ಹೊಸ ಅವತಾರದಲ್ಲಿ ಮತ್ತೆ ಕಾಣಿಸಿಕೊಂಡ ಗೋಲಿ ಸೋಡಾ

0
1373

ಸನ್ಮಾರ್ಗ ವಾರ್ತೆ

ಲೇಖಕರು:ಇಸ್ಮತ್ ಪಜೀರ್

ಗೋಲಿ ಸೋಡಾ ಎಂದರೆ ನನಗೆ ಹಿಂದಿನಿಂದಲೂ‌ ವಿಚಿತ್ರ ಮೋಹ. ಅದೊಂದು ರಮಝಾನ್ ತಿಂಗಳು. ಬಹುಶಃ ನಾನು ಮೂರನೇ ತರಗತಿಯಲ್ಲಿದ್ದೆನೇನೋ. ನಾನು ಉಳ್ಳಾಲ ಮಂಚಿಲದ ಅಜ್ಜಿಯ ಮನೆಯಿಂದಲೇ ಶಾಲೆಗೆ ಹೋಗುತ್ತಿದ್ದೆ.
ಅಜ್ಜಿಯ ಮನೆಗೆ ಅಮ್ಮ ಇಫ್ತಾರ್‌ಗೆಂದು ಬಂದಿದ್ದರು. ಈದ್ ದಿನ ಸನಿಹವಿತ್ತು. ಮರುದಿನ ಅಮ್ಮ ಪಜೀರಿನ ನಮ್ಮ ಮನೆಗೆ ಹೊರಟಾಗ ಹಬ್ಬಕ್ಕಿನ್ನು ಎರಡು ದಿನಗಳಲ್ವಾ…ಶಾಲೆಗೆ ಹೋಗದಿದ್ದರೆ ಪರವಾಗಿಲ್ಲ ಎಂದು ಅಮ್ಮನೊಂದಿಗೆ ನನ್ನನ್ನು ಪಜೀರಿಗೆ ಕರಕೊಂಡು ಬಂದರು.

ಅಮ್ಮ, ಅಜ್ಜಿ ಬೇಡ ಬೇಡವೆಂದರೂ ಗಲಾಟೆ ಮಾಡಿ ಉಪವಾಸ ಹಿಡಿದಿದ್ದೆ. ಸೂರ್ಯ ನೆತ್ತಿಗೇರುವುದಕ್ಕಿಂತ ತುಸು ಮುಂಚೆ ನಾನು, ಅಮ್ಮ ಮತ್ತು ತಂಗಿ ಅಜ್ಜಿ ಮನೆಯಿಂದ ಮನೆಗೆ ಹೊರಡುವ ಮುನ್ನ ಉಪವಾಸ ಬಿಡು ಎಂದು ಎಷ್ಟೇ ಒತ್ತಾಯಿಸಿದರೂ ನಾನು ಬಿಡಲೇ ಇಲ್ಲ. ಕೊಣಾಜೆಯಲ್ಲಿ ಬಸ್ಸಿಳಿಯುವಾಗ ಮಟ ಮಟ ಮಧ್ಯಾಹ್ನ. ಬಸ್ಸಿಳಿದು ನಮ್ಮ ಮನೆ ತಲುಪಬೇಕೆಂದರೆ ಒಂದೂವರೆ ಕಿಲೋ ಮೀಟರ್ ನಡೆಯಬೇಕು. ಕೊಣಾಜೆಯಿಂದ ಪಜೀರು ಪದವು ತಲುಪುವಾಗ ರಾಮ ಪೂಂಜಾರ ಅಂಗಡಿಯ ಹೊರಗೆ ಇಟ್ಟಿದ್ದ ಗೋಲಿ ಸೋಡಾದ ಬಾಟಲಿ ಕಂಡ ಕೂಡಲೇ.. ಅಮ್ಮನ ಬುರ್ಖಾದ ತುದಿ ಹಿಡಿದೆಳೆದು “ಸೋಡಾ ಕೊಟ್ಟರೆ ಉಪವಾಸ ಬಿಡುವೆ..” ಎಂದು ರಚ್ಚೆ ಹಿಡಿದಿದ್ದೆ.

