ಅನ್ಯಾಯದ ಬುಡದಲ್ಲೇ ಸ್ಫೋಟಿಸಿದ ನ್ಯಾಯಪರ ಘರ್ಜನೆ

0
145

ಸನ್ಮಾರ್ಗ  ಸಂಪಾದಕೀಯ

ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ  ಯುರೋಪ್‌ಗೂ ಹರಡಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆ ನಡೆಯತೊಡಗಿದೆ. ಅಮೇರಿಕದ ಅಟ್ಲಾಂಟಾದ  ಎಮೊರಿ ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಘರ್ಷಣೆಯನ್ನು  ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರಬ್ಬರ್ ಗುಂಡುಗಳನ್ನು ಸಿಡಿಸಿದ್ದಾರೆ. ಬ್ಲೂಮಿಂಗ್ಟನ್‌ನ ಇಂಡಿಯಾ ವಿವಿಯ ಕ್ಯಾಂಪಸ್  ಆವರಣದಲ್ಲಿ ಟೆಂಟ್ ಸ್ಥಾಪಿಸಿ ಧರಣಿ ನಡೆಸುತ್ತಿದ್ದ 20ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅರಿರೇನ ರಾಜ್ಯದ ವಿವಿ  ಆವಣರದಲ್ಲೂ ಪ್ರತಿಭಟನೆ ನಡೆದಿದೆ. ಟೆಂಟ್ ಹಾಕಿ ಪ್ರತಿಭಟಿಸುತ್ತಿದ್ದ 70ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸೈಂಟ್  ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೆಲ್ ಸ್ಟೆಯಿನ್ ಅವರೇ ಪ್ರತಿಭಟನೆಗೆ ನೇತೃತ್ವ  ನೀಡಿದ್ದಾರೆ. ಇಲ್ಲಿ 80ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೊಂದು ವಾರದಿಂದ ಅಮೇರಿಕದ ಯೇಲ್  ವಿಶ್ವವಿದ್ಯಾಲಯ, ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ, ವಾಂಡರ್ ಬಿಟ್ ವಿಶ್ವವಿದ್ಯಾಲಯ, ಮಿನ್ನಿಸೋಟಾ ವಿವಿಯೂ ಸೇರಿದಂತೆ  ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಿಯ ವರೆಗೆಂದರೆ ಪ್ರತಿಭಟನೆಯ ತೀವ್ರತೆಗೆ ಭಯಪಟ್ಟು ಕೆಲವು  ವಿಶ್ವವಿದ್ಯಾಲಯಗಳಿಗೆ ರಜೆ ಸಾರಲಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಈಗಾಗಲೇ ವಿವಿಯಿಂದ ಅಮಾನತುಗೊಳಿಸಲಾಗಿದೆ. ಇವರಲ್ಲಿ ತಮಿಳು ನಾಡಿನವರಾದ ಅಚಿಂತ್ಯ ಶಿವಲಿಂಗA ಕೂಡಾ ಒಬ್ಬರು. ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಇವರು ಇತರ 100ಕ್ಕಿಂತಲೂ  ಅಧಿಕ ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವರನ್ನು ಮತ್ತು ಹಸನ್ ಝೈದಿ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದರು. ಇದನ್ನು ಖಂಡಿಸಿ ಪ್ರತಿಭಟನಾಕಾರರೊಂದಿಗೆ ಇನ್ನೂ 200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ  ಸೇರಿಕೊಂಡರು. ಇದೇವೇಳೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಒಂದು ವಿಶೇಷ ಘಟನೆ ನಡೆದಿದೆ. ಇಸ್ರೇಲ್ ವಿರುದ್ಧ ಪ್ರತಿಭಟನಾ  ರ‍್ಯಾಲಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ, ಆತನ ಎರಡೂ ಕೈಗಳನ್ನು ಬೆನ್ನಿಗೆ ಕಟ್ಟಿ ಕರೆದೊಯ್ಯಲು ಸಿದ್ಧವಾಗಿದ್ದರು.  ಈ ಸಂದರ್ಭದಲ್ಲಿ ಆ ವಿದ್ಯಾರ್ಥಿ ನಮಾಝï‌ಗೆ ಸಿದ್ಧವಾದದ್ದು ಮತ್ತು ಅದೇ ಸ್ಥಿತಿಯಲ್ಲಿ ನಮಾಝï ನಿರ್ವಹಿಸಿದ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಭಾರೀ ಹಂಚಿಕೆಯಾಯಿತು. ಇದೇವೇಳೆ, ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಮ್ಯಾಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು  ಪ್ರತಿಭಟನಾ ಟೆಂಟ್ ನಿರ್ಮಿಸಿz್ದÁರೆ. ಇಸ್ರೇಲ್‌ನ ಜೊತೆಗಿರುವ ಎಲ್ಲ ಶೈಕ್ಷಣಿಕ ಸಂಬಂಧಗಳನ್ನು ಕೆನಡಾ ಕಡಿದುಕೊಳ್ಳಬೇಕು ಎಂದು ಈ  ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಒಂದುಕಡೆ, ಅಮೇರಿಕ ಮತ್ತು ಮಿತ್ರ ರಾಷ್ಟ್ರಗಳು ಇಸ್ರೇಲ್ ಪರ ನಿಲ್ಲುವಾಗ, ಅಲ್ಲಿನ ನಾಗರಿಕರು ಗಾಝಾದ ಜೊತೆ ನಿಲ್ಲುವ ಕೌತುಕ ಇನ್ನೊಂದು ಕಡೆಯಿದೆ. ಅಮೇರಿಕದ ಅಧ್ಯಕ್ಷ  ಜೋ ಬೈಡನ್ ಇಸ್ರೇಲನ್ನು ಎಷ್ಟೇ ಸಮರ್ಥಿಸಿಕೊಂಡರೂ ಮತ್ತು ಏನೇ ನೆರವು ಒದಗಿಸಿದರೂ ಅ ಲ್ಲಿಯದೇ ನಾಗರಿಕರು ದಿನೇ ದಿನೇ ಅವರನ್ನು ಬೆತ್ತಲಾಗಿಸುತ್ತಿದ್ದಾರೆ. ಬೈಡನ್ ಕರೆದ ಇಫ್ತಾರ್ ಕೂಟವನ್ನು ಅಲ್ಲಿನ ಮುಸ್ಲಿ ಮರು ಬಹಿಷ್ಕರಿಸಿದ  