ಅಬ್ದುಲ್ ರಹ್ಮಾನ್ ಕಾಕ ಅವರ ದಾನ ಮತ್ತು ಇತಿಹಾಸದ ಎರಡು ಘಟನೆಗಳು: ನಮ್ಮ ನಡುವಿನ ಹಾಜಿ

0
674

ಸನ್ಮಾರ್ಗ ವಾರ್ತೆ

ಅಬ್ದುಸ್ಸಲಾಮ್ ದೇರಳಕಟ್ಟೆ

ಅರೇಬಿಯಾದ ಇತಿಹಾಸದಲ್ಲಿ ಒಂದು ಘಟನೆ ಈ ರೀತಿ ಉಲ್ಲೇಖಿಸಲ್ಪಟ್ಟಿದೆ. ಅಂದಿನ ಕಾಲದಲ್ಲಿ ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿದ್ದ ಓರ್ವ ವ್ಯಕ್ತಿ ಮತ್ತು ಪತ್ನಿ ಅರೇಬಿಯಾ ಮರುಭೂಮಿಯಲ್ಲಿ ವಾಸವಿದ್ದರು.ಅವರಿಗೆ ಪವಿತ್ರ ಹಜ್ಜ್ ಕರ್ಮವನ್ನು ನಿರ್ವಹಿಸಬೇಕೆಂಬ ಬಲವಾದ ಆಸೆ. ಅದಕ್ಕಾಗಿ ಅವರು ತಮ್ಮ ಆದಾಯದಿಂದ ಒಂದಿಷ್ಟು ಮೊತ್ತವನ್ನು ದಿನನಿತ್ಯ ಉಳಿತಾಯ ಮಾಡುತ್ತಿದ್ದರು.ಒಂದು ದಿನ ಅವರಿಗೆ ನೆರೆಮನೆಯಿಂದ ಮಾಂಸದ ಪದಾರ್ಥದ ಸುವಾಸನೆ ಮೂಗಿಗೆ ಬಡಿಯುತ್ತೆ. ಅವರು ನೇರವಾಗಿ ಆ ಮನೆಗೆ ಭೇಟಿಯಿತ್ತು ತಮಗೂ ಒಂದಿಷ್ಟು ಪದಾರ್ಥವನ್ನು ನೀಡುವಂತೆ ಭಿನ್ನವಿಸಿದರು. ಆದರೆ,

ಮನೆಯೊಡತಿ ಅವರೊಂದಿಗೆ ಹೇಳಿದಳು. ಈ ಪದಾರ್ಥದಿಂದ ನಿಮಗೆ ನೀಡುವುದರಲ್ಲಿ ನಮಗೆ ಯಾವುದೇ ಅಡ್ಡಿಯಿಲ್ಲ. ಆದರೆ ಇದರ ವಾಸ್ತವಿಕತೆಯನ್ನು ನಿಮಗೆ ಹೇಳದೆ ಇದ್ದರೆ ನಾನು ಅಪರಾದಿಯಾಗುವೆ. ಹಲವು ದಿನಗಳಿಂದ ಹೊಟ್ಟೆಗಿಲ್ಲದೆ ನಮ್ಮ ಮಕ್ಕಳು ಹಸಿವೆಯಿಂದ ಆಳುತ್ತಿದ್ದಾಗ ದಾರಿ ಮಧ್ಯೆ ಸಿಕ್ಕಿದ ಸತ್ತ ಆಡಿನ ತಲೆಯನ್ನು ತಂದು ಈ ಪದಾರ್ಥವನ್ನು ತಯಾರಿಸಿರುವೆ.ಇದನ್ನು ಕೇಳಿದಾಗ ಆ ದಂಪತಿಗಳು ಗರಬಡಿದಂತಾಗಿ ಅಲ್ಲಿಂದ ನೇರವಾಗಿ ತಮ್ಮ ಮನೆಗೆ ಬಂದು ತಾವು ಹಜ್ಜ್ ಯಾತ್ರೆಗೆ ಸಂಗ್ರಹಿಸಿದ ಹಣವನ್ನು ಆ ಕುಟುಂಬಕ್ಕೆ ನೀಡಿದರು ಎಂಬುದಾಗಿದೆ ಇತಿಹಾಸ.ಸ್ವಲ್ಪ ಕಾಲ ಕಳೆದಾಗ ಅರೇಬಿಯಾದ ಓರ್ವ ಸಾತ್ವಿಕನಿಗೆ ಒಂದು ಕನಸು ಬೀಳುತ್ತೆ. ಆ ವರ್ಷದ ಎಲ್ಲಾ ಹಜ್ಜಾಜಿಗಳ ಹಜ್ಜ್ ಕರ್ಮ ಸ್ವೀಕರಿಸಲ್ಪಟ್ಟಿದೆ. ಆ ಪಟ್ಟಿಯಲ್ಲಿ ಚಪ್ಪಲಿ ಹೊಲಿಯುವ ವ್ಯಕ್ತಿಯೂ ಸೇರಿದ್ದಾನೆ. ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಹೆಸರು ಅಲ್ಲಾಹನು ಸ್ಮರಿಸಬೇಕಾದರೆ ಆ ವ್ಯಕ್ತಿ ಮಾಡಿದ ಪುಣ್ಯ ಕರ್ಮವಾದರೂ ಏನು ಎಂದು ತಿಳಿಯುವ ಕುತೂಹಲದೊಂದಿಗೆ ಆ ವ್ಯಕ್ತಿ ಹುಡುಕುತ್ತಾ ಹೋದಾಗ ಸಿರಿಯಾದಲ್ಲಿ ಆ ವ್ಯಕ್ತಿಯನ್ನು ಕಂಡು ಹಿಡಿಯುತ್ತಾನೆ. ನೀವು ಮಾಡಿದ ಇಷ್ಟು ಪುಣ್ಯವೇರಿದ ಕರ್ಮವಾದರೂ ಏನು ಎಂದು ಕೇಳಿದಾಗ ಅವನು ಹೇಳಲು ನಿರಾಕರಿಸಿದ. ಆದರೂ ಹೇಳಲೇಬೇಕೆಂದು ಬಲವಂತಪಡಿಸಿದಾಗ ಅವನು ನಡೆದ ಘಟನೆಯನ್ನು ವಿವರಿಸಿದ.