ಅಂದು ಗೋಲಿ‌ ಸೋಡಕ್ಕೆ ಒಂದು ರೂಪಾಯಿಯೇನೋ ಇದ್ದಿರಬಹುದು. ನನ್ನ ವಿಧವೆ ಅಮ್ಮನಿಗೆ ಆ ಕಾಲಕ್ಕೆ ಒಂದು ರೂಪಾಯಿಯಾದರೂ ಬಹಳ ಅಮೂಲ್ಯ. ಸೊಂಟ ಮುರಿದಯುವ ಪರಿವೆಯಿಲ್ಲದೇ ಕುಳಿತು ಬೀಡಿ ಕಟ್ಟಿಯೇ ಆಗಬೇಕು.ಆದರೆ ಶ್ರೀಮಂತನೇ ಆಗಿದ್ದ ಅಜ್ಜ ಮೂಸಾಕ ಮಗಳು ಮನೆಗೆ ಹೋದಾಗೆಲ್ಲಾ ದುಡ್ಡು ಕೊಡುವುದಿತ್ತು.‌ಅಂದು ಅಮ್ಮನಿಗೆ ಅಜ್ಜ ದುಡ್ಡು ಕೊಟ್ಟದ್ದು ನೋಡಿದ್ದೆ.

ನಾನು ಸೋಡ ಕೊಡಿಸೆಂದು ಕೇಳಿದಾಗ ಅಮ್ಮ; ” ಬೇಡ ಮಗಾ, ಮನೆಗೆ ಹೋಗಿ ಸೋಜಿ ಮಾಡಿ ಕೊಡುತ್ತೇನೆಂದು ಎಷ್ಟೇ ಪುಸಲಾಯಿಸಿದರೂ ನಾನು ರಸ್ತೆಯಲ್ಲೇ ಕೂತು ಸೋಡ ಕೊಡಿಸಲೇಬೇಕೆಂದು ಹಟ ಹಿಡಿದೆ. ಕೊನೆಗೂ ಅಮ್ಮ ಸೋಲೊಪ್ಪಿಕೊಂಡು ಸೋಡಾ ಕೊಡಿಸಿದರು. ಅಷ್ಟು ಹೊತ್ತು ಉಪವಾಸ ಬಿಡಲಾರೆ ಎಂದು ಹಠ ಹಿಡಿದವನ ನಿಯ್ಯತ್ತು ರಾಮ ಪೂಂಜಾರ ಅಂಗಡಿಯ ಸೋಡಾದ ಬಾಟಲಿ ಕಂಡಾಗ ಕೆಟ್ಟು ಬಿಟ್ಟಿತ್ತು..

ಮಂಚಿಲದ ನಮ್ಮ ಮನೆಯ ಪಕ್ಕ ಸಿದ್ದೀಕಾಕ ಎಂಬವರ ಗೋಲಿ ಸೋಡಾದ ಅಂಗಡಿಯಿತ್ತು. ಅಜ್ಜ ಮೂಸಾಕನಿಗೆ ಬೀಡಿ ಸೇದುವ ಚಟವಿತ್ತು. ಆಗ ಬೀಡಿಯ ಕಟ್ಟೊಂದಕ್ಕೆ ಐವತ್ತು ಪೈಸೆ ಕ್ರಯವಿತ್ತು. ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಬಳಿ ಒಂದು ಮನೆಯಲ್ಲಿ ಸುಪೀರಿಯರ್ ಕ್ವಾಲಿಟಿ ಬೀಡಿ ತಯಾರಿಸುತ್ತಿದ್ದರು.ಅಲ್ಲಿನ ನಶ್ಯಕ್ಕೆ ಆ ಕಾಲಕ್ಕೆ ಎಪ್ಪತ್ತೈದು ಪೈಸೆ ಬೆಲೆ. ಅಜ್ಜನಿಗೆ ಅದೇ ಸುಪೀರಿಯರ್ ಕ್ವಾಲಿಟಿ ನಶ್ಯವೇ ಆಗಬೇಕಿತ್ತು. ಪ್ರತೀ ಎರಡು ದಿನಕ್ಕೊಮ್ಮೆ ಅಜ್ಜ ನನ್ನಿಂದ ಎರಡು ಕಟ್ಟು ನಶ್ಯ ತರಿಸುತ್ತಿದ್ದರು. ಎರಡು ರೂಪಾಯಿ ಕೊಟ್ಟರೆ ಅದರಲ್ಲುಳಿದ ಐವತ್ತು ಪೈಸೆ ನನಗೆ ಬಕ್ಷೀಸು. ಹಾಗೆ ಎರಡು ಬಾರಿ ನಶ್ಯ ತರುವಾಗ ತಲಾ ಐವತ್ತು ಪೈಸೆಯಂತೆ ಒಂದು ರೂಪಾಯಿ ಬಕ್ಷೀಸು ಸಿಗುತ್ತಿತ್ತು. ಅದರಿಂದ ಸಿದ್ದೀಕಾಕನ ಅಂಗಡಿಯಿಂದ ಗೋಲಿ‌ ಸೋಡಾ ಕುಡಿಯುತ್ತಿದ್ದೆ.

