ದಾಂಪತ್ಯದಲ್ಲಿ ಬಿರುಕುಂಟಾಗದಿರಲಿ

0
1704

ನದೀರಾ ಅನ್ವರ್

ಸಾಮಾನ್ಯವಾಗಿ ವಿವಾಹಕ್ಕಿಂತ ಮೊದಲು ವರ ಮತ್ತು ವರನ ಮನೆಯವರು ಭಾವೀ ವಧುವಿನ ಕೆಲವು ಬಯಕೆಗಳನ್ನು ವಿವಾಹದ ಬಳಿಕ ನೇರವೇರಿಸಿ ಕೊಡೋಣವೆಂದು ವಾಗ್ದಾನ ನೀಡುತ್ತಾರೆ. ಆದರೆ ವಿವಾಹದ ಬಳಿಕ ಮಾತು ಬದಲಿಸುವವರೇ ಸಮಾಜದಲ್ಲಿ ಅಧಿಕ. ಹೇಗೆಂದರೆ ಕಾಲೇಜಿಗೆ ಹೋಗುವ ಹುಡುಗಿಯಾದರೆ ವಿವಾಹದ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ಆಕ್ಷೇಪವಿಲ್ಲವೆಂದು ಹೇಳುತ್ತಾರೆ. ವಿವಾಹದ ಬಳಿಕ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಾರೆ. ಆ ಮೂಲಕ ಅಲ್ಲಿಯ ತನಕ ಅವಳು ಕಲಿತದ್ದೆಲ್ಲವೂ ವ್ಯರ್ಥವಾಗುವುದರ ಜೊತೆಗೆ ದಾಂಪತ್ಯ ಜೀವನದಲ್ಲಿಯೂ ಬಿರುಕು ಕಾಣಲಾರಂಭಿಸುತ್ತದೆ. ವಿವಾಹದ ಬಳಿಕ ವಧುವನ್ನು ಉದ್ಯೋಗಕ್ಕೆ ಕಳುಹಿಸಲು ಆಕ್ಷೇಪವಿಲ್ಲವೆಂದು ಹೇಳಿದ ಕೆಲವರು ವಿವಾಹದ ಬಳಿಕ ಆಕ್ಷೇಪವೆತ್ತುತ್ತಾರೆ. ನಾನು ಅವಳನ್ನು ಮದುವೆ ಮಾಡಿಕೊಂಡದ್ದು ಆಕೆಯನ್ನು ಉದ್ಯೋಗಕ್ಕೆ ಕಳುಹಿಸಲಿಕ್ಕಾ? ಅವಳು ಮಕ್ಕಳನ್ನು ನೋಡಿಕೊಂಡು ಮನೆ ಕೆಲಸ ಮಾಡಿಕೊಂಡಿರಲಿ ಎಂದು ಕೆಲ ಪುರುಷರು ಈಗಲೂ ತಗಾದೆ ತೆಗೆಯುತ್ತಾರೆ. ಪತ್ನಿಯ ಸಾಹಿತ್ಯಾಭಿರುಚಿ, ಕಲಾಭಿರುಚಿ, ಅವಳ ಆಟೋಟ ಸ್ಪರ್ಧೆಗಳ ಅಭಿರುಚಿಗೆ ತಡೆಹಾಕುವವರೂ ಇದ್ದಾರೆ. ಕೆಲವರು ವಿವಾಹಕ್ಕಿಂತ ಮೊದಲು ತಮ್ಮ ಶೈಕ್ಷಣಿಕ ವಿಧ್ಯಾಭ್ಯಾಸದ ಬಗ್ಗೆ ಪರಸ್ಪರ ಸುಳ್ಳು ಮಾಹಿತಿ ನೀಡಿ ವಿವಾಹದ ಬಳಿಕ ಅದು ಬಾಳಸಂಗಾತಿಗೆ ಅರಿವಾದಾಗ ದಾಂಪತ್ಯದಲ್ಲಿ ಬಿರುಕು ಕಾಣಲಾರಂಭಿಸುತ್ತದೆ.

