ಮಾನಸಿಕ ಒತ್ತಡ ಮತ್ತು ಹೋಮಿಯೋಪತಿ: ಹೆಲ್ತ್ ಟಿಪ್ಸ್

0
1452

ಡಾ| ಅಲ್‍ಫ್ರೀಡಾ ಲವಿನ ಪಿಂಟೊ, ಹೋಮಿಯೋಪತಿ ತಜ್ಞರು, ಮಂಗಳೂರು.
ಸಂಪರ್ಕ ಸಂಖ್ಯೆ:9449300306

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಆರೋಗ್ಯವೆಂದರೆ, ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂತುಷ್ಟಿ ಅಥವಾ ಸಮತೋಲನವಾಗಿದ್ದು, ಬರೀ ದೈಹಿಕ ರೋಗವಿಲ್ಲದಿರುವ ಸ್ಥಿತಿಯಲ್ಲ. ದೈಹಿಕ ಆರೋಗ್ಯದ ಮೇಲೆ ಮನಸ್ಸಿನ ಪ್ರಭಾವ ಅಗಾಧ ವಾಗಿದೆ. ಪ್ರತ್ಯೇಕವಾಗಿ ಮಾನಸಿಕ ಒತ್ತಡ ಹಲವಾರು ರೋಗಗಳಿಗೆ ಕಾರಣವಾಗಿದೆ ಅಥವಾ ರೋಗದ ತೀವ್ರತೆ ಹೆಚ್ಚಿಸುತ್ತದೆ.

ನಮ್ಮ ದೇಹ, ನಮ್ಮ ಯೋಚನೆ, ಭಾವನೆ ಮತ್ತು ಕ್ರಿಯೆಗಳಿಗೆ ಸ್ಪಂದಿಸುತ್ತದೆ. ಇದುವೇ ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧ. ಉದಾಹರಣೆಗೆ ನಾವು ಒತ್ತಡದಲ್ಲಿದ್ದಾಗ, ದುಃಖಿತರಾಗಿದ್ದಾಗ ಹಾಗೂ ಗೊಂದಲದಲ್ಲಿದ್ದಾಗ, ನಮ್ಮ ದೇಹದಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಏನೋ ಸರಿಯಿಲ್ಲವೆಂದು ತಿಳಿಸುವಂತಾಗಿರುತ್ತದೆ. ನಮ್ಮ ಜೀವನದಲ್ಲಿ ದುಃಖದ ಅಥವಾ ಒತ್ತಡಕ್ಕೆ ಕಾರಣವಾಗುವ ಕೆಲವು ಸಂದರ್ಭಗಳೆಂದರೆ ಹತ್ತಿರ ಸಂಬಂಧಿಕರ ಹಠಾತ್ ಅಗಲುವಿಕೆ, ಕೆಲಸ/ವ್ಯವಹಾರದಲ್ಲಿ ಸೋಲು, ಕೌಟುಂಬಿಕ ಕಲಹಗಳು, ಮದುವೆ/ವಿಚ್ಛೇದನೆ, ಬಂಜೆತನ, ಅನಾರೋಗ್ಯ, ಆರ್ಥಿಕ ಸಮಸ್ಯೆ, ನೆರೆಹೊರೆಯವ ರೊಡನೆ ಕಾದಾಟ ಇತ್ಯಾದಿಗಳು.

ಮಾನಸಿಕ ಒತ್ತಡದಿಂದ ದೇಹದಲ್ಲಿ ಸಾಮಾನ್ಯ ವಾಗಿ ಕಂಡು ಬರುವ ಲಕ್ಷಣಗಳು-
1. ತಲೆನೋವು.
2. ಎದೆ ನೋವು / ಆಯಾಸ.
3. ಅಜೀರ್ಣ, ಊಟ ಸೇರದೆ ಇರುವುದು, ಎದೆಉರಿ, ಹಸಿವಾಗದಿರುವುದು.
4. ಬಾಯಿ ಒಣಗುವುದು.
5. ವಿಪರೀತ ಆಯಾಸ.
6. ಅಧಿಕ ರಕ್ತದೊತ್ತಡ, ಉಸಿರುಗಟ್ಟುವಿಕೆ.
7. ಕುತ್ತಿಗೆ ನೋವು, ಬೆನ್ನು ನೋವು.
8. ನಿದ್ರೆಯ ಸಮಸ್ಯೆ.
9. ಲೈಂಗಿಕ ಜೀವನದಲ್ಲಿ ಅಸಮಾಧಾನ.
10. ತುಂಬಾ ಬೆವರುವುದು.
11. ತೂಕ ಹೆಚ್ಚುವುದು ಅಥವಾ ಕಡಿಮೆ ಯಾಗುವುದು ಇತ್ಯಾದಿ.

