ಚಾರು ಗುಪ್ತಾ
ಇತರ ಧರ್ಮಗಳನ್ನು ನನ್ನದೇ ಎಂದು ಪ್ರೀತಿಸುವ ಮೂಲಕ ನಾನು ನನ್ನ ಹಿಂದೂ ಧರ್ಮವನ್ನು ವಿಸ್ತರಿಸಿದ್ದೇನೆ’ ಎಂದು ಗಾಂಧಿ ಹೇಳಿದ್ದರು. ಒಬ್ಬರು ಇನ್ನೊಬ್ಬರಿಗೆ ಗೌರವವನ್ನು ನೀಡುವ ಮೂಲಕ ಮತ್ತು ಇತರ ಧರ್ಮಗಳಿಂದ ಉತ್ತಮವಾದುದನ್ನು ಸೃಜನಾತ್ಮಕವಾಗಿ ಸೆಳೆಯುವ ಮೂಲಕ ಒಬ್ಬರು ಉತ್ತಮ ಹಿಂದೂ ಆಗಬಹುದು ಎಂದು ಅವರು ಹೇಳಿದ್ದರು. ಇದು ಇಂದಿನ ಹಿಂದುತ್ವ ರಾಜಕಾರಣಕ್ಕೆ ತದ್ವಿರುದ್ಧವಾಗಿದೆ. ಈ ಹಿಂದುತ್ವ ರಾಜಕಾರಣವು ಭಾರತವನ್ನು ಪ್ರತ್ಯೇಕವಾಗಿ ಹಿಂದೂ ಎಂದು ವ್ಯಾಖ್ಯಾನಿಸುವುದಲ್ಲದೆ, ಎಲ್ಲಾ ಭಾರತೀಯರು ಹಿಂದೂ ಧರ್ಮದ ನಿಯಮಗಳ ಅಡಿಯಲ್ಲಿ ಸೇರಿಕೊಳ್ಳಬೇಕೆಂದು ಬಯಸುತ್ತಾರೆ.
ಸ್ಪಷ್ಟವಾಗಿ, ಗಾಂಧಿಯವರು ಸ್ವಾತಂತ್ರ್ಯ ಚಳವಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಒಗ್ಗಟ್ಟು ತರಲು ಪ್ರಯತ್ನಿಸಿದರು. ಆದರೆ ಇಂದಿನ ಹಿಂದುತ್ವದ ರಾಜಕೀಯವು ಉಗ್ರಗಾಮಿ ಹಿಂದೂ ಕೋಮುವಾದವನ್ನು ಕೇಂದ್ರೀಕರಿಸಿದೆ. 1923 ರಲ್ಲಿ, ಆರ್ಯ ಸಮಾಜ ಮತ್ತು ಹಿಂದೂ ಮಹಾಸಭಾ ಉತ್ತರ ಭಾರತದಲ್ಲಿ, ವಿಶೇಷವಾಗಿ ಉತ್ತರಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಶುದ್ಧಿ (ಶುದ್ಧೀಕರಣ; ಹಿಂದೂ ಧರ್ಮದಿಂದ ಇತರ ಧರ್ಮಗಳಿಗೆ ಮತಾಂತರಗೊಂಡವರನ್ನು ಪುನಃ ಹಿಂದೂ ಧಾರಾಮಕ್ಕೆ ಮತಾಂತರಿಸುವ ಹಿಂದೂ ಚಳುವಳಿ) ಕಾರ್ಯಕ್ರಮವನ್ನು ಪ್ರಾರಂಭಿಸಿತು. ‘ಬಲಿಪಶುಗಳನ್ನು’ ಪುನಃ ಪಡೆದುಕೊಳ್ಳಲು ಮತ್ತು ‘ನಿಷ್ಠಾವಂತರನ್ನು’ ರಕ್ಷಿಸುವ ಚಳುವಳಿಯೆಂದು ಹೆಸರಿಸಲ್ಪಟ್ಟ ಇದು ಒಂದು ನಿರ್ದಿಷ್ಟ ಕೋಮು ಸ್ವಭಾವವನ್ನು ಹೊಂದಿತ್ತು. ಈ ಬಾರಿ ಯಾರು ಶುದ್ಧಿಯನ್ನು ನಿರ್ವಹಿಸುವಲ್ಲಿ ವಿಫಲರಾದರೋ, ಅವರು ಯಾವಾಗಲೂ ಭ್ರಷ್ಟರಾಗಿರುತ್ತಾರೆ ಮತ್ತು ಜಗತ್ತು ಅವರನ್ನು ಖಂಡಿಸುತ್ತದೆ ಎಂದು ಆ ಚಳವಳಿ ಹೇಳಿಕೊಂಡಿತು. ಈ ಆಂದೋಲನವು ಅಹಿಂಸಾ ತತ್ವವನ್ನು ಟೀಕಿಸಿತು: ‘ಅಹಿಂಸಾ ಧರ್ಮೋಪದೇಶವು ಹಿಂದೂ ರಾಷ್ಟ್ರವನ್ನು ಸಡಿಲಗೊಳಿಸಿದೆ …. ನಮಗೆ ಗಾಂಧಿಯವರ ಅಗತ್ಯವಿಲ್ಲ. ಮಹಾಭಾರತದ ಶ್ರೀಕೃಷ್ಣನ ಬೋಧನೆಗಳನ್ನು ನಾವು ಅನುಸರಿಸಬೇಕು ಎಂದು ಕರೆಕೊಟ್ಟಿತು.