ಇದಕ್ಕೆ ಸಮಾನವಾದ ಒಂದು ಘಟನೆಯನ್ನು ಖ್ಯಾತ ವಿದ್ವಾ೦ಸರೂ, ಕುರ್ ಆನ್ ವ್ಯಾಖ್ಯಾನಕಾರರೂ ಆದ ಇಬ್ನು ಕಸೀರ್ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಅರೇಬಿಯಾದಲ್ಲಿ ಇಬ್ನು ಮುಬಾರಕ್ ಎಂಬ ದಾರ್ಶನಿಕರೋರ್ವರು ತನ್ನ ಶಿಷ್ಯರೊಂದಿಗೆ ಹಜ್ಜ್ ಕರ್ಮವನ್ನು ನಿರ್ವಹಿಸಲು ಮಕ್ಕಾಕ್ಕೆ ತೆರಳುತ್ತಾರೆ. ಪ್ರಯಾಣದ ಮಧ್ಯೆ ಅವರೊಂದಿಗೆ ಇದ್ದ ಒಂದು ಪಕ್ಷಿ ಸತ್ತು ಹೋದಾಗ ಅದರ ಶವವನ್ನು ಹತ್ತಿರದ ಕಸದ ತೊಟ್ಟಿಗೆ ಎಸೆಯುವಂತೆ ತನ್ನ ಶಿಷ್ಯರಿಗೆ ಆದೇಶಿಸುತ್ತಾರೆ. ಅದನ್ನವರು ಎಸೆದಾಗ ಅಲ್ಲಿಗೆ ಬಂದ ಓರ್ವ ಮಹಿಳೆ ಆ ಸತ್ತ ಪಕ್ಷಿಯನ್ನು ಹೆಕ್ಕಿ ಅಲ್ಲಿಂದ ತೆರಳಿದಾಗ ಕೌತುಕದೊಂದಿಗೆ ಇದನ್ನೇ ನೋಡುತ್ತಿದ್ದ ಇಬ್ನು ಮುಬಾರಕ್ ಅದಕ್ಕೆ ಕಾರಣವೇನೆಂದು ಕೇಳಿದಾಗ ಆ ಮಹಿಳೆ ತಮ್ಮ ಜೀವನ ಶೈಲಿ ಮತ್ತು ಬಡತನದ ಬೇಗೆಯಿಂದ ಬಳಲುತ್ತಿರುವ ಕಥೆಯನ್ನು ಬಿಚ್ಚಿದಾಗ ಅವರು ದಿಘ್ಮೂಢರಾಗುತ್ತಾರೆ. ಆಹಾರಕ್ಕಾಗಿ ನಮ್ಮ ಬಳಿ ಏನೂ ಇಲ್ಲದೆ ಕಸದ ತೊಟ್ಟಿಯಿಂದ ಸಿಗುವ ಸತ್ತ ಜೀವಿಗಳ ಶವವನ್ನು ನಾವು ಪದಾರ್ಥ ಮಾಡಿ ಸೇವಿಸುತ್ತಿದ್ದೇವೆ ಎಂದಾಗ ಇಬ್ನು ಕಸೀರ್ ಅವರ ಬಳಿಯಿರುವ ಒಂದು ಸಾವಿರ ದಿನಾರ್ ನಿಂದ ತಮ್ಮ ಯಾತ್ರಾ ಸಂಘ ಅಲ್ಲಿಂದ ನಿರ್ಗಮಿಸಲು ಬೇಕಾಗುವ ಯಾತ್ರಾ ವೆಚ್ಚವನ್ನು ಉಳಿಸಿ ಮಿಕ್ಕ ಎಲ್ಲಾ ಹಣವನ್ನು ಅವರಿಗೆ ದಾನ ನೀಡುತ್ತಾರೆ. ಮತ್ತು ನಮ್ಮ ಹಜ್ಜ್ ಇಲ್ಲಿಯೇ ಪೂರ್ಣಗೊಂಡಿತು ಎಬುದಾಗಿ ತನ್ನ ಶಿಷ್ಯರಿಗೆ ಹೇಳುತ್ತಾ ಅಲ್ಲಿಂದ ನಿರ್ಗಮಿಸುತ್ತಾರೆ.

