ಸೈಪ್ರಸ್ ಅಥವಾ ಉಗಾಂಡದಲ್ಲಿ ಸ್ಥಾಪನೆಯಾಗಬೇಕಿದ್ದ ಇಸ್ರೇಲನ್ನು ಫೆಲೆಸ್ತೀನ್‌ಗೆ ತಿರುಗಿಸಿದ್ದು ಯಾರು?

0
9182

✍️ ವಸಂತ್ ಕಲಾಲ್, ಜೆಎನ್‌ಯು ವಿದ್ಯಾರ್ಥಿ

ಸನ್ಮಾರ್ಗ ವಾರ್ತೆ

ಫೆಲೆಸ್ತೀನ್ ಇಸ್ರೇಲ್ ಘರ್ಷಣೆಯನ್ನು ಧರ್ಮಗಳ ಆಧಾರದ ಮೇಲೆ ಚರ್ಚಿಸೋದು ಸಮಸ್ಯಾತ್ಮಕವಾದುದು, ಇದನ್ನು ವಸಾಹತುಶಾಹಿ ನೆಲೆಯಲ್ಲಿಯೇ ನೋಡಬೇಕು.

ಮೊದಲನೆಯದಾಗಿ ಇಸ್ರೇಲ್ ಸರ್ವ ಯಹೂದಿಗಳ ಪ್ರತಿನಿಧಿಯಲ್ಲ, ಯುರೋಪಿನ ಜಿಯೋನಿಸ್ಟ್ ಕೇಂದ್ರಿತ ಯಹೂದಿ ಗುಂಪುಗಳು ಬ್ರಿಟಿಷ್- ಫ್ರೆಂಚ್ ನೆರವಿನಿಂದ ಫೆಲೆಸ್ತೀನನ್ನು ಆಕ್ರಮಿಸಿದವು, ತದನಂತರ ಅದಕ್ಕೆ ಪೌರಾಣಿಕ ಕಥೆಯೊಂದನ್ನು ಕಟ್ಟಿ ಇಸ್ರೇಲ್ ದೇಶವನ್ನು ಸ್ಥಾಪಿಸಲಾಯಿತು.

ಅಲ್ಲದೆ ಫೆಲೆಸ್ತೀನ್ ರಾಷ್ಟ್ರೀಯತೆ ಅಥವಾ ಅಸ್ಮಿತೆ ಒಂದು ಧರ್ಮದ ನೆಲೆಯಲ್ಲಿ ನಿಂತಿಲ್ಲ, ಅದು ಬಹುಸಂಸ್ಕೃತಿಯ ಅಸ್ಮಿತೆ. ಅದು ಅರಬ್ ಮುಸ್ಲಿಮರು, ಅರಬ್ ಕ್ರಿಶ್ಚಿಯನ್‌ರು, ಅರಬ್ ಯಹೂದಿಗಳನ್ನೊಳಗೊಂಡ ಒಂದು ರಾಷ್ಟ್ರೀಯ ಅಸ್ಮಿತೆ.

ಅಲ್ಪಸಂಖ್ಯಾತರಾಗಿದ್ದ ಈ  ಅರಬ್ ಯಹೂದಿಗಳು ಕೂಡ ಇಸ್ರೇಲ್ ಸ್ಥಾಪನೆ ವಿರುದ್ಧ ಪ್ರತಿಭಟಿಸಿದರು. ಆದರೆ ಆ ಇತಿಹಾಸವನ್ನು ಮುಚ್ಚಿ ಹಾಕಲಾಯಿತು. ಹಾಗಾಗಿ ನೈಜ ಇತಿಹಾಸವನ್ನು ಒಮ್ಮೆ ಗಮನಿಸೋಣ.

