ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಭಾರತೀಯ ತೀರ್ಥಯಾತ್ರಿಗಳು ಸಿಲುಕಿಕೊಂಡಿರುವ ವಿಚಾರವಾಗಿ ಅಸಾದುದ್ದೀನ್ ಒವೈಸಿ ಅವರು ಕೇಂದ್ರ ಸರ್ಕಾರದ ತುರ್ತಾಗಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಸೌದಿ ಅರೇಬಿಯಕ್ಕೆ ತೆರಳಿರುವ ಹಲವಾರು ಭಾರತೀಯ ತೀರ್ಥಯಾತ್ರಿಗಳು ವಿವಿಧ ಕಾರಣಗಳಿಂದ ಅಲ್ಲಿ ಸಿಲುಕಿಕೊಂಡಿದ್ದು, ಮಕ್ಕಾ ಮತ್ತು ಮದೀನದಲ್ಲಿ ಸುಮಾರು 4,000 ಭಾರತೀಯ ತೀರ್ಥಯಾತ್ರಿಕರು ಸಿಲುಕಿದ್ದಾರೆ. ಅವರಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಲು ಕೇಂದ್ರ ವಿದೇಶಾಂಗ ಸಚಿವಾಲಯ ಮುಂದೆ ಬರಬೇಕು.
ಪ್ರಮುಖವಾಗಿ ಇಂಡಿಗೊ, ಆಕಾಶ್ ಏರ್, ಏರ್ ಇಂಡಿಯ ವಿಮಾನಗಳು ಹಾರಾಟ ರದ್ದು ಪಡಿಸಿದ್ದು ತೀರ್ಥ ಯಾತ್ರಿಕರು ಅಲ್ಲಿ ಸಿಕ್ಕಿ ಬೀಳಲು ಕಾರಣವಾಗಿದ್ದು ಮತ್ತು ವೀಸಾ ಸಂಬಂಧಿತ ಸಮಸ್ಯೆಗಳು, ಟ್ರಾವೆಲ್ ಏಜೆನ್ಸಿಗಳ ಲೋಪದೋಷಗಳು ಅಥವಾ ಇತರೆ ಪ್ರಯಾಣದ ಅಡೆತಡೆಗಳಿಂದ ತೊಂದರೆಗೀಡಾಗಿರುವ ತೀರ್ಥಯಾತ್ರಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
ಜೆದ್ದಾದಲ್ಲಿರುವ ಭಾರತೀಯ ದೂತವಾಸ ಕಚೇರಿ ಮತ್ತು ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೇರವಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ತೀರ್ಥಯಾತ್ರಿಗಳಿಗೆ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಬೇಕು ಹಾಗೂ ಆದಷ್ಟು ಬೇಗ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.












