ಬಲವಂತದ ಮತಾಂತರ ಎಂಬ ಮಹಾ ಸುಳ್ಳು

0
179

ಸನ್ಮಾರ್ಗ ವಾರ್ತೆ

  • ರಹ್ಮಾನ್ ಎಂ.

ಮತಾಂತರಕ್ಕೆ ರಾಜಕೀಯ ಬಣ್ಣ ಬಳಿಯಬೇಕಾಗಿಲ್ಲವೆಂಬ ಸುಪ್ರೀಮ್ ಕೋರ್ಟಿನ ನಿಲುವು ಬಹಳ ಗಮನಾರ್ಹವಾದುದು. ಬೆದರಿಕೆ, ಹಣ ಅಥವಾ ಇತರ ವಸ್ತುಗಳ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ದೂರಿಗೆ ಸುಪ್ರೀಮ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕ್ರೈಸ್ತ ಮಿಶನರಿ ತಂಡವು ಬೈಬಲ್ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರವು ಆಕ್ರಮಣ ಮಾಡಿತ್ತು. ಛತ್ತೀಸ್‌ಗಢ್‌ನ ಚರ್ಚ್‌ನ ಮೇಲೆ ಆಕ್ರಮಣವುಂಟಾಯಿತು. ಕಾನೂನು ವಿರುದ್ಧ ಮತಾಂತರವನ್ನು ನಾವು ತಡೆದಿದ್ದೇವೆಂದು ಅವರ ವ್ಯಾಖ್ಯಾನ. ಬಲಾತ್ಕಾರದ ಮತಾಂತರವೆಂದು ಆರೋಪಿಸಿ ಆರಾಧನಾಲಯಗಳ ಮೇಲೂ ಧರ್ಮ ಪ್ರಚಾರಕರ ವಿರುದ್ಧವೂ ಅವರು ಅಕ್ರಮವೆಸಗುತ್ತಿರುತ್ತಾರೆ. ವಂಚನಾತ್ಮಕವಾದ ಮತಾಂತರ ವನ್ನು ತಡೆಯಬೇಕೆಂಬ ಅರ್ಜಿ ಸುಪ್ರೀಮ್ ಕೋರ್ಟ್ ಪರಿಗಣಿಸುತ್ತಿದ್ದ ನಡುವೆ ತಮಿಳುನಾಡಿಗಾಗಿ ಹಾಜರಾದ ವಕೀಲರು ಅಂತಹ ಮತಾಂತರಗಳು ನಡೆಯುತ್ತಿಲ್ಲವೆಂಬುದನ್ನು ನ್ಯಾಯಾ ಲಯದ ಗಮನಕ್ಕೆ ತಂದಿದ್ದರು.

