ಪ್ರವಾದಿ ಪ್ರೇಮದ ಬೇಡಿಕೆಗಳು

0
316

✍️ಉಝೈರ್ ಮಲಿಕ್ ಫಲಾಹಿ

ಸನ್ಮಾರ್ಗ ವಾರ್ತೆ

ವಾಸ್ತವದಲ್ಲಿ ಪ್ರವಾದಿ ಪ್ರೇಮದ ಬೇಡಿಕೆಗಳನ್ನು ಈಡೇರಿಸುವುದೇ ನೈಜ ಪ್ರವಾದಿ ಪ್ರೇಮವನ್ನು ಅಳೆಯುವ ಮಾನ ದಂಡವಾಗಿದೆ. ಇಲ್ಲಿ  ನಾವು ಪ್ರವಾದಿ ಪ್ರೇಮದ ಕೆಲವು ಬೇಡಿಕೆಗಳನ್ನು ನೀಡುತ್ತಿದ್ದೇವೆ.

1.ಲೋಕದ ಪ್ರತಿಯೊಂದು ವಸ್ತುವಿಗಿಂತಲೂ ಹೆಚ್ಚು ಪ್ರೀತಿ ಪ್ರವಾದಿವರ್ಯರ(ಸ) ಮೇಲಿರಬೇಕು. ಮಾನವನಿಗೆ ವಿಭಿನ್ನ ವಸ್ತು/ವಿಷಯ ಮತ್ತು ವ್ಯಕ್ತಿಗಳ ಮೇಲೆ ಪ್ರೀತಿ ಇರುವುದು ಸ್ವಾಭಾವಿಕವಾಗಿದೆ. ಉದಾ: ಮಾತಾಪಿತರು, ಸಹೋದರ-ಸಹೋದರಿಯರು,  ಪತ್ನಿ-ಮಕ್ಕಳು, ಆಸ್ತಿ-ಸಂಪತ್ತು, ಮನೆ-ವ್ಯಾಪಾರ ಇತ್ಯಾದಿ. ಆದ್ದರಿಂದ ಯಾರ ಹೃದಯದಲ್ಲಿ ಜಗತ್ತಿನ ಸಕಲ ವಸ್ತುಗಳಿಗಿಂತ ಹೆಚ್ಚು ಪ್ರವಾದಿವರ್ಯರ(ಸ) ಮೇಲೆ ಪ್ರೀತಿ ಇರುವುದೋ ಅವನೇ ನೈಜ ವಿಶ್ವಾಸಿ ಮತ್ತು ನಿಜವಾದ ಪ್ರವಾದಿ ಪ್ರೇಮಿಯಾಗಿದ್ದಾನೆ.

ಅಲ್ಲಾಹನ  ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನಾಣೆ! ನಿಮ್ಮ ಪೈಕಿ ಯಾರಿಗೆ ಅವನ ತಂದೆ-ತಾಯಿ,  ಅವನ ಸಂತಾನ ಮತ್ತು ಸಕಲ ಜನರಿಗಿಂತ ನಾನು ಹೆಚ್ಚು ಪ್ರಿಯನಾಗುವ ತನಕ ಅವನು ಸತ್ಯವಿಶ್ವಾಸಿಯಾಗಲಾರ.”
[ವರದಿ: ಅನಸ್(ರ) – ಬುಖಾರಿ: ಬಾಬು ಹುಬ್ಬರ‍್ರಸೂಲ್ ಮಿನಲ್ ಈಮಾನ್] ಬಾಬು ಕೈಫ ಕಾನತ್ ಯಮೀನುನ್ನಬೀ)

