ಸುಪ್ರೀಂ ಕೋರ್ಟ್ ಎಸ್‌ಐಆರ್ (SIR) ರದ್ದುಗೊಳಿಸಿದರೆ ಜ್ಞಾನೇಶ್ ಕುಮಾರ್ ಜೈಲಿಗೆ ಹೋಗಬೇಕು: ಪ್ರಶಾಂತ್ ಭೂಷಣ್

0
21

ಸನ್ಮಾರ್ಗ ವಾರ್ತೆ

ಹೈದರಾಬಾದ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜೈಲಿಗೆ ಹೋಗಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ನವೆಂಬರ್ 22, ಭಾನುವಾರದಂದು ಹೈದರಾಬಾದ್‌ನಲ್ಲಿ ಫೋರಂ ಫಾರ್ ಕಾನ್‌ಸ್ಟಿಟ್ಯೂಷನಲ್ ಡೆಮಾಕ್ರಸಿ ಆಯೋಜಿಸಿದ್ದ ಚರ್ಚೆಯಲ್ಲಿ ಅವರು ಮಾತನಾಡಿದರು.

“ಈ ದೇಶಕ್ಕೆ ಅವರು ದೊಡ್ಡ ಅನ್ಯಾಯ ಮಾಡಿದ್ದಾರೆ,” ಎಂದು ಭೂಷಣ್ ಹೇಳಿದರು. ಕಾನೂನು ಕ್ರಮದಿಂದ ಜ್ಞಾನೇಶ್‌ ಕುಮಾರ್ ಅವರಿಗಿರುವ ವಿನಾಯಿತಿಯ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ ಎಂದು ಅವರು ತಿಳಿಸಿದರು. ವಿಚಾರಣೆಯ ದಿನಾಂಕ ಇನ್ನೂ ಅಸ್ಪಷ್ಟವಾಗಿದೆ. ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತರಾದ ನಂತರ ಜ್ಞಾನೇಶ್‌ ಕುಮಾರ್ ಅಥವಾ ಎಸ್‌ಐಆರ್ ಹೋಗಬಹುದು ಎಂದು ಪ್ರಶಾಂತ್‌ ಭೂಷಣ್ ಹೇಳಿದರು. ಸಿಜೆಐ ಸೂರ್ಯಕಾಂತ್ ಅವರು ಫೆಬ್ರವರಿ 9, 2027 ರಂದು ಅಧಿಕಾರದಿಂದ ನಿರ್ಗಮಿಸಲಿದ್ದಾರೆ.

ಪ್ರಶಾಂತ್‌ ಭೂಷಣ್ ಅವರು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪರವಾಗಿ ಎಸ್‌ಐಆರ್ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಸಂಪರ್ಕಿಸದೆ ಜ್ಞಾನೇಶ್‌ ಕುಮಾರ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಇಬ್ಬರು ಆಯುಕ್ತರು 14 ಸಂದರ್ಭಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೂ ನಿರ್ಧಾರಗಳು ಮುಂದುವರಿದಿವೆ ಎಂಬ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಅವರು ಉಲ್ಲೇಖಿಸಿದರು. ಮತದಾರರ ನೋಂದಣಿ ಅಧಿಕಾರಿಗಳಿಗೆ ಹೆಸರುಗಳನ್ನು ಸೇರಿಸುವ ಅಥವಾ ತೆಗೆದುಹಾಕುವ ಅಧಿಕಾರವನ್ನು ಕಾನೂನು ನೀಡುತ್ತದೆ ಎಂದು ಅವರು ಹೇಳಿದರು. ಜ್ಞಾನೇಶ್‌ ಕುಮಾರ್ ಈ ಅಧಿಕಾರವನ್ನು ಆಯೋಗದ ಐಟಿ ವ್ಯವಸ್ಥೆಯಾದ ಇಸಿಐನೆಟ್‌ಗೆ (ECINet) ವರ್ಗಾಯಿಸಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 21(3) ಒಂದು ಕ್ಷೇತ್ರಕ್ಕೆ ಅಥವಾ ಅದರ ಒಂದು ಭಾಗಕ್ಕೆ ವಿಶೇಷ ತೀವ್ರ ಪರಿಷ್ಕರಣೆಗೆ ಅವಕಾಶ ನೀಡುತ್ತದೆಯೇ ಹೊರತು ಇಡೀ ದೇಶಕ್ಕಲ್ಲ ಎಂದು ಪ್ರಶಾಂತ್‌ ಭೂಷಣ್ ಹೇಳಿದರು. ಸುಪ್ರೀಂ ಕೋರ್ಟ್ ಈ ವರ್ಷದ ಮೇ ತಿಂಗಳಲ್ಲಿ ಬಿಹಾರದ ಎಸ್‌ಐಆರ್ ಅನ್ನು ಎತ್ತಿಹಿಡಿದಿತ್ತು.

