ಸನ್ಮಾರ್ಗ ವಾರ್ತೆ
✍️ ಅಮಾನ್ ಕೆ
ನಾವು ಮಾಡಿದ್ರೆ ಚಮತ್ಕಾರ ಅವರು ಮಾಡಿದ್ರೆ ಬಲಾತ್ಕಾರ ಎಂಬ ಮಾತು ಸಾರ್ವಜನಿಕವಾಗಿ ಚಾಲ್ತಿಯಲ್ಲಿದೆ. ಎಡಬಿಡಂಗಿತನ ಅಥವಾ ಹಿಪಾಕ್ರಸಿಯನ್ನು ಪ್ರಶ್ನಿಸುವುದಕ್ಕಾಗಿ ಈ ಮಾತು ಹುಟ್ಟಿಕೊಂಡಿದೆ. ಬಹುಶಃ ಈ ಮಾತಿಗೆ ಬಿಜೆಪಿಯಷ್ಟು ಸೂಕ್ತ ಪಕ್ಷ ಇನ್ನಾವುದೂ ಇಲ್ಲ ಅನ್ಸುತ್ತೆ.
ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆ ಈ ಮಾತನ್ನು ಸಂಪೂರ್ಣವಾಗಿ ಸಮರ್ಥಿಸುತ್ತದೆ. ಉಚಿತ ಕೊಡುಗೆಯನ್ನು ಉದ್ದಕ್ಕೂ ವಿರೋಧಿಸುತ್ತಾ ಬಂದ ಬಿಜೆಪಿ ಇದೀಗ ದೆಹಲಿಯಲ್ಲಿ ಅದೇ ಉಚಿತದ ಮೊರೆ ಹೋಗಿದೆ.
ತಾವು ಅಧಿಕಾರಕ್ಕೆ ಬಂದರೆ ದೆಹಲಿಯ ಗರ್ಭಿಣಿಯರಿಗೆ 21,000 ರೂಪಾಯಿ ಧನಸಹಾಯ ನೀಡುವುದಾಗಿ ಪ್ರಣಾಳಿಕೆಯಲ್ಲಿ ಅದು ಘೋಷಿಸಿದೆ. ಮಹಿಳಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಉಚಿತವಾಗಿ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿದೆ. ಗ್ಯಾಸ್ ಸಿಲಿಂಡರ್ ನ ಮೇಲೆ 500 ರೂಪಾಯಿ ಸಬ್ಸಿಡಿ ನೀಡುವುದಾಗಿಯೂ ಬಿಜೆಪಿ ಘೋಷಿಸಿದೆ. ಹಾಗೆಯೇ ಹೋಲಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಎರಡು ಉಚಿತ ಸಿಲಿಂಡರನ್ನು ನೀಡುವುದಾಗಿಯೂ ಅದು ಹೇಳಿದೆ. ಎಪ್ಪತ್ತು ವರ್ಷಕ್ಕಿಂತ ಮೇಲಿನವರಿಗೆ ಪ್ರತಿ ತಿಂಗಳು 3000 ರೂಪಾಯಿ ಪೆನ್ಷನ್ ನೀಡುತ್ತೇವೆ, 60ರಿಂದ 70 ವರ್ಷದ ನಡುವಿನ ವ್ಯಕ್ತಿಗಳಿಗೆ 2500 ರೂಪಾಯಿ ಪೆನ್ಷನ್ ನೀಡುತ್ತೇವೆ ಎಂದು ಕೂಡ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹಾಗೆಯೇ ಐದು ರೂಪಾಯಿಗೆ ಆಹಾರವನ್ನು ನೀಡುವ ಅಟಲ್ ಕ್ಯಾಂಟೀನ್ ಅನ್ನು ಕೂಡ ದೆಹಲಿಯಲ್ಲಿ ತೆರೆಯುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ..