ಶುದ್ಧಿಯ ಬಗ್ಗೆ ತಮ್ಮ ಗಂಭೀರ ಆಕ್ಷೇಪವನ್ನು ವ್ಯಕ್ತಪಡಿಸಿದ ಗಾಂಧಿ 1924 ರಲ್ಲಿ ಹೀಗೆ ಬರೆದಿದ್ದಾರೆ: ‘ನನ್ನ ಅಭಿಪ್ರಾಯದಲ್ಲಿ, ಹಿಂದೂ ಧರ್ಮದಲ್ಲಿ ಮರು ಮತಾಂತರದಂತಹ ಯಾವುದೇ ವಿಷಯಗಳಿಲ್ಲ. ಈ ವಿಷಯದಲ್ಲಿ ಆಧುನಿಕ ವಿಧಾನವು ನನಗೆ ಇಷ್ಟವಾಗುವುದಿಲ್ಲ. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಇದು ಸ್ವಾರ್ಥ ಪ್ರವೃತ್ತಿಯ ಮನವಿಯಾಗಿ ಕಾಣಿಸುತ್ತದೆ… ನನ್ನ ತಿಳುವಳಿಕೆಯ ಪ್ರಕಾರ ಹೆಚ್ಹೋ ಕಡಿಮೆಯೋ ಎಲ್ಲಾ ಧರಮಗಳೂ ಸತ್ಯವೇ. ಆದರೆ ಎಲ್ಲರೂ ಅಪರಿಪೂರ್ಣರು. ಅವರು ಮತ್ತೆ ಹೀಗೆ ಹೇಳಿದರು: ‘ಶುದ್ಧಿ ಚಳವಳಿಯ ಮೂಲಕ ನಾವು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಹಿಂದೂಗಳಲ್ಲಿ ಸುಧಾರಣೆಗೆ ಅಡ್ಡಿಯಾಗುತ್ತೇವೆ. ಪ್ರಸ್ತುತ ಚಳವಳಿಗೆ ಸಂಪೂರ್ಣವಾಗಿ ತರ್ಕಬದ್ಧ ಆಧಾರವಿಲ್ಲ. ಇನ್ನೊಂದು ಉದಾಹರಣೆ: ಉತ್ತರ ಭಾರತದಲ್ಲಿ, ವಿಶೇಷವಾಗಿ 1880 ಮತ್ತು 1920 ರ ನಡುವೆ, ಗೌ ರಕ್ಷಿನಿ ಸಭೆಗಳು ಮತ್ತು ಗೌಶಾಲಗಳು ಪ್ರವರ್ಧಮಾನಕ್ಕೆ ಬಂದಾಗ ಹಸು ಹಿಂದೂ ರಾಷ್ಟ್ರದ ಪ್ರಬಲ ಮತ್ತು ಪವಿತ್ರ ಸಂಕೇತವಾಗಿ ಹೊರಹೊಮ್ಮಿತು ಮತ್ತು ಹಿಂಸಾತ್ಮಕ ಆಂದೋಲನಗಳು ಮತ್ತು ಗಲಭೆಗಳೊಂದಿಗೆ ಹಸು ಸಂರಕ್ಷಣಾ ಚಳುವಳಿಗಳು ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಗಾಂಧಿ ಹೀಗೆ ಹೇಳಿದರು: “ಹಸು ಬಲಿ ತ್ಯಜಿಸುವಂತೆ ಮುಸಲ್ಮಾನರನ್ನು ಬಲವಂತದಿಂದ ತಡೆಯಬಹುದೆಂದು ಹಿಂದೂಗಳು ಭಾವಿಸಬಾರದು. ಮುಸಲ್ಮಾನರೊಂದಿಗೆ ಸ್ನೇಹ ಬೆಳೆಸುವ ಮೂಲಕ, ಅವರು ತಮ್ಮದೇ ಆದ ಇಚ್ಚೆಯಿಂದ ಹಸು ಬಲಿ ಬಿಟ್ಟುಕೊಡುವಂತೆ ಮಾಡಬೇಕು. ಬಾಂಗ್ ಗೆ ಮುಂಚಿತವಾಗಿ ಸಂಗೀತ ಅಥವಾ ಆರತಿಯನ್ನು ನಿಲ್ಲಿಸುವಂತೆ ಹಿಂದೂಗಳನ್ನು ಮುಸ್ಲಿಮರು ಒತ್ತಾಯಿಸಬಾರದು.