ವೈಕ್ಕಮ್ ವಿಜಯಲಕ್ಷ್ಮೀಯವರ ಮದುವೆ

ಮಲಯಾಳಮ್ ಚಲನ ಚಿತ್ರ ರಂಗದ ಪ್ರಸಿದ್ದ ಹಿನ್ನೆಲೆ ಗಾಯಕಿ ವೈಕ್ಕಮ್ ವಿಜಯಲಕ್ಷ್ಮೀಯವರ ವಿವಾಹವು ಖ್ಯಾತ ಮಿಮಿಕ್ರಿ ಕಲಾವಿದ ಇಂಟೀರಿಯರ್ ಡಿಸೈನರ್ ಗುತ್ತಿಗೆದಾರ ಅನೂಪ್ ಜೊತೆ ಇತ್ತೀಚೆಗೆ ಜರಗಿತು. ಅನೂಪ್ ಸ್ವತಃ ಪ್ರೀತಿಸಿ ವಿಜಯಲಕ್ಷ್ಮೀಯವರನ್ನು ಮದುವೆಯಾಗಿದ್ದರು.

ಆದರೆ ಒಂದು ವರ್ಷ ಮೊದಲೇ ವಿಜಯಲಕ್ಷ್ಮೀಯವರ ಮದುವೆಯು ಸಂತೋಷ್ ಎಂಬ ಬೇರೊಬ್ಬ ಯುವಕನೊಂದಿಗೆ ನಿಶ್ಚಿತವಾಗಿತ್ತು. ಇದು ಕೇರಳೀಯರಿಗೆ ಬಹಳ ಸಂತೋಷ ವಾರ್ತೆಯಾಗಿತ್ತು. ಆದರೆ ಈ ಸಂತೋಷ ಹೆಚ್ಚು ಕಾಲ ನಿಲ್ಲಲಿಲ್ಲ. ಮೊದಲೇ ನಿಶ್ಚಯವಾದ ಈ ವಿವಾಹದಿಂದ ವಿಜಯಲಕ್ಷ್ಮೀ ಹಿಂದೆ ಸರಿದ ವಾರ್ತೆ ಕೇಳಿ ಬಂತು. ವಿವಾಹದ ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗದೆ, ಸಂಗೀತ ಅಧ್ಯಾಪಿಕೆಯಾಗಿ ತರಬೇತಿ ನೀಡಿ ಉದ್ಯೋಗ ನಿರ್ವಹಿಸಿದರೆ ಸಾಕು. ವಿವಾಹದ ಬಳಿಕ ತನ್ನ ಮನೆಯಲ್ಲಿರಬೇಕೆಂದು ಮೊದಲು ಸಂತೋಷ್ ವಾಗ್ದಾನವಿತ್ತಿದ್ದ. ಬಳಿಕ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಬೇಕೆಂದು ಆತ ಒತ್ತಾಯಿಸಿದ್ದನೆಂದು ವಿಜಯಲಕ್ಷ್ಮೀ ಆರೋಪಿಸಿದ್ದರು.
ಸಂಗಾತಿಯ ಆಸೆಗಳಿಗೆ ತಡೆಯಾಗುತ್ತದೆ. ಪತ್ನಿಯಾಗಿರುವಾಗ ಹಲವು ಹೆಣ್ಮಕ್ಕಳು ಪತಿಯಂದಿರ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕುತ್ತಾರೆ. ಒಂದು ಮನೆಯ ಯಜಮಾನ ವಿದೇಶದಲ್ಲಿದ್ದ. ಆತನಿಗೆ ಮೆಲೋಡಿ ಹಾಡುಗಳನ್ನು ಆಲಿಸುವುದರ ಬಗ್ಗೆ ಅಪಾರ ಆಸಕ್ತಿ. ಆದರೆ ಆಕೆ ಮತ್ತು ಮಕ್ಕಳಿಗೆ ಪಾಶ್ಚಾತ್ಯ ಶೈಲಿಯ ಸಂಗೀತದಲ್ಲಿ ಆಸಕ್ತಿ. ಪತಿ ವಿದೇಶದಿಂದ ಮನೆಗೆ ಮರಳುವಾಗ ಮನೆಯಲ್ಲಿದ್ದ ಮೆಲೋಡಿ ಹಾಡುಗಳ ಸಿಡಿಗಳನ್ನು ಪಕ್ಕದ ಮನೆಯವರಿಗೆ ನೀಡಿದಳು.

