ಸನ್ಮಾರ್ಗ ವಾರ್ತೆ
ಇಟಲಿಯ ವೆನಿಸ್ ನಗರದಲ್ಲಿ ನಡೆದ ಚಲನಚಿತ್ರ ಮೇಳದಲ್ಲಿ ದಿ ವಾಯ್ಸ್ ಆಫ್ ಹಿಂದ್ ರಜಬ್ ಎಂಬ ಚಿತ್ರಕ್ಕೆ ಪ್ರೇಕ್ಷಕರು ಎದ್ದುನಿಂತು 23 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ ಘಟನೆ ನಡೆದಿದೆ. ಇದು ಗಾಝಾದ ಐದು ವರ್ಷದ ಮಗುವಿನ ಕೊನೆಯ ಕ್ಷಣಗಳ ಆಧಾರದಲ್ಲಿ ನಿರ್ಮಿಸಿದ ಚಿತ್ರವಾಗಿದೆ. ಈ ಚಿತ್ರವನ್ನು ವೀಕ್ಷಿಸುತ್ತಾ ನೆರೆದವರ ಕಣ್ಣಾಲಿಗಳು ತುಂಬಿಹೋಗಿವೆ.
ಫೆಲೆಸ್ತೀನನ್ನು ಸ್ವತಂತ್ರಗೊಳಿಸಿ ಎಂಬ ಘೋಷಣೆಯು ಸಭೆಯಲ್ಲಿ ಮೊಳಗಿತು.
2024 ಜನವರಿ 29ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಂದ್ ರಜಬ್ ಹತ್ಯೆಗೀಡಾಗಿದ್ದಳು.ಆಕೆಯ ಕಥೆಯನ್ನು ಹೇಳುವ ಈ ಚಿತ್ರವನ್ನು ತುನಿಷಿಯ ಮೂಲದ ಕೌಸರ್ ಬೆನ್ ಹನಿಯ ಅವರು ನಿರ್ದೇಶಿಸಿದ್ದಾರೆ.
ಕುಟುಂಬದ ಜೊತೆಗೂಡಿ ಗಾಝಾದಿಂದ ಸುರಕ್ಷಿತ ಸ್ಥಳಕ್ಕೆ ಹೋಗುತ್ತಿರುವಾಗ ಹಿಂದ್ ಮತ್ತು ಆಕೆಯ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಇಸ್ರೇಲ್ ಯೋಧರ ಗುಂಡಿನ ದಾಳಿಗೆ ಹಿಂದ್ ಹೊರತುಪಡಿಸಿ ಕಾರಿನಲ್ಲಿದ್ದ ಎಲ್ಲರೂ ಹತ್ಯೇಗಿಡಾಗಿದ್ದರು. ಈ ಆಘಾತಕಾರಿ ಸಮಯದಲ್ಲಿ ಹಿಂದ್ ತನ್ನ ತಾಯಿಗೆ ಫೋನ್ ಮಾಡಿದ್ದಳು. ತನಗೆ ಸಹಾಯ ಮಾಡುವಂತೆ ಆ ಮಗು ಆಡಿದ ಮಾತು ಜಗತ್ತನ್ನೇ ದಿಗ್ಭ್ರಮಗೆ ಒಳಪಡಿಸಿತ್ತು. ಗಾಝಾದ ರೆಡ್ ಕ್ರೆಸೆಂಟ್ ಸೊಸೈಟಿಯ ಆಂಬುಲೆನ್ಸ್ ನ ಸಿಬ್ಬಂದಿ ಅವಳನ್ನು ಕಾರಿನಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದರು.
ಆದರೆ ಈ ಆಂಬುಲೆನ್ಸ್ ನ ಮೇಲೆಯೂ ಇಸ್ರೇಲ್ ಯೋಧರು, ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಈ ಸಿಬ್ಬಂದಿಗಳೂ ಹತ್ಯೆ ಗೀಡಾದರು. ದಿನಗಳ ಬಳಿಕ ಹಿಂದ್ ಎಂಬ ಮಗು ಮತ್ತು ಸಿಬ್ಬಂದಿಗಳು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದರು.
ಈ ಹಿಂದ್ ತನ್ನ ತಾಯಿಗೆ ಮಾಡಿದ ಕರೆ . ಸಿಬ್ಬಂದಿಗಳ ಜೊತೆ ಆಕೆ ಆಡಿದ ಮಾತಿನ ಆಡಿಯೋಗಳು ಈ ಸಿನಿಮಾದಲ್ಲಿ ಪ್ರದರ್ಶಿಸಲಾಗಿದೆ.
ಸಾಮಾನ್ಯ ನಾಗರಿಕರ ಮೇಲೆ ಅದರಲ್ಲೂ ಮಕ್ಕಳ ಮೇಲೆ ಯುದ್ಧ ಎಂತಹ ಆಘಾತಕಾರಿ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈ ಸಿನಿಮಾ ಹೇಳುತ್ತಿದೆ. ಅಸಹಾಯಕ ಜನರು ಮತ್ತು ಅವರ ಸಂಕಟಗಳಿಗೆ ಈ ಸಿನಿಮಾ ಧ್ವನಿಯಾಗಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ಆ ಕುಟುಂಬವನ್ನು ರಕ್ಷಿಸುವುದಕ್ಕೆ ಬಂದ ರೆಡ್ ಕ್ರೆಸೆಂಟ್ ಸಂಸ್ಥೆಯ ಸಿಬ್ಬಂದಿಗಳನ್ನು ಈ ಸಿನಿಮಾದಲ್ಲಿ ಪ್ರಶಂಸಿಸಲಾಗಿದೆ.