ಅಪರೂಪದ ಘಟನೆಯೂ ಇದರಲ್ಲಿ ಒಂದು. ಸಾಮಾನ್ಯವಾಗಿ ದೇಶದ ಅಧ್ಯಕ್ಷರ ಜೊತೆ ನಾಗರಿಕರು ಹೀಗೆ ನಡಕೊಳ್ಳುವುದಿಲ್ಲ. ಏನೇ ಭಿನ್ನಾಭಿ ಪ್ರಾಯ ಇದ್ದರೂ ಅಧ್ಯಕ್ಷರು ಕರೆದ ಔತಣ ಕೂಟದಲ್ಲಿ ನಾಗರಿಕರು ಭಾಗವಹಿಸುತ್ತಾರೆ. ಅದು ಅವರ ಹುದ್ದೆಗಿರುವ ಘನತೆಯ ದ್ಯೋತ ಕವೂ  ಹೌದು. ಆದರೆ ಬೈಡನ್ ಅವರ ಇಸ್ರೇಲ್ ಪರ ಏಕಮುಖ ಧೋರಣೆ ಅಲ್ಲಿನ ನಾಗರಿಕರಲ್ಲಿ ಎಂಥ ಅಸಮಾಧಾನ ಹುಟ್ಟುಹಾಕಿದೆಯೆಂದರೆ,  ಅವರ ಆಹ್ವಾನವನ್ನೇ ತಿರಸ್ಕರಿಸುವಷ್ಟು. ಅಮೇರಿಕದ ಘನತೆಯನ್ನು ಮತ್ತು ಅಧ್ಯಕ್ಷೀಯ ಹುದ್ದೆಯ ಗೌರವವನ್ನು ಬೈಡನ್ ಮಣ್ಣುಪಾಲು  ಮಾಡಿದ್ದಾರೆ ಎಂಬ ಭಾವನೆ ಅಮೇರಿಕದಾದ್ಯಂತ ವ್ಯಾಪಕವಾಗುತ್ತಿದೆ. ಇಸ್ರೇಲ್‌ನ ಪ್ರತಿ ಕ್ರೌರ್ಯಕ್ಕೂ ಅಧ್ಯಕ್ಷ ಬೈಡನ್ ಕಣ್ಣು ಮುಚ್ಚಿ ಬೆಂಬಲ  ಸಾರುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಂಡನೆಯಾಗುವ ಇಸ್ರೇಲ್ ವಿರುದ್ಧದ ಯಾವುದೇ ಮಸೂದೆಗೂ ಅಮೇರಿಕ ವಿಟೋ ಪ್ರಯೋಗಿಸುತ್ತಿದೆ. 34  ಸಾವಿರಕ್ಕಿಂತಲೂ ಅಧಿಕ ನಾಗರಿಕರನ್ನು ಹತ್ಯೆಗೈದಿರುವ ಮತ್ತು ಅದರ ಹಲವು ಪಟ್ಟು ನಾಗರಿಕರನ್ನು ಹಸಿವೆಗೆ ದೂಡಿರುವ ಹಾಗೂ ಲಕ್ಷಾಂತರ  ಮಂದಿಯನ್ನು ನಿರ್ವಸಿತರನ್ನಾಗಿಸಿರುವ ರಾಷ್ಟ್ರವೊಂದಕ್ಕೆ ಬೈಡನ್ ಕಾವಲುಗಾರನಾಗಿ ನಿಂತಿರುವುದು ಈ ಶತಮಾನದ ಅತಿದೊಡ್ಡ ಕ್ರೌರ್ಯ.

ಒಂದುಕಡೆ ರಶ್ಯಾದ ದಾಳಿಗೊಳಗಾಗಿರುವ ಉಕ್ರೇನ್‌ಗೆ ಬೆಂಬಲವಾಗಿ ನಿಂತಿರುವ ಅಮೇರಿಕವು ಇನ್ನೊಂದು ದಾಳಿಕೋರ ಇಸ್ರೇಲನ್ನೂ ಬೆಂಬಲಿಸುತ್ತಿದೆ. ಸಂತ್ರಸ್ತ ರಾಷ್ಟ್ರ ಎಂಬ ನೆಲೆಯಲ್ಲಿ ಉಕ್ರೇನ್ ಪರ ಅಮೇರಿಕ ನಿಂತಿದೆ ಎಂಬುದೇ ನಿಜವಾಗಿದ್ದರೆ, ಯಾವ ಕಾರಣಕ್ಕೂ ಇಸ್ರೇಲ್ ಪರ  ಅಮೇರಿಕ ನಿಲ್ಲುವುದಕ್ಕೆ ಅರ್ಥವೇ ಇಲ್ಲ. ಅದು ನಿಲ್ಲಬೇಕಾದುದು ಗಾಝಾ ಅಥವಾ ಫೆಲೆಸ್ತೀನ್ ಪರ. ಉಕ್ರೇನ್ ಹೇಗಿದ್ದರೂ ಒಂದು  ಸಾರ್ವಭೌಮ ರಾಷ್ಟ್ರ. ಅದಕ್ಕೆ ಅದರದ್ದೇ  ಆದ ಸುಸಜ್ಜಿತ ಸೇನೆ, ಪೊಲೀಸ್ ವ್ಯವಸ್ಥೆ, ಗಡಿ ಇತ್ಯಾದಿ ಎಲ್ಲವೂ ಇದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವ  ರಾಷ್ಟ್ರಗಳ ಪಟ್ಟಿಯಲ್ಲಿ ಉಕ್ರೇನ್ ಇದೆ. ಆದರೆ, ಫೆಲೆಸ್ತೀನ್ ಕಳೆದ 70 ವರ್ಷಗಳಿಂದ ರಾಷ್ಟçದ ಮಾನ್ಯತೆಗಾಗಿ ವಿಶ್ವಸಂಸ್ಥೆಯಲ್ಲಿ ಹೋರಾಡುತ್ತಿದೆ.  ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಬಯಸುತ್ತಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ಈ ಕುರಿತಂತೆ ಮಂಡನೆಯಾಗುವ ಯಾವುದೇ ಮಸೂದೆಗೂ ಅಮೇರಿಕ  ಅಡ್ಡಗಾಲು ಹಾಕುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಅನುಮತಿಸಲಾರೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಬಹಿರಂಗವಾಗಿ ಹೇಳಿಕೆ  ನೀಡಿರುವ ಹೊರತಾಗಿಯೂ ಅಮೇರಿಕದ ನಿಲುವಿನಲ್ಲಿ ಬದಲಾವಣೆ ಆಗುತ್ತಿಲ್ಲ. ವಿಶಾಲ ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರವನ್ನು   1948ರಲ್ಲೇ  ಸ್ಥಾಪಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆ ಎಂದಾದರೆ 70 ವರ್ಷಗಳ ನಂತರವೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸಲು  ವಿಶ್ವಸಂಸ್ಥೆಗೆ ಯಾಕೆ ಸಾಧ್ಯವಾಗಿಲ್ಲ? 70 ವರ್ಷಗಳ ಹಿಂದೆ ಇಸ್ರೇಲ್ ರಾಷ್ಟ್ರಸ್ಥಾಪನೆಗೆ ಬೆಂಬಲಿಸಿರುವ ರಾಷ್ಟçಗಳು ಯಾಕೆ ಆ ಬಳಿಕ ಸ್ವತಂತ್ರ  ಫೆಲೆಸ್ತೀನ್ ರಾಷ್ಟç ನಿರ್ಮಾಣಕ್ಕೆ ಬೆಂಬಲಿಸುತ್ತಿಲ್ಲ? ಫೆಲೆಸ್ತೀನ್ ಎಂಬುದು ಫೆಲೆಸ್ತೀನಿಯರದ್ದು. ಹೇಗೆ ಅಮೇರಿಕ ಅಮೇರಿಕನ್ನರದ್ದೋ  ಹಾಗೆಯೇ.  ಆದರೆ, ಇದೇ ಫೆಲೆಸ್ತೀನಿಯರು ಇವತ್ತು ಆ ಮಣ್ಣಿನಲ್ಲಿ ಹೊರಗಿನಿಂದ ಬಂದು ಕುಳಿತವರ ಜೊತೆ ರಾಷ್ಟ್ರಕ್ಕಾಗಿ ಅಂಗಲಾಚುವಂಥ ಪರಿಸ್ಥಿತಿಯನ್ನು  ತಂದವರು ಯಾರು? ಯಾಕೆ? ಇಸ್ರೇಲ್ ರಾಷ್ಟ್ರ ಸ್ಥಾಪಿಸಿದ ವಿಶ್ವಸಂಸ್ಥೆಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪಿಸುವ ಸಾಮರ್ಥ್ಯ ಇಲ್ಲ ಎಂದಾದರೆ,  ಅದು ಅಸ್ತಿತ್ವದಲ್ಲಿರಬೇಕಾದ ಅಗತ್ಯವಾದರೂ ಏನಿದೆ?

