ಗೋಡ್ಸೆಯ ಸಿನೆಮಾವನ್ನು ಕೇಂದ್ರ ಸರಕಾರ ನಿಷೇಧಿಸುವುದೇ?: ಅಸದುದ್ದೀನ್ ಉವೈಸಿ ಸವಾಲು 

0
151

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿದ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಸವಾಲು ಹಾಕಿದ್ದಾರೆ. “ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತ ಮುಂಬರುವ ಚಲನಚಿತ್ರವನ್ನು ಕೇಂದ್ರ ಸರ್ಕಾರವೂ ನಿಷೇಧಿಸುತ್ತದೆಯೋ?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು “ಗಾಂಧಿಯನ್ನು ಹತ್ಯೆಗೈದ ಗೋಡ್ಸೆ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು. “ಗೋಡ್ಸೆ ಕುರಿತು ಚಿತ್ರ ಬರುತ್ತಿದೆ. ಪ್ರಧಾನಿಯವರು ಇದನ್ನು ನಿಷೇಧಿಸುತ್ತಾರೆಯೇ? ಜನವರಿ 30 ರಂದು ಮಹಾತ್ಮ ಗಾಂಧಿಯವರ ಹುತಾತ್ಮ ದಿನದ ಮೊದಲು ಗೋಡ್ಸೆ ಚಿತ್ರವನ್ನು ನಿಷೇಧಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ” ಎಂದು ಓವೈಸಿ ಪ್ರತಿಕ್ರಿಯಿಸಿದರು‌.

ಕಳೆದ ಮಂಗಳವಾರ, ಬಿಬಿಸಿ ‘ಇಂಡಿಯಾ ದಿ ಮೋದಿ ಕ್ವೆಶ್ಶನ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಇದು ಗುಜರಾತ್ ಹತ್ಯಾಕಾಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರ ಹೊಣೆ ಎಂದು ಪ್ರತಿಪಾದಿಸುತ್ತದೆ. ಇದರ ಬೆನ್ನಲ್ಲೇ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರ ಅದನ್ನು ಟ್ವಿಟರ್ ಮತ್ತು ಯೂಟ್ಯೂಬ್ ನಿಂದ ತೆಗೆದುಹಾಕಿದೆ. ವಿರೋಧ ಪಕ್ಷಗಳು ಮತ್ತು ನಾಯಕರು ಇದರ ವಿರುದ್ಧ ಹರಿಹಾಯ್ದಿದ್ದು, ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಪರ್ಯಾಯ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.