ಅಷ್ಟು ಜನರನ್ನು ಕಂಡು ಅಬೂತಲ್ಹಾ ಗಾಬರಿಗೊಂಡರು, ಪತ್ನಿ ಸಂತೈಸಿದರು…

0
188

ಸನ್ಮಾರ್ಗ ವಾರ್ತೆ

✍️ಅಬೂ ಝೀಶಾನ್

ಪ್ರವಾದಿ(ಸ) ಹೇಳಿದರು, ನಾನು ಎಲ್ಲರ ಆಮಂತ್ರಣವನ್ನು ಸ್ವೀಕರಿಸುತ್ತೇನೆ, ಒಂದು ವೇಳೆ ಆಮಂತ್ರಿಸಿದವರು ಆಹಾರವಾಗಿ ಆಡಿನ ಗೊರಸನ್ನು ಕೊಟ್ಟರೂ ಸರಿ. ಹಾಗಾಗಿ ನಿಮ್ಮಲ್ಲಿ ಅವರಿಗೆ ತಿನ್ನಿಸಲು ಉತ್ತಮವಾದ ಆಹಾರ ಇಲ್ಲವೆಂಬ ಚಿಂತೆಯ ಅಗತ್ಯವಿಲ್ಲ. ನೀವು ಪ್ರವಾದಿ(ಸ) ರನ್ನು ನಿಮ್ಮ ಮನೆಗೆ ಆಮಂತ್ರಿಸಿದಾಗ, ನೀವೇನು ಬಡಿಸಿದರೂ ಅವರು(ಸ) ನಿಮ್ಮ ಮನೆಗೆ ಬರುವರು.

ಹಾಗೆಯೇ ಪ್ರವಾದಿ(ಸ) ಕೇವಲ ಕೆಲವು ನಿರ್ದಿಷ್ಟ ವರ್ಗದವರ ಆಮಂತ್ರಣವನ್ನು ಮಾತ್ರ ಸ್ವೀಕರಿಸುವುದಲ್ಲ ಬದಲಾಗಿ ಎಲ್ಲರ ಆಮಂತ್ರಣವನ್ನು ಸ್ವೀಕರಿಸುತ್ತಿದ್ದರು.

ಹ. ಅನಸ್(ರ) ಹೇಳುತ್ತಾರೆ, “ಪ್ರವಾದಿ(ಸ) ರೋಗಿಗಳನ್ನು ಭೇಟಿ ನೀಡುತ್ತಿದ್ದರು, ಜನಾಝಾದಲ್ಲಿ ಭಾಗವಹಿಸುತ್ತಿದ್ದರು ಹಾಗೂ ಎಲ್ಲರ ಆಮಂತ್ರಣವನ್ನೂ ಸ್ವೀಕರಿಸುತ್ತಿದ್ದರು. ಎಲ್ಲಿಯವರೆಗೆಂದರೆ ಗುಲಾಮರು ತಮ್ಮ ಮನೆಗೆ ಪ್ರವಾದಿ(ಸ)ರನ್ನು ಆಮಂತ್ರಿಸಿದಾಗ ಅವರ ಆಮಂತ್ರಣವನ್ನು ಸ್ವೀಕರಿಸುತ್ತಿದ್ದರು.

ಪ್ರವಾದಿ(ಸ) ಆಹ್ವಾನದ ಮೇರೆಗೆ ಯಾರದಾದರೂ ಮನೆಗೆ ಹೋದಾಗ ಅಲ್ಲಿ ಏನಿರುತ್ತದೋ ಅದನ್ನು ತಿನ್ನುತ್ತಿದ್ದರು. ಪ್ರವಾದಿ(ಸ)ರಿಗೆ ತಂಪಾದ ಸಿಹಿ ಪಾನೀಯ ಇಷ್ಟವಿತ್ತು. ಅವರು ಬೆಣ್ಣೆಯ ಪಾನಿಯವನ್ನೂ ಇಷ್ಟಪಡುತ್ತಿದ್ದರು. ಹಾಗೆಯೇ ಜೇನು ಹಾಕಿದ ನೀರನ್ನು ಇಷ್ಟ ಪಡುತ್ತಿದ್ದರು. ಬಿಸಿಯಾದ ಮರುಭೂಮಿಯ ತಾಪಕ್ಕೆ ಅದು ಬಹಳ ಆಹ್ಲಾದಕರ ಪಾನೀಯವಾಗಿತ್ತು.

