ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ಶ್ರೀಲಂಕಾಗಿಂತ ಭಾರತದ ಸ್ಥಿತಿ ಆತಂಕಕಾರಿ! ಸಿದ್ದರಾಮಯ್ಯ

0
3350

ಸನ್ಮಾರ್ಗ ವಾರ್ತೆ

ಬೆಂಗಳೂರು: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (Global Hunger Index) ಭಾರತವು 111ನೇ ಸ್ಥಾನಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳು ಮಾತ್ರವಲ್ಲ ಸುಡಾನ್, ನೈಜೀರಿಯಾ, ಕಾಂಗೋದಂತಹ ದೇಶಗಳಿಗಿಂತಲೂ ಭಾರತದ ಸ್ಥಿತಿ ಕೆಟ್ಟದಾಗಿರುವುದು ವಿಷಾದನೀಯ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕದ 125 ದೇಶಗಳ ಪಟ್ಟಿಯಲ್ಲಿ ಭಾರತ ದೇಶ 111ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, 2018-22ರ ಅವಧಿಯಲ್ಲಿ ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆಯು ಜಗತ್ತಿನಲ್ಲಿಯೇ ಹೆಚ್ಚಿರುವುದು ಅತ್ಯಂತ ಆತಂಕಕಾರಿಯಾಗಿದೆ. ದುರಂತವೆಂದರೆ ತಮ್ಮನ್ನು ವಿಶ್ವಗುರು ಎಂದು ಬಿಂಬಿಸಿಕೊಳ್ಳುವಲ್ಲಿಯೇ ಸದಾಕಾಲ ಬ್ಯುಸಿಯಾಗಿರುವ ಪ್ರಧಾನಿ ಮೋದಿಯವರು ತಮ್ಮ ಆಡಳಿತದ ವೈಫಲ್ಯವನ್ನು ಎತ್ತಿಹಿಡಿಯುವ ಇಂತಹ ವಿಷಯಗಳು ಪ್ರಸ್ತಾಪವಾದೊಡನೆಯೇ ಮಹಾ ಮೌನಿಯಾಗುತ್ತಾರೆ, ಜಾಣ ಕಿವುಡು, ಜಾಣ ಕುರುಡು ಪ್ರದರ್ಶಿಸುತ್ತಾರೆ ಎಂದು ಟೀಕಿಸಿದ್ದಾರೆ.