ಮುಸ್ಲಿಮ್ ಮತ್ತು ಕಾಂಗ್ರೆಸ್ ಕುರಿತು ದ್ವೇಷ ಭಾಷಣ: ಮೋದಿ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

0
236

ಸನ್ಮಾರ್ಗ ವಾರ್ತೆ

ಮುಸ್ಲಿಮರು ಮತ್ತು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ದ್ವೇಷ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು “ಸುಪ್ರೀಂ ಕೋರ್ಟ್ ಮತ್ತು ಭಾರತೀಯ ಚುನಾವಣಾ ಆಯೋಗ (ಇಸಿಐ) ಮೋದಿ ವಿರುದ್ಧ ‘ಕಠಿಣ ಕ್ರಮ’ ತೆಗೆದುಕೊಳ್ಳಬೇಕು” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐಎಂ) ಒತ್ತಾಯಿಸಿದೆ.

ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ದ್ವೇಷ ಭಾಷಣ ಮಾಡಿದ್ದಾರೆ. “ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಮಂಗಳಸೂತ್ರ ಸೇರಿ ಬೆಲೆಬಾಳುವ ವಸ್ತುಗಳನ್ನು ಒಳನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮರುಹಂಚಿಕೆ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ” ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

ಮೋದಿ ಹೇಳಿಕೆಯು ಮಾದರಿ ನೀತಿ ಸಂಹಿತೆಯ (ಎಂಸಿಸಿ) ಉಲ್ಲಂಘನೆಯಾಗಿದ್ದು ಈ ನಿಟ್ಟಿನಲ್ಲಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುವ ‘ಭಾರತದ ಕಾಳಜಿಯುಳ್ಳ ನಾಗರಿಕರು’ ಎಂಬ ಹೆಸರಿನಲ್ಲಿ ಆನ್‌ಲೈನ್ ಅರ್ಜಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಚುನಾವಣಾ ಆಯೋಗದ ಮೌನವನ್ನು ಪ್ರಶ್ನಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು, “ಪ್ರಧಾನಮಂತ್ರಿಯವರ ಈ ಹೇಳಿಕೆ ಅಮಾನುಷವಾಗಿದೆ” ಎಂದಿದ್ದಾರೆ.

“ಇದು ಘೋರವಾಗಿದೆ! ಚುನಾವಣಾ ಆಯೋಗದ ಮೌನವು ಇನಷ್ಟು ಕ್ರೂರವಾಗಿದೆ! ಮೋದಿಯವರ ಉದ್ರೇಕಕಾರಿ ಭಾಷಣವು ಮಾದರಿ ನೀತಿ ಸಂಹಿತೆ ಮತ್ತು ದ್ವೇಷ ಭಾಷಣದ ಕುರಿತು ಸುಪ್ರೀಂ ಕೋರ್ಟ್ ಘೋಷಣೆಗಳ ಸಂಪೂರ್ಣ ಉಲ್ಲಂಘಟನೆಯಾಗಿದೆ. ಇದು ಕಠಿಣ ಕ್ರಮ ಮತ್ತು ನ್ಯಾಯಾಲಯದ ನಿಂದನೆಗೆ ಅರ್ಹವಾಗಿದೆ” ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಸೀತಾರಾಮ್ ಯೆಚೂರಿ ತಿಳಿಸಿದ್ದಾರೆ.

“ಸುಪ್ರೀಂಕೋರ್ಟ್ ಈ ದ್ವೇಷ ಭಾಷಣವನ್ನು ಸ್ವಯಂಪ್ರೇರಿತವಾಗಿ ಗ್ರಹಿಸುತ್ತದೆ ಮತ್ತು ಮೋದಿಯವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸುತ್ತದೆ, ನಂತರ ಕಠಿಣ ಶಿಕ್ಷೆಯನ್ನು ನೀಡುತ್ತದೆ ಎಂದು ಭಾವಿಸುತ್ತೇವೆ” ಎಂದು ಯೆಚೂರಿ ಎಕ್ಸ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ನಡುವೆ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಇನ್ನು ಪ್ರಧಾನಮಂತ್ರಿಯವರ ಭಾಷಣವು ಸತ್ಯವನ್ನು ತಿರುಚುವಂತದ್ದು, ನಕಲಿ ಸುದ್ದಿಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮಕೈಗೊಳ್ಳುವುದು ಅಗತ್ಯ ಎಂದು ಆನ್‌ಲೈನ್ ಅರ್ಜಿಯಲ್ಲಿ ತಿಳಿಸಲಾಗಿದೆ.

ಇಂತಹ ದ್ವೇಷದ ಭಾಷಣದ ವಿರುದ್ಧ ಚುನಾವಣಾ ಆಯೋಗವು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here