ಪ್ರವಾಹ ಪೀಡಿತ ಪಂಜಾಬಿಗೆ ಹತ್ತು ವಾಹನಗಳಲ್ಲಿ ಪರಿಹಾರ ಸಾಮಗ್ರಿಯನ್ನು ಕಳುಹಿಸಿಕೊಟ್ಟ ಝೀನತುಲ್ ಉಲೂಮ್ ಮದ್ರಸ

0
396

ಸನ್ಮಾರ್ಗ ವಾರ್ತೆ

ಪಂಜಾಬ್‌ನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಇಲ್ಲಿಯ ಜನರಿಗೆ ನೆರವಾಗುವುದಕ್ಕಾಗಿ ಅಂಬಾಲಾ ಜಿಲ್ಲೆಯ ಮುಸ್ಲಿಂ ಸಮುದಾಯವು 10 ವಾಹನಗಳಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಿ ಕಳುಹಿಸಿ ಕೊಡುವ ಮೂಲಕ ಸೌಹಾರ್ದಕ್ಕೆ ಹೊಸ ಭಾಷ್ಯ ಬರೆದಿದೆ. ಅಂಬಾಲಾ ಜಿಲ್ಲೆಯ ನಂರಿಗಾಹ್ ಪ್ರದೇಶದ ಝೀನತುಲ್ ಉಲೂಮ್ ಮದ್ರಸವು ಈ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿಕೊಂಡಿತ್ತು. ಪಂಜಾಬಿನ ನಮ್ಮ ಸಹೋದರರಿಗೆ ನೆರವಾಗುವುದಕ್ಕಾಗಿ ನೆರವಾಗುವಂತೆ ಕೋರಿಕೊಂಡಿತ್ತು.

ಪಂಜಾಬ್ ಭೀಕರ ಪ್ರವಾಹಕ್ಕೆ ತುತ್ತಾಗಿರುವುದನ್ನು ನಾವು ಮಾಧ್ಯಮ ಸುದ್ದಿಗಳ ಮೂಲಕ ತಿಳ್ಕೊಂಡೆವು. ಸಾವಿರಾರು ಕುಟುಂಬಗಳು ಇದರಿಂದ ಸಂಕಟ ಪಡುತ್ತಿವೆ. ಅವರ ಬದುಕು ನಾಶವಾಗಿದೆ. ಅವರ ಬೆಳೆ ನಾಶವಾಗಿದೆ. ಅವರ ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾಗುವುದಕ್ಕೆ ನಾವು ನಿರ್ಧರಿಸಿದೆವು ಎಂದು ಮದರಸದ ಮುಖ್ಯಸ್ಥ ನಿಸಾರ್ ಅಹಮದ್ ಹೇಳಿದ್ದಾರೆ.

ಕಷ್ಟದ ಸಮಯದಲ್ಲಿ ಎಲ್ಲರೂ ಜೊತೆಗೂಡಬೇಕು ಎಂದು ಧರ್ಮವೂ ಹೇಳುತ್ತೆ. ಪಂಜಾಬಿನ ಸಂತ್ರಸ್ತರಿಗೆ ನೆರವಾಗಬೇಕೆಂದು ನಾವು ನಿರ್ಧರಿಸಿದ್ದೇವೆ ಎಂದು ಘೋಷಿಸಿದೆವು. ಜನರು ಭಾರಿ ಸಂಖ್ಯೆಯಲ್ಲಿ ಅದಕ್ಕೆ ಸ್ಪಂದಿಸಿದರು . ಮೂರು ಟ್ರಕ್ ಮತ್ತು ಏಳು ಪಿಕಪ್ ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟೆವು ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ 65 ರಿಂದ 70ರಷ್ಟು ಯುವಕರು ಈಗಾಗಲೇ ಪರಿಹಾರ ವಿತರಿಸುವುದಕ್ಕಾಗಿ ಪಂಜಾಬಿನ ಅಮೃತಸರಕ್ಕೆ ತಲುಪಿದ್ದಾರೆ. ಈ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡುವುದಕ್ಕಿಂತ ಮೊದಲು ಮುಸ್ಲಿಂ ಸಮುದಾಯವನ್ನು ನಾವು ಒಟ್ಟು ಸೇರಿಸಿದ್ದೇವೆ, ಪಂಜಾಬಿಗಳಿಗಾಗಿ ನಾವು ಪ್ರಾರ್ಥಿಸಿದ್ದೇವೆ ಎಂದು ಅವರು ಹೇಳಿದ್ದಾರೆ.