4,000 ಮನೆಗಳು, ಶಾಲೆಗಳು, ಮಸೀದಿ- ಮಂದಿರಗಳು: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಾಖಂಡ ಹಲ್ದ್ವಾನಿ ಜನತೆಯ ಭವಿಷ್ಯ ನಿರ್ಧಾರ

0
148

ಸನ್ಮಾರ್ಗ ವಾರ್ತೆ

ಉತ್ತರಾಖಂಡದ ಹಲ್ದ್ವಾನಿಯಲ್ಲಿ 4000 ಮನೆಗಳು, ಶಾಲೆಗಳು, ಮಸೀದಿ, ದೇವಾಲಯಗಳಿರುವ 29 ಎಕರೆ ರೈಲ್ವೇ ಭೂಮಿಯನ್ನು ತೆರವು ಮಾಡುವಂತೆ ಉತ್ತರಾಖಂಡ ಹೈಕೋರ್ಟ್ ನೀಡಿದೆ. ತೆರವು ಕಾರ್ಯಾಚರಣೆ ತಡೆಯಲು ನಿವಾಸಿಗಳು ಧರಣಿ ಹಾಗೂ ಪ್ರಾರ್ಥನೆ ಮುಂದುವರೆಸಿದ್ದಾರೆ. ಅಧಿಕಾರಿಗಳು ಸ್ಥಳದ ತಪಾಸಣೆ ನಡೆಸಿದ್ದಾರೆ. ಉತ್ತರಾಖಂಡ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಗುರುವಾರ ಸುಪ್ರೀಂ ಕೋರ್ಟ್ 20 ಸಾವಿರಕ್ಕೂ ಹೆಚ್ಚು ಮಂದಿಯ ಭವಿಷ್ಯವನ್ನು ನಿರ್ಧರಿಸಲಿದೆ.

ಹಲ್ದ್ವಾನಿಯಲ್ಲಿರುವ 4000 ಮನೆಗಳ ನಿವಾಸಿಗಳು ಪ್ರತಿಭಟನೆ, ಪ್ರಾರ್ಥನೆ ಮುಂದುವರಿಸಿದ್ದು, ತಾವು ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

ಈ ಪ್ರದೇಶದಲ್ಲಿ ಮನೆಗಳಲ್ಲದೆ ನಾಲ್ಕು ಸರಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, ಒಂದು ಬ್ಯಾಂಕ್, ಎರಡು ಓವರ್‌ಹೆಡ್ ನೀರಿನ ಟ್ಯಾಂಕ್‌ಗಳು, 10 ಮಸೀದಿಗಳು ಹಾಗೂ 4 ದೇವಾಲಯಗಳು, ಅಂಗಡಿಗಳಿದ್ದು ಇವುಗಳನ್ನು ಕಳೆದ ಕೆಲವು ದಶಕಗಳಿಂದ ನಿರ್ಮಿಸಲಾಗಿದೆ. ನಾವು ಇದನ್ನು ಲೀಸ್‌ನಲ್ಲಿ ಪಡೆದಿದ್ದೇವೆ ಎಂದು ಅರ್ಧದಷ್ಟು ಕುಟುಂಬಗಳು ಹೇಳುತ್ತಿವೆ.

ಸುದೀರ್ಘ ವ್ಯಾಜ್ಯದ ಅನಂತರ ಉತ್ತರಾಖಂಡ ಹೈಕೋರ್ಟ‌ನ ಡಿಸೆಂಬರ್ 20ರ ನ್ಯಾಯಾಲಯದ ಆದೇಶವನ್ನು ಅನುಸರಿಸಿ ಜಿಲ್ಲಾಡಳಿತವು ಜನವರಿ 9ರೊಳಗೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕೆಂದು ಜನರಿಗೆ ನೋಟಿಸ್ ನೀಡಿದೆ. ಇದನ್ನು ದಿನ ಪತ್ರಿಕೆಗಳಲ್ಲೂ ಪ್ರಕಟಿಸಿದೆ.