ವಿಶೇಷ ಏನೆಂದರೆ ನರೇಂದ್ರ ಮೋದಿ ಹೋದಲ್ಲಿ ಬಂದಲ್ಲಿ ಫ್ರೀ ಬೀಸ್ ಫ್ರೀ ಬೀಸ್ ಎಂದು ವಿರೋಧ ಪಕ್ಷಗಳನ್ನು ತಮಾಷೆ ಮಾಡ್ತಾ ಇದ್ರು. ಉಚಿತವಾಗಿ ಜನರಿಗೆ ಕೊಟ್ಟು ವೋಟು ಬಾಚುವ ಅತ್ಯಂತ ದೇಶ ದ್ರೋಹಿ ಕೆಲಸವನ್ನ ಕಾಂಗ್ರೆಸ್ ಮಾಡ್ತಾ ಇದೆ, ಎಎಪಿ ಮಾಡ್ತಾ ಇದೆ ಮತ್ತು ಇನ್ನಿತರ ಇಂಡಿಯಾ ಪಕ್ಷಗಳು ಮಾಡ್ತಾ ಇವೆ ಎಂದು ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಹೇಳ್ತಾ ಇದ್ರು, ಅವರ ಬೆಂಬಲಿಗರ ಮಾತನ್ನಂತೂ ಕೇಳುವುದೇ ಬೇಡ. ಉಚಿತವಾಗಿ ಕೊಡುವುದೆಂದರೆ ಜನರನ್ನು ಸೋಮಾರಿಗಳನ್ನಾಗಿ ಮಾಡುವುದು ಎಂಬುದು ಅವರ ವ್ಯಾಖ್ಯಾನವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಉಚಿತವನ್ನು ಘೋಷಿಸಿದಾಗ ಅದನ್ನು ಈ ನರೇಂದ್ರ ಮೋದಿಯಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ ಪ್ರಶ್ನಿಸಿದ್ರು. ಖಜಾನೆ ಖಾಲಿಯಾಗುತ್ತೆ ಎಂದು ಹೇಳಿದರು. ಅಭಿವೃದ್ಧಿಗೆ ಹಣ ಇಲ್ಲ ಎಂದು ಮೈಕ್ ಸಿಕ್ಕಾಗಲೆಲ್ಲ ಹೇಳಿದ್ರು. ಈಗಲೂ ಹೇಳ್ತಾ ಇದ್ದಾರೆ. ಇಂದಿರಾ ಕ್ಯಾಂಟೀನ್ ಅನ್ನು ಕೂಡ ತಮಾಷೆ ಮಾಡಿದ್ರು. ಆದರೆ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದ ಅವರೇ ದೆಹಲಿ ಜನರಿಗೆ ಉಚಿತ ಘೋಷಣೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಉಚಿತಗಳ ಪ್ರಣಾಳಿಕೆಯನ್ನು ಘೋಷಿಸುವಾಗ ಅವರ ಮುಖದಲ್ಲಿ ಎಲ್ಲಷ್ಟೂ ನಾಚಿಕೆ ಕಾಣಿಸ್ತಾಯಿರಲಿಲ್ಲ. ತಮ್ಮ ಪಕ್ಷ ಈ ಹಿಂದೆ ಉಚಿತವನ್ನು ವಿರೋಧಿಸಿಯೇ ಇಲ್ಲವೇನೋ ಎಂಬ ರೀತಿಯಲ್ಲಿ ಅವರು ಬಹಳ ಗಡದ್ದಾಗಿ ತನ್ನ ಪ್ರಣಾಳಿಕೆಯಲ್ಲಿ ಉಚಿತವನ್ನು ಘೋಷಿಸಿದರು.
