ನಮ್ಮ ಮಕ್ಕಳು ಹೇಗೆ ಬೆಳೆಯಬೇಕು?

0
2258

ಸನ್ಮಾರ್ಗ ವಾರ್ತೆ

✍️ ಸಿ.ಟಿ. ಸುಹೈಬ್

ಸೃಷ್ಟಿಕರ್ತನು ನೀಡಿದ ಅನುಗ್ರಹಗಳಲ್ಲಿ ಅತ್ಯಂತ ಸುಮಧುರವಾದದ್ದು ಮಕ್ಕಳಾಗಿದ್ದಾರೆ. ಅವರು ಜೀವನದ ಪ್ರಕಾಶವಾಗಿದ್ದಾರೆ. ಸಂತೋಷ ಮತ್ತು ಆನಂದದ ಕೇಂದ್ರಗಳಲ್ಲಿ ಮಕ್ಕಳಿರುತ್ತಾರೆ. ಮಾತಾಪಿತರು ಮಕ್ಕಳ ಜನನಕ್ಕೆ ಕಾರಣಕರ್ತರಾಗುತ್ತಾರೆ ಮಾತ್ರವಲ್ಲ ಅವರ ಬೆಳವಣಿಗೆ ಗುಣ ಸ್ವಭಾವದ ರೂಪೀಕರಣದಲ್ಲಿ, ಮರಣಾ ನಂತರದ ಜೀವನದ ವಿಜಯದಲ್ಲಿ ಮಹತ್ತರ ಪಾತ್ರ ವಹಿಸುವವರಾಗಿದ್ದಾರೆ.

ಮಕ್ಕಳ ಬಗ್ಗೆ ಕುರ್‌ಆನ್ ಮೂರು ಪದಗಳನ್ನು ಬಳಸಿದೆ. ಹಿಬತ್, ಝೀನತ್, ಫಿತ್‌ನತ್.

ಹಿಬತ್ ಎಂದರೆ ಉಡುಗೊರೆ ಎಂದರ್ಥ. ನಮಗೆ ಯಾರಾದರೂ ಒಂದು ಉಡುಗೊರೆ ನೀಡಿದಾಗ ಆ ಉಡುಗೊರೆಯೊಂದಿಗೆ ಮತ್ತು ಅದು ನೀಡಿದವರ ಬಗ್ಗೆ ನಮಗೆ ವಿಶೇಷವಾದ ಪ್ರೀತಿ ಇರುತ್ತದೆ. ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರಿಸಿಕೊಂಡಿರುವ ನಾವು ಬದುಕಿನಲ್ಲಿ ನಮಗೆ, ಮಹತ್ತರವಾದ ಉಡುಗೊರೆ ನೀಡಿದ ಅಲ್ಲಾಹನೊಡನೆ ಅದಕ್ಕಿಂತ ಹೆಚ್ಚಿನ ಪ್ರೀತಿ ಇರಬೇಕಲ್ಲವೇ.

“ಅಲ್ಲಾಹನು ಭೂಮಿ ಆಕಾಶಗಳ ಪ್ರಭುತ್ವದ ಒಡೆಯನು. ತಾನಿಚ್ಛಿಸಿದ್ದನ್ನು ಅವನು ಸೃಷ್ಟಿಸುತ್ತಾನೆ, ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು ಹೆಣ್ಣುಗಳೆರಡನ್ನೂ ಸೇರಿಸಿಕೊಡುತ್ತಾನೆ, ತಾನಿಚ್ಛಿಸಿದವರನ್ನು ಬಂಜೆಯಾಗಿ ಮಾಡುತ್ತಾನೆ. ಅವನು ಸರ್ವಜ್ಞನೂ ಸರ್ವ ಸಮರ್ಥನೂ ಆಗಿರುತ್ತಾನೆ.” (ಅಶ್ಶೂರಾ: 49-50)