ಪ್ರವಾದಿ(ಸ) ಎಷ್ಟು ವಿನಯಶೀರಲರಾಗಿದ್ದರೆಂದರೆ ರೊಟ್ಟಿಯನ್ನು ಯಾವುದಾದರೊಂದಿಗೆ ಮುಳುಗಿಸಿ ತಿನ್ನುತ್ತಿದ್ದರು. ಅದು ಕೆಲವೊಮ್ಮೆ ಜೇನಾಗಿರುತ್ತಿತ್ತು, ಕೆಲವೊಮ್ಮೆ ಎಣ್ಣೆ (ಆಲೀವ್ ಎಣ್ಣೆ) ಆಗಿರುತ್ತಿತ್ತು. ಹೇಗಿದ್ದರೂ ಪ್ರವಾದಿ(ಸ) ಬಹಳ ಸಂತೋಷದಿಂದ ತಿನ್ನುತ್ತಿದ್ದರು. ಒಂದು ವೇಳೆ ತಿನ್ನಲು ಆಡಿನ ಮಾಂಸ ಇದ್ದರೆ ಅದರ ಭುಜದ ಭಾಗವನ್ನು ಬಹಳ ಇಷ್ಟಪಡುತ್ತಿದ್ದರು.

ಕೆಲವು ಸಲ ಪ್ರವಾದಿ(ಸ) ತನ್ನೊಂದಿಗೆ ಆಹ್ಲು ಸುಫ್ಫಾ (ಮದೀನಾದ ಮಸೀದಿಯಲ್ಲಿದ್ದು ಜ್ಞಾನಾರ್ಜನೆ ಮಾಡುತ್ತಿದ್ದ ಬಡ ಸಹಾಬಿಗಳು) ದವರನ್ನು, ಹಸಿದ ಬಡವರನ್ನು, ಅನಾಥರನ್ನು ತನ್ನೊಂದಿಗೆ ಕರೆ ತರುತ್ತಿದ್ದರು.

ಪ್ರವಾದಿ(ಸ) ಇತರರ ಮನೆಗೆ ಹೋದಾಗ ಅವರ ಅತಿದೊಡ್ಡ ಅಭಿಲಾಷೆ ಪ್ರವಾದಿ(ಸ) ಅವರ ಮನೆಯಲ್ಲಿ ನಮಾಝ್ ಮಾಡುವುದು ಹಾಗೂ ಅವರಿಗಾಗಿ ದುಆ ಮಾಡುವುದು. ಪ್ರವಾದಿ(ಸ)ರಿಗೂ ಈ ಸಂಗತಿ ತಿಳಿದಿತ್ತು. ಹಾಗಾಗಿ ಪ್ರವಾದಿ(ಸ) ಯಾರದಾದರೂ ಮನೆಗೆ ಹೋದಾಗ ಅಲ್ಲಿ ನಮಾಝ್ ಮಾಡುತ್ತಿದ್ದರು ಹಾಗೂ ಆ ಮನೆಯವರು ಪ್ರವಾದಿ(ಸ) ನಮಾಝ್ ಮಾಡಿದ ಸ್ಥಳವನ್ನು ಮುಸಲ್ಲಾ (ನಮಾಝ್ ಮಾಡುವ ಸ್ಥಳ) ಆಗಿ ಮಾಡಿ ಅದೇ ಸ್ಥಳದಲ್ಲಿ ಯಾವಾಗಲೂ ನಮಾಝ್ ಮಾಡುತ್ತಿದ್ದರು.

ಹ. ಅನಸ್(ರ) ವರದಿ ಮಾಡುತ್ತಾರೆ, “ಒಮ್ಮೆ ಪ್ರವಾದಿ(ಸ) ನಮ್ಮ ಮನೆಗೆ ಅತಿಥಿಯಾಗಿ ಬಂದಾಗ ಅವರು ನಮ್ಮ ಮನೆಯಲ್ಲಿ ನಮಾಝ್ ಮಾಡಿದರು. ನಾನು ಪ್ರವಾದಿ(ಸ) ಹಿಂದೆ ನಿಂತಿದ್ದೆ. ನಮ್ಮೊಂದಿಗೆ ಒಬ್ಬ ಅನಾಥ ಬಾಲಕ ನಿಂತಿದ್ದ. ನಮ್ಮ ಹಿಂದೆ ನನ್ನ ತಾಯಿ ಉಮ್ಮಾ ಸಲಮಾ ಕೂಡಾ ನಿಂತು ನಮಾಝ್ ಮಾಡಿದರು.

“ಒಮ್ಮೆ ನನ್ನ ಅಜ್ಜಿ ತಾನು ಮಾಡಿದ ಆಹಾರವನ್ನು ಪ್ರವಾದಿ(ಸ)ರಿಗೆ ತಿನ್ನಲು ಇಷ್ಟಪಟ್ಟು ಅವರನ್ನು(ಸ) ಮನೆಗೆ ಆಹ್ವಾನಿಸಿದರು. ಪ್ರವಾದಿ(ಸ) ಬಂದು ತಿಂದು ಆದ ನಂತರ ಹೇಳಿದರು, ನಾವು ನಮಾಝ್ ಮಾಡುವ. ನಾನು ಹೋಗಿ ನಮ್ಮಲ್ಲಿದ್ದ ಕಂಬಳಿಯನ್ನು ತಂದೆ. ಅದು ತುಂಬಾ ಹಳೆಯದಾಗಿತ್ತು. ಅದರಲ್ಲಿ ನಾವೆಲ್ಲ ನಮಾಝ್ ಮಾಡಿದೆವು. ನಂತರ ಪ್ರವಾದಿ(ಸ) ಹೊರಟು ಹೋದರು.