ಈ ಹಿಂದೆ ಏಎಪಿ ಪಕ್ಷವು ದೆಹಲಿಯಲ್ಲಿ ಉಚಿತವನ್ನು ಘೋಷಿಸಿದಾಗ ಇದೇ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಅವಮಾನಿಸಿ ಮಾತಾಡಿದ್ದರು. ಹಲವು ಚುನಾವಣಾ ಭಾಷಣಗಳಲ್ಲಿ ಈ ಉಚಿತವನ್ನು ಮತ್ತು ಎಎಪಿಯ ಧೋರಣೆಯನ್ನು ಪ್ರಶ್ನಿಸಿದ್ದರು. ಇದೀಗ ಅದೇ ದೆಹಲಿಯ ಜನರಿಗೆ ಪ್ರಧಾನಿ ನರೇಂದ್ರ ಮೋದಿಯ ಪಕ್ಷ ಉಚಿತದ ಮೇಲೆ ಉಚಿತವನ್ನು ಘೋಷಿಸಿದೆ. ಒಂದು ವೇಳೆ ಅವರು ಈ ಹಿಂದೆ ಹೇಳಿದ್ದು ನಿಜವೇ ಎಂದರೆ ಈಗ ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದೇ ಅರ್ಥ. ಒಂದುವೇಳೆ ಅವರು ಈ ಹಿಂದೆ ಹೇಳಿದ್ದು ಸುಳ್ಳು ಎಂದರೆ ಅವರಿಗೆ ದೇಶಕ್ಕಿಂತ ಅಧಿಕಾರವೇ ಮುಖ್ಯವಾಗಿದೆ ಎಂಬುದು ಸಾಬೀತಾಗುತ್ತೆ. ಕಳೆದ ಎರಡು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಉಚಿತವನ್ನು ತಮಾಷೆ ಮಾಡುತ್ತಾ ಬಂದ ಮತ್ತು ಅದನ್ನು ದೇಶದ್ರೋಹಿ ನೀತಿ ಎಂದು ಹೇಳುತ್ತಾ ಬಂದ ಬಿಜೆಪಿ ಈಗ ದೆಹಲಿಯ ತನ್ನ ಪ್ರಣಾಳಿಕೆಗೆ ಏನು ಉತ್ತರ ಕೊಡುತ್ತದೆ? ಈಗಲೂ ಅದು ಉಚಿತವನ್ನು ಖಜಾನೆ ಖಾಲಿ ಮಾಡುವ ಯೋಜನೆ ಎಂದು ಹೇಳುತ್ತ? ಹಾಗೆ ಹೇಳುವುದಾದರೆ ದೆಹಲಿಯಲ್ಲಿ ಅದು ಬಿಡುಗಡೆಗೊಳಿಸಿದ ಪ್ರಣಾಳಿಕೆಯ ಅರ್ಥ ಏನು? ಅದು ಖಜಾನೆ ಖಾಲಿ ಮಾಡಲ್ವಾ?
ಬಿಜೆಪಿ ಅಂದರೆ ಊಸರವಳ್ಳಿ ಪಕ್ಷ ಎಂದು ಹೇಳುತ್ತಾರೆ. ಬಹುಶಃ ದೆಹಲಿ ಚುನಾವಣಾ ಪ್ರಣಾಳಿಕೆಯು ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕನಿಷ್ಠ ನೈತಿಕತೆ ಎಂಬುದು ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಈ ಹಿಂದಿನ ಉಚಿತ ವಿರೋಧಿ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು. ಜನರ ಹಾದಿ ತಪ್ಪಿಸಿದ ಅಪರಾಧವನ್ನ ಅವರು ಹೊತ್ತು ಕೊಳ್ಳಬೇಕು ಮತ್ತು ತನ್ನ ಪಕ್ಷದ ನಾಯಕರಿಗೆ ಉಚಿತ ವಿರೋಧಿ ಧೋರಣೆಯನ್ನು ಕೈಬಿಡುವಂತೆ ಬಹಿರಂಗವಾಗಿ ಕರೆಕೊಡಬೇಕು. ಒಂದು ರಾಜಕೀಯ ಪಕ್ಷ ಇಷ್ಟು ಅಸ್ಪಷ್ಟತೆಗೆ ಮತ್ತು ಸೈದಾಂತಿಕ ವೈಕಲ್ಯಕ್ಕೆ ಒಳಗಾಗಬಾರದು












