ಸನ್ಮಾರ್ಗ ವಾರ್ತೆ
✍️ಅಮಾನ್ ಕೆ
ಮದ್ರಸಕ್ಕೆ ತೆರಳ್ತಾ ಇದ್ದ ಮುಗ್ಧ ಮಕ್ಕಳಲ್ಲಿ ಬಲವಂತವಾಗಿ ಜೈ ಶ್ರೀ ರಾಮ್ ಹೇಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಹಾರದ ಬಂಕ ಜಿಲ್ಲೆಯ ಭಾರತ ಬ್ಲಾಕ್ ನಲ್ಲಿ ಈ ಪ್ರಕರಣ ನಡೆದಿದೆ. ಜೈ ಶ್ರೀರಾಮ್ ಹೇಳುವಂತೆ ಮಕ್ಕಳನ್ನು ಒತ್ತಾಯಿಸುವುದು ಮತ್ತು ಅವರ ಕೆನ್ನೆಗೆ ಹೊಡೆದು ಜೈ ಶ್ರೀರಾಮ್ ಹೇಳಿಸುವುದು ವಿಡಿಯೋದಲ್ಲಿದೆ.
ಹಾಗಂತ ಹೀಗೆ ಬಲವಂತದಿಂದ ಮುಸ್ಲಿಮ್ ಮಕ್ಕಳ ಬಾಯಲ್ಲಿ ಜೈ ಶ್ರೀರಾಮ್ ಹೇಳಿಸುವುದು ಇದು ಮೊದಲ ಘಟನೆ ಅಲ್ಲ. ಇಂಥದ್ದು ಆಗಾಗ ವರದಿ ಆಗ್ತಾನೆ ಇದೆ. 2021 ನವೆಂಬರ್ 28ರಂದು ಉತ್ತರ ಪ್ರದೇಶದ ಉನ್ನಾವೋದಲ್ಲಿ ನಾಲ್ಕು ಮಂದಿ ಮದ್ರಸ ವಿದ್ಯಾರ್ಥಿಗಳ ಮೇಲೆ ಇಂಥದ್ದೇ ಹಲ್ಲೆ ನಡೆದಿತ್ತು. ಅವರನ್ನು ಹೊಡೆದು ಬಡಿದು ಜೈ ಶ್ರೀರಾಮ್ ಹೇಳಿಸಲಾಗಿತ್ತು. ಓರ್ವ ವಿದ್ಯಾರ್ಥಿಯ ಕೈಯನ್ನು ಮುರಿದು ಹಾಕಲಾಗಿತ್ತು. ಮಾತ್ರವಲ್ಲ ಬಂಧಿತ ಆರೋಪಿಗಳನ್ನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಬಲಪಂಥೀಯ ಗುಂಪುಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದವು.
ಹೀಗೆ ಬಲವಂತವಾಗಿ ಜೈ ಶ್ರೀ ರಾಮ್ ಹೇಳಿಸುವುದರಿಂದ ಹಿಂದೂ ಧರ್ಮಕ್ಕೆ ಏನು ಲಾಭ ಇದೆ ಅನ್ನುವುದು ಇಲ್ಲಿ ಮುಖ್ಯ ಅಲ್ಲ. ಜೈ ಶ್ರೀ ರಾಮ್ ಎಂದು ಹೇಳಬೇಕಾದದ್ದು ಶ್ರೀ ರಾಮನನ್ನು ನಂಬುವವರು ಮತ್ತು ಅನುಸರಿಸುವವರು. ಅಲ್ಲಾಹು ಅಕ್ಬರ್ ಎಂದು ಹೇಳಬೇಕಾದದ್ದೂ ಅಲ್ಲಾಹನನ್ನು ನಂಬುವವರು ಮತ್ತು ಅನುಸರಿಸುವವರು. ಇದು ಎಲ್ಲರಿಗೂ ಗೊತ್ತು. ಹಾಗಿದ್ದರೂ ಯಾಕೆ ಬಲವಂತವಾಗಿ ಜೈ ಶ್ರೀರಾಮ್ ಎಂದು ಹೇಳಿಸುವ ಕ್ರೌರ್ಯ ನಡೆಯುತ್ತಿದೆ ಅನ್ನುವುದೇ ಇಲ್ಲಿ ಮುಖ್ಯ ಪ್ರಶ್ನೆ ಆಗಬೇಕು. ಹೀಗೆ ಹೇಳಿಸುವುದರಿಂದ ಹಿಂದೂ ಧರ್ಮದ ವರ್ಚಸ್ಸಿಗೆ ಕಳಂಕ ಬರುತ್ತದೆಯೇ ಹೊರತು ಹೇಳಿದವರಿಗೆ ಅಲ್ಲ ಅನ್ನುವುದು ಎಲ್ಲರಿಗೂ ಗೊತ್ತು.