ಧಾರ್ಮಿಕ ಸ್ವಾತಂತ್ರ‍್ಯವೆಂದರೆ ಮತಾಂತರ ಸ್ವಾತಂತ್ರ‍್ಯವಲ್ಲವೆಂದು ಗುಜರಾತ್ ಸರಕಾರವು ಸುಪ್ರೀಮ್ ಕೋರ್ಟ್‌ನಲ್ಲಿ ವಾದಿಸಿತು. ಇಷ್ಟವಿರುವ ಧರ್ಮವನ್ನು ಸ್ವೀಕರಿಸಲು, ಪ್ರಚಾರ ಮಾಡಲು ಸಂವಿಧಾನವು ನೀಡಿರುವ ಸ್ವಾತಂತ್ರ‍್ಯದ ವಿರುದ್ಧ ಗುಜರಾತ್ ಸರಕಾರದ ಈ ವಾದ. ತಾನು ಯಾವ ರೀತಿ ಬದುಕಬೇಕೆಂದೂ ಯಾವ ಧರ್ಮದಲ್ಲಿ ವಿಶ್ವಾಸವಿರಿಸ ಬೇಕೆಂದೂ ಏನು ತಿನ್ನಬೇಕೆಂದೂ ನಿರ್ಧರಿಸಲು ಸಂವಿಧಾನವು ಪ್ರತಿ ಯೊಬ್ಬರಿಗೂ ಸ್ವಾತಂತ್ರ‍್ಯವನ್ನು ನೀಡಿದೆ. ಸಂವಿಧಾನ ಅನುಮತಿಸುವ ಈ ಸ್ವಾತಂತ್ರ‍್ಯವನ್ನು ಒಪ್ಪುವುದಿಲ್ಲವೆಂದು ಹೇಳಿ ಉತ್ತರ ಭಾರತದಲ್ಲಿ ವ್ಯಾಪಕವಾಗಿ ಚರ್ಚ್‌ ಗಳು ಹಾಗೂ ಪಾದ್ರಿಗಳ ಮೇಲೆ ಸಂಘ ಪರಿವಾರ ಆಕ್ರಮಣ ನಡೆಸುತ್ತಿದೆ. ಮಧ್ಯ ಪ್ರದೇಶದ ‘ಮತಾಂತರ ತಡೆ’ ಕಾನೂನಿನಲ್ಲಿ ವ್ಯವಸ್ಥೆಯ ಉಲ್ಲಂಘನೆ ಶಿಕ್ಷಾರ್ಹವಲ್ಲವೆಂಬ ಹೈಕೋರ್ಟ್ ನ ಆದೇಶ ತಡೆ ಹಿಡಿಯಬೇಕೆಂಬ ಬೇಡಿಕೆಯನ್ನು ಅಂಗೀಕರಿಸಲಾಗಿಲ್ಲ. ಎಲ್ಲ ಮತಾಂತರವೂ ಕಾನೂನು ವಿರುದ್ಧವಲ್ಲವೆಂದು ಸುಪ್ರೀಮ್ ಕೋರ್ಟ್ ಬೊಟ್ಟು ಮಾಡಿತ್ತು. ಧರ್ಮವನ್ನು ಪರಿವರ್ತಿಸು ವವರನ್ನು ವಿಚಾರಣೆ ಮಾಡುವುದು ಸಂವಿಧಾನ ವಿರೋಧವೆಂದು ಸೂಚಿಸಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

ಸಂವಿಧಾನ ವಿರುದ್ಧವಾದರೂ ಬಿಜೆಪಿಯು ಆಳುವ ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನುಗಳು ಜಾರಿಗೆ ಬಂದಿವೆ. ಬಲಾತ್ಕಾರದ ಮತಾಂತರ ನಡೆಯಿತೆಂದು ತೋರುವ ಅಧಿಕೃತ ರೇಖೆಯು ಇದುವರೆಗೂ ಎಲ್ಲಿಯೂ ಸಮರ್ಪಿಸಲ್ಪಟ್ಟಿಲ್ಲ. ಕಾನೂನು ಪ್ರಕಾರ ಪ್ರಕರಣಗಳು ರಿಜಿಸ್ಟರ್ ಆಗುವುದೋ, ನ್ಯಾಯಾಲಯದಲ್ಲಿ ಸಾಬೀತು ಪಡಿಸುವುದೋ ನಡೆದಿಲ್ಲ. 2021 ಜನವರಿಯಲ್ಲಿ ಮಧ್ಯ ಪ್ರದೇಶದಲ್ಲಿ ಕಠಿಣವಾದ ಒಂದು ಆರ್ಡಿನನ್ಸ್ ತರಲಾಗಿದೆ. 23 ದಿನಗಳಲ್ಲಿ 22 ಪ್ರಕರಣಗಳು ದಾಖಲಾಗಿತ್ತು. ಆದರೆ, ಇದರಲ್ಲಿ ಒಂದರಲ್ಲಿ ಕೂಡಾ ಬಲಾತ್ಕಾರದ ಮತಾಂತರ ನಡೆದಿದೆಯೆಂದು ಸಾಬೀತಾಗಿಲ್ಲ.