2.ನೀವು ಅಲ್ಲಾಹನ ಸಂದೇಶವಾಹ ಕರು(ಸ) ತಂದಿರುವ ಧರ್ಮಶಾಸ್ತ್ರ ಮತ್ತು ಅವರ ತೋರಿಸಿರುವ ವಿಧಾನದಂತೆ ಕರ್ಮವೆಸಗುವುದು ಪ್ರವಾದಿ ಪ್ರೇಮದ ಎರಡನೆಯ ಬೇಡಿಕೆಯಾಗಿದೆ. ಅಲ್ಲಾಹ್ ಹೇಳುತ್ತಾನೆ, “ಓ ಮುಹಮ್ಮದರೇ! ನಿಮ್ಮ ಪ್ರಭುವಿನಾಣೆ,  ಇವರು ತಮ್ಮೊಳಗಿನ ಭಿನ್ನಾಭಿಪ್ರಾಯಗಳಲ್ಲಿ ನಿಮ್ಮನ್ನು ತೀರ್ಪು ನೀಡುವವರೆಂದು ಒಪ್ಪಿಕೊಂಡು ಆ ಬಳಿಕ ನೀವು ಕೊಟ್ಟ ತೀರ್ಪಿನ ಬಗ್ಗೆ  ತಮ್ಮ ಮನಸ್ಸಿನಲ್ಲೂ ಯಾವುದೇ ಸಂಕೋಚಪಡದೆ ಅದನ್ನು ಸರ್ವ ಸಂಪೂರ್ಣವಾಗಿ ಒಪ್ಪಿಕೊಳ್ಳುವವರೆಗೂ ಅವರು ಖಂಡಿತ  ಸತ್ಯವಿಶ್ವಾಸಿಗಳಾಗಲಾರರು.” (ಪವಿತ್ರ ಕುರ್‌ಆನ್: 4: 65)

ಓರ್ವ ಸಹಾಬಿ ಪ್ರವಾದಿವರ್ಯರ(ಸ) ಸನ್ನಿಧಿಯಲ್ಲಿ ಹಾಜರಾಗಿ ಹೀಗೆ ಅರಿಕೆ ಮಾಡಿಕೊಂಡರು, “ಅಲ್ಲಾಹನ ಸಂದೇಶ ವಾಹಕರೇ(ಸ)!  ನಾನು ತಮ್ಮನ್ನು ನನ್ನ ಜೀವ, ಸೊತ್ತು, ಸಂತಾನಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ. ನಾನು ಮನೆಯಲ್ಲಿ ನನ್ನ ಕುಟುಂಬದೊಂದಿಗೆ ಇರುವಾಗ  ತಮ್ಮ ನೆನಪಾಗಿ ಬಿಡುತ್ತದೆ. ಆಗ ಕಳವಳಗೊಂಡು ತಮ್ಮೆಡೆಗೆ ಧಾವಿಸಿ ಬರುತ್ತೇನೆ. ತಮ್ಮನ್ನು ನೋಡದೆ ಮತ್ತು ತಮ್ಮನ್ನು ಭೇಟಿಯಾಗದೆ ನನಗೆ ಸಮಾಧಾನ ಒದಗುವುದಿಲ್ಲ. ಆದರೆ ನನ್ನ ಮತ್ತು ತಮ್ಮ ಮರಣವನ್ನು ಸ್ಮರಿಸುವಾಗ, ತಾವಾದರೋ ಸ್ವರ್ಗದಲ್ಲಿ ಪ್ರವಾದಿಗಳ ಜೊತೆ  ಉನ್ನತ ಸ್ಥಾನಮಾನದಲ್ಲಿ ವಿರಾಜಮಾನರಾಗಿರುವಿರಿ ಮತ್ತು ನಾನೊಂದು ವೇಳೆ ಸ್ವರ್ಗ ಪ್ರವೇಶಿಸಿದರೂ ತಮ್ಮ ಸಾಂಗತ್ಯ ಮತ್ತು ದರ್ಶನದಿಂದ ವಂಚಿತನಾಗುವೆನೋ ಎಂದು ಕಲ್ಪಿಸಿ ಕಳವಳಗೊಳ್ಳುತ್ತೇನೆ.” ಇದಕ್ಕುತ್ತರವಾಗಿ ಅಲ್ಲಾಹನು ಈ ವಚನವನ್ನು ಅವತೀರ್ಣಗೊಳಿಸಿದನು, “ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸುವವರು ಅಲ್ಲಾಹನಿಂದ ಸಕಲ ಸೌಭಾಗ್ಯಗಳನ್ನು  ಹೊಂದಿದ ಪ್ರವಾದಿಗಳ, ಸತ್ಯಸಂಧರ, ಹುತಾತ್ಮರ ಮತ್ತು ಸಜ್ಜನರ ಸಹವಾಸದಲ್ಲಿರುವರು. ಅದೆಂತಹ ಉತ್ತಮ ಸಂಗಾತಿಗಳವರು!” (ಪವಿತ್ರ  ಕುರ್‌ಆನ್: 4: 69)