ದಾಂಪತ್ಯ ಜೀವನದಲ್ಲಿ ಮಹಿಳೆಗೂ ಪುರುಷರಿಗೂ ಸಮಾನ ಹಕ್ಕುಗಳಿವೆಯೆಂಬುದನ್ನು ಸ್ಮರಿಸಿರಿ. ಪರಸ್ಪರ ಅಭಿರುಚಿಗಳು, ಆಸಕ್ತಿಗಳನ್ನೂ ಹಕ್ಕುಗಳನ್ನೂ ನಿಷೇಧಿಸುವಂತಹ ಪ್ರಕ್ರಿಯೆಯಲ್ಲಿ ತೊಡಗಿ ತಾನು ಇಷ್ಟ ಪಟ್ಟದ್ದನ್ನು ಸಂಗಾತಿಯ ಮೇಲೆ ಹೇರುವ ಪ್ರಯತ್ನಗಳು ದಾಂಪತ್ಯ ಜೀವನದ ಬುಡವನ್ನೇ ಅಲ್ಲಾಡಿಸುತ್ತದೆ. ದಾಂಪತ್ಯವೆಂಬುದು ಹೆಚ್ಚಿನ ಜನರ ಜೀವನದ ಅವಿಭಾಜ್ಯ ಘಟಕವಾದರೂ ಬದಲಾಗುತ್ತಿರುವ ಪ್ರಸಕ್ತ ಕಾಲದಲ್ಲಿ ಹಲವು ವಿಜಯದ ದಡ ತಲುಪುತ್ತಿಲ್ಲವೆಂಬುದು ವಾಸ್ತವವಾಗಿದೆ. ಮಾನಸಿಕ, ದೈಹಿಕ ಮತ್ತು ಆರ್ಥಿಕವಾದ ಘಟಕಗಳು ದಾಂಪತ್ಯ ಜೀವನ ವಿಫಲವಾಗಲು ಕಾರಣವಾಗುತ್ತದೆ.

