ಒಂದು ವಾರದಿಂದ ತಟಸ್ಥಗೊಂಡ ತೈಲ ದರ: 5 ರಾಜ್ಯಗಳ ಚುನಾವಣೆ ಕಾರಣವೇ…?

0
430

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಜನವರಿಯಿಂದ ನಿರಂತರ ದೇಶದಲ್ಲಿ ಇಂಧನ ಬೆಲೆಯಲ್ಲಿ ಹೆಚ್ಚಳವಾಗುತ್ತಿತ್ತು. ಚುನಾವಣೆ ಘೋಷಣೆಯಾದ ಬಳಿಕ ತಾತ್ಕಾಲಿಕವಾಗಿ ಅದನ್ನು ತಡೆಯಲಾಗಿದೆ.

ಕೇಂದ್ರದ ಮಧ್ಯಪ್ರವೇಶದಿಂದ ತೈಲ ದರ ಹೆಚ್ಚಳ ಆಗಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2018ರಲ್ಲಿ ಕರ್ನಾಟಕ ಚುನಾವಣೆಗೂ ಮೊದಲು ಇಂಧನದ ಬೆಲೆ 55 ತಿಂಗಳಲ್ಲೇ ಅತೀ ಹೆಚ್ಚು ದರವಾಗಿತ್ತು. ಆದರೆ ಎಪ್ರಿಲ್ 24ರಿಂದ ಮೇ 13ರವರೆಗೆ ಇಂಧನ ಬೆಲೆ ತಾತ್ಕಾಲಿಕವಾಗಿ ಹೆಚ್ಚಳವಾಗದಂತೆ ತಡೆ ಹಿಡಿಯಲಾಗಿತ್ತು.

ಮತದಾನ ನಡೆದು ಎರಡು ದಿವಸದ ಬಳಿಕ ಪುನಃ ದೇಶದಲ್ಲಿ ಇಂಧನ ಬೆಲೆ ಹೆಚ್ಚಳವಾಗಿತ್ತು. ಕರ್ನಾಟಕದಲ್ಲಿ ಚುನಾವಣೆ ವಿಷಯದಲ್ಲಿ ಇಂಧನ ಬೆಲೆ ಹೆಚ್ಚಳವಾಗದಂತೆ ನೋಡಿಕೊಂಡ ಕ್ರಮವನ್ನು ಈಗಿನ ಒಂದು ವಾರದಿಂದ ಇಂಧನ ಬೆಲೆ ಹೆಚ್ಚಳವಾಗದ್ದನ್ನು ಸಮೀಕರಿಸಿ ನೋಡಲಾಗುತ್ತಿದೆ.

2018ಕ್ಕೆ ಸಮಾನವಾಗಿ ಒಂದು ವಾರದಿಂದ ಇಂಧನ ದರ ಹೆಚ್ಚಳವಾಗಿಲ್ಲ. ಆದರೆ ಕೇಂದ್ರದ ಮಧ್ಯಪ್ರವೇಶದಿಂದ ಹೀಗಾಗಿದೆ ಎಂಬ ವಾದವನ್ನು ತೈಲ ಕಂಪೆನಿಗಳು ನಿರಾಕರಿಸಿವೆ. ಸಾರ್ವಜನಿಕ ಹಿತ ಪರಿಗಣಿಸಿ ಬೆಲೆ ಹೆಚ್ಚಳವನ್ನು ನಿಯಂತ್ರಿಸಲಾಗಿದೆ ಎನ್ನಲಾಗಿದೆ. ಕೊರೋನದ ಲಾಕ್‍ಡೌನ್‍ನಿಂದ ಆರ್ಥಿಕ ವ್ಯವಸ್ಥೆ ತಾರುಮಾರಾದ್ದರಿಂದ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್‍ನ ಎಕ್ಸೈಸ್ ತೆರಿಗೆ ಎರಡು ಬಾರಿ ಭಾರೀ ಹೆಚ್ಚಳ ಮಾಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುವುದು ತೈಲ ಬೆಲೆ ಹೆಚ್ಚಳಕ್ಕೆ ಕಾರಣವೆಂದು ವಾದಿಸಲಾಗುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳ್ನಾಡು, ಪುದುಚೇರಿಯಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದು ಮಾರ್ಚ್ 27ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.