ನನ್ನ ಹೈಸ್ಕೂಲ್ ದಿನಕ್ಕಾಗುವಾಗ ಸ್ಥಳೀಯ ಅಂಗಡಿಗಳಲ್ಲೆಲ್ಲಾ ಸಿಕ್ಸರ್, ಆಸರ್ ಮುಂತಾದ ಗೋಲಿ ರಹಿತ ಸೋಡಾ ಸಿಗತೊಡಗಿತ್ತು. ಪ್ರತೀ ಭಾನುವಾರ ಕ್ರಿಕೆಟ್ ಆಡಿ ಬಂದು ಎಲ್ಲರೂ ಸಿಕ್ಸರ್, ಆಸರ್‌ನಂತಹ ಗೋಲಿ‌‌ ರಹಿತ ಸೋಡಾ ಕುಡಿಯುತ್ತಿದ್ದರೆ ನಾನು ಮಾತ್ರ ಅದೇ ಗೋಲಿ ಸೋಡಕ್ಕೆ ಅಂಟಿಕೊಂಡಿದ್ದೆ.

ಗೋಲಿ ಸೋಡಾ ಎಲ್ಲೆಡೆ ಮರೆಗೆ ಸರಿದು ಸುಮಾರು ಹದಿನೈದು ವರ್ಷಗಳಾಗುತ್ತಾ ಬಂದರೂ ಶರಾಬು ಅಂಗಡಿಗಳಲ್ಲಿ ಮಾತ್ರ ಕೆಲ ವರ್ಷಗಳವರೆಗೂ ಲಭ್ಯವಿರುತ್ತಿತ್ತು. ನಾನು ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದಾಗ ಅಲ್ಲೇ ಪಕ್ಕದಲ್ಲೊಂದು ತೆಂಗಿನ ಸೋಗೆಯ ಶರಾಬು ಅಂಗಡಿಯಲ್ಲಿ ಸೋಡಾ ಇದ್ದುದನ್ನು ಕಂಡು ಮತ್ತೆ ಗೋಲಿ ಸೋಡಾದ ಮೋಹ ಹುಟ್ಟಿತ್ತು. ಪ್ರತೀದಿನ ಬೆಳಿಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆಲ್ಲಾ ಕಾಲೇಜಿಂದ ಹೊರಬಂದು ಯಾರೂ ಕಾಣುವುದಿಲ್ಲ ಎಂದು ಖಚಿತಪಡಿಸಿ ಶರಾಬು ಅಂಗಡಿಗೆ ನುಗ್ಗಿ ಗೋಲಿ ಸೋಡಾ ಕುಡಿದು ಬರುತ್ತಿದ್ದೆ. ನಾನು ಪ್ರತೀದಿನ ಶರಾಬು ಅಂಗಡಿಗೆ ಹೋಗುತ್ತಿದ್ದುದನ್ನು ಗಮನಿಸಿದ ಕಾಲೇಜಿನ ಸೀನಿಯರ್ ಮ್ಯಾನೇಜರ್ ನೆಲ್ಸನ್ ಎಂಬವರೊಬ್ಬರು ಗಮನಿಸುತ್ತಿದ್ದರು. ಒಮ್ಮೆ ನನ್ನನ್ನು ಅವರ ಕ್ಯಾಬಿನಿಗೆ ಕರೆಸಿ ನನಗೆ ಪ್ರದಕ್ಷಿಣೆ ಹಾಕುತ್ತಾ ನನ್ನನ್ನು ವಿಚಾರಿಸಿದರು “ನಿನಗೆ ಪ್ರತೀದಿನ ಶರಾಬು ಅಂಗಡಿಯಲ್ಲೇನು ಕೆಲಸ…?” ಯಾವತ್ತೂ ತನ್ನ ಆಸನದಲ್ಲಿ ಕೂತೇ ಮಾತನಾಡಿಸುತ್ತಿದ್ದ ಈ ಮನುಷ್ಯ ಈ ಬಾರಿ ನನಗೆ ಪ್ರದಕ್ಷಿಣೆ ಹಾಕುತ್ತಾ ವಿಚಾರಿಸಲು ಶರಾಬು ಅಂಗಡಿಯೇ ಕಾರಣವೆಂದು ನನಗೆ ಆಗ ಖಚಿತವಾಗಿತ್ತು.

