ಇಂಡಿಯ ಕೂಟ ಸ್ಥಾಪಿಸಿ ಕೈಕೊಟ್ಟಂತೆ ಇಂಡಿಯ ಕೂಟದವರಲ್ಲಿ ನಿರೀಕ್ಷೆ ಹುಟ್ಟಿಸಿ ನಿರಾಶೆ ಮಾಡುವ ಕುತಂತ್ರವೂ ಆಗಿರಬಹುದು. ಚಲೋ ಮಾಫ್ ಕರ್‌ಲಿಯ ಎಂದು ಲಾಲು ಏನೇ ಹೇಳಲಿ. ಆರ್‌ಜೆಡಿ ಸಹಿತ ಮಹಾ ಘಟ್‌ಬಂಧನ್‌ಗೆ ಎರಡೆರಡು ಸಲ ಕೈಕೊಟ್ಟಿದ್ದಾರೆ. ಬಿಜೆಪಿಯ ಜೊತೆ ಸೇರಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದ ಚಾಲಾಕಿ ಸಮಯ ಸಾಧಕ ರಾಜಕಾರಣಿಯಾಗಿ ನಿತೀಶ್ ಭಾರತದ ಇತಿಹಾಸದಲ್ಲಿ ವಿಶೇಷ ದಾಖಲೆ ನಿರ್ಮಿಸಿದವರು.

ಆದರೂ ಈ ಸಲ ನಿತೀಶ್ ಆಟ ಅಡಬಹುದು. ಯಾಕೆಂದರೆ ಎನ್‌ಡಿಎ ಸರಕಾರ ಇದೆ. ಬಿಜೆಪಿ ತನ್ನ ಸ್ವಂತ ಧಮ್ಮಿನಲ್ಲಿ ಸರಕಾರವನ್ನು ಹೊಂದಿಲ್ಲ. ಚಂದ್ರಬಾಬು ನಾಯಿಡು ಮತ್ತು ನಿತೀಶ್ ಕುಮಾರ್ ಬೆಂಬಲ ವಾಪಸು ತೆಗೆದು ಕೊಂಡರೆ ಪ್ರಧಾನಿ ಸ್ಥಾನದಲ್ಲಿ ಮೋದಿ ಉಳಿಯುವುದಿಲ್ಲ. ನಿತೀಶ್‌ರನ್ನು ಬಿಹಾರದಿಂದ ಬದಲಿಸಲು ಹೊರಟ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಕಳಕೊಳ್ಳುವ ಪರಿಸ್ಥಿತಿಯನ್ನು ಸ್ವಯಂ ನಿರ್ಮಿಸಿದ ಹಾಗಾಗುವುದಿಲ್ವ. ಅಂದರೆ ಬಿಜೆಪಿ ಕಾಲಿಗೆ ಕೊಡಲಿಯನ್ನು ಎಳೆದು ಹಾಕಿದಂತಾಗುವುದು ಬಹುತೇಕ ಖಚಿತ. ಸದ್ಯಕ್ಕೆ ಇದನ್ನು ತಡೆಯಲು ಬಿಜೆಪಿಯ ಬಳಿ ಯಾವ ಸರ್ಕಸ್ಸಿದೆ? ಅತ್ತ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಎನ್ಸಿಪಿ ಒಂದಾದರೆ ಎನ್‌ಡಿಯ ಕೂಟಕ್ಕೆ ಹಿನ್ನಡೆ. ಒಮ್ಮೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿದರೆ ಬಿಜೆಪಿಯ ಗ್ರಾಫ್ ಮತ್ತೆಂದೂ ಮೇಳೇಲುವುದಿಲ್ಲ.

ಆದುದರಿಂದ ಅಮಿತ್ ಶಾರ ಮೂಲಕ ಅಂಬೇಡ್ಕರ್ ವಿವಾದವವನ್ನು ಮೈಮೇಲೆಳೆದು ಕೊಂಡ ಮೇಲೆ ಗಣನೀಯ ಪ್ರಮಾಣದಲ್ಲಿ ಬಿಜೆಪಿಯ ದಲಿತ ಮತಗಳು ಹಿಂದುಳಿದವರ ಮತಗಳು ಕುಸಿಯುತ್ತದೆ. ಇಂಡಿಯ ಕೂಟದ ಸರಕಾರದಲ್ಲಿ ಇಡಿ ಸಿಬಿಐ ಭಯ ಹೋದರೆ ಮತ್ತೆ ತತ್ವ ರಾಜಕೀಯ ಗರಿಕೆದರುತ್ತದೆ. ಬಿಎಸ್‌ಪಿಯ ಮಾಯಾವತಿ ಮೈಕೊಡವಿಕೊಂಡು ಸಕ್ರಿಯವಾಗಬಹುದು. ಇದರಿಂದ ದಲಿತರ, ಹಿಂದುಳಿದವರ ಬೆಂಬಲವನ್ನು ಬಿಜೆಪಿ ಮತ್ತಷ್ಟು ಕಳಕೊಳ್ಳಬಹುದು. ಜೊತೆಗೆ ಮೋಹನ್ ಭಾಗವತ್ ಎಲ್ಲ ಮಸೀದಿಯಲ್ಲಿ ದೇವ ಸ್ಥಾನ ಹುಡುಕಬೇಡಿ ಎಂದದ್ದೂ ಸೇರಿಸಿದರೆ ಬಿಜೆಪಿ ಬಲ ಕಳಕೊಳ್ಳಬಹುದು. ಇದು ಬಿಜೆಪಿಗೂ ಗೊತ್ತಿದೆ. ಹೀಗಾಗಿ ಶತಾಯಗತಾಯ ಮೋದಿ ಸರಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ನೋಡೇ ನೋಡುತ್ತದೆ. ಆರೆಸ್ಸೆಸ್ಸಿಗಿಂತ ಮೇಲೆ ಎಂಬ ಮನಸ್ಥಿತಿಯನ್ನು ಭಕ್ತರಲ್ಲಿ ಹುಟ್ಟು ಹಾಕಲು ಹೊರಟ ಮೋದಿ ಗುಂಪನ್ನು ಆರೆಸ್ಸೆಸ್ ಕೂಡ ಬೆಂಬಲಿಸುವಂತಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ 2025 ಬಿಜೆಪಿಯ ಹಿನ್ನಡೆಗೆ ಕಾರಣವಾಗಲಿದೆ ಎಂಬ ಬೆಳವಣಿಗೆಗಳು ಮತ್ತು ವಿದ್ಯಮಾನಗಳು ಈಗಿನದು.