ಮಾನಸಿಕ ಒತ್ತಡದ ಬಗೆಗಿನ ಕೆಲವು ಸತ್ಯಗಳು

1. 95% ದಷ್ಟು ಎಲ್ಲಾ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಕಾರಣ ಅಥವಾ ಕಾಯಿಲೆಯ ತೀವ್ರತೆ ಹೆಚ್ಚಾಗಲು ಮಾನಸಿಕಒತ್ತಡ ಪ್ರಮುಖ ಕಾರಣವಾಗಿದೆ.
2. ಒತ್ತಡವನ್ನು ಮನಸ್ಸಿನೊಳಗೇ ಕರಗಿಸುವ ವರಿಗೆ ಬೊಜ್ಜು ಬರುವ ಸಾಧ್ಯತೆ ಹೆಚ್ಚಿರುತ್ತದೆ.
3. ಒತ್ತಡದಿಂದಾಗಿ ದೇಹದೊಳಗೆ ನಿರ್ದಿಷ್ಟ ಹಾರ್ಮೋನ್‍ಗಳು ಉತ್ಪತ್ತಿಯಾಗುತ್ತವೆ. ಇವು ಮನುಷ್ಯನ ನೆನಪಿನ ಶಕ್ತಿ ನಿಯಂತ್ರಿಸುವ ಮೆದುಳಿನ ಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ.
4. ಒಂದು ಸಂಶೋಧನೆಯ ಪ್ರಕಾರ ಶೀತಕ್ಕೆ ಕಾರಣವಾಗುವ ವೈರಸ್‍ಗಳನ್ನು ಕೆಲವು ನಿರ್ದಿಷ್ಟ ಜನರ ಮೂಗಿಗೆ ಹಾಕಿದಾಗ, ಮಾನಸಿಕ ಒತ್ತಡವಿರುವ ಜನರಲ್ಲಿ ಮಾತ್ರ ಶೀತ ಕಂಡು ಬಂದಿದೆ.

