ಹಮಾಸ್ ಒತ್ತೆಯಾಳುಗಳೊಂದಿಗೆ ಕರುಣೆಯಿಂದ ವರ್ತಿಸಿದೆ: ಬಿಡುಗಡೆಗೊಂಡ ಹಿರಿಯ ಮಹಿಳೆ

0
3408

ಸನ್ಮಾರ್ಗ ವಾರ್ತೆ

ಕಳೆದ ಅ.7ರಿಂದ ಆರಂಭಗೊಂಡಿದ್ದ ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷವು 18ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆಯೇ ಮಾನವೀಯ ಕಾರಣಗಳಿಗಾಗಿ ಇಬ್ಬರು ಮಹಿಳಾ ಒತ್ತೆಯಾಳುಗಳನ್ನು ಹಮಾಸ್ ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ.

ಗಾಝಾ ಪಟ್ಟಿಯಲ್ಲಿರುವ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಸೋಮವಾರ ರಾತ್ರಿ ಬಿಡುಗಡೆಗೊಳಿಸಿದೆ. ವಯಸ್ಸಾದ ಒತ್ತೆಯಾಳುಗಳನ್ನು ಮಾನವೀಯ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಪ್ಯಾಲೆಸ್ತೀನಿಯನ್ ಗುಂಪು ಹೇಳಿದೆ.

ಬಿಡುಗಡೆಯಾದ ಒತ್ತೆಯಾಳುಗಳನ್ನು ನೂರಿಟ್ ಕೂಪರ್ (79) ಮತ್ತು ಯೋಚೆವೆಡ್ ಲಿಫ್‌ಶಿಟ್ಜ್ (85) ಎಂದು ಗುರುತಿಸಲಾಗಿದೆ.

ಗಾಝಾ ಗಡಿಯ ಸಮೀಪವಿರುವ ನಿರ್ ಓಜ್‌ನ ಕಿಬ್ಬತ್ಜ್‌ನಲ್ಲಿ ಈ ಇಬ್ಬರು ಮಹಿಳೆಯರು ಮತ್ತು ಅವರ ಗಂಡಂದಿರನ್ನು ಅವರ ಮನೆಗಳಿಂದ ಒತ್ತೆಯಾಳಾಗಿ ಹಮಾಸ್ ವಶಕ್ಕೆ ಪಡೆದುಕೊಂಡಿತ್ತು. ಅನಾರೋಗ್ಯದ ಕಾರಣಕ್ಕಾಗಿ ಈ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಿದೆ.

ಬಿಡುಗಡೆಗೊಂಡ ವೇಳೆ ಮಹಿಳೆಯರು ಹಮಾಸ್‌ನವರೊಂದಿಗೆ ಹಸ್ತಲಾಘವ ಮಾಡಿ ಬೀಳ್ಕೊಟ್ಟಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್ ಒತ್ತೆಯಾಳುಗಳ ಬಿಡುಗಡೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಭಾಗವಾಗಿ ಹಮಾಸ್‌ನೊಂದಿಗಿನ ಈ ಮಾತುಕತೆ ಸಫಲವಾಗಿದೆ. ಇಂತಹ ಮಾತುಕತೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ರೆಡ್‌ಕ್ರಾಸ್ ತಿಳಿಸಿದೆ.

ಬಿಡುಗಡೆಗೊಂಡ ಬಳಿಕ ಯೋಚೆವೆಡ್ ಲಿಫ್‌ಶಿಟ್ಜ್ (85) ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಮಾಸ್‌ನವರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.

‘ಅ.7ರ ಶನಿವಾರದಂದು ಮನೆಗೆ ನುಗ್ಗಿದ್ದ ಹಮಾಸ್‌ನವರು ನಿಮ್ಮನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದರು. ವಶಕ್ಕೆ ಪಡೆಯುವ ಸಂದರ್ಭದಲ್ಲಿ ಕೋಲುಗಳಿಂದ ಥಳಿಸಿದ್ದರು. ಆದರೆ ಸೆರೆಯಲ್ಲಿದ್ದಾಗ ನಮಗೆ ಚೆನ್ನಾಗಿ ಚಿಕಿತ್ಸೆ ನೀಡಿದರು’ ಎಂದು ತಿಳಿಸಿದ್ದಾರೆ.

ಗಾಲಿ ಕುರ್ಚಿಯಲ್ಲಿ ಕುಳಿತಿದ್ದ 85 ವರ್ಷದ ಲಿಫ್‌ಶಿಟ್ಜ್, ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಇಖಿಲೋವ್ ಮೆಡಿಕಲ್ ಸೆಂಟರ್ ಆಸ್ಪತ್ರೆಯ ಆವರಣದಲ್ಲಿ ವರದಿಗಾರರ ಪ್ರಶ್ನೆಗೆ ಹೀಬ್ರೂ ಭಾಷೆಯಲ್ಲಿ ಉತ್ತರಿಸುತ್ತಿದ್ದುದನ್ನು ಅವರ ಮಗಳು ಆಂಗ್ಲ ಭಾಷೆಗೆ ಅನುವಾದಿಸಿದರು.

