ಕಚ್‍ನಲ್ಲಿ ಅಹಿತಕರ ಘಟನೆಗಳು: ಆತಂಕದಲ್ಲಿ ಗುಜರಾತ್

0
867

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಜ.20: ಗುಜರಾತ್ ಜನಾಂಗೀಯ ಹತ್ಯೆಯ ವೇಳೆಯೂ ಕಚ್ ಗಲಭೆ ರಹಿತವಾಗಿತ್ತು. ಆದರೆ, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಶ್ವ ಹಿಂದೂ ಪರಿಷತ್‍ನ ರಥಾಯಾತ್ರೆಯ ವೇಳೆ ಕಚ್‍ನ ವಿವಿಧ ಕಡೆಗಳಲ್ಲಿ ಕೋಮು ಘರ್ಷಣೆ ನಡೆದಿದೆ.

ಕಚ್ ಜಿಲ್ಲೆಯ ಕಿಡಾನ್ ಗ್ರಾಮದಲ್ಲಿ ರವಿವಾರ ಸಂಜೆ ನಡೆದ ರಥಯಾತ್ರೆ ಮಸೀದಿ ಚೌಕ್ ಬಳಿ ಬಂದಾಗ ಕಾರ್ಯಕರ್ತರು ಪ್ರಚೋದನಕಾರಿ ಘೋಷನೆ ಕೂಗಿದ್ದು ಘರ್ಷಣೆ ಆರಂಭವಾಯಿತು. ಇದನ್ನು ಇನ್ನೊಂದು ಕಡೆಯವರು ಪ್ರಶ್ನಿಸಿದಾಗ ಕಲ್ಲೆಸೆತ, ಕೊಳ್ಳಿ ಇಡುವುದು ಆರಂಭವಾಯಿತು. ಘರ್ಷಣೆಯಲ್ಲಿ ಪೊಲೀಸಧಿಕಾರಿಗಳು ಕೂಡಾ ಗಾಯಗೊಂಡಿದ್ದಾರೆ.

ಖಾಸಗಿ ವಾಹನಗಳನ್ನು ಮತ್ತು ಕೆಲವು ಮನೆಗಳನ್ನು ಸುಟ್ಟುಹಾಕಲಾಗಿದೆ. ಪೊಲೀಸರ ವಾಹನಗಳಿಗೂ ಹಾನಿಯಾಗಿದೆ. ಜನರ ನಡುವೆ ಘರ್ಷಣೆ ನಡೆದ ಸ್ಥಳದ 200ಮೀಟರ್ ದೂರದಲ್ಲಿ ಝಾರ್ಕಂಡಿನ ಅರ್ಜುನ್ ಮಾನಕಿ ಸೋವಯ್ಯ ಎನ್ನುವ ಕಾರ್ಮಿಕನ ಮೃತದೇಹ ಇರಿತದ ಗಾಯಗಳೊಂದಿಗೆ ಪತ್ತೆಯಾಗಿದೆ. ತನ್ನ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಲವಾರಿನೊಂದಿಗೆ ಬಂದ ಒಂದು ತಂಡ ಸೋಮಯ್ಯರನ್ನು ಕೊಲೆ ಮಾಡಿದೆ ಎಂದು ಚಾಲಕ ಹೇಳಿದ್ದಾನೆ.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಸಿಸಿಟಿವಿ ಮೊಬೈಲ್ ವೀಡಿಯೊ ದೃಶ್ಯಗಳ ಆಧಾರದಲ್ಲಿ ನಲ್ವತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಕಚ್ ಎಸ್‍.ಪಿ ಮಯೂರ್ ಪಾಟೀಲ್ ತಿಳಿಸಿದ್ದಾರೆ. ರವಿವಾರ ರಥಾಯಾತ್ರೆ ನಡೆಸಲು ವಿಎಚ್‍ಪಿ ಅನುಮತಿ ಪಡೆದಿರಲಿಲ್ಲ ಎಂಬುದಾಗಿ ವರದಿಯಾಗಿದೆ.