ಫೆಲೆಸ್ತೀನ್ ಸೇರಿದಂತೆ ಬಹುತೇಕ ಅರಬ್ ಪ್ರಾಂತ್ಯಗಳು ಮೊದಲನೆ ಮಹಾಯುದ್ಧದ ಪೂರ್ವ ಅಟಮನ್ ಟರ್ಕರ ಆಡಳಿತಕ್ಕೆ ಒಳಪಟ್ಟಿದ್ದವು. 19ನೇ ಶತಮಾನದ ಅಂತ್ಯದಲ್ಲಿ ಅಟಮನ್ ಟರ್ಕರ ವಿರುದ್ಧ ಅರಬ್‌ರ ಹೋರಾಟಗಳು ಪ್ರಾರಂಭವಾದವು. ಮೊದ ಮೊದಲು ಆರಂಭದಲ್ಲಿ ಈ ಹೋರಾಟದ ನಾಯಕತ್ವವನ್ನು ಸಿರಿಯಾದ ಅರಬ್ ಕ್ರಿಶ್ಚಿಯನ್ನರು ವಹಿಸಿದ್ದರು. ತದನಂತರ ಹಾಶಮೇಟ್ ಸಂಸ್ಥಾನದ ಶರೀಫ್ ಆಫ್ ಮೆಕ್ಕಾ ಎಂದು ಕರೆಯಲ್ಪಡುತ್ತಿದ್ದ ಹುಸೆನ್ ಬಿನ್ ಅಲಿ ಅರಬ್ ನಾಯಕತ್ವ ವಹಿಸಿದ್ದರು. ಇದರ ಭಾಗವಾಗಿ 1916ರಲ್ಲಿ  ಅಟಮನ್ ಟರ್ಕರ ವಿರುದ್ಧ “ಅರಬ್ ದಂಗೆ” ಎಂದು ಕರೆಸಿಕೊಳ್ಳುವ ಅರಬ್‌ರ ಹೋರಾಟ ಮೆಕ್ಕಾದಲ್ಲಿ ಆರಂಭವಾಯಿತು.

1914ರಲ್ಲಿ ಮೊದಲನೆ ಮಹಾಯುದ್ಧ ಆರಂಭವಾಯಿತು. ಆ ಸಂಧರ್ಭದಲ್ಲಿ ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ (ಬ್ರಿಟಿಷ್) ಒಂದು ತಂಡವಾಗಿದ್ದರೆ ಮತ್ತೊಂದು ಕಡೆ ಅವರು ಎದುರಾಳಿಯಾಗಿ ಅಟಮನ್ ಟರ್ಕಿ, ಜರ್ಮನಿ, ಆಸ್ಟ್ರೋ ಹಂಗೇರಿಯನ್ ಒಕ್ಕೂಟ ಯುದ್ಧದಲ್ಲಿ ಭಾಗವಹಿಸಿದ್ದವು.

ಅಟಮನ್ ಟರ್ಕಿಯ ವಿರುದ್ಧ ಸ್ವಾತಂತ್ರ‍್ಯಕ್ಕಾಗಿ ದಂಗೆಯೆದ್ದಿದ್ದ ಅರಬ್‌ರ ಬೆಂಬಲವನ್ನು ಬ್ರಿಟಿಷ್ ಮತ್ತು ಫ್ರೆಂಚರು ಕೇಳಿದರು. ಬೆಂಬಲಿಸಿದರೆ ಅವರ ಎಲ್ಲಾ ಅರಬ್ ಪ್ರಾಂತ್ಯಗಳನ್ನು ಅಟಮನ್ ಟರ್ಕ್ ಸಾಮ್ರಾಜ್ಯದಿಂದ ಮುಕ್ತಗೊಳಿಸಿ ನೀಡುವುದಾಗಿ ಎಂದು ಘೋಷಿಸಿದರು. ಈ ಭಾಗವಾಗಿ ಅರಬ್ಬರು ಮೊದಲನೆ ಮಹಾ ಯುದ್ಧದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಜೊತೆ ಸೇರಿ ಕೆಚ್ಚೆದೆಯಿಂದ ಅಟಮನ್ ಟರ್ಕರ ವಿರುದ್ಧ ಹೋರಾಡಿದರು. ಮೊದಲನೆ ಮಹಾ ಯುದ್ಧದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಒಕ್ಕೂಟವು ತಮ್ಮ ವಿಜಯ  ಹತ್ತಿರವಾಗುತ್ತಿದ್ದಂತೆಯೇ ಅರಬ್ಬರಿಗೆ ದ್ರೋಹ ಬಗೆದರು.

