ಯಲಹಂಕ ಮೇಲ್ಸೇತುವೆಗೆ ಹೆಸರಿಡುವ ಮುನ್ನ ಈ ಸೇತುವೆಗೊಮ್ಮೆ ಹೆಸರಿಡಿ

0
621

ಸನ್ಮಾರ್ಗ ವಾರ್ತೆ

ಬೆಳ್ತಂಗಡಿ, ಮೇ 28: (ಬೆಳ್ತಂಗಡಿ ತಾಲೂಕಿನ ಕುತ್ಲೂರು ಅತ್ಯಂತ ಕುಗ್ರಾಮ. ರಾಷ್ಟ್ರೀಯ ಉದ್ಯಾನವನವಾಗಿರುವ ಈ ಗ್ರಾಮದಲ್ಲಿ ಈ ಹಿಂದೆ ಸುಮಾರು 40 ರಿಂದ 50 ಮಲೆಕುಡಿಯ ಸಮುದಾಯದ ಆದಿವಾಸಿಗಳು ವಾಸವಾಗಿದ್ದರು. ತಂತ್ರ ಕುತಂತ್ರಗಳ ಮೂಲಕ, ಅರಣ್ಯ ಇಲಾಖೆ, ಪೊಲೀಸ್ ಹಾಗೂ ಕೆಲವು ಎನ್‌ಜಿಓಗಳು ಪ್ರತ್ಯಕ್ಷ ಪರೋಕ್ಷ ಒತ್ತಡ, ಅಮಿಷಗಳನ್ನು ಹೇರಿ ಕೆಲವರನ್ನು ಒಕ್ಕಲೆಬ್ಬಿಸಲಾಗಿದೆ. ಇವರ ಬೆದರಿಕೆ ಹಾಗೂ ಅಮಿಷಗಳನ್ನು ನಂಬಿ ಕಾಡಿಂದ ಹೊರಬಂದ ಆದಿವಾಸಿಗಳ ಸ್ಥಿತಿಯೂ ಶೋಚನೀಯವಾಗಿದೆ.

ಮಂಗಳೂರಿನಲ್ಲಿದ್ದಾಗ ಹಲವು ಬಾರಿ ಈ ಗ್ರಾಮಕ್ಕೆ ಭೇಟಿ ನೀಡಿ ಸುದ್ದಿ ಮಾಡಿದ್ದೆವು. ಕುತ್ಲೂರಿನ ಜನರು ಹೃದಯವಂತರು, ಮುಗ್ದರು. ಈ ಊರೆಂದರೆ ಇವತ್ತಿಗೂ ನನಗೆ ಒಂದು ರೀತಿಯ ಪ್ರೀತಿ, ಆತ್ನೀಯತೆ. ಗ್ರಾಮದಲ್ಲೊಂದು ಬಸ್‌ ನಿಲ್ದಾಣವಿದೆ. ವಿಪರ್ಯಾಸ ಎಂದರೆ ಆ ಬಸ್‌ ನಿಲ್ದಾಣಕ್ಕೆ ಇದುವರೆಗೂ ಬಸ್‌ ಬಂದಿಲ್ಲ. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಅಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ಕನಿಷ್ಠ ಅಭಿವೃದ್ದಿ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತಿಲ್ಲ. ಇದರ ವಿರುದ್ಧ ಧ್ವನಿ ಎತ್ತಿದವರಿಗೆ ನಕ್ಸಲ್‌ ಪಟ್ಟ ಕಟ್ಟಲಾಗುತ್ತದೆ. ಇದೇ ಗ್ರಾಮದ ಮೊದಲ ಸ್ನಾತಕ್ಕೋತ್ತರ ಪದವೀಧರ ವಿಠಲ್ ಮಲೆಕುಡಿಯ ಸದ್ಯ ಪ್ರಜಾವಾಣಿಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಯಲಹಂಕ ಫ್ಲೈಓವರ್‌ಗೆ ಯಾರ ಹೆಸರಿಡಬೇಕು ಎಂಬ ಚರ್ಚೆಗಳು ನಡೆಯುತ್ತಿರುವಾಗ ತಮ್ಮ ಊರಿನ ಮುರಿದ ಸೇತುವೆಗೆ ಒಂದು ಹೆಸರಿಡಿ ತನ್ನ ಗ್ರಾಮದ ಪರಿಸ್ಥಿತಿಯ ಕುರಿತಾಗಿ ಬೆಳಕು ಚೆಲ್ಲಿದ್ದಾರೆ- ಇರ್ಷಾದ್ ಉಪ್ಪಿನಂಗಡಿ)

