ತಲಾಕ್: ಕೇಂದ್ರಕ್ಕೆ ಕೋರ್ಟ್ ನೀಡಿದ ನೋಟೀಸ್ ನಮಗೆ ಪಾಠವಾಗಲಿ- ಜುಮಾ ಭಾಷಣದಲ್ಲಿ‌ ಮುಲ್ಕಿ ಖತೀಬ್ ಎಸ್.ಬಿ.ದಾರಿಮಿ

0
9601

ಸನ್ಮಾರ್ಗ ವಾರ್ತೆ

ದೇಶ ದ್ರೋಹಿಗಳ ಚಾನಲ್ ಒಳಗೆ ಕುಳಿತು ಡಿಬೆಟ್ ನಡೆಸಿ, ಮತ ಪ್ರವಚನ ಮಾಡಿ ಆ ನಂತರ‌ ಚಾನಲ್‌‌ನವರು ಅವರ ಗುಪ್ತ ಅಜೆಂಡಾವನ್ನು ಜಾರಿಗೊಳಿಸುವಾಗ ಕೋಪಗೊಂಡು‌ ಪ್ರತಿಭಟನೆ ನಡೆಸಿ ಯಾವುದೇ ಪ್ರಯೋಜನ‌ವಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಪರ್ಯಾಯ ಮಾರ್ಗವನ್ನು ಹುಡುಕದೇ ಕೇವಲ ಕುಳಿತಲ್ಲಿಂದಲೇ ಎಲ್ಲವೂ ಸರಿಯಾಗ ಬೇಕೆಂದು ಆಶಿಸುವುದು ಮೂರ್ಖತನವಾಗಿದೆ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬ್ ಯಸ್ ಬಿ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ.
ಅವರಿಂದು‌ ಜುಮಾ ಭಾಷಣದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ನಾವು ಮಾಡಬೇಕಾದ ಕಾರ್ಯಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದವರು ಇಂತೆಂದರು:-

“ಕೇವಲ‌ ನಮಾಜ್,ಉಪವಾಸ , ಪ್ರಾರ್ಥನೆ ಮಾಡಿದರೆ ಎಲ್ಲವೂ ಸರಿಹೊಂದುತ್ತೆ ಎಂಬ ಭ್ರಮೆಯಿಂದ ಹೊರ ಬಂದು ಆಯಾ ಕಾಲಕ್ಕನುಗುಣವಾಗಿ ನಿರ್ವಹಿಸ ಬೇಕಾದ ಕರ್ತವ್ಯಗಳನ್ನು ನಿಭಾಯಿಸಲು ಮುಂದೆ ಬಂದರೆ ಮಾತ್ರ ಈ ಸಮಾಜಕ್ಕೆ ಉಳಿಗಾಲ ಇದೆ” ಎಂದು ಅವರು ಎಚ್ಚರಿಸಿದರು.

ಅದೆಷ್ಟೋ ಸಣ್ಣ ಸಣ್ಣ ಗುಂಪುಗಳು ದೊಡ್ಡ ಗಾತ್ರದ ಗುಂಪಿನ ಮುಂದೆ ಜಯಶಾಲಿಯಾಗಿದೆ ಎಂಬ ಕುರ್‌ಆನಿನ ವಚನವನ್ನು ಉಲ್ಲೇಖಿಸಿದ ಅವರು ಕೋಟಿಯಷ್ಟಿರುವ ಯಹೂದಿಗಳು ಇಡೀ ಜಗತ್ತನ್ನೇ ನಿಯಂತ್ರಿಸುತ್ತಿರುವುದು ಅವರು ಕಾಲದ ಬೇಡಿಕೆಯನುಸಾರ ಹೆಜ್ಜೆ ಇಟ್ಟ ಕಾರಣದಿಂದಾಗಿದೆ ಎಂದು ಸ್ಪಷ್ಟಪಡಿಸಿದರು. ಇಂದು ಕತ್ತಿ ದೊಣ್ಣೆ ಹಿಡಿದು ಯುದ್ದ ಮಾಡುವ ಕಾಲವಲ್ಲ. ಯುದ್ದ ಅಥವಾ ಮತ್ತೊಂದು ಅದೇನಿದ್ದರೂ ರಾಷ್ಟ್ರದ ಸೈನಿಕರು ನೋಡಿ ಕೊಳ್ಳುತ್ತಾರೆ.