ಆ ದ್ರೋಹದ ಭಾಗವಾಗಿ ಅರಬ್ಬರಿಗೆ ಗೊತ್ತಾಗದೆ ನಡೆಸಿದ ಸಂಚು. ಅದನ್ನು ಸೈಕ್ಸ್-ಪೈಕೋಟ್ ಒಪ್ಪಂದ (Sykes-Picot agreement) ಎಂದು ಕರೆಯಲಾಗುತ್ತದೆ. 1916ರಲ್ಲಿ ಮಾಡಿದ ರಹಸ್ಯ ಒಪ್ಪಂದದ ಪ್ರಕಾರ ಬ್ರಿಟಿಷ್ ಮತ್ತು ಫ್ರೆಂಚರು ತಮ್ಮಲ್ಲೇ ಅಟಮನ್ ಆಡಳಿತದಲ್ಲಿದ್ದ ಭೂಬಾಗಗಳನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಯುದ್ಧದ ವಿಜಯದ ನಂತರ ಇರಾಕ್ ಮತ್ತು ಫೆಲೆಸ್ತೀನ್ ಬ್ರಿಟಿಷ್‌ರಿಗೆ, ಸಿರಿಯಾ ಮತ್ತು ಲೆಬನಾನ್ ಫ್ರೆಂಚರಿಗೆ ಎಂದು ತಮ್ಮೊಳಗೆ ನಿರ್ಣಯ ಮಾಡಿಕೊಂಡರು. 1917ರ ನವೆಂಬರ್ ತನಕವೂ ಈ ಒಪ್ಪಂದದ ಬಗ್ಗೆ ಅರಬ್‌ರಿಗೆ ಗೊತ್ತಾಗಲಿಲ್ಲ. ಅಟಮನ್ ಟರ್ಕರ ವಿರುದ್ಧ ಅವರ ಹೋರಾಟ ನಡೆದೇ ಇತ್ತು.

ಈ ರಹಸ್ಯವನ್ನು ಅರಬ್ಬರಿಗೆ ತಿಳಿಸಿದ್ದು, ಆಗತಾನೇ ರಷ್ಯಾದಲ್ಲಿ ಕ್ರಾಂತಿ ಮಾಡಿ ವಿಜಯಿಯಾಗಿದ್ದ ಬೊಲ್ಷೆವಿಕರು. ಬೊಲ್ಷೆವಿಕರು ಈ ಒಪ್ಪಂದದ ಮಾಹಿತಿಯನ್ನು ಅವರ ಪತ್ರಿಕೆಯಾದ “ಪ್ರಾವಡಾ” ದಲ್ಲಿ ಪ್ರಕಟಿಸಿದರು. ತದನಂತರ ಇನ್ನೊಂದು ಸಂಚನ್ನು ಬ್ರಿಟಿಷರು  ಮಾಡಿದರು. ಅದೇ ಬಾಲ್ಫರ್ ಡಿಕ್ಲೆರೇಶನ್ (Balfour declaration) (1917). ಇದರ ಪ್ರಕಾರ ಪೌರಾಣಿಕ ನೆಲೆಯಲ್ಲಿ  ಫೆಲೆಸ್ತೀನ್‌ನಲ್ಲಿ “ಯಹೂದಿಗಳ ರಾಜ್ಯ” ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಯಿತು. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಅರ್ಥರ್  ಬಾಲ್ಫರ್, ಬ್ರಿಟಿಷ್ ಯಹೂದಿ ಗುಂಪಿನ ನಾಯಕನಾಗಿದ್ದ. ರೋಥ್ಸ್ ಚೈಲ್ಡ್ ಬರೆಯಲಾದ ಈ ಡಿಕ್ಲೇರೇಶನ್ ಇವತ್ತಿನ ಇಸ್ರೇಲ್ ಮತ್ತು  ಫೆಲೆಸ್ತೀನ್‌ನ ಘರ್ಷಣೆಯ ಮೂಲ.

