ಗುಂಡಿಕ್ಕಿ ಕೊಲ್ಲುವ ಕಾನೂನು ತಂದರೆ ಅರ್ಧ ಬಿಜೆಪಿ ಖಾಲಿ: ಈಶ್ವರಪ್ಪಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

0
133

ಸನ್ಮಾರ್ಗ ವಾರ್ತೆ

ದೇಶದ್ರೋಹದ ಮಾತುಗಳನ್ನಾಡುವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಒಂದು ವೇಳೆ ದೇಶದಲ್ಲಿ ಗುಂಡಿಕ್ಕಿ ಕೊಲ್ಲುವ ಕಾನೂನು ತಂದರೆ ಅರ್ಧ ಬಿಜೆಪಿ ಖಾಲಿಯಾಗುತ್ತದೆ” ಎಂದಿದ್ದಾರೆ.

ಕಲಬುರಗಿಯಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ, “ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಈಶ್ವರಪ್ಪ ಹೇಳಿಕೆಯಂತೆ ಕಾನೂನು ಜಾರಿಗೊಳಿಸಿದರೆ ಬಿಜೆಪಿಯ ಅರ್ಧದಷ್ಟು ಮಂದಿ ಖಾಲಿಯಾಗುತ್ತಾರೆ. ಆರ್‌ಎಸ್‌ಎಸ್ ಬಾಗಿಲು ಮುಚ್ಚಿಕೊಳ್ಳುತ್ತದೆ” ಎಂದು ಲೇವಡಿ ಮಾಡಿದರು.

“ಈಶ್ವರಪ್ಪ ಅವರಿಗೆ ಬಿಜೆಪಿಯವರು ಕಡ್ಡಾಯ ನಿವೃತ್ತಿ ಕೊಟ್ಟಿದ್ದಾರೆ. ಅದಕ್ಕಾಗಿ ಅವರು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರಾಜಕೀಯ ಜೀವನ ಮುಗಿದು ಹೋಗಿದೆ. ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

“ಪಕ್ಷವೇ ಈಶ್ವರಪ್ಪಗೆ ಬಲವಂತದ ನಿವೃತ್ತಿ ನೀಡಿ ಮನೆಯಲ್ಲಿರಲು ಹೇಳಿದೆ. ಅವರು ತಾನಿನ್ನೂ ಅಸ್ತಿತ್ವದಲ್ಲಿದ್ದೇನೆ ಅಂತ ತೋರಿಸಲು ಇಂಥ ಹೇಳಿಕೆಗಳನ್ನು ನೀಡುತ್ತಾರೆ. ಪಕ್ಷದಲ್ಲಿ ಅವರು ಹೇಗೆ ಕೆಳಗೆ ಬೀಳುತ್ತಾ ಹೋದರು ಅಂತ ಎಲ್ಲರಿಗೂ ಗೊತ್ತಿದೆ. ಡಿಸಿಎಂ ಆಗಿದ್ದವರು ಶಾಸಕನಾದರು ಮತ್ತು ಕಳೆದ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೂಡ ನಿರಾಕರಿಸಲಾಯಿತು. ಅವರ ಮಗನಿಗೂ ಬಿಜೆಪಿ ಟಿಕೆಟ್ ನೀಡಲಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಂತೇನೋ ಮಾಡಿದ್ದರು, ಈಗ ಅದೆಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ” ಎಂದು ಸಚಿವ ಖರ್ಗೆ ಹೇಳಿದರು.

“ವಿಶ್ರಾಂತಿಯ ಬದುಕಿನಲ್ಲಾದರೂ ನೆಮ್ಮದಿಯಾಗಿರಿ. ಬೆಳಗ್ಗೆ ರಾಮಾಯಣ ಓದಿ. ಮಧ್ಯಾಹ್ನ ಕೀರ್ತನಾ ಭಜನೆ ಕೇಳಿ, ರಾತ್ರಿ ಹನುಮಾನ್ ಚಾಲೀಸ ಹೇಳಿಕೊಂಡು ವಿಶ್ರಾಂತಿ ಪಡೆಯಿರಿ. ರಾಜಕೀಯ ಅಸ್ತಿತ್ವಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಬೇಡಿ” ಎಂದು ವಿವಾದಾತ್ಮಕ ಬಿಜೆಪಿ ಮುಖಂಡ ಈಶ್ವರಪ್ಪನವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ನಿನ್ನೆ(ಫೆ.8) ದಾವಣಗೆರೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, “ಸಂಸದ ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ​ ದೇಶ ವಿಭಜನೆಯ ಹೇಳಿಕೆ ನೀಡಿದ್ದಾರೆ. ಇಬ್ಬರೂ ಕೂಡ ರಾಷ್ಟ್ರದ್ರೋಹಿಗಳು. ಇಂತಹ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು. ದೇಶದ್ರೋಹ ಮಾಡುವವರು ಹಾಗೂ ದೇಶದ್ರೋಹದ ಹೇಳಿಕೆ ನೀಡುವವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ದೇಶದಲ್ಲಿ ಜಾರಿಯಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಆಗ್ರಹಿಸುತ್ತೇನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.