ಸನ್ಮಾರ್ಗ ವಾರ್ತೆ
ಬೆಂಗಳೂರು: ಹಿಜಾಬ್ ಧರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಇವರಿಗೆ 88.00 ಲಕ್ಷ ರೂ. ಸಂಭಾವನೆ ನೀಡಲು ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯು ವಿವಾದ ಸ್ವರೂಪ ಪಡೆದುಕೊಂಡಿದ್ದ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ಎಂದು ಹಿಜಾಬ್ ಪ್ರಕರಣವೂ ಮುನ್ನೆಲೆಗೆ ಬಂದಿತ್ತು. ಈ ಸಂಬಂಧ ಕುಂದಾಪುರ ಮೂಲದ ಫಾತಿಮಾ ಬುಶ್ರಾ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಬೈಸಿಕಲ್, ಶೂ, ಸಾಕ್ಸ್ ವಿತರಣೆಗೆ ಅನುದಾನದ ಕೊರತೆ ಎಂದು ನೆಪವೊಡ್ಡಿರುವ ಶಿಕ್ಷಣ ಇಲಾಖೆಯು ಹಿಜಾಬ್ ವಿಷಯದಲ್ಲಿ ವಾದಿಸಲು 88.00 ಲಕ್ಷ ರೂ. ಸಂಭಾವನೆ ನೀಡುತ್ತಿದೆ. ಈ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಕಾಲತ್ತು ವಹಿಸಿದ್ದ ಸಾಲಿಸಿಟರ್ ಜನರಲ್ ಅಫ್ ಇಂಡಿಯಾ ತುಷಾರ್ ಮೆಹ್ತಾರಿಗೆ ಒಂದು ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 9 ದಿನಗಳಿಗೆ 39,60,000 ರೂ. ಮತ್ತೋರ್ವ ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೆ.ಎಂ. ನಟರಾಜ್‌ರಿಗೆ ಪ್ರತೀ ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 11 ದಿನಗಳಿಗೆ ಒಟ್ಟು 48,40,000 ರೂ. ನಿಗದಿಪಡಿಸಲಾಗಿತ್ತು ಎಂಬುದು ಗೊತ್ತಾಗಿದೆ ಎಂದು ದಿ ಫೈಲ್ ಡಾಟ್ ಇನ್ ಮಾಹಿತಿ ಹೊರ ಹಾಕಿದೆ.