ಬ್ರಿಟಿಷ್‌ರು ಇದನ್ನು ಯಹೂದಿಗಳಿಗಾಗಿ ಒಂದು ದೇಶ ಇರಬೇಕೆಂದು ಕರುಣೆಯಿಂದ ಕೊಟ್ಟಿರಲಿಲ್ಲ. ಅವರು ಅದನ್ನು ಯರೋಪಿನ  ವ್ಯಾಪಾರಸ್ಥ ಯುಹೂದಿ
ಸಮುದಾಯವಾದ ಜಿಯೋನಿಸ್ಟರಿಗೆ ಮಾರಾಟ ಮಾಡಿದ್ದರು. ಹಾಗಾಗಿ ಜಿಯೊನಿಸ್ಟ್ ಯಹೂದಿಗಳು ಮತ್ತು ಯರೋಪಿನ ವಸಾಹತು ಶಾಹಿ ನಡುವಿನ ಸಂಬಂಧವನ್ನು ನಾವು ಗುರುತಿಸಬೇಕಾಗುತ್ತೆ. 19ನೇ ಶತಮಾನದಿಂದಲೂ ಈ ವ್ಯಾಪಾರಸ್ಥ ಯಹೂದಿ ಸಮುದಾಯಗಳು ಬ್ರಿಟಿಷ್ ಮತ್ತು ಫ್ರೆಂಚರ ವಸಾಹತುಶಾಹಿ ಯೋಜನೆಗಳಿಗೆ ಅಪಾರ ಹಣ ಸುರಿದಿದ್ದರು. ಇವರು ಮೊದಲನೇ  ಮಹಾ ಯುದ್ಧದ ಪೂರ್ವ 1890ರ ಆಸುಪಾಸಿನಲ್ಲಿ ಯಹೂದಿಗಳಿಗೆ ಒಂದು ದೇಶ ಬೇಕೆಂದು ಬ್ರಿಟಿಷ್‌ರಿಗೆ ಬೇಡಿಕೆಯಿಟ್ಟಿದ್ದರು, ಅದರ ಭಾಗವಾಗಿ ಇವರು ಮೊದಲು ಬೇಡಿಕೆ ಇಟ್ಟ ದೇಶ ಫೆಲೆಸ್ತೀನ್ ಅಲ್ಲ, ಅದು ಸೈಪ್ರಸ್ (Cyprus). ಮೊದಲು ಈ ದೇಶವನ್ನು  ಕೊಂಡುಕೊಂಡು ತದನಂತರ ಫೆಲೆಸ್ತೀನ್ ಭೂಮಿಯನ್ನು ಖರೀದಿಸಿಬೇಕೆಂಬ ಇರಾದೆ ಇವರದ್ದಾಗಿತ್ತು. ಆದರೆ ಬ್ರಿಟಿಷ್‌ರು Cyprus  ಕೊಡಲು ಒಪ್ಪಲಿಲ್ಲ. ಒಂದು ಅಧಿವೇಶನದಲ್ಲಿ ಇಸ್ರೇಲ್ ದೇಶದ ಮೂಲ ಪರಿಕಲ್ಪನೆಯನ್ನು ನೀಡಿದ್ದ ಥಿಯೋಡರ್ ಹರ್ಜಲ್ ಉಗಾಂಡಾದಲ್ಲಿ ಇಸ್ರೇಲ್ ದೇಶವನ್ನು ಸ್ಥಾಪಿಸುವ ಪ್ರಸ್ತಾಪ ಕೂಡ ಮಾಡಿದ್ದ. ಅದನ್ನು ಬಹುಸಂಖ್ಯಾತ ಜಿಯೋನಿಸ್ಟರು ವಿರೋಧಿಸಿದರು. 