ವರದಿ: scroll.in
ಸನ್ಮಾರ್ಗ ವಾರ್ತೆ
ಶ್ರೀನಗರ : ಭಯೋತ್ಪಾದನೆ ವಿರೋಧಿ ಕಾನೂನಾಗಿರುವ ಯುಎಪಿಎ(Unlawful Activities (Prevention) Act) ಹೊರಿಸಿ ಎಲ್ಲಾ ರೀತಿಯ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ. 2015ರವರೆಗೆ 60ರಷ್ಟು ಯುಎಪಿಎ ಕೇಸುಗಳು ಮತ್ತು 2019ರಲ್ಲಿ ಒಂದೇ ವರ್ಷದಲ್ಲಿ 255 ಯುಎಪಿಎ ಕೇಸುಗಳು ಕಾಶ್ಮೀರದಲ್ಲಿ ಜಡಿಯಲಾಗಿದೆ. ಕಾಶ್ಮೀರದಲ್ಲಿ ಎಲ್ಲದ್ದಕ್ಕೂ ಯುಎಪಿಎ ಹಾಕಲಾಗುತ್ತಿದೆ ಎಂದು ಶ್ರೀನಗರದ ವಕೀಲರೊಬ್ಬರನ್ನು ಉದ್ಧರಿಸಿ scroll.in ವರದಿ ಮಾಡಿದೆ.
ಕಲ್ಲೆಸೆತದ ಘಟನೆಗೂ ಯುಎಪಿಎ. 2018ರಲ್ಲಿ ಯುಎಪಿಎ ಹೊರಿಸಿದ ಓರ್ವ ಅಸಿಸ್ಟೆಂಟ್ ಪ್ರೊಫೆಸರ್ ಅನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಕಾಲೇಜು ಅಧ್ಯಾಪಕನಾದ ಇವರು ತಪ್ಪಿಸದೆ ಕಾಲೇಜಿಗೆ ಬಂದಿದ್ದಾರೆ. ಕಾಲೇಜಿನಲ್ಲಿ ಕೊರೊಂಟೈನ್ ಕೇಂದ್ರ ನಿರ್ವಹಿಸುತ್ತಿದ್ದರು ಎಂದು ದಾಖಲೆಗಳಿದ್ದರೂ ಬಂಧನ ತಪ್ಪಿಸಿಕೊಳ್ಳಲು ಭೂಗತರಂತೆ ಬದುಕುತ್ತಿದ್ದರು ಎಂದು ಪೊಲೀಸರು ಆರೋಪಿಸುತ್ತಿದ್ದಾರೆ.
ಕಳೆದ ಸೆಪ್ಟಂಬರಿನಲ್ಲಿ ಶೋಪಿಯಾನ್ ಅಧ್ಯಾಪಕ ಮತ್ತು ಎಂಟು ವಿದ್ಯಾರ್ಥಿಗಳು ಕ್ರಿಕೆಟ್ ಆಡಿದ್ದಕ್ಕೆ ಯುಎಪಿಎ ಕೇಸು ಹಾಕಿದ್ದನ್ನು ಕೋರ್ಟ್ ತಳ್ಳಿಹಾಕಿ ಕೋರ್ಟು ಇವರಿಗೆ ಜಾಮೀನು ನೀಡಿದೆ. 2019ರಲ್ಲಿ ಯುಎಪಿಎಗೆ ತಿದ್ದುಪಡಿ ಮಾಡಿ ಯಾರನ್ನೂ ಕೂಡ ಬಂಧಿಸುವ ಅಧಿಕಾರವನ್ನು ನೀಡಲಾಗುತ್ತಿದೆ ಎಂದು ಆರೋಪ ಕೇಳಿಬರುತ್ತಿದೆ. ಅದುವರೆಗೆ ನಿಷೇಧಿತ ಸಂಘಟನೆಗಳಲ್ಲಿ ಕೆಲಸ ಮಾಡಿದವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಹೊರಿಸುವ ಅವಕಾಶ ಇತ್ತು. ಆದರೆ 2019ರಲ್ಲಿ ಜುಲೈಯಲ್ಲಿ ತಿದ್ದುಪಡಿ ತರಲಾಗಿತ್ತು. ಆ ಪ್ರಕಾರ ಸರಕಾರಕ್ಕೆ ಯಾರನ್ನೂ ಭಯೋತ್ಪಾದಕನಾಗಿ ಮುದ್ರೆಯೊತ್ತಬಹುದು ಎಂಬಂತಾಗಿದೆ.
ಯುಎಪಿಎ ಹೊರಿಸಿದ ಬೆನ್ನಿಗೆ ಈ ಕಾನೂನಿನಲ್ಲಿ 25ನೇ ಕಲಂ ಪ್ರಕಾರ ಆಸ್ತಿ ಮುಟ್ಟುಗೋಲು ಹಾಕುತ್ತಿರುವುದು ವ್ಯಾಪಕ ನಡೆಯುತ್ತಿದೆ. ಕಳೆದ ಫೆಬ್ರುವರಿಯಲ್ಲಿ ಪೊಲೀಸ್ ವರದಿಯ ಪ್ರಕಾರ ಭಯೋತ್ಪಾದನಾ ಚಟುವಟಿಕೆ ನಿಯಂತ್ರಿಸಲು 46 ಪ್ರಕರಣಗಳಲ್ಲಿ ಆರೋಪಿಯಾಗಿಸಿದವರ 61 ವಾಹನಗಳು, ಐದು ಮನೆಗಳು , ಆರು ಅಂಗಡಿಗಳು, ಜಮೀನು ಹಣ ಎಲ್ಲವನ್ನು ಮುಟ್ಟುಗೋಲು ಹಾಕಲು ಅನುಮತಿ ಸಿಕ್ಕಿತು.
