ಪ್ರಧಾನಿ ಮೋದಿ ಈ ದೇಶದ ಮುಸ್ಲಿಮರ ಮಾತ್ರವಲ್ಲ, ಸಮಸ್ತ ನಾಗರಿಕರ ಕ್ಷಮೆ ಯಾಚಿಸಲಿ; ಸೋಲಿಡಾರಿಟಿ ರಾಜ್ಯಾಧ್ಯಕ್ಷ ಲಬೀದ್ ಶಾಫಿ

0
254

ಸನ್ಮಾರ್ಗ ವಾರ್ತೆ

ರಾಜಸ್ಥಾನದ ಬನ್ಸ್‌ವಾರದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದ್ದು, ಸೋಲಿಡಾರಿಟಿ ಕರ್ನಾಟಕದ ರಾಜ್ಯ ಅಧ್ಯಕ್ಷ ಲಬೀದ್ ಶಾಫಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಸಂಪತ್ತನ್ನು ಹಂಚುವುದೇ ಕಾಂಗ್ರೆಸ್ಸಿನ ಗ್ಯಾರಂಟಿ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಸುಮಾರು ಒಂದುವರೆ ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ವಿಪಕ್ಷಗಳು ಒತ್ತಾಯಿಸಿವೆ.

ಮುಸ್ಲಿಂ ಸಮುದಾಯದ ಕುರಿತಾಗಿ ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂಬ ಪ್ರಧಾನಿ ಮೋದಿ ಹೇಳಿಕೆಯು ಮುಸ್ಲಿಂ ದ್ವೇಷ ಹಾಗೂ ಫ್ಯಾಸಿಸ್ಟ್ ಮನಸ್ಥಿತಿಯ ಭಾಗವಾಗಿದೆ. ಈ ದೇಶದ ಸಂವಿಧಾನಕ್ಕೆ ಮತ್ತು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನವಾಗಿದೆ.

ಪ್ರಮೋದ್ ಮುತಾಲಿಕ್, ಕಲ್ಲಡ್ಕ ಪ್ರಭಾಕರ್ ಮತ್ತು ಸಾದ್ವಿ ಪ್ರಜ್ಞಾಸಿಂಗ್ ಮುಂತಾದ ಸಂಘ ಪರಿವಾರದ ಹೇಟ್ ಮಂಗರ್ಸ್ ಮತ್ತು ಬಿಜೆಪಿ ಐಟಿಸೆಲ್ ಹರಿ ಬಿಡುತ್ತಿರುವ ಅದೇ ದ್ವೇಷ ಭಾಷೆ ನಮ್ಮ ದೇಶದ ಗೌರವಾನ್ವಿತ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯ ಬಾಯಲ್ಲಿ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಲಭೀದ್ ಶಾಫಿ ಹೇಳಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕ ವಿಶ್ವಾಸ್ ಘೋಷಣೆಗೆ ಏನರ್ಥವಿದೆ? ಇಂಡಿಯಾ ಹೇಟ್ ಲ್ಯಾಬ್ ವರದಿ ಹೇಳುವಂತೆ 2023ರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು 668 ದ್ವೇಷ ಭಾಷಣಗಳು ದಾಖಲಾಗಿವೆ. ಅದರಲ್ಲಿ 498 ಭಾಷಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದಿದೆ. ಈ ಸಾಲಿನಲ್ಲಿ ಈ ದೇಶದ ಪ್ರಧಾನ ಮಂತ್ರಿ ಸೇರಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗವು ದ್ವೇಷ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಧಾನಿ ಈ ದೇಶದ ಮುಸ್ಲಿಮರಲ್ಲಿ ಮಾತ್ರವಲ್ಲ ಈ ದೇಶದ ಸಮಸ್ತ ನಾಗರಿಕರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.