ನಿಜವಾಗಿ ರಾಜಕಾರಣಿಗಳು ಮತ್ತು ಮಾಧ್ಯಮದ ಒಂದು ಗುಂಪು ದಿನಾ ಬಿತ್ತಿ ಬೆಳೆಸ್ತಾ ಇರುವ ಮುಸ್ಲಿಂ ದ್ವೇಷದ ಫಲಿತಾಂಶ ಇದು. ಮುಸ್ಲಿಮರನ್ನು ದ್ವೇಷಿಸಬೇಕು ಅವರನ್ನು ಥಳಿಸಬೇಕು ಅವರನ್ನು ಹಿಂಸಿಸಬೇಕು ಅವರನ್ನು ಈ ದೇಶದಿಂದ ಓಡಿಸಬೇಕು ಎಂಬೆಲ್ಲ ಭಾವನೆಯನ್ನು ನೇರವಾಗಿಯೂ ಪರೋಕ್ಷವಾಗಿಯೂ ಬಿತ್ತುವುದು ಈ ದೇಶದಲ್ಲಿ ನಡೀತಾ ಇದೆ. ಅದರಿಂದ ಒಂದು ಗುಂಪು ಪ್ರೇರಣೆಯನ್ನು ಪಡೀತಾ ಇದೆ. ನಿರ್ದಿಷ್ಟ ಉದ್ಯೋಗ ಇಲ್ಲದ ಮತ್ತು ದ್ವೇಷವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಪುಂಡರ ಗುಂಪು ಅದರ ಪ್ರೇರಣೆಯಿಂದ ದುಷ್ಕೃತ್ಯಕ್ಕೂ ಇಳೀತಾ ಇದೆ. ಮುಸ್ಲಿಮರನ್ನು ಸತಾಯಿಸಿ ಈ ಗುಂಪು ವಿಕೃತ ಸಂತೋಷವನ್ನು ಪಡುತ್ತಲೂ ಇದೆ.
ಒಂದು ವೇಳೆ ಸರ್ಕಾರ ಇಂಥವರ ವಿರುದ್ಧ ಜಾಮೀನು ರಹಿತ ಕಠಿಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ರೆ ಮತ್ತು ಒಂದಷ್ಟು ವರ್ಷ ಇಂಥವರು ಜೈಲಲ್ಲಿ ಕೊಳೆಯುವಂತಾದರೆ ಇಂಥ ಮನಸ್ಥಿತಿಯವರಿಗೆ ಕಠಿಣ ಸಂದೇಶವಾದರೂ ರವಾನೆಯಾಗಬಹುದು. ದುರಂತ ಏನೆಂದರೆ ಇಂಥವರ ವಿರುದ್ಧ ತೀರ ದುರ್ಬಲ ಪ್ರಕರಣವನ್ನು ದಾಖಲಿಸಲಾಗುತ್ತದೆ. ಕೆಲವೊಮ್ಮೆ ಇಂಥವರ ಬಂಧನವೇ ನಡೆಯುವುದಿಲ್ಲ. ಪ್ರಭುತ್ವದ ಈ ಬಗೆಯ ಮೃದು ನೀತಿಯು ಇಂತಹ ದುಷ್ಕರ್ಮಿಗಳನ್ನು ಮತ್ತಷ್ಟು ಧೈರ್ಯ ತಂದು ಕೊಡುತ್ತದೆ.
ಶ್ರೀ ರಾಮನನ್ನು ಈ ದೇಶ ಮರ್ಯಾದ ಪುರುಷೋತ್ತಮ ಎಂದು ಗೌರವಿಸುತ್ತದೆ. ಅಂಥ ಶ್ರೀ ರಾಮನ ಹೆಸರಲ್ಲಿ ಇಂತಹ ಕ್ರೌರ್ಯ ನಡೆಯುತ್ತಿರುವಾಗ ಪ್ರಶ್ನಿಸಬೇಕಾದದ್ದು ಶ್ರೀ ರಾಮನ ಅನುಯಾಯಿಗಳೇ ಆಗಿದ್ದಾರೆ. ಯಾವಾಗ ಇಂತಹ ವಿರೋಧ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಲು ಪ್ರಾರಂಭವಾಗುತ್ತೋ ದುಷ್ಕರ್ಮಿಗಳಲ್ಲಿ ಭಯ ಮೂಡಲಾರಂಭಿಸುತ್ತದೆ. ತಮ್ಮ ಕೃತ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುವ ಬದಲು ಅಪರಾಧವಾಗಿ ಕಾಣಿಸಲಾರಂಭಿಸಿದೆ ಎಂದು ಗೊತ್ತಾದ ತಕ್ಷಣ ಅವರು ತಮ್ಮ ಇಂತಹ ಕೃತ್ಯಗಳಿಂದ ದೂರವಾಗುತ್ತಾರೆ.
ಬಿಹಾರದಲ್ಲಿ ಮದರಸ ವಿದ್ಯಾರ್ಥಿಗಳ ಮೇಲೆ ನಡೆದಿರುವುದು ಶ್ರೀರಾಮನಿಗೆ ಮಾಡುವ ಅವಮಾನ. ಹೀಗೆ ನಡಕೊಂಡವರಿಗೆ ಪಾಠವಾಗುವಂತಹ ಶಿಕ್ಷೆಯನ್ನ ಸರ್ಕಾರ ವಿಧಿಸಲಿ.