ಕಳೆದ 30-40 ವರ್ಷಗಳಿಂದ ಜನಜೀವನಕ್ಕೆ ಕೊಂಡಿಯಾಗಿದ್ದ ಸೇತುವೆಯೊಂದು ಕಳೆದ ವರ್ಷವೇ ಬೀಳುವ ಹಂತದಲ್ಲಿದ್ದರೂ ಈಗಲೂ ಅದೇ ಸ್ಥಿತಿಯಲ್ಲಿ ನಡೆದಾಡುವವರಿಗೆ ಉಳಿದುಕೊಂಡಿತ್ತು. ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಕುಕ್ಕುಜೆ- ಅಳಂಬ ಸಂಪರ್ಕಿಸುವ ಸೇತುವೆಯ ಪಿಲ್ಲರ್ ಕುಸಿದಿದ್ದು ಸೇತುವೆಗೆ ಉಳಿಗಾಲವಿಲ್ಲದಂತಾಗಿದೆ..

ಇದನ್ನರಿತ ಬಹಳಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತ್ಯಕ್ಷ ವೀಕ್ಷೀಸಿದ್ದರಲ್ಲದೇ,ಗ್ರಾಮಸ್ಥರೂ ಕೂಡ ಒಂದಷ್ಟು ಕಾಗದ ಪತ್ರ ಮೂಲಕ ಮೇಲ್ಸೇತು ಪುನರ್ ನಿರ್ಮಾಣಕ್ಕೆ ಮನವಿ ನೀಡಿದ್ದರಾದರೂ ಇವುವರೆಗೆ ಯಾವುದೇ ಅನುದಾನಗಳಾಗಲಿ ಸೇತುವೆಯತ್ತ ಸುಳಿದಿಲ್ಲ.

ಕೆಲವು ತಿಂಗಳ ಹಿಂದೆ ಸ್ಥಳೀಯ ಗ್ರಾಮ ಪಂಚಾಯಿತಿ ತಾತ್ಕಾಲಿಕವಾಗಿ ಕಚ್ಚಾರಸ್ತೆಯನ್ನು ನಿರ್ಮಿಸಿಕೊಟ್ಟಿತು. ಆದರೆ ಈ ಬಾರಿ ಸೇತುವೆ ಸಂಪೂರ್ಣ ಕುಸಿದಿದೆ. ಇನ್ನು ಮಳೆಗಾಲ ಆರಂಭವಾದರೆ ಪಶ್ಚಿಮ ಘಟ್ಟದಿಂದ ಹರಿದು ಬರುವ ನೀರು ಇಲ್ಲಿನ ಜನರನ್ನು ದಿಗ್ಭಂಧನಕ್ಕೆ ಒಳಪಡಿಸಲಿದೆ. ನೂರಾರು ಜನರು ಕೊರೋನಾ ಇಲ್ಲದೆಯೇ ಮಳೆಗಾಲ ಮುಗಿಯುವವರೆಗೂ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಎಂದು ಸ್ಥಳೀಯ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಯಲಹಂಕ ಮೇಲ್ಸೇತುವೆಗೆ ಯಾರ ಹೆಸರಿಡಬೇಕು ಎಂದು ಚರ್ಚೆಗಳು ನಡೆಯುತ್ತಿರುವಾಗ ಬಿದ್ದ ಸೇತುವೆಯನ್ನೇ ನಂಬಿಕೊಂಡಿದ್ದ ಊರುಗಳ ಜನಸಾಮಾನ್ಯರ ಸೇತುವೆಗೆ ಸರಕಾರ ಹೆಸರಿಡಲು ಮುಂದಾಗಬೇಕಿದೆ.