ತೀವ್ರಗೊಂಡ ರೈತರ ಹೋರಾಟ: ನೋಯ್ಡಾ ರಸ್ತೆಗೆ ಇಂದು ಸಂಪೂರ್ಣ ದಿಗ್ಬಂಧನ

0
589

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೃಷಿ ಕಾನೂನಿನ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದು ದಿಲ್ಲಿ- ನೊಯ್ಡಾ ಗಡಿಯಲ್ಲಿರುವ ಚಿಲ್ಲ ರೈತರು ಇಂದು ಸಂಪೂರ್ಣ ದಿಗ್ಬಂಧನ ಹಾಕುವುದಾಗಿ ಹೇಳಿದ್ದಾರೆ.

ರಾಜಸ್ಥಾನ, ಪಂಜಾಬ್ ಮೊದಲಾದ ರಾಜ್ಯಗಳಿಂದ ಮಹಿಳೆಯರು ಸಹಿತ ರೈತ ಸಂಘಟನೆಗಳು ಇಲ್ಲಿಗೆ ಬರುತ್ತಿದ್ದಾರೆ.

ಕಾನೂನನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ನಿಜವಾದ ರೈತರ ಸಂಘಟನೆಯೊಂದಿಗೆ ಚರ್ಚೆ ನಡೆಸುವುದಾಗಿ ಕೃಷಿ ಸಚಿವ ನರೇಂದ್ರ ತೋಮರ್ ಹೇಳಿದ್ದಾರೆ.

ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗೆ 21 ದಿನಗಳಾಗಿವೆ. ಪ್ರತಿ ದಿವಸ ಕಳೆಯುತ್ತಿದ್ದಂತೆ ರೈತರ ಸಂಖ್ಯೆ ಹೆಚ್ಚುತ್ತಿದೆ. ದಿಲ್ಲಿಗೆ ಹೋಗುವ ದಾರಿಗಳನ್ನು ಒಂದೊಂದಾಗಿ ಮುಚ್ಚುವುದಾಗಿ ರೈತರು ಹೇಳಿದ್ದಾರೆ.

ಇಂದು ದಿಲ್ಲಿ-ನೊಯ್ಡಾ ಗಡಿಯ ಚಿಲ್ಲದ ರೈತರು ಸಂಪೂರ್ಣ ರಸ್ತೆ ತಡೆ ಮಾಡಲಿದ್ದಾರೆ. ದಿಲ್ಲಿ ಆಗ್ರ, ದಿಲ್ಲಿ ಜೈಪುರ ದಾರಿಗಳ ರಸ್ತೆ ತಡೆ ಮುಂದುವರಿಯುತ್ತಿದೆ. ಮೂರು ಕಾನೂನುಗಳನ್ನು ಹಿಂಪಡೆಯುವಾಗ ಪ್ರತಿಭಟನೆ ಕೊನೆಗೊಳ್ಳುತ್ತದೆ ಎಂದು ರೈತರು ಪದೇ ಪದೇ ಹೇಳುತ್ತಿದ್ದಾರೆ.

ಕಾನೂನನ್ನು ಬೆಂಬಲಿಸುತ್ತಿರುವ ಸಂಘಟನೆಗಳೊಂದಿಗೆ ಕೇಂದ್ರ ಸಚಿವರ ಭೇಟಿ ಮುಂದುವರಿಯುತ್ತಿದೆ. ಕೇಂದ್ರದ ಕಾನೂನನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ಬಿಜೆಪಿ ಆರಂಭಿಸಿದ್ದು, ದೇಶದೊಳಗೆ 700 ಸಭೆಗಳನ್ನು ಬಿಜೆಪಿ ಮಾಡಲಿದೆ ಎಂದು ತಿಳಿಸಿದೆ.

ಇದೇ ವೇಳೆ ರೈತರ ಹೋರಾಟಕ್ಕೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿಗಳು ವಿಚಾರಣೆಗೆ ಬರುತ್ತಿದ್ದು, ಇದು ರೈತರಿಗೂ, ಸರಕಾರಕ್ಕೂ ನಿರ್ಣಾಯಕವಾಗಲಿದೆ.