ಇದರ ನಡುವೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಹಲವು ಪ್ರಕರಣಗಳು ನಡೆದಿವೆ. 2014ರಲ್ಲಿ 57 ಮುಸ್ಲಿಮ್ ಕುಟುಂಬಗಳು ಆಗ್ರಾದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿಯೆಂಬ ವಾರ್ತೆ ಬಂದಿತ್ತು. 2021ರಲ್ಲಿ ಹರ್ಯಾಣದಲ್ಲಿ 300 ಮುಸ್ಲಿಮರು ಹಿಂದೂ ಮತವನ್ನು ಸ್ವೀಕರಿಸಿದರು. ಆದರೆ ಮುಸ್ಲಿಮರು ಹಿಂದೂಗಳಾಗಿ ಪರಿವರ್ತನೆಯಾದಾಗ ಮತಾಂತರ ನಿಷೇಧ ಕಾನೂನು ಬಿಗಿ ಹಿಡಿಯಲಿಲ್ಲ. ಅದನ್ನು ಘರ್‌ವಾಪಸಿ ಎಂದು ಹೇಳಿ ಸಂಭ್ರಮಿಸಲಾಯಿತು. ಮುಸ್ಲಿಮ್ ಆಡಳಿತಗಾರರ ಕಾಲದಲ್ಲಿ ಬಲವಂತದ ಮತಾಂತರಕ್ಕೆ ವಿಧೇಯಗೊಂಡವರ ನಂತರದ ತಲೆಮಾರು ಇಂದಿನ ಭಾರತೀಯ ಮುಸ್ಲಿಮರೆಂದೂ ಅವರೀಗ ಮರಳಿ ಮನೆಗೆ ಬರುತ್ತಿದ್ದಾರೆಂದೂ ಹಿಂದುತ್ವವಾದಿಗಳು ವಾದಿಸುತ್ತಾರೆ. ಈ ಮತಿಗೆಟ್ಟ ವಾದವನ್ನು ಅನೇಕರು ಹೀಗೆ ಖಂಡಿಸುತ್ತಾರೆ, ನೂರಾರು ವರ್ಷಗಳು ಮುಸ್ಲಿಮ್ ಆಡಳಿತಗಾರರ ಒಡೆತನದಲ್ಲಿದ್ದ ಉತ್ತರ ಪ್ರದೇಶದಲ್ಲಿ ಕೂಡಾ ಮುಸ್ಲಿಮರು ಕೇವಲ 14% ಇದ್ದಾರೆ. ದಶಕಗಳ ಕಾಲ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ರ ಆಡಳಿತದಲ್ಲಿದ್ದ ಮೈಸೂರಿನಲ್ಲಿ ಮುಸ್ಲಿಮರು ಕೇವಲ 5% ಇದ್ದಾರೆ. ಬಲವಂತದ ಮತಾಂತರ ನಡೆದಿದ್ದರೆ ಅಲ್ಲಿನ ಮುಸ್ಲಿಮ್ ಜನಸಂಖ್ಯೆ ಇಷ್ಟು ಕಡಿಮೆ ಇರಲು ಸಾಧ್ಯ ವಿತ್ತೇ? (ಅಧ್ಯಾಪಕ ಲೋಕ, 1993 ಆಗಸ್ಟ್)

‘ಮಧ್ಯಕಾಲೀನ ಸರಕಾರ ಇಸ್ಲಾಮ್ ಧರ್ಮವನ್ನು ಜನರ ಮೇಲೆ ಹೇರಿಲ್ಲ ಮತ್ತು ಇಸ್ಲಾಮ್ ಧರ್ಮದ ಪ್ರಚಾರದ ರೀತಿಯ ಆಡಳಿತ ಪದ್ಧತಿ ಜಾರಿಗೆ ತರಲು ಪ್ರಯತ್ನಿಸಿಯೂ ಇಲ್ಲ.’ (ಜನಯುಗ ವಾರ್ತೆ 26-11-1978)

ಮುಸ್ಲಿಮರ ಆಡಳಿತ ಕಾಲದಲ್ಲಿ ಹಿಂದೂ ಧರ್ಮಕ್ಕೆ ಹಿನ್ನಡೆಯಲ್ಲ, ವ್ಯಾಪಕವಾದ ಅಭಿವೃದ್ಧಿ ಸಾಧ್ಯವಾಯಿತೆಂದು ಆರೆಸ್ಸೆಸ್ ನಾಯಕ ಹೇಳುವುದು ಹೀಗೆ: “ಭಾರತದ ಮೇಲಿನ ಮುಸ್ಲಿಮರ ಆಕ್ರಮಣವು ಇಲ್ಲಿನ ವಿವಿಧ ಗೋತ್ರಗಳ ಸಂಸ್ಕೃತೀಕರಣದ, ಹಿಂದೂಕರಣಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿತು. ಮಾರ್ಕ್ ವೆಬರ್‌ರ ಅಭಿಪ್ರಾಯದಲ್ಲಿ 800 ವರ್ಷದ ಮುಸ್ಲಿಮ್ ಆಡಳಿತ ಕಾಲದಲ್ಲಿ ಹಿಂದೂ ಧರ್ಮವು ಈ ವಿಭಾಗಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿದೆ.” (ಹಿಂದೂ ಚರಿತ್ರೆಯಲ್ಲಿ ಕೆ.ಆರ್. ಮಾಲ್ದನಿ, ಕೇಸರಿ 24-7-1983)

