ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಝ್ ಮಾಡಲು ಮಾನವ ಸರಪಳಿ ರಚಿಸಿದ ಹಿಂದೂ ವಿದ್ಯಾರ್ಥಿಗಳು

0
50604

ಸನ್ಮಾರ್ಗ ವಾರ್ತೆ

ನವದೆಹಲಿ: ರಮಝಾನ್‌ ಉಪವಾಸದ ವೇಳೆ ಲಕ್ನೋ ವಿಶ್ವವಿದ್ಯಾಲಯ ಆವರಣದಲ್ಲಿರುವ ಐತಿಹಾಸಿಕ ಲಾಲ್ ಬರಾದರಿ ಮಸೀದಿ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ, ಮುಸ್ಲಿಂ ವಿದ್ಯಾರ್ಥಿಗಳು ಮಸೀದಿಯ ಹೊರಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹಿಂದೂ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಿದರು.

ಸಮಾಜವಾದಿ ಛತ್ರ ಸಭಾ (SCS), ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSU) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಸಂಘಟನೆಗಳ ವಿದ್ಯಾರ್ಥಿಗಳು ಈ ಉಪಕ್ರಮಕ್ಕೆ ಮುಂದಾಗಿದ್ದು, ಉಪವಾಸಿಗರು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಲು ಹಿಂದೂ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದರು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ‘ಗಂಗಾ-ಜಮುನಿ ತಹ್ಸೀಬ್’ ಹ್ಯಾಶ್‌ಟ್ಯಾಗ್‌ನೊಂದಿಗೆ ವೈರಲ್ ಆಗಿದೆ.

ಮಸೀದಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ ಎಂದು ಮುಸ್ಲಿಂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ರಂಜಾನ್ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ. ಮಸೀದಿ ಮುಚ್ಚಿರುವ ಕಾರಣ ಇಫ್ತಾರ್ ಕಾರ್ಯಕ್ರಮವನ್ನು ಸಹ ಹೊರಾಂಗಣದಲ್ಲಿ ನಡೆಸಲಾಯಿತು.

ಇದಕ್ಕೂ ಮಧ್ಯೆ, ಸೋಮವಾರ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಮಸೀದಿ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.