ಇತ್ತೀಚೆಗಷ್ಟೇ, ನನ್ನ ಭಾವ ಮುಸ್ತಫಾ ಮಂಗಳೂರಿನ ರಾವ್ ಎಂಡ್ ರಾವ್ ಸರ್ಕಲ್ ಬಳಿಯ ಗೂಡಂಗಡಿಯೊಂದರಲ್ಲಿ ಈಗಲೂ‌ ಗೋಲಿ ಸೋಡ ಸಿಗುತ್ತದೆಯೆಂದಿದ್ದರು. ಮಂಗಳೂರಿಗೆ ಹೋದಾಗ‌ ಒಮ್ಮೆ ಕುಡಿಯಲೇಬೇಕೆಂದು ತೀರ್ಮಾನಿಸಿದ್ದೆ.

ಇಂದು ನಮ್ಮೂರಿನ ಸಿದ್ದೀಕನಂಗಡಿಯಲ್ಲಿ ಗೋಲಿ ಸೋಡಾ ಕಂಡಾಗ ಹೀಗೆ ಗೋಲಿಸೋಡಾದ ನೆನಪುಗಳೆಲ್ಲಾ ಮೊಗೆ ಮೊಗೆದು ಬರತೊಡಗಿದವು. ಹೌದು ಇದೀಗ ಹೊಸ ಮಾಡೆಲಲ್ಲಿ ಮತ್ತೆ ಗೋಲಿ ಸೋಡಾ ಬಂದಿದೆ. ಹಿಂದೆಲ್ಲಾ ಗೋಲಿ ಸೋಡಾದಲ್ಲಿ “ಸಪ್ಪೆ ಸೋಡಾ, ಜಿಂಜರ್ ಸೋಡಾ ಮತ್ತು ಸಿಹಿ ಸೋಡಾ ಎಂಬ ಮೂರು ವಿಧಗಳು ಮಾತ್ರವಿದ್ದರೆ ಈಗಿನ ಹೊಸ ಅವತಾರದಲ್ಲಿ ವೈಟ್ ಲೆಮನ್,ಕೋಲಾ,ಆರೆಂಜ್, ಜಿಂಜರ್ ಮತ್ತು ಪೈನಾಪಲ್‌ಗಳೆಂಬ ಐದು ಫ್ಲೇವರ್‌ಗಳಿವೆ. ನೀವೂ ಒಮ್ಮೆ ಟೇಸ್ಟ್ ಮಾಡಿ ನೋಡಿ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.