ನೋಯ್ಡಾ: ಮೂರು ಗಂಟೆಯಿಂದ ಆಸ್ಪತ್ರೆಯ ಬೆಡ್ ಗಾಗಿ ಕಾದು ತನ್ನ ಕಾರಿನಲ್ಲೇ ಮೃತಪಟ್ಟ ಮಹಿಳೆ

0
617

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತದಲ್ಲಿ ಕೊರೊನ ಎರಡನೇ ಅಲೆಯು ದೇಶದ ಹಲವು ರಾಜ್ಯಗಳನ್ನು ತತ್ತರಿಸುವಂತೆ ಮಾಡಿರುವ ಮಧ್ಯೆಯೇ ಹೃದಯ ವಿದ್ರಾವಕ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಿದೆ.

ಕಳೆದ ಗುರುವಾರದಂದು ಕೋವಿಡ್ ಪಾಸಿಟಿವ್ ನೋಯ್ಡಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಲು ತನ್ನ ಕಾರಿನಲ್ಲಿ ಬಂದಿದ್ದ ಮಹಿಳೆಯೋರ್ವರು ಮೂರು ಗಂಟೆಯಿಂದ ಆಸ್ಪತ್ರೆಯ ಬೆಡ್ ಗಾಗಿ ಕಾದು ಕಾದು ತನ್ನ ಕಾರಿನಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಕಾರು ಪಾರ್ಕಿಂಗ್ ಸ್ಥಳದಲ್ಲಿ 35 ವರ್ಷದ ಕೋವಿಡ್ ಪಾಸಿಟಿವ್ ಮಹಿಳೆ ಸಾವನ್ನಪ್ಪಿದ್ದು, ಅವರೊಂದಿಗೆ ಬಂದಿದ್ದ ವ್ಯಕ್ತಿಯು ಹಾಸಿಗೆಗಾಗಿ ಬೇಡಿಕೊಂಡಿದ್ದರೂ ತೀವ್ರ ಉಸಿರಾಟದ ತೊಂದರೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತಪಟ್ಟ ಮಹಿಳೆಯನ್ನು 35 ವರ್ಷದ ಜಾಗೃತಿ ಗುಪ್ತಾ ಎಂದು ಗುರುತಿಸಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ನೋಯ್ಡಾದ ಸರ್ಕಾರಿ ಜಿಮ್ಸ್ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಮಲಗಿದ್ದ ಜಾಗೃತಿ ಗುಪ್ತಾ ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಆಕೆಯ ಇಬ್ಬರು ಮಕ್ಕಳು ಪತಿಯೊಂದಿಗೆ ಮಧ್ಯಪ್ರದೇಶದಲ್ಲಿ ವಾಸವಾಗಿದ್ದರು. ಜಾಗೃತಿಯವರು ಗ್ರೇಟರ್ ನೋಯ್ಡಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.

“ಆಕೆ ವಾಸವಾಗಿದ್ದ ಮನೆಯ ಯಜಮಾನ ಆಕೆಯನ್ನು ಆಸ್ಪತೆಗೆ ದಾಖಲಿಸಲು ಕರೆತಂದಿದ್ದರು. ಅವರು ಸಹಾಯ ಕೇಳುತ್ತಾ ಓಡಿ ಬಂದಿದ್ದರಿಂದ ನಾನು ಅಲ್ಲಿಯೇ ನಿಂತಿದ್ದೆ. ಆದರೆ ಯಾರೂ ಅವನ ಮಾತನ್ನು ಕೇಳಲಿಲ್ಲ. ಮಧ್ಯಾಹ್ನ 3: 30 ರ ಸುಮಾರಿಗೆ ಆಕೆ ಕಾರಿನಲ್ಲಿಯೇ ಉಸಿರು ಸಿಗದೇ ಕುಸಿದುಬಿದ್ದಾಗ ಕೂಡಲೇ ಆಸ್ಪತ್ರೆಯ ಸಿಬ್ಬಂದಿಗಳನ್ನು ಕಾರಿನ ಹತ್ತಿರ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವ ಬಗ್ಗೆ ತಿಳಿಸಿದರೆಂದು ಪ್ರತ್ಯಕ್ಷದರ್ಶಿಯಾದ ಸಚಿನ್ ಎಂಬವರು ಎನ್ ಡಿ ಟಿವಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ ವಾರ ತಮ್ಮ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ ಮತ್ತು ಆಸ್ಪತ್ರೆಯ ಹಾಸಿಗೆಗಳ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸಲಾಗಿದೆ ಎಂದು ಹೇಳಿದ್ದಾರೆ . ಆದರೆ ಇಂತಹ ಘಟನೆಗಳು ನೈಜ ಸ್ಥಿತಿಯನ್ನು ವಿವರಿಸುತ್ತಿದೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ ಹಾಸಿಗೆಗಳು ಸಿಗದೇ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ರೋಗಿಗಳು ರಸ್ತೆಯಲ್ಲಿ ಸಾಯುತ್ತಿದ್ದಾರೆ. ಈ ಮಧ್ಯೆ ನೋಯ್ಡಾ ಅಧಿಕಾರಿಗಳು ರಚಿಸಿದ ಆನ್‌ಲೈನ್ ಬೆಡ್ ಟ್ರ್ಯಾಕರ್‌ನಲ್ಲಿ ಆಮ್ಲಜನಕ ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳು ಸೇರಿದಂತೆ 2,568 ಹಾಸಿಗೆಗಳಿವೆ ಎಂದು ತೋರಿಸುತ್ತಿದ್ದರೂ ಅದು ಯಾವುದು ಲಭ್ಯ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.