ಹಿಂದೂ ಭಾವನೆಗೆ ಧಕ್ಕೆ ಆರೋಪ: ಬಚ್ಚನ್ ಹಾಗೂ ಕರೋಡ್‌ಪತಿ ಶೋ ವಿರುದ್ಧ ಎಫ್‌ಐಆರ್

0
793

ಸನ್ಮಾರ್ಗ ವಾರ್ತೆ

ಮುಂಬೈ: ಬಾಲಿವುಡ್‌ ಸ್ಟಾರ್ ಅಮಿತಾಭ್ ಬಚ್ಚನ್ ನಿರೂಪಕರಾಗಿರುವ ಕ್ವಿಝ್ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಯ 12 ನೇ ಸೀಸನ್ ವಿವಾದದಕ್ಕೆ ಗುರಿಯಾಗಿದೆ. ಕಳೆದ ವಾರ ಮನುಸ್ಮೃತಿಯ ಕುರಿತ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತ ಬೆಸ್ವಾದಾ ವಿಲ್ಸನ್ ಮತ್ತು ನಟ ಅನೂಪ್ ಸೋನಿಯೊಂದಿಗೆ ಕೇಳಿರುವುದು ಇ ವಿವಾದಕ್ಕೆ ಕಾರಣವೆನ್ನಲಾಗುತ್ತಿದೆ.

1927 ಡಿಸೆಂಬರ್ 25ರಂದು ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಅನುಯಾಯಿಗಳು ಸೇರಿ ಬೆಂಕಿ ಹಚ್ಚಿದ ವೇದ ಗ್ರಂಥ ಯಾವುದು ಎಂಬ ಪ್ರಶ್ನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 6,40,000 ರೂಪಾಯಿಯ ಈ ಪ್ರಶ್ನೆಗೆ ವಿಷ್ಣು ಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು.

ಸ್ಪರ್ಧಾಳುಗಳು ಉತ್ತರಿಸಿದ ಬಳಿಕ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂಬುದನ್ನು ಮುಂದಿಟ್ಟುಕೊಂಡು ಅಂಬೇಡ್ಕರ್ ಮನುಸ್ಮೃತಿ ಸುಟ್ಟು ಹಾಕಿದ್ದ ವಿಚಾರವನ್ನು ವ್ಯಕ್ತಪಡಿಸಿದ್ದರು.

ವಿವಾದವೆದ್ದ ಬೆನ್ನಲ್ಲೇ ಅಮಿತಾಭ್ ಬಚ್ಚನ್ ಹಾಗೂ ಈ ಕಾರ್ಯಕ್ರಮದ ವಿರುದ್ಧ ಲಕ್ನೋದಲ್ಲಿ ಕೇಸು ದಾಖಲಾಗಿದೆ. ಬಚ್ಚನ್ ಎಡ ಪಂಥೀಯ ನಿಲುವನ್ನು ಹೊಂದಿದವರೆಂದೂ, ಹಿಂದೂ ಭಾವನೆಗೆ ಧಕ್ಕೆ ತರುತ್ತಿದ್ದಾರೆಂದೂ ಎಂದು ಆರೋಪಿಸಿ ಬಚ್ಚನ್ ಹಾಗೂ ಕಾರ್ಯಕ್ರಮದ ವಿರುದ್ಧ ಕೇಸು ದಾಖಲಿಸಲಾಗಿದೆ.