ಒತ್ತಡ ನಿರ್ವಹಣೆಗೆ ಕೆಲವು ಟಿಪ್ಸ್

1. ಮೊದಲು ನಮಗೆ ಒತ್ತಡ ತಂದುಕೊಡು ವಂತಹ ಸನ್ನಿವೇಶ ಹಾಗೂ ಕಾರಣಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
2. ಅಂತಹ ಸಂದರ್ಭ/ಸನ್ನಿವೇಶಗಳಲ್ಲಿ ಧೈರ್ಯಗೆಡದೆ ಶಾಂತರಾಗಿದ್ದು, ತಿಳುವಳಿಕೆಯಿಂದ ಮುನ್ನಡೆಯಲು ಪ್ರಯತ್ನಿಸಬೇಕು.
3. ಮನಸ್ಸು ಶಾಂತವಾಗಿಡಲು ಅಭ್ಯಾಸ ಮಾಡಬೇಕು- ಪ್ರಾರ್ಥನೆ, ಧ್ಯಾನ, ರಿಲ್ಯಾಕ್ಸೇಶನ್ ಎಕ್ಸ್‍ಸಾಯ್ಸ್, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿ ಕೊಳ್ಳುವುದು, ದೀರ್ಘ ಶ್ವಾಸ ಅಭ್ಯಾಸ, ಬೆಚ್ಚಗಿನ ನೀರಿನಲ್ಲಿ ಸ್ನಾನ, ಯೋಗ, ಮಾಲೀಶು, ಸ್ಪಾ ಇತ್ಯಾದಿ.
4. ದೈನಂದಿನ ಕೆಲಸದ ನಡುವೆ ಆಗಾಗ, ಮನಸ್ಸಿಗೆ ಸಂತೋಷ ಕೊಡುವಂತಹ ಕೆಲಸಗಳನ್ನು ಮಾಡುವುದು. ಉದಾಹರಣೆಗೆ, ಸೂರ್ಯಾಸ್ತವನ್ನು ವೀಕ್ಷಿಸುವುದು, ಸಮುದ್ರ ತೀರದಲ್ಲಿ ನಡೆಯುವುದು, ಪ್ರಯಾಣ ಮಾಡುವುದು, ತೀರ್ಥಯಾತ್ರೆ / ಯಾವುದಾದರೂ ಯಾತ್ರಾ ಸ್ಥಳಿಗೆ ಭೇಟಿ ನೀಡುವುದು ಇತ್ಯಾದಿ.
5. ನಿರಂತರ ವ್ಯಾಯಾಮ ಮಾಡುವುದು.
6. ಒಳ್ಳೆಯ ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾಗಿ ಸೇವಿಸುವುದು ಅಗತ್ಯವಿದ್ದಷ್ಟು ಮಾತ್ರ ಸೇವಿಸುವುದು
7. ನೆಂಟರಿಷ್ಟರ ಭೇಟಿ ಮಾಡುವುದು. ಕುಟುಂಬಸ್ಥರ ಜೊತೆಗೆ ಸಮಯ ಕಳೆಯುವುದು.
8. ನಮ್ಮ ಭಾವನೆ, ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು.
9. ಯಾವುದಾದರೂ ಉತ್ತಮ ಸಂಘ ಸಂಸ್ಥೆಗಳಲ್ಲಿ ಭರ್ತಿಯಾಗಿ, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದು.
10. ಅನವಶ್ಯವಾಗಿ ಔಷಧ ಸೇವಿಸಬಾರದು.
11. ಮದ್ಯಪಾನ, ಸಿಗ್ರೇಟ್ ಸೇವನೆ ತ್ಯಜಿಸುವುದು.
12. ಒಳ್ಳೆಯ ಕಾರ್ಯಗಳನ್ನು ಮಾಡುವುದು, ಇತರರಿಗೆ ಸಹಾಯ ಮಾಡುವುದು, ಸಾಧ್ಯವಾದರೆ ದಾನ-ಧರ್ಮ ಮಾಡುವುದು.
13. ಒಳ್ಳೆಯ ಬರಹಗಳನ್ನು ಓದುವುದು.
14. ಅಗತ್ಯವಿದ್ದಷ್ಟು ಮಾತ್ರ ನಿದ್ರಿಸುವುದು ಮತ್ತು ವಿಶ್ರಾಂತಿ ಪಡೆಯುವುದು, ಕಡಿಮೆಯೂ ಅಲ್ಲ, ಅತಿಯಾಗಿಯೂ ಅಲ್ಲ.

ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಒತ್ತಡ ನಿರ್ವಹಣೆ ಹಾಗೂ ಒತ್ತಡದಿಂದಾಗುವ ವಿವಿಧ ರೋಗಗಳಿಗೆ ಸಮರ್ಪಕ ಚಿಕಿತ್ಸೆ ಇದೆ. ಹೋಮಿಯೋಪತಿಯಲ್ಲಿ ರೋಗಿಯನ್ನು ಒಂದು ವ್ಯಕ್ತಿಯನ್ನಾಗಿ ಕೇಂದ್ರೀಕರಿಸಿ ಪೂರ್ಣ ವ್ಯಕ್ತಿತ್ವದ ಆಧಾರದ ಮೇಲೆ ಹೊಂದಿಕೊಂಡು ಚಿಕಿತ್ಸೆ ನೀಡುವುದರಿಂದ ಇಂತಹ ಸಮಸ್ಯೆಗಳನ್ನು ಪರಿ ಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ಇಲ್ಲಿ ರೋಗದ ಲಕ್ಷಣಗಳ ಜೊತೆಗೆ ವ್ಯಕ್ತಿಯ ದೇಹದ ಪ್ರಕ್ರಿಯೆಗಳು, ಮನಸ್ಸಿನ ಭಾವನೆಗಳು, ಚಿಂತನೆ ಗಳಿಗೂ ಪ್ರಾಮುಖ್ಯತೆ ಇರುವುದರಿಂದ ಮಾನಸಿಕ ಒತ್ತಡದಿಂದಾಗುವ ಸಮಸ್ಯೆಗಳಿಗೂ ನಿರಾಳವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುತ್ತದೆ.