ಬೆಂಗಳೂರು,ಜೂ.10: ಪ್ರಸಿದ್ಧ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ 6:15ಕ್ಕೆ ನಿಧನರಾದರು. ಜ್ಞಾನಪೀಠ ಪ್ರಶಸ್ತಿ ಪಡೆದ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಕಾರ್ನಾಡ್ ಒಬ್ಬರು. ನಾಟಕಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಗಿರೀಶ್ ಸಿನೆಮಾ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದಾರೆ. ನಟ, ಚಿತ್ರಕತೆಗಾರ, ನಿರ್ದೇಶಕರಾಗಿಯೂ ದುಡಿದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಅವರನ್ನು ರಾಷ್ಟ್ರ ಗೌರವಿಸಿದೆ.
ಬಾದಲ್ ಸರ್ಕಾರ್, ಮೋಹನ್ ರಾಕೇಶ್, ವಿಜಯ್ ತೆಂಡುಲ್ಕರ್ ಜೊತೆ ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಕನ್ನಡದಲ್ಲಿ ಬರೆದ ಮೊದಲ ನಾಟಕ ಯಯಾತಿಯೂ ಹಯವದನನೂ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ತುಗ್ಲಕ್ ಅತಿಹೆಚ್ಚು ಪ್ರದರ್ಶನ ಕಂಡ ನಾಟಕವಾಗಿದೆ. ಜಾನಪದ ನಾಟಕ ಕ್ಷೇತ್ರದಲ್ಲಿ ಸಕ್ರಿಯ ಚಟುವಟಿಕೆಗಳಿಗಾಗಿ ಹೋಮಿಬಾಬ ಫೆಲೊಶಿಪ್ ಪಡೆದಿದ್ದಾರೆ.
ಅವರ ಸಂಸ್ಕಾರ ಸಿನೆಮಾ ಹೆಚ್ಚು ಗಮನ ಸೆಳೆದಿದೆ. ಇದರಲ್ಲಿ ಅವರು ಚಿತ್ರಕತೆ ಬರೆದು ನಟಿಸಿದ್ದಾರೆ. 1970ರಲ್ಲಿ ಹೊರಬಂದ ಸಿನೆಮಾ ರಾಷ್ಟ್ರಪ್ರಶಸ್ತಿ ಪಡೆಯಿತು. ವಂಶವೃಕ್ಷ ಸಿನೆಮಾ ನಿರ್ದೇಶಿಸಿದರು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಅವರು ಬಾಚಿಕೊಂಡರು. ಹಿಂದಿ ಸಿನೆಮಾ ಕ್ಷೇತ್ರದಲ್ಲಿ ಶ್ಯಾಂ ಬೆನಗಲ್ ಜೊತೆ ಕೆಲಸ ಮಾಡಿದರು. ನಂತರ ಸಿನೆಮಾ, ಟಿವಿ ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿದರು. ಶಶಿಕಪೂರ್ ಗಾಗಿ ಉತ್ಸವ ಸಿನೆಮಾ ನಿರ್ಮಿಸಿದರು. ಕರ್ನಾಟಕ ನಾಟಕ ಅಕಾಡಮಿ, ಕೇಂದ್ರ ಸಂಗೀತ, ನಾಟಕ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ದ ಪ್ರಿನ್ಸ್, ನಿಲಕುರಂಞ ಪೂತ್ತಪ್ಪೋಲ್ ಎಂಬ ಮಲೆಯಾಳಂ ಸಿನೆಮಾದಲ್ಲಿಯೂ ನಟಿಸಿದ್ದಾರೆ.