ಝೀನತ್ ಎಂದರೆ ಅಲಂಕಾರ ಶೃಂಗಾರ ಎಂದರ್ಥ. “ಸಂಪತ್ತು ಮತ್ತು ಸಂತಾನಗಳು ಇಹಲೋಕದ ಅಲಂಕಾರವಾಗಿದೆ” (ಅಲ್ ಕಹ್‌ಫ್: 40) ಈ ಲೋಕದಲ್ಲಿ ಮಕ್ಕಳು ಆನಂದ ಮತ್ತು ಸಂತೋಷ ನೀಡುವ ಘಟಕಗಳಾಗಿವೆ. ಅದೇ ವೇಳೆ ಇಹಲೋಕದ ಅಲಂಕಾರ ಕ್ಷಣಿಕವಾದುದು, ನಶ್ವರವಾದುದು. ಯಾವಾಗ ಬೇಕಾದರೂ ಅದು ಹಾಳಾಗಬಹುದು. ಆದರೆ ಪ್ರಸ್ತುತ ಅಲಂಕಾರವನ್ನು ಪರಲೋಕಕ್ಕಿರುವ ಸೊತ್ತಾಗಿ ಮಾರ್ಪಡಿಸಿದಾಗ ಅದು ಅನಶ್ವರವಾಗಿ ಶಾಶ್ವತವಾಗಿ ನೆಲೆ ನಿಲ್ಲುತ್ತದೆ.

ಫಿತ್ನ ಎಂದರೆ ಪರೀಕ್ಷೆ ಎಂದರ್ಥವಾಗಿದೆ. “ನಿಮ್ಮ ಸೊತ್ತು, ಸಂತಾನಗಳು ಒಂದು ಪರೀಕ್ಷೆಯಾಗಿದೆ. ಅದು ಅಲ್ಲಾಹನಲ್ಲಿ ಮಹತ್ತರವಾದ ಪ್ರತಿಫಲ ಸಿಗುವಂತಹದ್ದು ಎಂಬುದನ್ನು ನೀವು ಅರಿತುಕೊಳ್ಳಿರಿ. (ಅಲ್ ಅಂಫಾಲ್: 28)

ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳೂ ಪರೀಕ್ಷೆಯಾಗಿದೆ, ಸಂಪತ್ತು ನೀಡಿದರೆ ಅದನ್ನು ಯಾವ ರೀತಿ ವ್ಯಯಿಸಲಾಗಿದೆ ಎಂಬುದು ಮುಖ್ಯವಲ್ಲವೇ? ಹೇಗೆ ಸಂಪಾದಿಸಲಾಗಿದೆ, ಎಲ್ಲಿ ವ್ಯಯಿಸಲಾಗಿದೆ ಎಂಬುದೆಲ್ಲವನ್ನೂ ಪರಿಶೀಲಿಸಬೇಕು.

ಹಾಗೆಯೇ ಮಕ್ಕಳನ್ನು ಹೇಗೆ ಬೆಳೆಸಲಾಗಿದೆ, ಅವರೊಂದಿಗಿನ ಕರ್ತವ್ಯ ಹೇಗೆ ನಿಭಾಯಿಸಲಾಗಿದೆ, ಅವರನ್ನು ಪ್ರೀತಿಸಿದ್ದೀರಾ? ಅವರೊಂದಿಗೆ ನ್ಯಾಯಯುತವಾಗಿ ವರ್ತಿಸಿದ್ದೀರಾ? ಎಂಬುದನ್ನು ಅಲ್ಲಾಹನ ಮುಂದೆ ಸಮರ್ಪಿಸಬೇಕು. ಮಕ್ಕಳು ಇದ್ದವರಿಗೆ ಇದೊಂದು ಪರೀಕ್ಷೆಯಾಗಿರುವಂತೆಯೇ ಮಕ್ಕಳು ಇಲ್ಲದವರಿಗೂ ಮತ್ತೊಂದು ರೀತಿಯಲ್ಲಿ ಪರೀಕ್ಷೆಯಾಗುತ್ತದೆ.