ಸಾಮಾಜಿಕ ಜಾಲತಾಣಗಳ ಪ್ರಭಾವ

ವ್ಯಾಟ್ಸ್ ಆಪ್ ಮತ್ತು ಫೇಸ್‍ಬುಕ್ ಮುಖಾಂತರ ಪತಿ-ಪತ್ನಿಯರು ಪರಸ್ಪರ ತಡೆಯುವುದು, ಪತ್ನಿ ಅನ್ಯ ಪುರುಷರೊಂದಿಗೆ ಪತಿ ಅನ್ಯಸ್ತ್ರೀಯರೊಂದಿಗೆ ಮಾತುಕತೆಯಲ್ಲಿ ನಿರತರಾಗುವುದರ ವಿರುದ್ದ ಏಳುವ ಅಸಹನೆ ಸಮಸ್ಯೆಗಳಿಗೆ ಕಾರಣವಾಗುತ್ತದೆಯೆಂಬುದು ಅನೇಕ ಕೌನ್ಸಿಲಿಂಗ್‍ನ ಅನುಭವಗಳಿಂದ ವೇದ್ಯವಾಗುತ್ತದೆ. ಮಾನಸಿಕವಾಗಿ ಮತ್ತು ಎಲ್ಲಾ ಅರ್ಥದಲ್ಲಿ ಆಗುವ ಈ ಅಗಲಿಕೆಯನ್ನು ಆರಂಭದಲ್ಲಿ ಯಾರೂ ಅಷ್ಟು ಗಮನಿಸುವುದಿಲ್ಲ. ಹೊರಗೆ ಬಹಳ ಸಂತುಷ್ಟರಂತೆ ಕಾಣುವ ಹಲವರ ಜೀವನದಲ್ಲಿ ಈ ಕಹಿ ಅನುಭವ ಇರುತ್ತದೆ. ಮಾನಸಿಕವಾದ ಐಕ್ಯತೆಯಲ್ಲಿ ಕೊರತೆ ಕಂಡು ಬರುವುದು, ಮುಕ್ತ ಮಾತುಕತೆ ಇಲ್ಲವಾಗುವುದು. ಸಂಗಾತಿಯ ಬದುಕಿನಲ್ಲಿ ನಡೆಯುವ ವಿಚಾರಗಳನ್ನು ಪರಸ್ಪರ ತಿಳಿಯದಿರುವುದು, ಪರಸ್ಪರ ಮಾತುಕತೆ ಚರ್ಚೆಯು ಜಗಳದತ್ತ ಸಾಗುವುದು, ಪರಸ್ಪರ ಚರ್ಚೆ ಮಾಡದೆ ಸ್ವಯಂ ತೀರ್ಮಾನಿಸುವುದು, ಪರಸ್ಪರ ಒಪ್ಪಿಕೊಳ್ಳದಂತಹ ಪರಿಸ್ಥಿತಿಯ ನಿರ್ಮಾಣ, ಪತಿಗೆ ಪತ್ನಿಯ ಕುಟುಂಬವನ್ನೂ ಪತ್ನಿಗೆ ಪತಿಯ ಕುಟುಂಬದವರ ಬಗ್ಗೆ ಅಸಹನೆ ಉದ್ಭವವಾಗುತ್ತದೆ. ಲೈಂಗಿಕ ಸಂಬಂಧದಲ್ಲಿ ಆಸಕ್ತಿಯಿಲ್ಲವಾಗುವುದು, ವೈಯುಕ್ತಿಕವಾಗಿಯೂ ಕೌಟುಂಬಿಕವಾಗಿಯೂ ಪರಸ್ಪರ ಅಸಹಕಾರ ಹೆಚ್ಚಾಗುವುದು, ಪ್ರತಿಯೊಬ್ಬರಿಗೂ ವ್ಯಯವಾದ ಖರ್ಚುವೆಚ್ಚಗಳನ್ನು ಆಗಾಗ ಹೇಳಿಕೊಳ್ಳುವುದು, ಇವೆಲ್ಲವೂ ಯಾರದೇ ಜೀವನದಲ್ಲಿದೆಯೆಂದಾದರೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವತ್ತ ಸಾಗಿದೆಯೆಂಬುದನ್ನು ಗಮನಿಸಬೇಕು. ಈರ್ವರ ಮನಸ್ಸುಗಳು ಒಂದಾದರೆ ಮಾತ್ರ ಜೀವನವು ಯಶಸ್ಸಿನತ್ತ ಸಾಗುತ್ತದೆ.

