ಕ್ಲಾಸ್‌ನಿಂದ ಹೊರ ಹಾಕಿದ್ದಕ್ಕೆ ಅಧ್ಯಾಪಕನ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ

0
352

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತರಗತಿಯಲ್ಲಿ ಇತರ ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಂಡ ಹನ್ನೆರಡನೆ ತರಗತಿ ವಿದ್ಯಾರ್ಥಿ ಅಧ್ಯಾಪಕನ ಮೇಲೆ ಗುಂಡು ಹರಿಸಿದ ಘಟನೆ ಮುರುಡ್‍ನಗರದ ಖಾಸಗಿ ಕೇಂದ್ರೀಯ ವಿದ್ಯಾ ನಿಕೇತನ ಸ್ಕೂಲ್‍ನಲ್ಲಿ ನಡೆದಿದೆ. ಕಾಮರ್ಸ್ ಅಧ್ಯಾಪಕ ಸಚಿನ್ ತ್ಯಾಗಿ ಗಾಯಗೊಂಡಿದ್ದು ವಿದ್ಯಾರ್ಥಿ ಅಧ್ಯಾಪಕನಿಗೆ ಗುಂಡು ಹಾರಿಸಿದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಲಗೈಗೆ ಸ್ವಲ್ಪ ಗಾಯಗೊಂಡ ಅಧ್ಯಾಪಕ ಪೊಲೀಸರಿಗೆ ದೂರು ನೀಡಿದ್ದಾರೆ.

ತರಗತಿ ಕೋಣೆಯಲ್ಲಿ ಇತರ ಮಕ್ಕಳೊಂದಿಗೆ 17 ವರ್ಷದ ಹುಡುಗ ಅಸಭ್ಯವಾಗಿ ನಡೆದುಕೊಂಡಿದ್ದ. ಅವನಿಗೆ ಎಚ್ಚರಿಕೆ ನೀಡಿ ಹೊರಗೆ ಹಾಕಲಾಗಿತ್ತು. ಹೊರ ಹೋದ ಬಳಿಕ ಇಬ್ಬರು ಗೆಳೆಯರ ಜೊತೆ ವಿದ್ಯಾರ್ಥಿ ಗೇಟಿನ ಹೊರಗೆ ಕಾದು ನಿಂತು ಮೋಟಾರು ಸೈಕಲಿನಲ್ಲಿ ಬಂದ ಅಧ್ಯಾಪಕರನ್ನು ತಡೆದು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಗುಂಡು ಹಾರಿಸಿದ ಬಳಿಕ ತನ್ನಿಬ್ಬರು ಗೆಳೆಯರೊಂದಿಗೆ ವಿದ್ಯಾರ್ಥಿ ಅಲ್ಲಿಂದ ತಪ್ಪಿಸಿ ಓಡಿ ಹೋಗಿದ್ದ. ಗುಂಡು ಅಧ್ಯಾಪಕ ಸಮೀಪದಿಂದ ಹಾದು ಹೋಗುವುದು ಶಾಲೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆತನ ಸ್ನೇಹಿತರು ಅದೇ ಶಾಲೆಯ ವಿದ್ಯಾರ್ಥಿಗಳು ಎಂದು ಅಧ್ಯಾಪಕರು ತಿಳಿಸಿದ್ದು ಮೂವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.