ಇಡೀ ದೇಶದಲ್ಲಿ ಇದೇ ಅವಸ್ಥೆ ಇದೆ ಎಂದು ಲೋಕಸಭೆಯಲ್ಲಿ ಗೃಹ ಸಚಿವಾಲಯ ಮಂಡಿಸಿದ ಲೆಕ್ಕಗಳು ತಿಳಿಸುತ್ತಿವೆ. 2015ಕ್ಕೆ ಹೋಲಿಸಿದರೆ 2019ರಲ್ಲಿ ಇಂತಹ ಪ್ರಕರಣಗಳಲ್ಲಿ ಶೇಕಡ 72ರಷ್ಟು ರಾಷ್ಟ್ರಮಟ್ಟದಲ್ಲಿ ಹೆಚ್ಚಳವಾಗಿದೆ. ಭಾರತದ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಯುಎಪಿಎ ಕೇಸು ಹಾಕಿಸಿಕೊಂಡಿರುವ ಮೂರನೇ ರಾಜ್ಯ ಕಾಶ್ಮೀರವಾಗಿದೆ. 2014 ರಿಂದ ಮತ್ತು 2019ರಲ್ಲಿ ಜಮ್ಮು ಕಾಶ್ಮೀರದಲ್ಲಿ 921 ಇಂತಹ ಪ್ರಕರಣಗಳು ದಾಖಲಾಗಿವೆ. 202)ರ ಲೆಕ್ಕಗಳನ್ನು ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೊ ಈವರೆಗೆ ಹೊರತಂದಿಲ್ಲ.
ಯುಎಪಿಎ ಪ್ರಕಾರ 180 ದಿನಗಳವರೆಗೆ ತನಿಖೆಗೆ ಪೊಲೀಸರು ತಮ್ಮ ವಶಕ್ಕೆ ಪಡೆಯಬಹುದು. ಇತರ ಪ್ರಕರಣಗಳಲ್ಲಿ ಹೆಚ್ಚೆಂದರೆ 60ರಿಂದ ತೊಂಬತ್ತು ದಿನಗಳವರಗೆ ಮಾತ್ರ ಈ ಅವಕಾಶ ಇದೆ. ಅದರೊಂದಿಗೆ ಕಸ್ಟಡಿಯಲ್ಲಿರುವವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಲು ಆರು ತಿಂಗಳು ಕಾಯಬೇಕಾಗಿದೆ.
ಶ್ರೀನಗರದಲ್ಲಿ ಗುಂಡು ಹಾರಾಟದಲ್ಲಿ ಕೊಲೆಯಾದನೆಂದು ಭದ್ರತಾ ಪಡೆಯು ಹೇಳುವ ತನ್ನ 16 ವರ್ಷದ ಮಗನ ಮೃತದೇಹ ಬಿಟ್ಟುಕೊಡಲು ತನ್ನ ಗ್ರಾಮದಲ್ಲಿ ಪ್ರತಿಭಟನೆ ಮಾರ್ಚ್ ಮಾಡಿದ ಪುಲ್ವಾಮದ ವ್ಯಕ್ತಿಯೊಬ್ಬರಿಗೆ ಮತ್ತು ಅವರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದ ಆರು ಮಂದಿಯ ವಿರುದ್ಧ ಯುಎಪಿಎ ಹೊರಿಸಿರುವುದು ರಾಜ್ಯದಲ್ಲಿ ಮತ್ತು ಹೊರಗೆ ವಿವಾದವಾಗಿತ್ತು. ಕಣ್ಣೀರೇ ಬತ್ತಿಹೋದ ತಂದೆಯ ಫೋಟೊಗಳನ್ನು ಮಾಧ್ಯಮಗಳು ಹೊರಬಿಟ್ಟಾಗ ಯುಎಪಿಎಯನ್ನು ಸಮರ್ಥಿಸಿಕೊಂಡು ಪೊಲೀಸ್ ಮುಖ್ಯಸ್ಥರು ರಂಗ ಪ್ರವೇಶಿಸಿದ್ದರು. ಮಗನ ಮೃತದೇಹ ಬಿಟ್ಟುಕೊಡಲು ಜಾಥಾ ಮಾಡಿದರೆ ಅದು ಯುಎಪಿಎ ಆಗುವುದಿಲ್ಲ. ರಾಲಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದರೆ ಯುಎಪಿಎ ಹೊರಿಸಲಾಗುವುದು ಎಂದು ಕಾಶ್ಮೀರ್ ಪೊಲೀಸ್ ಐಜಿ ವಿಜಯಕುಮಾರ್ ಹೇಳಿದ್ದರು. ಆದರೆ ಅಂತಹ ಘೋಷಣೆಯನ್ನು ಕೂಗಿಲ್ಲ ಎನ್ನುವುದಕ್ಕೆ ಪೊಲೀಸರೇ ಮಾಡಿದ ವೀಡಿಯೊದಲ್ಲಿ ಸಾಕ್ಷಿಯಿದೆ ಎಂದು ತಂದೆ ಹೇಳುತ್ತಿದ್ದಾರೆ.