ಪ್ರಜೆಗಳಾದ ನಾವು ದೇಶದ ಕಾನೂನಿಗೆ ಬದ್ದರಾಗಿದ್ದು ಕೊಂಡು ಎಲ್ಲಾ ಕ್ಷೇತ್ರದಲ್ಲೂ ಸ್ವಾಯತ್ತೆಗಳಿಸಿ ಕೊಳ್ಳಲು ಪ್ರಯತ್ನಿಸಬೇಕಾಗಿದೆ. ಅದನ್ನು ಬಿಟ್ಟು ಇತರರನ್ನು ದೂಷಿಸುತ್ತಾ ಕಾಲ ಕಳೆದರೆ ಯಾವುದೇ ಬದಲಾವಣೆ ಸಾದ್ಯ ಇಲ್ಲ. ಸುಧಾರಣೆಯ ಮತ್ತು ಅಭಿವೃದ್ದಿಯ ಹಾದಿಯಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವಾಗ ಧಾರ್ಮಿಕವಾದ ಸಣ್ಣ ಪುಟ್ಟ ಕೆಲ ಕಟ್ಟು ಕಟ್ಟಳೆಗಳ ಬಗ್ಗೆಯೇ ಚರ್ಚಿಸಲು ಜೀವಮಾನವಿಡೀ ನಮ್ಮ ಶಕ್ತಿಯನ್ನು ವಿನಿಯೋಗಿಸಿದರೆ ನಾವು ಬಿದ್ದ ಗುಂಡಿಯಿಂದ ಎದ್ದೇಳಲು ಅಂತ್ಯದಿನದ ತನಕ ಸಾದ್ಯವಿಲ್ಲ. ಇಂತಹ ಚರ್ಚೆಗಳು ಬಾವಿಗೆ ಬಿದ್ದವಳನ್ನು ರಕ್ಷಿಸಿದವನಲ್ಲಿ ನನ್ನ ಪತ್ನಿಯನ್ನು ನೀನು ಮುಟ್ಟಿದ್ದು ಹರಾಂ ಅಲ್ಲವೇ ಎಂದು ಪ್ರಶ್ನಿದಷ್ಟು ಬಾಲಿಶವಾಗಿದೆ ಎಂದು ವ್ಯಂಗ್ಯವಾಡಿದರು.

ಒಂದು ಕಾಲದಲ್ಲಿ ವಕೀಲ ವೃತ್ತಿ ಎಂದರೆ ಅದು ನಮಗೆ ನಿಷಿದ್ದವೆಂಬಂತೆ ಬಿಂಬಿಸಲಾಗಿತ್ತು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಉಂಟಾದ ತೀರಾ ಇತ್ತಿಚೆಗಿನ ಕೆಲ ಬೆಳವಣಿಗಗಳಿಂದಾಗಿ ಹಲವಾರು ದಾರ್ಮಿಕ ವಿದ್ವಾಂಸರೇ ಅಡ್ವಕೇಟುಗಳಾಗಿ ಹೊರಬಂದರು. ಈಗ ನೋಡಿದರೆ ದೇಶದ ಉಚ್ಚ ನ್ಯಾಯಾಲಯದಲ್ಲಿ ಸಮಸ್ತ ಉಲಮಾ ಒಕ್ಕೂಟ ತ್ರಿವಳಿ ತಲಾಕ್ ಪ್ರಕರಣದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಾದಿಸಿ ಕೇಂದ್ರಕ್ಕೆ ನೋಟೀಸು ಕಳುಹಿಸುವಂತಾಗಲು ಈ ವಕೀಲರೇ ಕೆಲಸ ಮಾಡಿದ್ದಾರೆ.

