ಶುಕ್ರವಾರ ಅಂಗಡಿಗಳನ್ನು ಬಂದ್‌ ಮಾಡುವಂತೆ ಮುಸ್ಲಿಮರಲ್ಲಿ ಜ್ಞಾನವಾಪಿ ಮಸೀದಿ ಸಮಿತಿ ಮನವಿ

0
11202

ಸನ್ಮಾರ್ಗ ವಾರ್ತೆ

ಲಕ್ನೋ: ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ ಪೂಜೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಶುಕ್ರವಾರದಂದು ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಮಸೀದಿ ನಿರ್ವಹಣಾ ಸಮಿತಿ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಮುಸ್ಲಿಮರಿಗೆ ಮನವಿ ಮಾಡಿದೆ.

ಕಳೆದ ಬುಧವಾರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂಗಳಿಗೆ ಪೂಜೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ನಮಾಜ್‌ಗೆ ಮುಂಚಿತವಾಗಿ ವಾರಣಾಸಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದಾರೆ. 

ಮಸೀದಿಯ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಶುಕ್ರವಾರ ನಮಾಝ್ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಡೆ ಧ್ವಜ ಮೆರವಣಿಗೆ ನಡೆಸುವುದರೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರಜ್ಞಾ ಪಾಠಕ್ ತಿಳಿಸಿದ್ದಾರೆ.

ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದೆ. 

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರ ಮುಂದೆ ಹಿರಿಯ ವಕೀಲ ಎಸ್‍ಎಫ್‍ಎ ನಖ್ವಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ವಿಷಯವನ್ನು ತುರ್ತು ಪಟ್ಟಿಯಲ್ಲಿ ಸೇರಿಸಲು ರಿಜಿಸ್ಟ್ರಾರ್ ಬಳಿಗೆ ಹೋಗುವಂತೆ ನ್ಯಾಯಮೂರ್ತಿ ಸೂಚಿಸಿದ್ದಾರೆ. ಅದರಂತೆ ವಕೀಲ ನಖ್ವಿ ಪ್ರಕರಣವನ್ನು ತುರ್ತು ಪಟ್ಟಿ ಸೇರಿಸುವಂತೆ ರಿಜಿಸ್ಟ್ರಾರ್‍ ಗೆ ಮನವಿ ಮಾಡಿದ್ದಾರೆ. ಸದ್ಯದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.