“ಮೊದಲು ನನಗೆ ದಾರಿಯಲ್ಲಿ ಹೊಡೆದರು. ಆ ವೇಳೆ ಪಕ್ಕೆಲುಬುಗಳು ಮುರಿಯಲಿಲ್ಲ. ಆದರೆ ಅದರಿಂದ ನನಗೆ ನೋವಾಯಿತು. ಆ ಬಳಿಕ ಜೇಡರ ಬಲೆಗಳಿಂದ ಕೂಡಿದ್ದ ಬಂಕರ್‌ನೊಳಗೆ ಅವರು ನಮ್ಮನ್ನು ಕೂಡಿ ಹಾಕಿದರು. ಅಲ್ಲಿ ನಮ್ಮನ್ನು ಚೆನ್ನಾಗಿ ಉಪಚರಿಸಿದರು. ಪ್ರತಿ ಎರಡು ಮೂರು ದಿನಗಳಿಗೊಮ್ಮೆ ತನ್ನ ಮತ್ತು ಸಹ ಬಂಧಿತರ ಆರೋಗ್ಯವನ್ನು ಪರೀಕ್ಷಿಸಲು ವೈದ್ಯರನ್ನು ಕರೆ ತರುತ್ತಿದ್ದರು’ ಎಂದು ವಿವರಿಸಿದರು.

‘ಸುರಂಗ ಮಾರ್ಗಗಳ ಒಳಗೆ ಒದ್ದೆಯಾದ ನೆಲವಿತ್ತು. ಅದರ ಮೇಲೆ ಹಲವಾರು ಕಿಲೋಮೀಟರ್ ನಡೆಯುವಂತೆ ಒತ್ತಾಯಿಸಿದರು. ಸೆರೆಯಾಳುಗಳ ಸುತ್ತಲೂ ನೋಡಿಕೊಳ್ಳಲು ಕೂಡ ಜನರಿದ್ದರು. ಅವರು ಆಗಾಗ್ಗೆ ನಮ್ಮಲ್ಲಿ, ನಾವು ಕುರಾನ್ ಅನ್ನು ನಂಬುವ ಜನಗಳು. ಅದರಂತೆ ನಾವು ನಿಮಗೆ ನೋಯಿಸುವುದಿಲ್ಲ ಎಂದು ನಮಗೆ ಹೇಳುತ್ತಿದ್ದರು” ಎಂದು ಲಿಫ್‌ಶಿಟ್ಜ್ ಹೇಳಿದರು.

ಗಾಝಾ ಗಡಿಯಲ್ಲಿ ಬಿಡುಗಡೆಗೊಂಡ ಸಂದರ್ಭದಲ್ಲಿ ನೀವು ಹಮಾಸ್‌ನವರಿಗೆ ಹಸ್ತಲಾಘವ ಮಾಡಿದ್ದು ಯಾಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ 85 ರ ಹರೆಯದ ಲಿಫ್‌ಶಿಟ್ಜ್, ‘ಅಪಹರಣಕ್ಕೊಳಗಾದ ಸಂದರ್ಭ ನನಗೆ ಹೊಡೆತ ತಿಂದದ್ದನ್ನು ಬಿಟ್ಟರೆ, ನಮ್ಮೊಂದಿಗೆ ಹಮಾಸ್‌ನವರು ಕರುಣೆಯಿಂದ ವರ್ತಿಸಿದರು. ಬಂಕರ್‌ನೊಳಗೆ ಬಹಳಷ್ಟು ಶುಚಿತ್ವ ಕಾಯ್ದುಕೊಂಡಿದ್ದರು. ಅವರು ವೈದ್ಯರನ್ನು ಕರೆಸಿ, ಔಷಧಿ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ನೀಡಿ, ನಮ್ಮೊಂದಿಗೆ ಚೆನ್ನಾಗಿ ನಡೆದುಕೊಂಡಿದ್ದರು. ಅದಕ್ಕಾಗಿ ನಾನು ಬಿಡುಗಡೆಗೊಂಡಾಗ ಧನ್ಯವಾದ ತಿಳಿಸಿದೆ’ ಎಂದು ಹೇಳಿದರು.

ಬಿಡುಗಡೆಗೊಂಡ ಬಳಿಕ ಲಿಫ್‌ಶಿಟ್ಜ್ ಅವರು ಬಂಧನದ ವೇಳೆ ಹಮಾಸ್‌ನವರ ನಡವಳಿಕೆ ಬಗ್ಗೆ ನೀಡಿರುವ ಈ ಹೇಳಿಕೆಯು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಇದು ಹಮಾಸ್ ಹಾಗೂ ಇಸ್ರೇಲ್‌ ಸೇನೆಗಿರುವ ವ್ಯತ್ಯಾಸ. ಹಾಗಾಗಿ, ಇಸ್ರೇಲ್ ಗಾಝಾದಲ್ಲಿ ಆಸ್ಪತ್ರೆ ಸೇರಿದಂತೆ ಅಮಾಯಕ ಜನರ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ನಿಲ್ಲಿಸಿ, ಶಾಂತಿ ಮಾತುಕತೆಗೆ ಮುಂದಾಗಿ ಎಂದು ನೆಟ್ಟಿಗರು ಹಮಾಸ್ ಪರ ಒಲವು ತೋರುತ್ತಿದ್ದು, ಇದು ಇಸ್ರೇಲ್‌ಗೆ ಕಂಟಕವಾಗಿ ಪರಿಣಮಿಸಿದೆ.