ಆದರೆ, ತಳ ಮಟ್ಟದಲ್ಲಿ ಈಗಲೂ ನಮ್ಮ ಜನ ಸಾಮಾನ್ಯರು ಅತಿ ಧಾರ್ಮಿಕತೆಗೆ ಜೋತು ಬಿದ್ದು ಇಂತಹ ಫೀಲ್ಡ್ ನಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿ ಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಒಬ್ಬರು ದೊಡ್ಡ ಪಾಂಡಿತ್ಯ ಇರುವ ಉಸ್ತಾದರು ಮಾತಿಗೆ ಸಿಕ್ಕಿದ್ದರು .ಅವರ ಮಗ ಎಸ್ಸೈ ಪೋಸ್ಟಿಗೆ ಸೆಲೆಕ್ಟ್ ಆಗಿದ್ದರೂ ಅದಕ್ಕೆ ಜಾಯಿನ್ ಆಗುವುದು ಕುಟುಂಬದವರಿಗೆ ಅರೆ ಮನಸ್ಸು ಎಂದರು. ನಮ್ಮ ಇಂದಿನ ನಿಜವಾದ ಹೋರಾಟ ಇದೇ ಆಗಿದೆ. ಅಂದು ಹೋರಾಟಕ್ಕೆ ಹೊರಟು ನಿಂತ ಉಸ್ಮಾನ್( ರ), ಅಲಿ(ರ)
ಗಡ್ಡಕ್ಕೆ ಸೌಂದರ್ಯ ಹೆಚ್ಚಿಸಿದ್ದು ನಮಗೆ ಆದರ್ಶ ಆಗ ಬೇಕು.
ಒಳ್ಳೆಯ ನಿಯ್ಯತ್ ನಿಂದ ಆ ಪೋಸ್ಟ್ ಗೆ ಸೇರಲೇ ಬೇಕು ಎಂದಾಗ ನೋಡೋಣ ಎಂದರು. ಅವರ ಇನ್ನೊಬ್ಬಳು ಮಗಳು ಎಂ ಬಿ ಬಿ ಎಸ್ ಮಾಡಿ ಮುಂದೆ ಎಂ ಡಿ ಮಾಡುವವಳಿದ್ದಾಳೆ .ನಿಜವಾಗಿಯೂ ಈ ಗುರುಗಳು ನಮಗೆ ಮಾದರಿಯಾಗ ಬೇಕು. ಆದರೆ ನಾವು ಇಂತಹ ದೂರಗಾಮಿ ದೃಷ್ಟಿಕೋನವನ್ನು ಇಟ್ಟು ಕೊಳ್ಳದೆ ಕೇವಲ ತಕ್ಷಣದ ಆಗು ಹೋಗುಗಳಿಗೆ ಮಾತ್ರ ಸ್ಪಂದಿಸುವ ಒಂದು ಸಮಾಜವಾಗಿ ಉಳಿದಿದ್ದೇವೆ.

ಈ ಸಮಾಜಕ್ಕೆ ನಾವು ತಾಲೂಕು ಮಟ್ಟದಲ್ಲಿ ಎಷ್ಟು ಪ್ರಾಮಾಣಿಕ ಪತ್ರಕರ್ತರನ್ನು , ನುರಿತ ವೈದ್ಯರನ್ನು, ಕ್ರಿಯಾಶೀಲ ಇಂಜಿನಿಯರ್‌ ಗಳನ್ನು, ಹೆಸರಾಂತ ವಕೀಲರನ್ನು , ಸುಸಜ್ಜಿತ ಆಸ್ಪತ್ರೆಗಳನ್ನು , ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು , ಹತ್ತು ಜನರಿಗೆ ಉದ್ಯೋಗ ನೀಡುವ ಕಂಪೆನಿಗಳನ್ನು ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡ ಬೇಕಿದೆ. ನಾವು ಅನಗತ್ಯ ವಾದ ಬೃಹತ್ ಮಸೀದಿ ಗಳನ್ನು ಮತ್ತು ಉದ್ಯೋಗ ಇಲ್ಲದೇ ಕಂಗಾಲಾಗಿರುವ ಕುರ್‌ಆನ್ ಹಾಫಿಳ್ ಗಳನ್ನು ತಯಾರಿ ಮಾಡಿಟ್ಟಿದ್ದೇವೆಯೇ ಹೊರತು ಪ್ರಾಯೋಗಿಕ ಆಲೋಚನೆಗಳಾವುದನ್ನು ನಾವು ಮಾಡುತ್ತಿಲ್ಲ.

