ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ಸಹಿಸಲಸಾಧ್ಯವಾಗಿವೆ- ಶೋಭನಾ

0
552

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ವತಿಯಿಂದ ಆರ್ಟ್‌-ರೇಜ್ ಪ್ರತಿಭಟನೆ

ಸನ್ಮಾರ್ಗ ವಾರ್ತೆ

ಮಂಗಳೂರು:’ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರ್‌ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ ಕರ್ನಾಟಕದ ಮಂಗಳೂರು ಘಟಕವು ನಗರದ ಮಿನಿ ವಿಧಾನಸೌಧದ ಎದುರು ಆರ್ಟ್-ರೇಜ್ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಬುಧವಾರ ಸಂಜೆ ಹಮ್ಮಿಕೊಂಡಿತು.

ಜಾಗೃತಿ ಆಂದೋಲನಕ್ಕೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ರೇವತಿ ಚಾಲನೆ ನೀಡಿದರು. ರೋಶನಿ ನಿಲಯ ಕಾಲೇಜಿನ ನಿವೃತ್ತ ಉಪನ್ಯಾಸಕಿ ಶೋಭನಾ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಿವೃತ್ತ ಉಪನ್ಯಾಸಕಿ ಶೋಭನಾ, ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಲೇ ಇವೆ. ದೇಶದ ನಾಗರಿಕರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಕಚೇರಿ, ಕಾಲೇಜು, ರಸ್ತೆಯ ಕತ್ತಲೆಯಲ್ಲಿ ನಡೆಯುವುದಷ್ಟೇ ಅತ್ಯಾಚಾರವಲ್ಲ; ಬಹುತೇಕ ಮನೆಗಳಲ್ಲಿ ಅತ್ಯಾಚಾರ, ಕಿರುಕುಳ ನೀಡುತ್ತಿರುವುದು ಸಹಿಸಲಸಾಧ್ಯ. ಇದು ದೇಶವೇ ತಲೆ ತಗ್ಗಿಸುವ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕ ರಾಜ್ಯಾಧ್ಯಕ್ಷೆ ಉಮೈರಾ ಬಾನು ಮಾತನಾಡುತ್ತಾ, “ಈ ಅತಂತ್ರ ಪರಿಸ್ಥಿತಿಯಲ್ಲಿಯೂ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರಗಳ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕಾದ ಅವಶ್ಯಕತೆ ಇದೆ” ಎಂದರು. ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಕಾರ್ಯಕರ್ತೆಯರು ‘ಫ್ಲ್ಯಾಶ್ ಮೋಬ್’ ಮೂಲಕ ಮಹಿಳಾ ದೌರ್ಜನ್ಯ ಕುರಿತ ಜಾಗೃತಿ ಮೂಡಿಸಿದರು.

ಜಾಗೃತಿ ಆಂದೋಲನದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಕಾರ್ಯಕರ್ತೆ ಮಫಾಝಾ ಆಕರ್ಷಕ ವರ್ಣಚಿತ್ರ ಬಿಡಿಸಿದರು. ಆಯಿಶಾ ಹುದಾ ‘ಗಲ್ಸ್ ರೆವಲ್ಯುಷನ್”, ಸಲ್ಮಾ ಮಂಗಳೂರು ‘ಅವಳ ಧ್ವನಿ’ ಶೀರ್ಷಿಕೆಯ ಕವನಗಳನ್ನು ವಾಚಿಸಿದರು.

ಆಂದೋಲನದಲ್ಲಿ ‘ಅನುಪಮ’ದ ಸಂಪಾದಕಿ ಶಹನಾಯ್ ಎಂ., ತಬಸ್ಸುಮ್, ಸಮೀನಾ ಅಫ್ಸಾನ್ ಮತ್ತಿತರ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.