ಒಟ್ಟಿನಲ್ಲಿ ಪ್ರವಾದಿವರ್ಯರನ್ನು(ಸ) ಬೇಶರತ್ ಅನುಸರಿಸುವುದೇ ಸ್ವರ್ಗದಲ್ಲಿ ಅವರ(ಸ) ಸಾಂಗತ್ಯ ಮತ್ತು ಅವರೊಂದಿಗಿನ ನೈಜ ಪ್ರೀತಿಯ ಬೇಡಿಕೆಯಾಗಿದೆ ಎಂದು  ಇದರಿಂದ ಸ್ಪಷ್ಟಗೊಳ್ಳುತ್ತದೆ. ಅಬ್ದರ‍್ರಹ್ಮಾನ್ ಬಿನ್ ಹಾರಿಸ್ ಬಿನ್ ಅಬೀ ಕರಾದ್ ಅಸ್ಸಲ್ಮಿ(ರ) ವರದಿ ಮಾಡುತ್ತಾರೆ: ನಾವು ಒಮ್ಮೆ  ಅಲ್ಲಾಹನ ಸಂದೇಶವಾಹಕರ(ಸ) ಜೊತೆಯಲ್ಲಿದ್ದೆವು. ಅವರು(ಸ) ವುಝೂ ಮಾಡಲು ನೀರು ತರಿಸಿದರು. ಬಳಿಕ ವುಝೂ  ಮಾಡತೊಡಗಿದರು. ಅವರು ವುಝೂ ಮಾಡಿದ ನೀರನ್ನು ಪ್ರಸಾದ (ತರ‍್ರುಕ್) ಎಂಬಂತೆ ತೆಗೆದು ನಮ್ಮ ಮೈಗೆ ಸವರತೊಡಗಿದೆವು.  ಅಲ್ಲಾಹನ ಸಂದೇಶವಾಹಕರು(ಸ) ಹೀಗೇಕೆ ಮಾಡಿದಿರೆಂದು ವಿಚಾರಿಸಿದಾಗ, “ಅಲ್ಲಾಹ್ ಮತ್ತು ಅವನ ಸಂದೇಶವಾಹಕರ(ಸ) ಮೇಲಿನ ಪ್ರೀತಿಯಿಂದ ಹೀಗೆ ಮಾಡಿದೆವು” ಎಂದು ಉತ್ತರಿಸಿದೆವು. ಅದಕ್ಕೆ ಪ್ರವಾದಿವರ್ಯರು(ಸ) ಈ ರೀತಿ ಮರುನುಡಿದರು, “ಒಂದು  ವೇಳೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರು(ಸ) ನಿಮ್ಮನ್ನು ಪ್ರೀತಿಸಬೇಕೆಂದು ನೀವು ಬಯಸುತ್ತೀರಿ ಎಂದಾದರೆ, ಅಮಾನತ್‌ಗಳನ್ನು ಪಾಲಿಸಿರಿ, ಸತ್ಯವನ್ನೇ ನುಡಿಯಿರಿ ಮತ್ತು ನೆರೆಕರೆಯವರೊಂದಿಗೆ ಉತ್ತಮವಾಗಿ ವರ್ತಿಸಿರಿ.” (ಸಹೀಹ್ ಅತ್ತರ್ತೀಬ್ ವತ್ತರ್ಗೀಬ್:  ಬಾಬುತ್ತರ್ಗೀಬ್ ಫಿಲ್ ಹಯಾ)
ಈ ಹದೀಸ್‌ನಲ್ಲಿಯೂ ಪ್ರವಾದಿಚರ್ಯೆಯನ್ನು ಅನುಸರಿಸಬೇಕಾದುದೇ ಅಲ್ಲಾಹ್ ಮತ್ತವನ ಸಂದೇಶವಾಹಕರ(ಸ) ಮೇಲಿನ ಪ್ರೀತಿಯ ಮಾನದಂಡ ಎಂದು ಹೇಳಲಾಗಿದೆ.

