ರಾಜ್ಯಸಭೆಯಲ್ಲಿ ಬಿಜೆಪಿಗೆ 92 ಸದಸ್ಯರು: ಸಂಕಷ್ಟದಲ್ಲಿ ಕಾಂಗ್ರೆಸ್

0
779

ಸನ್ಮಾರ್ಗ ವಾರ್ತೆ

ನವದೆಹಲಿ: ಖಾಲಿಯಿದ್ದ 11 ಸೀಟುಗಳಲ್ಲಿ ಒಂಬತ್ತು ಸೀಟುಗಳ ಮೇಲೆ ಬಿ.ಜೆ.ಪಿ ತನ್ನ ಹಿಡಿತ ಸಾಧಿಸಿದ ಮೇಲೆ ರಾಜ್ಯಸಭೆಯಲ್ಲಿ ಬಿಜೆಪಿ ಇನ್ನಷ್ಟು ಶಕ್ತಿಗೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ 92 ಸದಸ್ಯರನ್ನು ಬಿ.ಜೆ.ಪಿ ಹೊಂದಿದೆ.

ಈ ವೇಳೆಗೆ ಕಾಂಗ್ರೆಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಹೀನಾಯ ಮಟ್ಟಕ್ಕೆ ತಲುಪಿದ್ದು, ಇದೀಗ ಕೇವಲ 38 ಸದಸ್ಯರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಾಲಿಗಿದೆ. ಹಾಗಾಗಿ ಇನ್ನು ಮುಂದೆ ರಾಜ್ಯಸಭೆಯಲ್ಲಿ ಬಿಲ್ ಅಂಗೀಕಾರ ಮಾಡುವುದು ಬಿ.ಜೆ.ಪಿಗೆ ಅತ್ಯಂತ ಸುಲಭವಾಗಲಿದೆ.

ಮೈತ್ರಿಕೂಟವಾದ ಜೆ.ಡಿ.ಯು(ಐದು) ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಎರಡು) ಎಂಬ ಎರಡು ಪಕ್ಷಗಳ ಬೆಂಬಲ ಕೂಡ ಬಿ.ಜೆ.ಪಿಗಿದೆ. ಎಐಎಡಿಎಂಕೆ(ಒಂಬತ್ತು) ಹಾಗೂ ಈಶಾನ್ಯ ರಾಜ್ಯಗಳಲ್ಲಿನ ರಾಜ್ಯಸಭಾ ಸದಸ್ಯರ ಬೆಂಬಲ ಕೂಡ ಬಿಜೆಪಿಗೆ ಲಭಿಸಿದೆ. ಬಿಜು ಜನತಾದಳ್ (ಒಂಬತ್ತು), ವೈಎಸ್‌ಆರ್ ಕಾಂಗ್ರೆಸ್ (ಆರು), ಟಿಆರ್‌ಎಸ್ (ಏಳು) ಪಕ್ಷಗಳ ಬೆಂಬಲ ಕೂಡ ಕೆಲವು ಸಂದರ್ಭದಲ್ಲಿ ಲಭಿಸಿದೆ.

ಸಚಿವ ಹರ್‌ದೀಪ್ ಸಿಂಗ್ ಪುರಿ, ಬಿಜೆಪಿ ಜನರಲ್ ಸೆಕ್ರೆಟರಿ ಅರುಣ್ ಸಿಂಗ್, ದಿವಂಗತ ಚಂದ್ರಶೇಖರ್ ಪುತ್ರ ನೀರಜ್ ಶೇಖರ್ ಎಂಬವರು ಸೋಮವಾರ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಎರಡು ಸೀಟುಗಳಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಿಎಸ್‌ಪಿ ಪಕ್ಷ ಆಯ್ಕೆಯಾಗಿದೆ.