ಸ್ವಾಮಿ ವಿವೇಕಾನಂದರ ವಿಷಯವೂ ಭಿನ್ನವಲ್ಲ: ಮಹಮ್ಮ ದೀಯರು ಭಾರತೀಯರನ್ನು ವಶಪಡಿಸಿದ್ದು ಮರ್ದಿತರಿಗೂ ದಲಿತರಿಗೂ ಒಂದು ಮುಕ್ತಿಯ ಮಾರ್ಗವಾಗಿ ಅನುಭವವಾಯಿತು. ಆದ್ದರಿಂದ ನಮ್ಮ ಜನರಲ್ಲಿ ಐದರಲ್ಲಿ ಒಂದು ಮಹಮ್ಮದೀಯರಾಗಿದ್ದಾರೆ. ಅದನ್ನು ಖಡ್ಗದಿಂದ ಪ್ರಚಾರ ಮಾಡಿದ್ದಲ್ಲ. ಅವೆಲ್ಲವೂ ಖಡ್ಗ ಮತ್ತು ಬೆಂಕಿಯಿಂದ ಗಳಿಸಿದ್ದೆಂದು ಭಾವಿಸುವುದು ಹುಚ್ಚುತನದ ಪರಮಾವಧಿಯಾಗಿದೆ. (ವಿವೇಕಾನಂದ ಸಾಹಿತ್ಯ ಸರ್ವಸ್ವಂ ಭಾಗ 3, ಪುಟ 186-187)

ಮತಾಂತರಕ್ಕೆ ಕಾರಣವೇನು?
ಸ್ವಂತ ಸಮುದಾಯವು ಓರ್ವನೊಂದಿಗೆ ಕೃತಘ್ನತೆ ತೋರು ವಾಗ ಅವರು ಧರ್ಮಾಂತರ ಆಗುತ್ತಾರೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಲಕ್ಷಗಟ್ಟಲೆ ಅನುಯಾಯಿಗಳು ಒಂದಾಗಿ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮ ಸ್ವೀಕರಿಸಲು ಡಾ. ಅಂಬೇಡ್ಕರ್‌ರನ್ನು ನಿರ್ಬಂಧಿಸಿತು. ಕೆಳ ವರ್ಗದ ಸಮೂಹ ಅನುಭವಿಸಬೇಕಾಗಿ ಬಂದ ಮನುಷ್ಯತ್ವ ರಹಿತವಾದ ಜಾತಿ ಪೀಡನೆಯ ಫಲವಾಗಿತ್ತು ಅದು. ವಿಶೇಷವಾದ ಬದಲಾವಣೆಯಿಲ್ಲದ ಇಂದಿಗೂ ಕೂಡಾ ದೇಶದಲ್ಲಿ ಕ್ರೂರವಾದ ಜಾತೀಯತೆಗಳು ನಡೆಯುತ್ತಿದೆ.
ತಮಿಳ್ನಾಡಿನಲ್ಲಿ ಜಾತಿಯ ಶೋಷಣೆಗೆ ವಿಧೇಯರಾಗುತ್ತಿರುವ ಒಂದು ಕೋಟಿಗಿಂತಲೂ ಅಧಿಕ ದಲಿತರಿದ್ದಾರೆ ಎಂಬುದು ಒಂದು ಗಣತಿ. ಸತ್ತ ದನದ ಚರ್ಮವನ್ನು ಸುಲಿದ ‘ಮಹಾ ಅಪರಾಧ’ಕ್ಕಾಗಿ ಹರ್ಯಾಣದಲ್ಲಿ 5 ದಲಿತರನ್ನು ತೀವ್ರವಾಗಿ ಹಿಂಸಿಸಲಾಯಿತು. ಮಧ್ಯಪ್ರದೇಶದ ರೈಲ್ವೇ ಸ್ಟೇಶನ್‌ನಲ್ಲಿ ಸತ್ತ ದನವನ್ನು ಅಲ್ಲಿಂದ ಸ್ಥಳಾಂತರಿಸಿದ್ದಕ್ಕೆ ದಲಿತ ಯುವಕರನ್ನು ಹಿಡಿದು ನಗ್ನರಾಗಿಸಿ ಕಟ್ಟಿ ಹಾಕಿ ಮರ್ದಿಸಲಾಯಿತು. ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಸಾರ್ವಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರ ಅಸಾಧ್ಯ. ಸಾರ್ವಜನಿಕ ಬಾವಿಯಿಂದ ನೀರು ಸೇದುವಂತಿಲ್ಲ. ಸಾರ್ವಜನಿಕರ ನಡುವೆ ನಡೆಯಲೂ ಸಾಧ್ಯವಿಲ್ಲ. ಮೂವರು ಯುವಕರನ್ನು ಮಲ ತಿನ್ನಿಸಲು ಬಲಾತ್ಕರಿಸಿದ ಅತ್ಯಂತ ನಾಚಿಕೆಗೇಡಿನ ಘಟನೆಯೂ ನಡೆದಿತ್ತು. ಮೇಲ್ಜಾತಿಯ ಓರ್ವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಕ್ಕೆ ಡಿಂಡಿಗಲ್ ಜಿಲ್ಲೆಯಲ್ಲಿ ಓರ್ವ ದಲಿತನಿಗೆ ಮೂತ್ರ ಕುಡಿಸಲಾಯಿತು.