ಮೂರು ರೀತಿಯ ಮಕ್ಕಳು ತಂದೆ-ತಾಯಂದಿರಿಗೆ ಪ್ರಯೋಜನಕಾರಿಯಾಗಬಹುದು. ಅದರಲ್ಲಿ ಒಂದು ಇಹಲೋಕದಲ್ಲಾಗಿದೆ. ಇಲ್ಲಿ ಸಮತೋಷ ಮತ್ತು ಕಣ್ಣಿಗೆ ಆನಂದ ನೀಡುವುದರ ಜೊತೆಗೆ ವಯಸ್ಸಾದಾಗ ಮಾತಾಪಿತರಿಗೆ ನೆರಳು ಆಶ್ರಯವಾಗಿ ಇರುವ ಮಕ್ಕಳು ಸೌಭಾಗ್ಯವಾಗಿದ್ದಾರೆ. ಮಾತಾಪಿತರ ಮರಣಾ ನಂತರ ಪರಲೋಕ ಜೀವನಕ್ಕಿಂತ ಮೊದಲು ಇರುವ ಘಟಕವಾಗಿದೆ ಮಕ್ಕಳಿಂದ ಪ್ರಯೋಜನ ಲಭಿಸುವ ಮತ್ತೊಂದು ಲೋಕ. ಮರಣ ಹೊಂದುವುದರೊಂದಿಗೆ ಕರ್ಮ ಫಲಗಳು ಮುಗಿದು ಹೋಗುತ್ತದೆ. ನಂತರ ಉಳಿಯುವುದು ನಾವು ಬಿಟ್ಟು ಹೋದ ಒಳಿತಿನ ಮುಂದುವರಿಕೆ ಮಾತ್ರವಾಗಿರುತ್ತದೆ. ಮರಣ ಹೊಂದಿದ ಬಳಿಕ ನಮಗೆ ಸುಖ ಸಂತೋಷಗಳು ಹರಿದು ಬರುವ ಹಾದಿಗಳಲ್ಲಿ ಒಂದು ಹಾದಿ ಮಕ್ಕಳಾಗಿದ್ದಾರೆ. ಅವರು ಮಾತಾಪಿತರಿಗಾಗಿ ಪ್ರಾರ್ಥಿಸುವಾಗ ಒಳಿತುಗಳನ್ನು ನಿರ್ವಹಿಸುವಾಗ ಮಾತಾಪಿತರ ಕರ್ಮ ಗ್ರಂಥಗಳಿಗೆ ಪುಣ್ಯಗಳು ಹರಿದು ಬರುತ್ತಿರುತ್ತವೆ. ಮರಣ ಹೊಂದಿದ ಮಾತಾಪಿತರಿಗೆ ನಿರ್ವಹಿಸಲು ಬಹಳಷ್ಟು ಒಳಿತುಗಳಿವೆ.

ಸೂರಾ ಅನ್ನಜ್ಮ್ ನ 39 ನೇ ಸೂಕ್ತವನ್ನು ವಿವರಿಸುತ್ತಾ ಮೌಲಾನಾ ಮೌದೂದಿ(ರ)ಯವರು ಹೀಗೆ ಬರೆಯುತ್ತಾರೆ-
“ಈಸಾಲು ಸ್ಸವಾಬ್” ಎಂದರೆ ಓರ್ವರು ಒಂದು ಸತ್ಕರ್ಮ ಮಾಡಿ ಅದರ ಪುಣ್ಯ ಮತ್ತು ಪ್ರತಿಫಲವನ್ನು ಮತ್ತೋರ್ವರಿಗೆ ನೀಡು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುವುದಾಗಿದೆ. ಈ ಬಗ್ಗೆ ಇಮಾಮ್ ಮಾಲಿಕ್(ರ) ಮತ್ತು ಇಮಾಮ್ ಶಾಫೀ(ರ) ಹೀಗೆ ಪ್ರಸ್ತಾಪಿಸಿದ್ದಾರೆ. “ನಮಾಝ್, ಉಪವಾಸ, ಕುರ್‌ಆನ್ ಪಾರಾಯಣ ಮುಂತಾದ ದೈಹಿಕ ಆರಾಧನೆಗಳಿಂದ ಪ್ರತಿಫಲ ಮತ್ತೋರ್ವರಿಗೆ ಲಭಿಸದು. ಆದರೆ ದಾನ ಧರ್ಮದಂತಹ ಆರ್ಥಿಕವಾದ ಆರಾಧನೆ ಹಜ್ಜ್ ನಂತಹ ದೈಹಿಕ ಮತ್ತು ಆರ್ಥಿಕ ಆರಾಧನೆಯ ಪ್ರತಿಫಲ ಮತ್ತೋರ್ವರಿಗೆ ತಲುಪುತ್ತದೆ.