ಹ. ಅನಸ್(ರ) ಹೇಳುತ್ತಾರೆ, ಒಮ್ಮೆ ಅಬೂ ತಲ್ಹಾ ಪ್ರವಾದಿ(ಸ)ರನ್ನು ತನ್ನ ಮನೆಗೆ ಆಹ್ವಾನಿಸಿದಾಗ ಪ್ರವಾದಿ(ಸ) ಮಸೀದಿಯಲ್ಲಿ ತಮ್ಮೊಂದಿಗಿದ್ದ ಎಲ್ಲರನ್ನೂ ಕರೆತಂದರು. ಇಷ್ಟು ಜನರು ಒಟ್ಟಿಗೆ ತನ್ನ ಮನೆಗೆ ಬರುತ್ತಿರುವುದನ್ನು ಕಂಡು ಅಬೂ ತಲ್ಹಾ ಗಾಬರಿಗೊಂಡು ತನ್ನ ಪತ್ನಿಯೊಂದಿಗೆ ಹೇಳುತ್ತಾರೆ, ಪ್ರವಾದಿಯವರು(ಸ) ಎಲ್ಲರನ್ನು ಕರೆದುಕೊಂಡು ಬಂದಿದ್ದಾರೆ, ನಮ್ಮಲ್ಲಾದರೂ ಬಹಳ ಸ್ವಲ್ಪ ಆಹಾರವಿರುವುದು. ಈಗ ಏನು ಮಾಡುವುದು? ಅವರ ಪತ್ನಿ ಉಮ್ಮು ಸುಲೈಮ್(ರ) ಹೇಳಿದರು, “ಅಲ್ಲಾಹ್ ಹಾಗೂ ಆತನ ರಸೂಲರಿಗೆ ಹೆಚ್ಚು ತಿಳಿದಿದೆ. ಹಾಗಾಗಿ ಗಾಬರಿಯಾಗಬೇಡಿರಿ.”

ಪ್ರವಾದಿಯವರು(ಸ) ಮನೆಯೊಳಗೆ ಪ್ರವೇಶಿಸಿದ ನಂತರ ಮನೆಯಲ್ಲಿರುವ ಆಹಾರವನ್ನು ತರಲು ಹೇಳಿದರು. ಮನೆಯಲ್ಲಿದ್ದ ಕೆಲವು ರೊಟ್ಟಿಗಳನ್ನು ತರಲಾಯಿತು. ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಒಂದು ಬಟ್ಟೆಯ ಮೇಲೆ ಹಾಕಲಾಯಿತು. ನಂತರ ಪ್ರವಾದಿ(ಸ) ಕೈ ಎತ್ತಿ ಅಲ್ಲಾಹನೊಂದಿಗೆ ಪ್ರಾರ್ಥಿಸಿದರು. ನಂತರ ಹತ್ತು ಜನರನ್ನು ಒಳಗೆ ಕಳುಹಿಸಲು ಹೇಳಿದರು. ಅವರೆಲ್ಲರೂ ಹೊಟ್ಟೆ ತುಂಬಾ ತಿಂದು ಹೊರಗೆ ಹೋದರು. ನಂತರ ಹತ್ತು ಮಂದಿಯನ್ನು ಒಳಗೆ ಕಳುಹಿಸಲು ಹೇಳಲಾಯಿತು. ಅವರೂ ಹೊಟ್ಟೆ ತುಂಬಾ ತಿಂದು ಹೊರಗೆ ಹೋದರು. ನಂತರ ಪುನಃ ಹತ್ತರಂತೆ ಒಳಗೆ ಕಳುಹಿಸಲಾಯಿತು. ಕೊನೆಗೆ ಎಲ್ಲರೂ ಹೊಟ್ಟೆ ತುಂಬಾ ತಿಂದರು. ಸುಮಾರು ಎಪ್ಪತ್ತು ಅಥವಾ ಎಂಬತ್ತು ಮಂದಿ ಆ ಊಟವನ್ನು ಹೊಟ್ಟೆ ತುಂಬಾ ತಿಂದರು.

ಪ್ರವಾದಿ(ಸ) ಜನರ ಮನೆಗೆ ಬರುವುದು ಮಾತ್ರವಲ್ಲ ಅವರೊಂದಿಗೆ ವಿಶೇಷವಾದ ಸಂಬಂಧವನ್ನು ಸ್ಥಾಪಿಸುತ್ತಿದ್ದರು. ಅದಲ್ಲದೆ ಪ್ರವಾದಿ(ಸ)ರವರ ಭೇಟಿಯಿಂದ ಆ ಮನೆ ಅನುಗ್ರಹೀತವಾಗುತ್ತಿತ್ತು.