ಗುಜರಾತ್ ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 14 ಕೊರೋನ ರೋಗಿಗಳ ಸಹಿತ 16 ಮಂದಿ ಮೃತ್ಯು

0
402

ಸನ್ಮಾರ್ಗ ವಾರ್ತೆ

ಭರೂಚ್: ಗುಜರಾತ್‌ನ ಭರೂಚ್‌ನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 14 ಕೊರೋನ ರೋಗಿಗಳ ಸಹಿತ ಇಬ್ಬರು ಸ್ಟಾಫ್ ನರ್ಸ್ ಸೇರಿ 16 ಮಂದಿ ಸಾವನ್ನಪ್ಪಿರುವುದಾಗಿ ಎಎನ್ಐ ವರದಿ ಮಾಡಿದೆ.

ಕೆಲವು ಕೊರೋನ ರೋಗಿಗಳ ಮೃತದೇಹಗಳು ಸ್ಟ್ರೆಚರ್‌ ಮತ್ತು ಹಾಸಿಗೆಗಳಲ್ಲಿ ಸುಟ್ಟು ಕರಕಲಾಗಿದ ದೃಶ್ಯಗಳು ಮನಸ್ಸು ಕಲಕಿದೆ.

ನಾಲ್ಕು ಅಂತಸ್ತಿನ ಕಲ್ಯಾಣ್ ಆಸ್ಪತ್ರೆಯಲ್ಲಿ ಮುಂಜಾನೆ 1 ಗಂಟೆಯ ಸುಮಾರಿಗೆ ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಈ ವೇಳೆಯಲ್ಲಿ ಸುಮಾರು 50 ಇತರ ರೋಗಿಗಳು ಇದ್ದರು. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 6.30 ರ ಮಾಹಿತಿಯ ಪ್ರಕಾರ, ದುರಂತದಲ್ಲಿ 18 ಮಂದಿ ಸಾವಿನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದರು.

ಅಹಮದಾಬಾದ್‌ನಿಂದ 190 ಕಿ.ಮೀ ದೂರದಲ್ಲಿರುವ ಈ ಆಸ್ಪತ್ರೆಯು ಭರೂಚ್-ಜಂಬುಸರ್ ಹೆದ್ದಾರಿಯಲ್ಲಿದ್ದು, ಇದನ್ನು ಟ್ರಸ್ಟ್ ಒಂದು ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಈ ಅವಘಡಕ್ಕೆ ಸ್ಪಷ್ಟವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ನಮಗೆ ಮಾತ್ರವಲ್ಲ ಇಡೀ ಭರೂಚ್‌ ಗೆ ಇದೊಂದು ದುರದೃಷ್ಟಕರ ಘಟನೆ. ಪೊಲೀಸ್ ಮತ್ತು ಆಡಳಿತ ಮಂಡಳಿಯ ಸಹಾಯದಿಂದ ನಾವು ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದೆವು. ಈ ಘಟನೆಯಲ್ಲಿ 14 ರೋಗಿಗಳು ಮತ್ತು 2 ಸಿಬ್ಬಂದಿ ದಾದಿಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭರೂಚ್‌ನ ಕೋವಿಡ್ ಆರೈಕೆ ಕೇಂದ್ರದ ಟ್ರಸ್ಟಿ ಜುಬೇರ್ ಪಟೇಲ್ ಹೇಳಿದ್ದಾರೆ.

ಭರೂಚ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ರೋಗಿಗಳು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಅಪಘಾತಕ್ಕೀಡಾದ ಪ್ರತಿಯೊಬ್ಬರ ಕುಟುಂಬಗಳಿಗೆ ರಾಜ್ಯ ಸರ್ಕಾರ 4 ಲಕ್ಷ ರೂ.ಗಳ ನೆರವು ನೀಡಲಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.