ವಿವಾಹ ವಿಚ್ಚೇದನಕ್ಕೆ ಪೂರಕವಾದ ವಿಚಾರಗಳು

ಸಾಮಾನ್ಯವಾಗಿ ಕ್ಷುಲ್ಲಕ ವಿಚಾರಗಳಿಗೆ ಇಂದು ವಿವಾಹ ವಿಚ್ಚೇದನಗಳು ಸಮಾಜದಲ್ಲಿ ನಡೆಯುತ್ತಿವೆ. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಈಗೋ ನುಸುಳದಂತೆ ಎಚ್ಚರ ವಹಿಸಬೇಕು. ಈರ್ವರೂ ಜೀವನದ ಯಶಸ್ಸಿಗಾಗಿ ಒಂದಾಗಿ ಪ್ರಜ್ಞಾವಂತಿಕೆಯಿಂದ ಕಾರ್ಯಪ್ರವೃತ್ತರಾಗುವುದು ಇದಕ್ಕಿರುವ ಪರಿಹಾರೋಪಾಯವಾಗಿದೆ, ಮೂರನೇ ಪಕ್ಷವು ದಾಂಪತ್ಯಕ್ಕೆ ನಿಜವಾದ ವಿಲನ್ ಆಗಿದೆ, ಅದು ನುಸುಳಿ ಬರದಂತೆ ಎಚ್ಚರವಹಿಸಬೇಕು. ಸಹಾಯಕನಾಗಿ ಅಥವಾ ಗೆಳೆಯ, ಗೆಳತಿಯಾಗಿ ಬಂದು ಪತಿ ಅಥವಾ ಪತ್ನಿಯ ಜೊತೆ ದೈಹಿಕ ಸಂಬಂಧದವರೆಗೆ ಬೆಳೆದು ದಾಂಪತ್ಯ ಜೀವನವನ್ನು ಸಂಪೂರ್ಣ ಕೆಡಿಸಿದ ಎಷ್ಟೋ ಘಟನೆಗಳು ನಿತ್ಯ ಜೀವನದಲ್ಲಿ ಕೇಳಿ ಬರುತ್ತಿದೆ. ಲೈಂಗಿಕತೆ ದಾಂ ಪತ್ಯ ಜೀವನದ ತಳಹದಿಯಾಗಿದೆ. ಲೈಂಗಿಕ ಅಸಂತೃಪ್ತಿ ಕೂಡಾ ವಿವಾಹ ವಿಚ್ಛೇದನಕ್ಕೆ ಕಾರಣವಾದದ್ದಿದೆ. ಮಾನಸಿಕವಾದ ಸ್ನೇಹ ಪ್ರೀತಿ ಇದ್ದರೆ ಮಾತ್ರ ಜೀವನದಲ್ಲಿ ಸುಖಮಯವಾದ ಲೈಂಗಿಕ ಸಂಬಧಗಳು ಸಾಧ್ಯವಾಗುವುದು.

ಪರಸ್ಪರ ವಿಶ್ವಾಸ ಮತ್ತು ಗೌರವದ ಅಗತ್ಯವಿದೆ

ಪತಿ-ಪತ್ನಿಯರಲ್ಲಿ ಸರಿಯಾದ ರೀತಿಯಲ್ಲಿ ಪರಸ್ಪರ ಅಭಿಪ್ರಾಯ ವಿನಿಮಯ ಇರಬೇಕು. ಅದು ಬಹಳ ಅಗತ್ಯವಾಗಿದೆ. ದಾಂಪತ್ಯ ಸಂಬಂಧಗಳಲ್ಲಿ ಕುಟುಂಬದ ಸದಸ್ಯರ ಬೆರೆಯುವಿಕೆ ಗೌರವವಾಗಿ ಪರಿಗಣಿಸಬೇಕು. ಪರಸ್ಪರ ವಿಶ್ವಾಸ ಮತ್ತು ಗೌರವ ಈರ್ವರ ಸಾಮಥ್ರ್ಯವನ್ನು ಪ್ರೋತ್ಸಾಹಿಸುವುದು ಮತ್ತು ಅದನ್ನು ಕ್ರಿಯಾತ್ಮಕಗೊಳಿಸಲು ಸಂಗಾತಿಗಳು ಪರಸ್ಪರ ಸಿದ್ಧವಾಗಬೇಕು. ತನ್ನ ಜೀವನದ ಅರ್ಧಾಂಗಿ ಎಂಬ ನೆಲೆಯಲ್ಲಿ ಪರಸ್ಪರ ವ್ಯವಹರಿಸಿದರೆ ದಾಂಪತ್ಯ ಜೀವನವು ಸುಖಮಯಗೊಳ್ಳುವುದರಲ್ಲಿ ಸಂಶಯವಿಲ್ಲ.