ಹಲವು ವರ್ಷಗಳ ಹಿಂದೆ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ಸಾಮೂಹಿಕವಾಗಿ ಇಸ್ಲಾಮ್‌ಗೆ ಮತಾಂತರ ಉಂಟಾದಾಗ ಜಾತಿ ಪೀಡನೆಯ ಕ್ರೂರತೆಗಳು ಒಪ್ಪಿಕೊಂಡು ಹಿಂದುತ್ವದ ಮುಖವಾಣಿ ‘ಕೇಸರಿ’ ತಮ್ಮ ಪತ್ರಿಕೆಯಲ್ಲಿ ಬರೆಯಿತು. ‘ಒಂದು ಹಂತದವರೆಗೆ ತಮಿಳುನಾಡಿನಲ್ಲಿ ನಡೆದ ಮತಾಂತರಕ್ಕೆ ಜಾತಿಯ ಕಾರಣದಿಂದ ಕೆಳ ವರ್ಗದವರು ಅನುಭವಿಸುತ್ತಿರುವ ಕಷ್ಟಗಳೆಂಬುದು ಒಂದು ವಾಸ್ತವಿಕತೆಯಾಗಿದೆ.’
(ಕೇಸರಿ ಪತ್ರಿಕೆ 1982, ಫೆಬ್ರವರಿ 7)

ಇಲ್ಲಿಯವರೆಗೆ ಮೇಲ್ಜಾತಿ ಹಿಂದೂಗಳಿಗೆ ಸೇವೆ ಮಾಡಿದವರು ಅವರ ಪ್ರೀತಿ ಮತ್ತು ಕಾಳಜಿಗಾಗಿ ಆಸೆ ಪಡುತ್ತಿದ್ದಾರೆ. ಅವರೊಂದಿಗೆ ಹೃದಯದ ಭಾಷೆಯಲ್ಲಿ ಮಾತನಾಡಬೇಕೆಂಬುದು ಹಿಂದೂ ಸಹೋದರರಿಂದ ಸೇವೆ, ಕ್ರೈಸ್ತ ಮತ್ತು ಮುಸ್ಲಿಮರಿಂದ ಪ್ರೀತಿ ಎಂಬುದು ಹರಿಜನರ ಅನುಭವ. (ಸ್ವಾಮಿ ಚಿನ್ಮಯಾನಂದನ್- ಕೇಸರಿ, ನವೆಂಬರ್ 25) ಸ್ವಾಮಿ ಚಿನ್ಮಯಾನಂದನ್‌ರ ಈ ಮಾತು ಅಕ್ಷರಶಃ ಸತ್ಯವಲ್ಲವೇ?