ಪ್ರವಾದಿವರ್ಯರ(ಸ) ವಿಯೋಗದ ಬಳಿಕ ಅವರಿಗೆ ಗೌರವದ ರೂಪ: ಪ್ರವಾದಿ ವಚನಗಳನ್ನು ಸಂರಕ್ಷಿಸುವುದು, ಅದನ್ನು ಪಠಿಸುತ್ತಾ  ಆಲಿಸುತ್ತಾ ಅದರ ಗೌರವವನ್ನು ಕಾಪಾಡುವುದು ಪ್ರವಾದಿವರ್ಯರ(ಸ) ವಿಯೋಗದ ಬಳಿಕ ಅವರ ಗೌರವದ ಬೇಡಿಕೆಯಾಗಿದೆ.  ಉರ್ವಃ ಬಿನ್ ಝುಬೈರ್(ರ)ರವರು ಯಾವುದೋ ಸಮಸ್ಯೆಗೆ ಸಂಬಂಧಿಸಿ ಅಬ್ದುಲ್ಲಾ ಬಿನ್ ಅಬ್ಬಾಸ್(ರ)ರೊಡನೆ ಹೇಳಿದರು,  “ಅಬೂಬಕರ್(ರ) ಮತ್ತು ಉಮರ್(ರ) ಹೀಗೆ ಮಾಡುವುದಿಲ್ಲವಲ್ಲ.” ಇದನ್ನು ಕೇಳಿ ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಕೋಪಗೊಂಡು  ಹೇಳಿದರು, “ಅಲ್ಲಾಹನಾಣೆ! ಅಲ್ಲಾಹನ ಯಾತನೆ ಎರಗುವವರೆಗೆ ನಿನ್ನ ಮಾತಿನಿಂದ ನೀನು ಹಿಂದೆ ಬರಲಾರೆ. ನಾನಿಲ್ಲ ಪ್ರವಾದಿ ವಚನಗಳನ್ನು ಉಲ್ಲೇಖಿಸುತ್ತಿದ್ದೇನೆ. ಆದರೆ ನೀನಾದರೋ ಅಬೂಬಕರ್(ರ) ಮತ್ತು ಉಮರ್(ರ)ರ ವಿಷಯ ಪ್ರಸ್ತಾಪಿಸುತ್ತಿರುವೆಯಲ್ಲ!”

ಮುಇನ್ ಬಿನ್ ಈಸಾ(ರ) ವರದಿ ಮಾಡುತ್ತಾರೆ: ಮಾಲಿಕ್ ಬಿನ್ ಅನಸ್(ರ)ರವರು ಪ್ರವಾದಿವರ್ಯರ(ಸ) ವಚನವನ್ನು ಉಲ್ಲೇಖಿಸಲು  ಬಯಸಿದಾಗಲೆಲ್ಲ ಮೊದಲ ಸ್ನಾನ ಮಾಡುತ್ತಿದ್ದರು, ಬಳಿಕ ಲೋಬಾನದ ಧೂಪವನ್ನು ತೆಗೆಯುತ್ತಿದ್ದರು ಮತ್ತು ಸುಗಂಧ ಪೂಸುತ್ತಿದ್ದರು. ಅವರು ಪ್ರವಾದಿ ವಚನವನ್ನು ಉಲ್ಲೇಖಿಸುವಾಗ ಯಾರಾದರೂ ಏರುದನಿಯಲ್ಲಿ ಮಾತನಾಡಿದರೆ, ಹೀಗೆ ಹೇಳುತ್ತಿದ್ದರು, “ನಿಮ್ಮ ಧ್ವನಿಯನ್ನು ತಗ್ಗಿಸಿರಿ. ಏಕೆಂದರೆ ‘ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಯನ್ನು ಪ್ರವಾದಿವರ್ಯರ(ಸ) ಧ್ವನಿಗಿಂತ ಎತ್ತರಿಸಬೇಡಿರಿ’ (ಅಲ್  ಹುಜುರಾತ್: 2) ಎಂದು ಅಲ್ಲಾಹನು ಹೇಳಿರುವನು. ಆದ್ದರಿಂದ ಯಾರಾದರೂ ಪ್ರವಾದಿ ವಚನವನ್ನು ಆಲಿಸುವಾಗ ಏರುದನಿಯಲ್ಲಿ ಮಾತನಾಡಿದರೆ, ಅವನು ಅಲ್ಲಾಹನ ಸಂದೇಶವಾಹಕ(ಸ) ಧ್ವನಿಗಿಂತ ಜೋರಾಗಿ ಮಾತನಾಡಿದನೆಂದರ್ಥ.” (ಸೀರ್ ಅಅï‌ಲಾ ಮುಲ್ ಅಂಬಿಯಾ: 9: 154)