ನನ್ನ ಮೂರನೆಯ ಉದಾಹರಣೆ ಗಾಂಧಿಯವರ ರಾಮರಾಜ್ಯದ ಬಗ್ಗೆ. ಈ ಪದವು ಯಾರನ್ನಾದರೂ ಕೆರಳಿಸಿದರೆ, ಅದನ್ನು ಧರ್ಮರಾಜ್ಯದೊಂದಿಗೆ ಬದಲಾಯಿಸಬಹುದು, ಅದಕ್ಕೆ ಬೇರೆ ಅರ್ಥವನ್ನು ನೀಡಬಹುದು ಮತ್ತು ಖಾದಿ, ಉಪ್ಪು ತೆರಿಗೆ ಪಾವತಿಸಲು ನಿರಾಕರಿಸುವುದು ಮತ್ತು ಸ್ವರಾಜ್ ಸೇರಿದಂತೆ ತನ್ನ ಸ್ವಾತಂತ್ರ್ಯದ ವಿಚಾರಗಳೊಂದಿಗೆ ಅದನ್ನು ಸಮನಾಗಿ ಸಮೀಕರಿಸಬಹುದು ಎಂದು ಅವರು ಹೇಳಿದ್ದಾರೆ. ಅವರು ರಾಮರಾಜ್ಯವನ್ನು “ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ನಿಂತಿರುವ ನೈತಿಕ ಸರ್ಕಾರ ಅಥವಾ ಸಾರ್ವತ್ರಿಕ ಧರ್ಮ” ಎಂದು ಘೋಷಿಸಿದರು ಮತ್ತು “ಬಡವರನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು, ಎಲ್ಲವನ್ನೂ ನ್ಯಾಯಯುತವಾಗಿ ತೀರ್ಮಾನಿಸಲಾಗುವುದು ಮತ್ತು ಜನರ ಧ್ವನಿ”ಯನ್ನು ಯಾವಾಗಲೂ ಗೌರವಿಸಲಾಗುವುದು” ಎಂದರು.
ಐಕಾನ್ ಎಂಬ ನೆಲೆಯಲ್ಲಿ ಗಾಂಧಿ ಎಲ್ಲಾ ಋತುಗಳ ವ್ಯಕ್ತಿಯಾಗಿದ್ದಾರೆ. ಇಂದಿನ ಹಿಂದುತ್ವ ರಾಷ್ಟ್ರೀಯತೆಯ ಕಾಲದಲ್ಲಿ ಅಹಿಂಸೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ವ್ಯಕ್ತಿಯಾಗಿ ಗಾಂಧೀ ಗೋಚರಿಸುತ್ತಾರೆ. ಅಂದಹಾಗೆ, ಧಾರ್ಮಿಕ ಪ್ರಜ್ಞೆಯ ಸರಳ ಖಂಡನೆಯಿಂದ ಕೋಮುವಾದವನ್ನು ಎದುರಿಸಲು ಸಾಧ್ಯವಿಲ್ಲ. ಭಿಖು ಪರೇಖ್ ವಾದಿಸಿದಂತೆ, ಗಾಂಧಿಯ ಹಿಂದೂ ಬೌದ್ಧಿಕ ದೃಷ್ಟಿಕೋನವು ಅದರ ಎಲ್ಲ ಮಿತಿಗಳನ್ನು ಒಳಗೊಂಡಂತೆ ಒಳಗಿನಿಂದ ಒಂದು ವಿಮರ್ಶೆಯನ್ನು ಗುರುತಿಸಿತು. ಇದು ಕೋಮು ತಿಳುವಳಿಕೆ ಹೇಗೆ ಆಳವಾಗಿ ಭ್ರಷ್ಟಗೊಂಡಿದೆ ಮತ್ತು ಅಂತಿಮವಾಗಿ ಧಾರ್ಮಿಕ ಪ್ರಜ್ಞೆಯ ನೈತಿಕತೆ ಮತ್ತು ಸಮಗ್ರತೆಯನ್ನು ಹೇಗೆ ನಾಶಪಡಿಸಿತು ಎಂಬುದನ್ನು ಒತ್ತಿಹೇಳುತ್ತದೆ.
ಸಂಕ್ಷೇಪಾನುವಾದ
ಕೃಪೆ: ನೇಷನಲ್ ಹೆರಾಲ್ಡ್












