ಸರ್ಕಾರದ ಜಾಹಿರಾತು ಬ್ರಾಹ್ಮಣರ ಮಾಲಕತ್ವದ ಪತ್ರಿಕೆಗಳಿಗೆ ಮಾತ್ರವೇ? : ಪ್ರಿಯಾಂಕ್ ಖರ್ಗೆ

0
130

ಸನ್ಮಾರ್ಗ ವಾರ್ತೆ

ಬೆಂಗಳೂರು: ಬಿಜೆಪಿ ಸರ್ಕಾರ ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹಿರಾತು ನೀಡಲು ಹೊರಟಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ಇಲಾಖೆಯ ಸುತ್ತೋಲೆಯೊಂದಿಗೆ ಟ್ವೀಟ್ ಮಾಡಿರುವ ಅವರು, “ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಒಡೆತನದಲ್ಲಿ ಇರುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಜಾಹಿರಾತು ನೀಡುವ ಬಗ್ಗೆ ರಾಜ್ಯ ವಾರ್ತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ ಮುಖ್ಯಮಂತ್ರಿ ಬೊಮ್ಮಾಯಿಯವರೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹಿರಾತು ಬ್ರಾಹ್ಮಣರ ಮಾಲಕತ್ವದ ಪತ್ರಿಕೆಗಳಿಗೆ ಮಾತ್ರವಂತೆ! ಮುಖ್ಯಮಂತ್ರಿ ಬೊಮ್ಮಾಯಿಯವರೇ, ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ?. ಎಂದು ಕೇಳಿದ ಅವರು, ಮುಖ್ಯಮಂತ್ರಿಯವರು ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಾಗಪುರದ ನಿಷ್ಠಾವಂತ ನೌಕರರಾಗಿದ್ದಾರೆ” ಎಂದು ಟೀಕಿಸಿದ್ದಾರೆ.

ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹಿರಾತು ಬಿಡುಗಡೆ ಮಾಡುವಂತೆ ಜ.13ರ ವಾರ್ತಾ ಇಲಾಖೆಯ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಸುತ್ತೋಲೆಯಲ್ಲಿ ವಾರ್ತಾ ಇಲಾಖೆಯ ಆಯುಕ್ತರ ಪರವಾಗಿ ಉಪನಿರ್ದೇಶಕ ಕೆ.ಪಿ. ಪುಟ್ಟಸ್ವಾಮಯ್ಯರ ಸಹಿಯಿದ್ದು, ಸುತ್ತೋಲೆಯು ಸರ್ಕಾರದ ಆದೇಶದಂತೆ ಹೊರಡಿಸಲಾಗಿದೆ.