3.ಪ್ರವಾದಿವರ್ಯರ(ಸ) ಹೆಸರೆತ್ತಿದಾಗಲೆಲ್ಲ ಸಲಾತ್(ದರೂದ್) ಹೇಳುವುದು ಪ್ರವಾದಿ ಪ್ರೇಮದ ಐದನೆಯ ಬೇಡಿಕೆಯಾಗಿದೆ. ಅಲ್ಲಾಹ್  ಹೇಳುತ್ತಾನೆ, “ನಿಶ್ಚಯವಾಗಿಯೂ ಅಲ್ಲಾಹ್ ಮತ್ತು ಅವನ ದೂತರು ಪ್ರವಾದಿಯವರಿಗೆ `ಸಲಾತ್'(ಸ್ವಸ್ತಿ ವಚನ) ಹೇಳುತ್ತಾರೆ.  ಸತ್ಯವಿಶ್ವಾಸಿಗಳೇ, ನೀವೂ ಅವರ ಮೇಲೆ ಸಲಾತ್ ಮತ್ತು ಸಲಾಮ್(ಅಭಿವಂದನೆ) ಸಲ್ಲಿಸುತ್ತಲಿರಿ.” (ಪ.ಕುರ್‌ಆನ್: 33: 56)

ಪ್ರವಾದಿವರ್ಯರಿಗೆ(ಸ) ಸಲಾತ್ ಹೇಳುವುದರ ಶ್ರೇಷ್ಠತೆಯು ಅನೇಕ ಪ್ರವಾದಿ ವಚನಗಳಲ್ಲಿ ಉಲ್ಲೇಖಗೊಂಡಿವೆ. ಅದಕ್ಕೆ ಬಹಳ ಪ್ರತಿಫಲವಿದೆ ಎಂದೂ ಹೇಳಲಾಗಿದೆ.

(1) ಅನಸ್(ರ)ರಿಂದ ವರದಿ. ಅಲ್ಲಾಹನ ಸಂದೇಶವಾಹಕರು(ಸ) ಹೇಳಿರುವರು, “ಯಾರಾದರೂ ನನ್ನ ಮೇಲೆ ಒಂದು ಸಲಾತ್ ಹೇಳಿದರೆ, ಅಲ್ಲಾಹನು ಅವನ ಮೇಲೆ ಹತ್ತು ಅನುಗ್ರಹಗಳನ್ನು ಇಳಿಸುವನು, ಹತ್ತು ಪಾಪಗಳನ್ನು ಕ್ಷಮಿಸುವನು ಮತ್ತು ಅವನ ಸ್ಥಾನವನ್ನು ಹತ್ತು ಪಟ್ಟು ಏರಿಸುವನು.” (ಸಹೀಹುಲ್ ಜಾಮಿಉಸ್ಸಗೀರ್: 11305)