20ನೇ ಶತಮಾನದ ಆರಂಭದಲ್ಲಿ ಜಿಯೋನಿಸ್ಟರು ಫೆಲೆಸ್ತೀನ್‌ನಲ್ಲಿ ಇಸ್ರೇಲ್ ಸ್ಥಾಪಿಸಬೇಕೆಂದು ನಿರ್ಧಾರ ಮಾಡಿದರು. ನಂತರ ಬಾಲ್ಫರ್ ಡಿಕ್ಲೆರೇಶನ್ ಇದನ್ನು ಅನುಮೋದಿಸಿತು. ಫ್ರೆಂಚರು ಮತ್ತು ಬ್ರಿಟಿಷರ ಈ ಎರಡು ಮಹಾದ್ರೊಹಗಳ ವಿರುದ್ಧ ಅರಬರು ದಂಗೆಯೆದ್ದರು. ಏಕೆಂದರೆ ಅರಬರ ನೆಲೆಗಳು ಫ್ರೆಂಚರು ಮತ್ತು ಬ್ರಿಟಿಷರ ವಸಾಹತುಶಾಹಿ ನೆಲೆಗಳಾಗಿ ಬದಲಾಗಿದ್ದವು. ಅದಲ್ಲದೇ ಅವರದೇ ಭೂಮಿಯಾದ ಫೆಲೆಸ್ತೀನ್‌ನನ್ನು ಜಿಯೋನಿಸ್ಟರಿಗೆ ಮಾರಾಟ ಮಾಡಲಾಗಿತ್ತು. ಅರಬರ ನಾಯಕತ್ವ ವಹಿಸಿದ್ದ ಹುಸೆನ್ ಬಿನ್ ಅಲಿ ಈ  ಒಪ್ಪಂದಗಳ ವಿರುದ್ಧ ಹಲವಾರು ಬಾರಿ ಬ್ರಿಟಿಷ್ ಮತ್ತು ಫ್ರೆಂಚರ ಜೊತೆ ಮಾತುಕತೆ ನಡೆಸಿದ. ಆದರೆ ಯಶಸ್ವಿಯಾಗಲಿಲ್ಲ. ಒಂದು  ಮಾತುಕತೆಯಲ್ಲಿ ಹುಸೆನ್ ಬಿನ್ ಅಲಿ ಯುರೋಪಿನಲ್ಲಿ ಯಹೂದಿಗಳಿಗೆ ಸಮಸ್ಯೆ ಆಗಿದ್ದಲ್ಲಿ ಅವರು ಅರಬ್ ನಾಡಿನಲ್ಲಿ ಬಂದು ನೆಲೆಸಲಿ ಅವರು ನಮ್ಮ ಸಹೋದರರು ಇದ್ದಂತೆ, ಆದರೆ ಇಸ್ರೇಲ್ ದೇಶವನ್ನು ಸ್ಥಾಪಿಸಲು ನಾವು ಒಪ್ಪುವುದಿಲ್ಲವೆಂದು ಕೂಡ ಹೇಳಿದ್ದ.