ಯಾಕೆಂದರೆ ಓರ್ವರ ಕರ್ಮ ಮತ್ತೋರ್ವರಿಗೆ ಪ್ರಯೋಜನವಾಗದು ಎಂಬುದು ತಳಹದಿಯಾದರೂ ಪ್ರಬಲವಾದ ಹದೀಸ್‌ಗಳ ಬೆಳಕಿನಲ್ಲಿ ದಾನ ಧರ್ಮಗಳ ಪ್ರತಿಫಲ ಮತ್ತೋರ್ವರಿಗೆ ತಲುಪಿಸಲು ಸಾಧ್ಯವಿದೆ. ಓರ್ವರಿಗೆ ಬದಲಾಗಿ ಮತ್ತೋರ್ವರು ಹಜ್ಜ್ ನಿರ್ವಹಿಸಲು ಸಾಧ್ಯವಾಗುತ್ತದೆ. ಹನಫಿಗಳ ನಿಲುವು ಇದಕ್ಕಿಂತ ಭಿನ್ನವಾಗಿದೆ. ಮನುಷ್ಯನಿಗೆ ಸಕಲ ಕರ್ಮಗಳ ಪ್ರತಿಫಲವನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು. ಅದು ನಮಾಝ್ ಆದರೂ ಸರಿ, ಉಪವಾಸ, ಕುರ್‌ಆನ್ ಪಾರಾಯಣವಾದರೂ ಸರಿ. ಹಜ್ಜ್ ಉಮ್ರ ಯಾವುದಾದರೂ ಸರಿ. ಇದರಲ್ಲಿ ಕೆಲವು ಸತ್ಕರ್ಮಗಳನ್ನು ಬದಿಗಿರಿಸಿ ಇನ್ನು ಕೆಲವನ್ನು ಮಾತ್ರ ಒಳಗೊಳ್ಳುವಂತಹದ್ದರಲ್ಲಿ ನ್ಯಾಯವಿಲ್ಲದ್ದಲ್ಲ. ಇದೇ ವಿಚಾರವನ್ನು ಹಲವಾರು ಹದೀಸ್‌ಗಳಲ್ಲಿ ಪ್ರಸ್ತಾಪಿಸಲಾಗಿದೆ.
(ತಫ್ಹೀಮುಲ್ ಕುರ್‌ಆನ್)

ನಾವು ಮರಣ ಹೊಂದಿದರೂ ನಮಗೆ ಪ್ರಾರ್ಥಿಸುವ ನಮಗಾಗಿ ಒಳಿತುಗಳು ಮಾಡುವ ಮಕ್ಕಳಿರುವುದು ನಮ್ಮ ಸೌಭಾಗ್ಯವಾಗಿದೆ.

ಮಕ್ಕಳು ಮಾತಾಪಿತರ ಕಣ್ಣಿನ ತಂಪಾಗಿರುತ್ತಾರೆ ಎಂಬುದು ಪರಲೋಕದ ಮೂರನೇ ಘಟಕವಾಗಿದೆ. ಪರಲೋಕದಲ್ಲಿ ಕೆಲವು ಮಾತಾಪಿತರಿಗೆ ವಿಶೇಷ ಗೌರವಾದರ ನೀಡುತ್ತಾನೆ. ಅವರಿಗೆ ಹೊಳೆಯುವ ಕಿರೀಟ ತೊಡಿಸಿರುತ್ತಾನೆ. ಅಂತಹ ರೀತಿಯಲ್ಲಿ ಗೌರವಿಸಲ್ಪಡುವುದಕ್ಕೆ ಕಾರಣವೇನೆಂದು ಹುಡುಕಿದಾಗ ಅವರು ಮಕ್ಕಳಿಗೆ ಕುರ್‌ಆನ್ ಕಲಿಸಿದವರು ಎಂದಾಗಿರುತ್ತದೆ. ಮಕ್ಕಳಿಗೆ ಕುರ್‌ಆನ್ ದೀನ್ ಎಲ್ಲವನ್ನೂ ಕಲಿಸಿ ಅವರಿಗೆ ಕಲಿಯಲು ಅವಕಾಶ ನೀಡಿ ಅವರನ್ನು ಪ್ರೋತ್ಸಾಹಿಸಿದ ತಂದೆ ತಾಯಂದಿರು ಅದರ ಪ್ರಯೋಜನ ಪರಲೋಕದಲ್ಲಿ ಪಡೆಯುತ್ತಾರೆ.