ಪೂರ್ವಿಕ ಉಲಮಾಗಳು ಅರಬಿಕ್ ಕಾಲೇಜುಗಳಲ್ಲಿ ವೈದ್ಯ ಶಾಸ್ತ್ರ, ಗಣಿತ ಶಾಸ್ತ್ರ, ಶಿಲ್ಪ ಶಾಸ್ತ್ರ ಮೊದಲಾದವುಗಳನ್ನೆಲ್ಲಾ ಕಲಿಸುತ್ತಿದ್ದರು. ಆದರೆ ಇಂದು ಕೇವಲ ಭಾಷಣ ಮಾಡುವ ಯಂತ್ರಗಳನ್ನು ಮಾತ್ರ ನಾವು ಸಿದ್ದಪಡಿಸುತ್ತಿದ್ದೇವೆ. ಇಂದು ಸಮಾಜದಲ್ಲಿ ಭಾಷಣಗಳೇ ಒಂದು ಪಿಡುಗು ಆಗಿ ಪರಿಣಮಿಸಿದೆ‌. ಇತರ ಸಮಾಜದ ಮದ್ಯೆ ಬದುಕು ಸಾಗಿಸುವ ನಾವು ಅವರ ದೃಷ್ಟಿಯಲ್ಲಿ ಯಾವುದಕ್ಕೂ ಸಲ್ಲದವರು ಎಂಬ ಅಪ ಕೀರ್ತಿಯಿಂದ ಹೊರ ಬಂದು ಎಲ್ಲಾ ರೀತಿಯಲ್ಲಿಯೂ ಅಭಿಮಾನದ ಬದುಕು ಸಾಗಿಸಲು ಬೇಕಾದ ಪರ್ಯಾಯ ವ್ಯವಸ್ಥೆಯನ್ನು ರೂಪಿಸಲು ಮುಂದೆ ಬರಬೇಕಾಗಿದೆ.

ಪ್ರವಾದಿ(ಸ ಅ)ರವರ ಕಾಲದಲ್ಲಿ ಜಾರಿಯಲ್ಲಿ ಇಲ್ಲದಿದ್ದ ಕೆಲ ಸೈನಿಕ ಪದ್ದತಿ, ಕಚೇರಿ ವ್ಯವಸ್ಥೆ , ರೇಶನ್ ರಿವಾಜು ಮೊದಲಾದವುಗಳು ಉಮರ್ (ರ)ಕಾಲದಲ್ಲಿ ರೂಡಿಗೆ ಬಂದಿದ್ದು ಇದಕ್ಕೆ ಅವರು ರೋಮನ್ ಮತ್ತು ಪರ್ಶಿಯ ಸಾಮ್ರಾಜ್ಯದಲ್ಲಿ ಚಾಲ್ತಿಯಲ್ಲಿ ಇದ್ದದ್ದನ್ನು ಅನುಕರಣೆ ಮಾಡಿದ್ದರು ಎಂದ ಖತೀಬರು ಕಾಲದ ಬೇಡಿಕೆಗನುಸಾರವಾಗಿ ನಮ್ಮ ತಂತ್ರಗಾರಿಕೆಗಳು ಬದಲಾಗ ಬೇಕಿದ್ದು ಇದಕ್ಕೆ ನಾವು ಮುಂದಾಗದಿದ್ದರೆ ಮುಂದಿನ ತಲೆಮಾರು ನಮಗೆ ಹಿಡಿ ಶಾಪ ಹಾಕುವುದರಲ್ಲಿ ಸಂಶಯವೇ ಇಲ್ಲ.

ಇಂದು ಸಮಾಜದಲ್ಲಿ ಅಗರ್ಭ ಶ್ರೀಮಂತರ ದಂಡೇ ಇದ್ದು ಇವರ ಪೈಕಿ ಹೆಚ್ವಿನವರ ಪರಿಶ್ರಮ ಕೇವಲ ಮಡದಿ ಮಕ್ಕಳಿಗೆ ಮಾತ್ರ ಸಂದುತ್ತಿದೆ. ತಮ್ಮ ಮುಂದಿನ ತಲೆಮಾರಿಗೆ ಹಣವನ್ನು ಮಾತ್ರ ನೀಡಿ ಅಲ್ಲಿಗೆ ಎಲ್ಲವೂ ಮುಗಿಯಿತು ಎಂಬ ಇರಾದೆ ಹೊಂದಿದ್ದರೆ ಅಂತಹ ಭ್ರಮೆಯನ್ನು ಬಿಟ್ಟು ಬಿಡುವುದು ಒಳಿತು. ತಮ್ಮ ಶ್ರೀಮಂತಿಕೆ ಮತ್ತು ಉಲಮಾಗಳ ವಿದ್ಯೆ ಉತ್ತಮ ಸಮಾಜ ನಿರ್ಮಾಣದ ಹಾದಿಯಲ್ಲಿ ವಿನಿಯೋಗ ಗೊಂಡರೆ ಆಗ ಮಾತ್ರ ನಮ್ಮ ಮತ್ತು ಮುಂದಿನವರ ಬದುಕು ಶೋಭಾಯಮಾನ ಗೊಳ್ಳುತ್ತದೆ ಎಂದು ನುಡಿದರು.