ಕೇರಳದ ಮಾತೃಭೂಮಿ ಪತ್ರಿಕೆಯಲ್ಲಿ ಅದರ ಮೌಲ್ಯಮಾಪನ ಹೀಗಿತ್ತು: ಹಿಂದೂ ಧರ್ಮದ ಸಂರಕ್ಷಕರೆಂದು ವಾದಿಸಿದವರು ತಮ್ಮ ಶ್ರೇಷ್ಠತೆಯ ಕುರಿತು ಏನೇ ಹೇಳಿದರೂ, ಅವರ ಉಪದೇಶಗಳಲ್ಲಿ ಹಿಂದೂ ಸಮಾನತೆ ಎಂಬ ಪದ ಕಂಡು ಬರುವುದಿಲ್ಲ. ವರ್ಣಾಶ್ರಮ ಮತ್ತು ಅದರ ಹಿಂದಿರುವ 3800ಕ್ಕಿಂತಲೂ ಅಧಿಕ ಜಾತಿಗಳು ತಮ್ಮದೇ ಆದ ದಬ್ಬಾಳಿಕೆ ಮತ್ತು ಶೋಷಣೆಗಳನ್ನು ಕೊನೆಗೊಳಿಸಿ ಏಕ ಹಿಂದೂ ಸಮುದಾಯವನ್ನು ಕಟ್ಟುವ ಸಂಕಲ್ಪವು ಕೂಡ ಅವರ ಕಾರ್ಯ ಯೋಜನೆಯಲ್ಲಿಲ್ಲ. ಈ ಸ್ಥಿತಿ ಮುಂದುವರಿಯುವವರೆಗೆ ಹರಿ ಜನರಲ್ಲಿ ಅಸುರಕ್ಷಿತತೆ ಉಳಿಯುತ್ತದೆ. ಸ್ವಂತ ಪ್ರಾಣ ಮತ್ತು ಸೊತ್ತು ರಕ್ಷಿಸಲು ಅವರು ಇತರ ದಾರಿಗಳನ್ನು ಕಂಡುಕೊಳ್ಳುವುದು ಸ್ವಾಭಾವಿಕವಾಗಿದೆ. (ಮಾತೃ ಭೂಮಿ, 1976 ಅಕ್ಟೋಬರ್ 12)

ಅಮಾನುಷ ಮತ್ತು ಕ್ರೂರವಾದ ಮೇಲ್ಜಾತಿ ಹಿಂಸೆಗಳಿಂದಾಗಿ ಮನುಷ್ಯರಿಗೆ ಜೀವನವೇ ದುಸ್ತರವಾಗಿರುವ ಸಾಮಾಜಿಕ ಸನ್ನಿವೇಶದಲ್ಲಿ ಅವರು ಬೇರೆ ದಾರಿಯಲ್ಲಿ ಸಂಚರಿಸಲು ಹೊರಡದಿದ್ದರೆ ಅದೇ ಅಚ್ಚರಿಯ ವಿಚಾರ.

ನಿರಾಕರಿಸಲಾಗದ ಈ ಅನುಭವದ ಪ್ರಾಯೋಗಿಕ ರೂಪವನ್ನೇ ಕಳೆದ ಅಕ್ಟೋಬರ್ 5ಕ್ಕೆ ದೆಹಲಿಯಲ್ಲಿ 8000 ದಲಿತರು ತಮಗೆ ಜನ್ಮ ನೀಡಿದ ಹಿಂದೂ ಧರ್ಮವನ್ನು ತೊರೆದು ಗೌರವಯುತ ಜೀವನ ನಡೆಸಲು ಬೌದ್ಧ ಮತವನ್ನು ಸ್ವೀಕರಿಸಿದರು.

ಇಂತಹ ಸಂದರ್ಭಗಳಲ್ಲಿ ನಡೆಯುತ್ತಿರುವ ಅನಿವಾರ್ಯ ಹಾಗೂ ಸಹಜವಾದ ಮತಾಂತರಗಳನ್ನು ಬಲವಂತದ ಮತಾಂತರವೆಂದು ಆರೋಪಿಸಿ ಗದ್ದಲ ಹಬ್ಬಿಸಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕೆಂದೂ ಸ್ವಾಭಾವಿಕ ಮತಾಂತರವನ್ನು ಬಲವಂತದ ಮತಾಂತರವೆಂದು ಆರೋಪಿಸಿ ಹಿಂಸಾಚಾರಗಳನ್ನು ನಡೆಸಲು ಪ್ರಯತ್ನಿಸುವುದು ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಶುದ್ಧ ಫ್ಯಾಸಿಝಂ ಆಗಿದೆ.