ಹೆಣ್ಮಕ್ಕಳು ಬದುಕಿನ ಸೌಭಾಗ್ಯವಾಗಿದ್ದಾರೆ. ಅವರೊಂದಿಗೆ ಉತ್ತಮವಾಗಿ ವರ್ತಿಸಿ ಅವರಿಗೆ ಸಂಸ್ಕಾರ ಕಲಿಸಿ ಬೆಳೆಸಿದರೆ ಆ ಮೂಲಕ ಆ ಮಕ್ಕಳು ತಂದೆ-ತಾಯಂದಿರಿಗೆ ಸ್ವರ್ಗದ ಹಾದಿಯಾಗಿ ಪರಿಣಮಿಸುವರು ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುತ್ತಾರೆ.

ಈ ರೀತಿ ಮಕ್ಕಳು ಮಾತಾಪಿತರ ಕಣ್ಣಿನ ತಂಪುಗಳಾಗುತ್ತಾರೆ. ಅವರೊಂದಿಗಿನ ಕರ್ತವ್ಯ, ಜವಾಬ್ದಾರಿಕೆಗಳನ್ನು ಮಕ್ಕಳು ಸರಿಯಾದ ರೀತಿಯಲ್ಲಿ ನಿಭಾಯಿಸಿದಾಗ ಇವೆಲ್ಲಾ ತಂಪಾಗಿ ಪರಿಣಮಿಸುತ್ತವೆ.

ಮಗನು ತಂದೆ-ತಾಯಿಯರನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂಬ ದೂರನ್ನು ಹ. ಉಮರ್(ರ)ಬಳಿ ಓರ್ವ ತಂದೆಯು ತಂದಿದ್ದರು. ದೂರನ್ನು ಆಲಿಸಿದ ಖಲೀಫ ಉಮರ್(ರ) ಮಗನನ್ನು ಕರೆದು ಮಗನ ಜವಾಬ್ದಾರಿಕೆಯ ಕುರಿತು ಆತನಲ್ಲಿ ವಿವರಿಸಿದರು. ಉಮರ್(ರ)ರ ಮಾತು ಮುಗಿದ ಬಳಿಕ ಆ ಮಗನು, “ತಂದೆ ತಾಯಿಯರಿಗೆ ಮಕ್ಕಳಲ್ಲಿ ಜವಾಬ್ದಾರಿಕೆ ಇಲ್ಲವೇ? ಎಂದು ಪ್ರಶ್ನಿಸಿದನು. ಅದಕ್ಕೆ ಉಮರ್(ರ) “ಅವರಿಗೆ ಉತ್ತಮ ಹೆಸರಿಡಬೇಕು. ಕುರ್‌ಆನ್ ಕಲಿಸಬೇಕು.’ ಎನ್ನುತ್ತಾ ಅವರ ಜವಾಬ್ದಾರಿಕೆಗಳನ್ನು ತಿಳಿಸಿದರು. ಆಗ ಮಗನು `ಇದು ಯಾವುದನ್ನೂ ನನ್ನ ತಂದೆ ನನಗೆ ನೀಡಿಲ್ಲ. ನನ್ನ ತಾಯಿಯೂ ಧಾರ್ಮಿಕ ಬದ್ಧತೆಯುಳ್ಳವರಲ್ಲ. ನನಗೆ ಕಪ್ಪು ವಸ್ತು ಎಂಬರ್ಥದ ಹೆಸರನ್ನಿಟ್ಟಿದ್ದಾರೆ, ಕುರ್‌ಆನಿ ನಿಂದ ನನಗೆ ಏನೂ ಕಲಿಸಿಲ್ಲ ಎಂದನು. ಕೂಡಲೇ ಉಮರ್(ರ) ತಂದೆಯನ್ನು ಕರೆದು “ನೀವು ನಿಮ್ಮನ್ನು ಮಗನು ಸರಿಯಾದ ರೀತಿಯಲ್ಲಿ ಅನುಸರಿಸುತ್ತಿಲ್ಲ ಎಂದು ದೂರು ತಂದಿದ್ದೀರಿ. ಆದರೆ ಮಗನು, ನೀವು ಆತನಲ್ಲಿ ವಹಿಸಬೇಕಾದ ಜವಾಬ್ದಾರಿಕೆ, ಹೊಣೆಗಾರಿಕೆಯಲ್ಲಿ ವಹಿಸಿದ ಲೋಪದ ಬಗ್ಗೆ ತಿಳಿಸಿದ್ದಾನೆ” ಎಂದರು.