ಆದರೆ ಬ್ರಿಟಿಷ್ ಮತ್ತು ಫ್ರೆಂಚರು ಇಸ್ರೇಲ್ ದೇಶ ಸ್ಥಾಪಿಸಲು ಯರೋಪಿನ ಜಿಯೋನಿಸ್ಟರಿಗೆ ಬೆನ್ನೆಲುಬಾಗಿ ನಿಂತರು. ಬಲವಂತವಾಗಿ ಫೆಲೆಸ್ತೀನ್ ಜನರನ್ನು ಒಕ್ಕಲೆಬ್ಬಿಸಲಾಯಿತು. ಅವರ ಭೂಮಿಯನ್ನು ಕಸಿಯಲಾಯಿತು. ಕ್ರೌರ‍್ಯ ಮತ್ತು ಹಿಂಸೆಯಿಂದ ಫೆಲೆಸ್ತೀನ್‌ರ  ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಪ್ರತಿಭಟಿಸಿದವರಲ್ಲಿ ಫೆಲೆಸ್ತೀನ್ ಅರಬ್ ಮುಸ್ಲಿಮರು, ಅರಬ್ ಕ್ರಿಶ್ಚಿಯನರು, ಅರಬ್ ಯಹೂದಿಗಳೂ ಇದ್ದರು. ಇಸ್ರೇಲ್ ವಿರುದ್ಧ ಪ್ರತಿಭಟಿಸಿದ ಅರಬ್ ಯಹೂದಿಗಳ ಪಾತ್ರವನ್ನು ಯೋಜನಾತ್ಮಕವಾಗಿ ಪಾಶ್ಚಿಮಾತ್ಯ ಇತಿಹಾಸಕಾರರು ಮುಚ್ವಿ ಹಾಕಿದರು. 1948ರಲ್ಲಿ ಇಸ್ರೇಲ್ ಸ್ಥಾಪನೆಯಾದ ನಂತರ ಯರೋಪಿನ ಬೈಬಲ್‌ಗಳಲ್ಲಿ ಫೆಲೆಸ್ತೀನ್‌ ಪದ ತೆಗೆದು ಇಸ್ರೇಲ್ ಎಂದು ನಾಮಕರಣ ಮಾಡಿದರು. ಇದನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಯಿತು. ವಸಾಹತುಶಾಹಿ ದೇಶಗಳ ಮಾಧ್ಯಮಗಳು, ವಿಶ್ವವಿದ್ಯಾಲಯದ ಸಂಶೋಧಕರು ಇಸ್ರೇಲ್ ಫೆಲೆಸ್ತೀನ್ ಸಂಘರ್ಷವನ್ನು ಧರ್ಮಗಳ ದೃಷ್ಟಿಕೋನದಲ್ಲಿ ಬಂಧಿಸಿದರು.  ಪೌರಾಣಿಕ ಕತೆಗಳನ್ನು ಹೆಣೆದರು. ಹೀಗಾಗಿ ಫೆಲೆಸ್ತೀನ್ ಎಂಬುದು ಅರಬರಿಗೆ ಸೇರಿದ್ದು, ಅಲ್ಲಿ ಸ್ಥಾಪಿತವಾದ ಇಸ್ರೇಲ್ ಯುರೋಪಿನ ವಸಾಹತುಶಾಹಿಯ ಭಾಗ ಅಷ್ಟೇ.

[ಈ ಎಲ್ಲಾ ಮಾಹಿತಿಯನ್ನು ನಾನು ಈ ಕೆಳಗಿನ ಪುಸ್ತಕ ಗಳಿಂದ ಸಂಗ್ರಹಿಸಿದ್ದೇನೆ.]

1.Maxime Rodinson ಬರೆದ Israel-a Colonial – settler state?
2.Ilan pappe ಬರೆದ The Ethnic Cleansing of Palestinians, Ten Myths about Isreal ಮತ್ತು The Idea of Isreal: A History of Power and Knowledge
3.Noam Chomsky ಮತ್ತು Ilan pappe ಬರೆದ ಲೇಖನಗಳ ಸಂಗ್ರಹ “On Palestine”
4.New left review ನಲ್ಲಿ Edward said ಬರೆದ ಲೇಖನ “On Palestinian Identity: A Conversation with Salman Rushdie ಕೂಡ ಓದಿ”

(ಲೇಖಕರು, ರಷ್ಯಾ ಮತ್ತು ಪೂರ್ವ ಯುರೋಪ್‌ಗಳ
ಸಂಶೋಧನೆ ನಡೆಸುತ್ತಿದ್ದಾರೆ)