(2) ಅಂತಹವನಿಗೆ ಪುರುತ್ಥಾನ ದಿನದಂದು ಪ್ರವಾದಿ ವರ್ಯರ(ಸ) ಸಾಂಗತ್ಯ ಲಭಿಸುವುದು ಎರಡನೆಯ ಪ್ರಯೋಜನವಾಗಿದೆ.  ತಿರ್ಮಿದಿಯಲ್ಲಿ ಪ್ರವಾದಿವರ್ಯರ(ಸ) ಈ ಮಾತುಗಳು ಉಲ್ಲೇಖಗೊಂಡಿವೆ, “ನನ್ನ ಮೇಲೆ ಅತಿ ಹೆಚ್ಚು ಸಲಾತ್ ಹೇಳುವ ವ್ಯಕ್ತಿಯೇ ಕಿಯಾಮತ್‌ನ ದಿನ ನನಗೆ ಹೆಚ್ಚು ನಿಕಟನಾಗುವನು.” (ಸಹೀಹುತ್ತರ್‌ಗೀಬ್ ವತ್ತರ್‌ಹೀಬ್: 1666)

(3) ಪುನರುತ್ಥಾನ ದಿನದಂದು ಪ್ರವಾದಿವರ್ಯರ(ಸ) ಶಿಫಾರಸ್ಸು ದೊರೆಯುವುದು ಮೂರನೆಯ ಪ್ರಯೋಜನವಾಗಿದೆ. ಅಬುದ್ದರ್ದಾ(ರ)ರಿಂದ ವರದಿ. ಅಲ್ಲಾಹನ ಸಂದೇಶವಾಹಕರು(ಸ) ಈ ರೀತಿ ಹೇಳಿರುವರು, “ಯಾರಾದರೂ ನನ್ನ  ಮೇಲೆ ಹಗಲು ರಾತ್ರಿ ಹತ್ತು ಹತ್ತು ಬಾರಿ ಸಲಾತ್ ಹೇಳಿದರೆ, ಅವನಿಗೆ ಕಿಯಾಮತ್‌ನಂದು ನನ್ನ ಶಿಫಾರಸ್ಸು ಲಭಿಸುವುದು.” (ತಬ್ರಾನಿ)