ಮಕ್ಕಳ ಗುಣ ಸ್ವಭಾವದ ರೂಪೀಕರಣದಲ್ಲಿ ಸಂಸ್ಕಾರ, ವ್ಯಕ್ತಿತ್ವ ರೂಪಿಸುವಲ್ಲಿ ಮಾತಾಪಿತರ ಕ್ರಿಯಾತ್ಮಕವಾದ ಪಾತ್ರ ವಹಿಸಬೇಕು. ವಿಶೇಷವಾಗಿ ಬಾಲ್ಯ ಕಾಲದಲ್ಲಿ ಅವರ ರೋಲ್ ಮಾಡೆಲ್ ಆಗಬೇಕು. ಅವರು ನೋಡಿ ಕೇಳಿ ಕಲಿಯುತ್ತಾರೆ. ಮದ್ರಸಗಳಲ್ಲಿ ಶಾಲೆಗಳಲ್ಲಿ ಮತ್ತಿತರ ಕಡೆ ಕಲಿಯುವ ಮೌಲ್ಯಗಳು ತಂದೆ-ತಾಯಿಯರ ಬದುಕಿನಲ್ಲಿ ಕಾಣದಿದ್ದರೆ ಆ ಮೌಲ್ಯಗಳಿಗೆ ಮಕ್ಕಳು ಬೆಲೆ ಕಲ್ಪಿಸಲಾರರು. ನಮ್ಮ ಗುಣ ಸ್ವಭಾವ, ವ್ಯವಹಾರ, ವರ್ತನೆ, ನಮ್ಮ ಮನೆಯ ಕುಟುಂಬದ ವ್ಯವಸ್ಥೆಯಲ್ಲಿ ಇಸ್ಲಾಮಿನ ಸೌಂದರ್ಯ ಕಂಡು ಬಂದರೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ.

ಕುಟುಂಬ ಎಂಬುದು ಇಸ್ಲಾಮಿನಲ್ಲಿ ಶಾಂತಿ, ಸಮಾಧಾನ ಉಂಟು ಮಾಡುವ ಸ್ಥಳ. ಮಾತ್ರವಲ್ಲ ಲೋಕದಲ್ಲಿ ಓರ್ವ ಸತ್ಯವಿಶ್ವಾಸಿಗೆ ನಿರ್ವಹಿಸಬಹುದಾದ ಮಹತ್ತರವಾದ ದೌತ್ಯಗಳಿಗೆ ಬೇಕಾದ ಮೌಲ್ಯಗಳು, ಗುಣಗಳನ್ನು ನೆಟ್ಟು ಬೆಳೆಸುವುದು ಕುಟುಂಬವಾಗಿದೆ.

