ಸತತ ಏಳು ಗಂಟೆಗಳ ಕಾಲ ಹಾರಾಟ ನಡೆಸಿ ದಾಖಲೆ ಬರೆದ IAF ಹೆಲಿಕಾಪ್ಟರ್: 1910 ಕಿಮೀ ಕ್ರಮಿಸಿದ CH-47F(I) ಚಿನೂಕ್

0
191

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ CH-47F(I) ಚಿನೂಕ್ ಸೋಮವಾರ ಭಾರತದಲ್ಲಿ ಅತಿ ಉದ್ದದ ತಡೆರಹಿತ ಹಾರಾಟದ ದಾಖಲೆಯನ್ನು ನಿರ್ಮಿಸಿದೆ. ಚಿನೂಕ್ ಹೆಲಿಕಾಪ್ಟರ್ ಚಂಡೀಗಢದಿಂದ ಅಸ್ಸಾಂನ ಜೋರ್ಹತ್‌ಗೆ ತಡೆರಹಿತವಾಗಿ ಹಾರಾಟ ನಡೆಸಿದೆ. ಸತತ ಏಳೂವರೆ ಗಂಟೆಗಳಲ್ಲಿ 1,910 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಅತಿ ಉದ್ದದ ತಡೆರಹಿತ ಹಾರಾಟದ ದಾಖಲೆಯನ್ನು ನಿರ್ಮಿಸಿದೆ.

ಈ ಚಿನೂಕ್ ಹೆಲಿಕಾಪ್ಟರ್ ಹಾರಾಟ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಹೆಲಿಕಾಪ್ಟರ್ ಈ ಸಾಧನೆ ಮಾಡಿದೆ. ಚಿನೂಕ್ ಹೆಲಿಕಾಪ್ಟರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ, ಭಾರತೀಯ ವಾಯುಪಡೆಯು 15 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಹೊಂದಿದ್ದು, 2015ರ ಸೆಪ್ಟೆಂಬರ್‌ನಲ್ಲಿ, ವಾಯುಪಡೆಯ ಬಲವನ್ನು ಹೆಚ್ಚಿಸಲು ಭಾರತವು ಅಮೇರಿಕದೊಂದಿಗೆ 15 ಚಿನೂಕ್ ಒಪ್ಪಂದಗಳಿಗೆ ಸಹಿ ಹಾಕಿತ್ತು. ಇದು ಸುಮಾರು $ 3.1 ಬಿಲಿಯನ್ ಮೌಲ್ಯದ್ದಾಗಿತ್ತು. ಚಿನೂಕ್ 11 ಟನ್ ಸರಕುಗಳನ್ನು ಮತ್ತು 45 ಸೈನಿಕರನ್ನು ಶಸ್ತ್ರಸಜ್ಜಿತವಾಗಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.