ಹಲ್ದ್ವಾನಿಯಲ್ಲಿ ಮದರಸಾ ನೆಲಸಮ; ಭುಗಿಲೆದ್ದ ಹಿಂಸಾಚಾರ, 4 ಮಂದಿ ಸಾವು, 200 ಮಂದಿಗೆ ಗಾಯ

0
405

ಸನ್ಮಾರ್ಗ ವಾರ್ತೆ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 149 ಜನರು ಗಾಯಗೊಂಡಿದ್ದಾರೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಮದರಸಾವನ್ನು ನೆಲಸಮ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಇದು ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಗುರುವಾರ ಬಂಭುಲ್ಪುರ ಪೊಲೀಸ್ ಠಾಣೆಯ ಪೊಲೀಸ್ ತಂಡವು ‘ಮಲಿಕ್ ಕಾ ಬಗೀಚಾ’ ಎಂಬ ಸ್ಥಳದಲ್ಲಿದ್ದ ಮದರಸಾ ಮತ್ತು ನಮಾಜ್ ಸ್ಥಳವನ್ನು ನೆಲಸಮಗೊಳಿಸಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮದರಸ ನೆಲಸಮಗೊಳಿಸಿತು. ಸಿಟ್ಟಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪೊಲೀಸ್ ಠಾಣೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು ಮತ್ತು ಸಿಬ್ಬಂದಿಯ ಮೇಲೆ ಕಲ್ಲು ತೂರಾಟವನ್ನು ಮುಂದುವರೆಸಿತು.

ಪೊಲೀಸ್ ಠಾಣೆಯ ಪ್ರಭಾರಿ ನೀರಜ್ ಭಕುನಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಪೊಲೀಸ್ ಠಾಣೆಗೆ ಹೊರಗೆ ನಿಲ್ಲಿಸಿದ್ದ ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. 20ಕ್ಕೂ ಹೆಚ್ಚು ಬೈಕ್‌ಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಚಂದ್ರ ವರ್ಮಾ ಮತ್ತು 40 ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಯೊಳಗೆ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಪ್ರಕಾರ, ಒಳಗೆ ಸಿಕ್ಕಿಬಿದ್ದ ಹೆಚ್ಚಿನ ಸಿಬ್ಬಂದಿ ಮಹಿಳೆಯರು. ಘಟನೆಯ ವೇಳೆ ಮಹಿಳಾ ಪೇದೆಯೊಬ್ಬರು ವೈರ್‌ಲೆಸ್‌ನಲ್ಲಿ ಉನ್ನತ ಅಧಿಕಾರಿಗಳಿಗೆ ದಾಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಆಕೆ ವಿವರಿಸುವ ಮುನ್ನವೇ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಈ ಪ್ರದೇಶದಲ್ಲಿ ಹಲವಾರು ಕಾರ್ಖಾನೆಗಳು, ತರಕಾರಿ ಮಾರುಕಟ್ಟೆಗಳು ಮತ್ತು ಬಟ್ಟೆ ಮಾರುಕಟ್ಟೆಯನ್ನು ಮುಚ್ಚಲಾಯಿತು. ನೈನಿತಾಲ್ ರಸ್ತೆ ಮತ್ತು ಬರೇಲಿ ರಸ್ತೆಯಲ್ಲಿರುವ ಮುಂದಿನ ಅಂಗಡಿಗಳನ್ನು ಮುಚ್ಚಲಾಯಿತು. ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ ಮತ್ತು ಗಲಭೆಕೋರರನ್ನು ಕಂಡರೆ ಗುಂಡು ಹಾರಿಸುವಂತೆ ಆದೇಶ ಹೊರಡಿಸಿದ್ದಾರೆ.