ಗಣತಿ ನಮೂನೆಗಳನ್ನು ಪಡೆಯದ ಅಥವಾ ಭರ್ತಿ ಮಾಡದ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಮತ್ತು ಹೊಸ ಮತದಾರರಿಗಾಗಿ ಇರುವ ಫಾರ್ಮ್ 6 ರ ಮೂಲಕ ಅರ್ಜಿ ಸಲ್ಲಿಸುವಂತೆ ಕೇಳಲಾಗಿದೆ ಎಂದು ಅವರು ಹೇಳಿದರು. ಇದು 1995 ರ ಲಾಲ್ ಬಾಬು ಹುಸೇನ್ ತೀರ್ಪು ನಿಗದಿಪಡಿಸಿದ ಪುರಾವೆಯ ಹೊರೆಯನ್ನು ತಲೆಕೆಳಗು ಮಾಡುತ್ತದೆ ಎಂದು ಭೂಷಣ್ ವಾದಿಸಿದರು. ಆ ತೀರ್ಪು ಪಟ್ಟಿಯಲ್ಲಿರುವ ವ್ಯಕ್ತಿ ಅಲ್ಲಿಗೆ ಸೇರಿದವರೆಂದು ಭಾವಿಸುತ್ತದೆ ಮತ್ತು ನೋಟಿಸ್ ಹಾಗೂ ವಿಚಾರಣೆಯಿಲ್ಲದೆ ಹೆಸರನ್ನು ತೆಗೆದುಹಾಕುವುದನ್ನು ನಿರ್ಬಂಧಿಸುತ್ತದೆ.

“ತಾರ್ಕಿಕ ವ್ಯತ್ಯಾಸ” (logical discrepancy) ನೋಟಿಸ್‌ಗಳನ್ನೂ ಟೀಕಿಸಿದರು. ಅಧಿಕಾರಿಗಳು ಆ ಪದವನ್ನು ಎಂದಿಗೂ ವ್ಯಾಖ್ಯಾನಿಸಿಲ್ಲ ಅಥವಾ ಅದರ ಹಿಂದಿನ ಅಲ್ಗಾರಿದಮ್ ಅನ್ನು ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದರು. ಕಾಗುಣಿತದಲ್ಲಿ ಒಂದು ಅಕ್ಷರದ ವ್ಯತ್ಯಾಸ ಅಥವಾ ಐದಕ್ಕಿಂತ ಹೆಚ್ಚು ಒಡಹುಟ್ಟಿದವರು ಇದ್ದರೆ ನೋಟಿಸ್ ನೀಡಲಾಗುತ್ತದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ, ಅಂತಹ ನೋಟಿಸ್ ಪಡೆದವರಲ್ಲಿ ಸುಮಾರು ಮೂರನೇ ಎರಡರಷ್ಟು ಮಂದಿ ಮುಸ್ಲಿಮರು ಎಂದು ಅವರು ಪ್ರತಿಪಾದಿಸಿದರು. ಆ ಸಮುದಾಯವು ಜನಸಂಖ್ಯೆಯ ಸುಮಾರು ಶೇಕಡಾ 27 ರಷ್ಟಿದೆ.

“ಮತದಾರರ ಪಟ್ಟಿಯಲ್ಲಿ ಕೆಲವು ತಪ್ಪು ವ್ಯಕ್ತಿಗಳು ಸೇರ್ಪಡೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ, ಆದರೆ ಮತದಾರರ ಪಟ್ಟಿಯಿಂದ ಕೆಲವು ಅರ್ಹ ವ್ಯಕ್ತಿಗಳನ್ನು ಕೈಬಿಟ್ಟರೆ ಖಂಡಿತವಾಗಿಯೂ ಆಕಾಶ ಕಳಚಿ ಬೀಳುತ್ತದೆ,” ಎಂದು ಭೂಷಣ್ ಹೇಳಿದರು. ಚುನಾವಣಾ ಆಯೋಗದ ಕೈಪಿಡಿಯಲ್ಲಿರುವಂತೆ, ಸಾರ್ವಜನಿಕವಾಗಿ ಹಳೆಯ ಪಟ್ಟಿಯನ್ನು ಪರಿಶೀಲಿಸಲು ವಿಡಿಯೋ ಚಿತ್ರೀಕರಣದೊಂದಿಗೆ ಬೂತ್ ಮಟ್ಟದ ಸಭೆಗಳನ್ನು ನಡೆಸುವಂತೆ ಅವರು ಪ್ರಸ್ತಾಪಿಸಿದರು.

ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸಿಜೆಐ ಬದಲಿಗೆ ಕೇಂದ್ರ ಸಚಿವರನ್ನು ಕೇಂದ್ರ ಸರ್ಕಾರ ನೇಮಿಸುವ ಮೂಲಕ 2023 ರ ಸಂವಿಧಾನ ಪೀಠದ ತೀರ್ಪನ್ನು ಬದಿಗೊತ್ತಿದೆ ಎಂದೂ ಅವರು ಹೇಳಿದರು. ಹಣಬಲದ ಕುರಿತು ಮಾತನಾಡುತ್ತಾ, ಬಿಜೆಪಿ ಅಧಿಕೃತವಾಗಿ ವರ್ಷಕ್ಕೆ 10,000 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸುತ್ತದೆ ಎಂದು ಅವರು ಆರೋಪಿಸಿದರು. ಬ್ಯಾಲೆಟ್ ಪೇಪರ್‌ಗಳಿಗಾಗಿ ವಿರೋಧ ಪಕ್ಷಗಳ ಬೇಡಿಕೆಯನ್ನು “ಅತ್ಯಂತ ನ್ಯಾಯಸಮ್ಮತ” ಎಂದು ಕರೆದ ಅವರು, ಅಧಿಕಾರಿಗಳು ಕೇವಲ ಶೇಕಡಾ ಎರಡರಷ್ಟು ವಿವಿಪ್ಯಾಟ್ (VVPAT) ಚೀಟಿಗಳನ್ನು ಮಾತ್ರ ಎಣಿಸುತ್ತಾರೆ ಎಂದು ಹೇಳಿದರು.