ಮಕ್ಕಳೊಂದಿಗೆ ಸಾಧ್ಯವಾದಷ್ಟು ಪ್ರೀತಿ ಸ್ನೇಹ ಪ್ರಕಟಿಸುತ್ತಿರಬೇಕು. ಅವರಲ್ಲಿನ ಸಣ್ಣ ಸಣ್ಣ ಯಶಸ್ಸನ್ನೂ, ಒಳಿತುಗಳನ್ನೂ ಪ್ರೋತ್ಸಾಹಿಸುತ್ತಾ ಅಭಿನಂದಿಸುತ್ತಿರಬೇಕು. ಅವರ ತಪ್ಪುಗಳನ್ನು ತಿದ್ದುವಾಗಲೂ ಅವರ ಅಭಿಮಾನಕ್ಕೆ ಧಕ್ಕೆ ತರಬಾರದು. ಗಂಡು ಹೆಣ್ಮಕ್ಕಳ ನಡುವೆ ಭೇದ ಕಲ್ಪಿಸಬಾರದು. ಮಕ್ಕಳ ಆಪ್ತರಂತೆ ತಂದೆ-ತಾಯಂದಿರು ವರ್ತಿಸಬೇಕು. ಮನೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು. ಭಾವೀ ಮಕ್ಕಳನ್ನು ಬೆಳೆಸುವಲ್ಲಿ ಅವರ ಸಮಸ್ಯೆಗಳನ್ನು ನೋಡಿ ಆಲಿಸುವಂತಹ ವಿಶೇಷ ಗುಣಗಳನ್ನು ಮಾತಾಪಿತರು ಬೆಳೆಸಿಕೊಳ್ಳಬೇಕು. ಮಕ್ಕಳ ಅಭಿರುಚಿ, ಹವ್ಯಾಸಗಳ ಬಗ್ಗೆ ಅರಿತಾಗ ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಲು ತಂದೆ-ತಾಯಂದಿರಿಗೆ ಸಹಾಯಕವಾಗುತ್ತದೆ. ತಂದೆ ತಾಯಂದಿರು ತಮ್ಮ ಹಠಮಾರಿತನ, ಬಯಕೆಗಳ ಗುಣವನ್ನು ಮಕ್ಕಳ ಮೇಲೆ ಹೇರಬಾರದು. ಅದು ಪ್ರತಿಕೂಲ ಪರಿಣಾಮ ಬೀರುತ್ತದೆ.

ಹಾಗೆಯೇ ಮಕ್ಕಳ ಲೋಕದ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ದೂರ ಸರಿದು ನಿಲ್ಲವುದು ಜೊತೆಗೆ ಅವರನ್ನು ಸಂಪೂರ್ಣ ನಿಯಂತ್ರಿಸಿ ಅವರ ಸ್ವತಂತ್ರ್ಯವನ್ನು ಸಂಪೂರ್ಣ ಮುಚ್ಚಿ ಬಿಡುವುದು ಕೂಡಾ ಅಪಾಯಕಾರಿಯಾಗಿದೆ. ಅತಿ ವೇಗವಾಗಿ ಬೆಳೆಯುವ ಮಕ್ಕಳ ಜೊತೆ ಮಾತಾಪಿತರೂ ಬೆಳೆಯುವುದು ಕ್ರಿಯಾತ್ಮಕವಾದ ಹಾದಿಯಾಗಿದೆ. ಮಕ್ಕಳಲ್ಲಿ ವೈಯುಕ್ತಿಕವಾಗಿ ಉತ್ತಮ ಗುಣ ಬೆಳೆಸಲು ಇದು ಸಹಾಯಕವಾಗುತ್ತದೆ. ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಲು ಅವಕಾಶ ಮಾಡಿ ಕೊಡಬೇಕು. ಅಧ್ಯಯನ ಕಲಿಕೆಗೆ ಬೆಂಬಲ ನೀಡುತ್ತಿರಬೇಕು. ಸತ್ಯದ ಹಾದಿಯಲ್ಲಿ ಮಾತನಾಡಲು ಧನಿಯೆತ್ತಲು ಸದಾ ಪ್ರೋತ್ಸಾಹಿಸುತ್ತಿರಬೇಕು. ಅದರ ಕುರಿತು ಸವಾಲುಗಳನ್ನು ಎದುರಿಸಲು ಧೈರ್ಯ ನೀಡಬೇಕು.

ಅಲಿಝಾ ಬೆಗೋವಿಚ್ ಹೇಳಿದಂತೆ “ನಯ ವಿನಯಕ್ಕಿಂತ ಅಭಿಮಾನದ ಕುರಿತು ಅನುಸರಣೆಗಿಂತ ಧೀರ ಶೂರತ್ವದ ಕುರಿತು ಕರುಣೆಗಿಂತ ನ್ಯಾಯ ಕುರಿತು ಮಾತನಾಡುವ ಒಂದು ತಲೆಮಾರು ಬೆಳೆದು ಬರಬೇಕು.”