(4) ಸಲಾತ್‌ನ ಬರ್ಕತ್‌ನಿಂದ ಅಲ್ಲಾಹನು ಎಲ್ಲ ಸಮಸ್ಯೆ ಗಳು ಮತ್ತು ತೊಂದರೆಗಳನ್ನು ದೂರ ಮಾಡುವನು ಹಾಗೂ ಪಾಪಗಳನ್ನು  ಮನ್ನಿಸುವನು ಎಂಬುದು ನಾಲ್ಕನೆಯ ಪ್ರಯೋಜನವಾಗಿದೆ. ಉಬೈ ಕಅಬ್(ರ)ರಿಂದ ವರದಿ. ಅವರು ಅಲ್ಲಾಹನ ಸಂದಶವಾಹಕರೊಡನೆ(ಸ) ಕೇಳಿದರು, “ಅಲ್ಲಾಹನ ಸಂದೇಶವಾಹಕರೇ(ಸ)! ನಾನು ತಮ್ಮ ಮೇಲೆ ಬಹಳವಾಗಿ ಸಲಾತ್ ಹೇಳುತ್ತೇನೆ.  ನಾನು ನನ್ನ ಪ್ರಾರ್ಥನೆಯ ಎಷ್ಟು ಭಾಗವನ್ನು ತಮ್ಮ ಮೇಲೆ ಸಲಾತ್ ಹೇಳಲು ಮೀಸಲಿರಿಸಲಿ?” ಪ್ರವಾದಿವರ್ಯರು(ಸ) ಈ ರೀತಿ ಉತ್ತರಿಸಿದರು, “ಎಷ್ಟಂಶವನ್ನು ನೀವು ಬಯಸುತ್ತೀರೋ ಅಷ್ಟು.” ಉಬೈ(ರ) ಪುನಃ ಕೇಳಿದರು, “ಕಾಲು ಭಾಗ?” ಪ್ರವಾದಿ(ಸ) ಹೇಳಿದರು, “ನಿಮಗೆ ಇಷ್ಟವಿರುವಷ್ಟು. ಅದಕ್ಕಿಂತ ಹೆಚ್ಚು ಹೇಳಿದರೆ ಅದು ನಿಮ್ಮ ಮಟ್ಟಿಗೆ ಉತ್ತಮವೇ.” ಅವರು ಪುನಃ ಕೇಳಿದರು, “ಪ್ರಾರ್ಥನೆಯ ಅರ್ಧಭಾಗವನ್ನು ಮೀಸಲಿರಿಸಲೇ?” ಪ್ರವಾದಿವರ್ಯರು(ಸ) ಅದೇ ಉತ್ತರವನ್ನು ನೀಡಿದರು. ಉಬೈ(ರ) ಮತ್ತೆ  ಕೇಳಿದರು, “ಮೂರನೆಯ ಒಂದಂಶ?” ಪ್ರವಾದಿವರ್ಯರು(ಸ) ಅದೇ ಉತ್ತರವನ್ನು ನೀಡಿದರು. ಉಬೈ(ರ) ಮತ್ತೆ ಕೇಳಿದರು, “ನಿಮಗೆ ಇಷ್ಟ ಬಂದಷ್ಟು.” ತರುವಾಯ ಉಬೈ(ರ) ಕೇಳಿದರು, “ನನ್ನ ಇಡೀ ಪ್ರಾರ್ಥನೆಯನ್ನು ಅದಕ್ಕೆ ಮೀಸಲಿರಿಸಲೇ?” ಪ್ರವಾದಿ(ಸ) ಹೇಳಿದರು, “ಹಾಗಿದ್ದರೆ ನಿಮ್ಮ ಎಲ್ಲ ತೊಂದರೆಗಳೂ ನೀಗಿದುವು ಮತ್ತು ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟುವು.” (ತಿರ್ಮಿದಿ:  ಬಾಬುಝ್ಝಿಕ್ರುಲ್ಲಾಹ್)

ಅದೇ ರೀತಿ ಅಲ್ಲಾಹನ ಸಂದೇಶವಾಹಕರ(ಸ) ಮೇಲೆ ಸಲಾತ್ ಹೇಳದವರಿಗೂ ಎಚ್ಚರಿಕೆ ನೀಡಲಾಗಿದೆ. ಪ್ರವಾದಿ(ಸ) ಹೇಳಿದರು, “ಒಬ್ಬನ ಮುಂದೆ ನನ್ನ ಪ್ರಸ್ತಾಪವೆತ್ತಿದ ಮೇಲೂ ಅವನು ನನ್ನ ಮೇಲೆ ಸಲಾತ್ ಹೇಳದಿದ್ದರೆ, ಅವನು ಅವಮಾನಿತನಾಗುವನು.” (ತಿರ್ಮಿದಿ)

ಇವು ಪ್ರವಾದಿ ಪ್ರೇಮದ ಕೆಲವು ಬೇಡಿಕೆಗಳಾಗಿವೆ. ಈ ಬೇಡಿಕೆಗಳನ್ನು ಈಡೇರಿಸಬೇಕಾದುದು ಮತ್ತು ಅವುಗಳನ್ನು ತನ್ನ ಕರ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರವಾದಿವರ್ಯರ(ಸ) ಮೇಲೆ ತೋರುವ ನೈಜ ಪ್ರೀತಿಯಾಗಿದೆ. ಅಲ್ಲಾಹ್ ನಮಗೆ ಪ್ರವಾದಿ ಪ್ರೇಮದ  ಈ ಬೇಡಿಕೆಗಳನ್ನು ಅರ್ಥ ಮಾಡಲು ಮತ್ತು ಅವುಗಳನ್ನು ಈಡೇರಿಸಲು ಅನುಗ್ರಹಿಸಲಿ. ಆಮೀನ್.
ಅನುವಾದ: ಅಬೂ ಆಫಿಯಾ