ನ್ಯಾಯ ಎಂಬ ಎರಡಕ್ಷರದ ಆರಂಭದಲ್ಲಿ ಅ ಎಂಬ ಒಂದಕ್ಷರವನ್ನು ಸೇರಿಸಿದರೆ, ಜಗತ್ತೇ ಇಷ್ಟಪಡದ ಪದವಾಗಿ ಅದು ಮಾರ್ಪಡುತ್ತದೆ.  ನ್ಯಾಯ ಈ ಜಗತ್ತಿನ ಬಯಕೆ. ಈ ಜಗತ್ತಿನಲ್ಲಿ ಮಾನವರ ಬದುಕು ನ್ಯಾಯ ಎಂಬ ನಿರೀಕ್ಷೆಯನ್ನು ಆಧರಿಸಿದೆ. ನ್ಯಾಯದ ನಿರೀಕ್ಷೆಯೇ ಇಲ್ಲದ  ಭೂಮಿಯಲ್ಲಿ ಅನ್ಯಾಯವೇ ರಾಜನಾಗಿರುತ್ತದೆ. ಅನ್ಯಾಯಕ್ಕೆ ದೀರ್ಘ ಆಯುಷ್ಯ ಇರುವುದಿಲ್ಲ. ಪ್ರಕೃತಿಯ ಗುಣವೇ ನ್ಯಾಯದ್ದಾಗಿದೆ. ‘ನ್ಯಾಯ  ನಿಮ್ಮ ಹೆತ್ತವರ ವಿರುದ್ಧವಿದ್ದರೂ ನೀವು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಜೊತೆ ಅಲ್ಲ..’ ಎಂದು ಪವಿತ್ರ ಕುರ್‌ಆನ್ ಬೋಧಿಸುತ್ತದೆ. ‘ಓರ್ವ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದವ ಸಕಲ ಮಾನವ ಕೋಟಿಯನ್ನು ಕೊಂದ ಪಾತಕಿಯಾಗುತ್ತಾನೆ..’ ಎಂದೂ ಪವಿತ್ರ ಕುರ್‌ಆ ನ್ ಎಚ್ಚರಿಸುತ್ತದೆ. ಜಗತ್ತು ಉಸಿರಾಡುತ್ತಿರುವುದೇ ನ್ಯಾಯ ಮತ್ತು ಅನ್ಯಾಯಗಳ ನಡುವೆ. ನ್ಯಾಯವನ್ನು ನೆಲೆ ನಿಲ್ಲಿಸುವುದು ಮತ್ತು ಅ ನ್ಯಾಯವನ್ನು ತೊಲಗಿಸುವುದೇ ಸಕಲ ಪ್ರವಾದಿಗಳ ಮತ್ತು ಅನುಭಾವಿಗಳ ಗುರಿಯಾಗಿತ್ತು. ಬಹುಶಃ, ನ್ಯಾಯ ಮೇಲುಗೈ ಪಡೆದೇ ತೀರುತ್ತದೆ  ಎಂಬ ಅಪಾರ ನಿರೀಕ್ಷೆಯೇ ಇವತ್ತು ಫೆಲೆಸ್ತೀನಿಯರನ್ನು ಹೋರಾಟದ ಕಣದಲ್ಲಿ ನಿಲ್ಲಿಸಿದೆ ಎಂದೇ ಹೇಳಬಹುದು. ಅಮೇರಿಕ ಇರಲಿ, ಇಸ್ರೇಲ್  ಇರಲಿ ಅಥವಾ ವಿಶ್ವಸಂಸ್ಥೆಯೇ ಇರಲಿ, ಅನ್ಯಾಯದ ನೊಗ ಹೊತ್ತವರಿಗೆ ಕೊನೆ ಎಂಬುದಿರುತ್ತದೆ. ಅನ್ಯಾಯ ಪ್ರಕೃತಿ ವಿರೋಧಿ  ಆಗಿರುವುದರಿಂದ ಅಂತಿಮ ಗೆಲುವು ಅನ್ಯಾಯದ್ದಾಗಿರಲು ಸಾಧ್ಯವೇ ಇಲ್ಲ. ಒಂದು ದಿನ ಅನ್ಯಾಯದ ವಿರುದ್ಧ ನ್ಯಾಯ ಗೆಲುವು ಸಾಧಿಸಲಿದೆ. ಆ  ಶುಭ ದಿನಕ್ಕಾಗಿ ಫೆಲೆಸ್ತೀನಿಯರು ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here