ಇತಿಹಾಸದಲ್ಲಿ ಸ್ಮರಿಸಲ್ಪಡುವ ಈ ಎರಡು ಘಟನೆಗೆಳಿಗೆ ಪೂರಕವೆಂಬಂತೆ ಗೂಡಿನಬಳಿಯ ಅಬ್ದುಲ್ ರಹ್ಮಾನ್ ಎಂಬ ವ್ಯಕ್ತಿ ವೃತ್ತಿಯಲ್ಲಿ ಕಾರ್ಮಿಕನಾದರೂ,ಆರ್ಥಿಕವಾಗಿ ಬಡವನಾಗಿದ್ದರೂ ಹೃದಯವಂತಿಕೆಯಲ್ಲಿ ಮಾತ್ರ ಶ್ರೀಮಂತರೆನಿಸಿಕೊಂಡಿದ್ದಾರೆ. ಹಜ್ ಕರ್ಮವನ್ನು ನಿರ್ವಹಿಸಬೇಕೆಂಬ ಮಹದಾಸೆಯಿಂದ ತನ್ನ ದಿನನಿತ್ಯದ ದುಡಿಮೆಯ ಉಳಿತಾಯ ಮತ್ತು ತನ್ನ ಪತ್ನಿಯ ಬೀಡಿಯ ಉಳಿತಾಯದಲ್ಲಿ ಶೇಖರಿಸಿದ ಮೊತ್ತವನ್ನು ಸಂಪೂರ್ಣವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಸಂಕಷ್ಟದಲ್ಲಿರುವ ಬಡ ಬಗ್ಗರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಹೌದು ಮನುಷ್ಯನು ಸಹಜೀವಿ. ಸಮಾಜದಲ್ಲಿ ಸಂಕಷ್ಟವನ್ನು ಅನುಭವಿಸುವ ಮನುಷ್ಯರಿಗೆ ಸಹಾಯ ಮಾಡಲು ಮತ್ತು ಅದನ್ನು ಪ್ರೇರೇಪಿಸದಷ್ಟು ಕಠಿಣ ಹೃದಯಿ ಖಂಡಿತ ಅಲ್ಲ. ಆದ್ದರಿಂದಲೇ ಈ ವ್ಯಕ್ತಿಯು ತನ್ನೆದುರಿಗೆ ಇದ್ದ ಅವಕಾಶವನ್ನು ಸದುಪಯೋಗಪಡಿಸುವ ನಿರ್ಧಾರಕ್ಕೆ ಬರಲು ಕಾರಣವಾಯಿತು.

ಹಜ್ಜ್ ಒಂದು ಸ್ಮರಣೆಯ ಪ್ರತೀಕ. ಇಬ್ರಾಹೀಮ್ (ಅ) ರವರ ಕುಟುಂಬದ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯ ಪ್ರತೀಕ. ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ ಎಂಬ ಪ್ರವಾದಿ ವಚನವನ್ನು ನಾವು ಆಗಾಗ ಸ್ಮರಿಸುತ್ತಲೇ ಇರುತ್ತೇವೆ. ನಿಜವಾಗಿ ನೆರೆಹೊರೆಯಲ್ಲಿ ಬಡವರಿದ್ದು ಅವರೊಂದಿಗೆ ನೀತಿ ಪಾಲಿಸಲು, ಅವರ ಹಕ್ಕನ್ನು ಪೂರೈಸಲು ಮತ್ತು ಅವರ ಬೇಕು ಬೇಡಗಳಿಗೆ ಸ್ಪಂದಿಸಲು ನಮಗೆ ಸಾಧ್ಯವಾಗದಿದ್ದರೆ ನಮ್ಮ ಹಜ್ಜ್ ಕರ್ಮವು ಕೇವಲ ತೋರಿಕೆಗಷ್ಟೇ ಸೀಮಿತವಾಗಬಹುದು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.