ಪ್ರಸ್ತುತ ಸಂದರ್ಭದಲ್ಲಿ ಈಮಾನ್ ತಖ್ವಾ ಜೊತೆಗೆ ಧೀರರಾಗಿ ಮಕ್ಕಳನ್ನು ಬೆಳೆಸಬೇಕು. ವಿಧ್ಯಾರ್ಥಿ ಒಕ್ಕೂಟಗಳಲ್ಲಿ ಸಕ್ರಿಯವಾಗಿ ಮಕ್ಕಳು ಇರುವ ಬಗ್ಗೆ ಮಾತಾಪಿತರು ಅಭಿಮಾನ ಪಡಬೇಕು. ವೈಯುಕ್ತಿಕವಾದ ಕನಸು ಆಗ್ರಹ ಬಯಕೆ ಈಡೇರಿಕೆಯಲ್ಲಿ ಮಾತ್ರ ಕೇಂದ್ರೀಕೃತವಾಗುವುದು ಎಂಬುದು ಲಿಬರಲ್ ಚಿಂತನೆಯ ಭಾಗವಾಗಿದೆ. ಅದಕ್ಕಿಂತ ಭಿನ್ನವಾಗಿ ಸಾಮಾಜಿಕ ವಲಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಮಾಜಿಕ ಉದ್ದೇಶಗಳನ್ನು ಮುಂದಿರಿಸಿಕೊಂಡು ಕಾರ್ಯ ನಿರ್ವಹಿಸುವ ಒಕ್ಕೂಟದೊಂದಿಗೆ ಸಕ್ರಿಯವಾಗಿ ಭಾಗವಹಿಸುವುದು ಲಿಬರಲ್ ಸಿದ್ಧಾಂತದ ಜೊತೆ ನಡೆಸುವ ಪ್ರತಿರೋಧವಾಗಿದೆ.

ಸ್ವರ್ಗದ ಕಡೆಗೆ ಹೋಗುವ ಪ್ರಯಾಣದಲ್ಲಿ ನಮ್ಮ ಮಕ್ಕಳು ನಮ್ಮ ಜೊತೆಯೇ ಇರಬೇಕು. ಮಾತಾಪಿತರು ಮಕ್ಕಳು ಅವರ ಸಂಗಾತಿಗಳು ಎಲ್ಲರೂ ದೇವಚರಗಳ ಸ್ವಾಗತದೊಂದಿಗೆ ಸ್ವರ್ಗ ಪ್ರವೇಶಿಸುವ ರಂಗವನ್ನು ಕುರ್‌ಆನ್ ಹೀಗೆ ವರ್ಣಿಸಿದೆ.

“ಅರ್ಥಾತ್ ಅವರ ಶಾಶ್ವತ ನಿವಾಸವಾಗಳಿರುವ ಸ್ವರ್ಗೋದ್ಯಾನಗಳು. ಸ್ವತಃ ಅವರೂ ಅವರ ಪೂರ್ವಿಕರ, ಅವರ ಪತ್ನಿಯರ ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾಗಿರುವವರೂ ಅವುಗಳಲ್ಲಿ ಪ್ರವೇಶಿಸುವರು. ಎಲ್ಲಾ ದಿಕ್ಕುಗಳಿಂದಲೂ ದೇವಚರರು ಅವರನ್ನು ಸ್ವಾಗತಿಸಲು ಬರುವರು ಮತ್ತು ಅವರೊಡನೆ, “ನಿಮಗೆ ರಕ್ಷಣೆ ಇರಲಿ, ನೀವು (ಭೂ ಲೋಕದಲ್ಲಿ) ಸಹನೆಯಿಂದ ವರ್ತಿಸಿದ್ದುದರ ಫಲವಾಗಿ ಇಂದು ಇದಕ್ಕೆ ಅರ್ಹರಾಗಿರುತ್ತೀರಿ” ಎಂದು ಹೇಳುವರು. ಪರಲೋಕ ಗೃಹವು ಅದೆಷ್ಟು ಉತ್ತಮ!” (ರ‍್ರಅದ್: 23-24)